ಸುಳ್ಳಿನ ಸರದಾರ ಮೋದಿ ಮತ್ತು ಸತ್ಯದ ಅನಾವರಣ

Most read

ಮೋದಿಯಂತಹ ಚೂರು ಪಾರು ಓದಿದವರು ಈ ದೇಶದ ಪ್ರಧಾನಿ ಆಗಿರಬೇಕಾದರೆ ಬಹುಮತ ಹಾಗೂ ಅವಕಾಶ ಸಿಕ್ಕರೆ ದೇಶವನ್ನು ಮುನ್ನಡೆಸುವ ಸಾಮರ್ಥ್ಯ ಇರುವ ವಿದ್ಯಾವಂತರು ಬೇಕಾದಷ್ಟಿದ್ದಾರೆ. ಅನುಭವದಲ್ಲಿ ಮಲ್ಲಿಕಾರ್ಜುನ ಖರ್ಗೆ ಮುಂಚೂಣಿಯಲ್ಲಿದ್ದರೆ, ವಿದ್ಯಾರ್ಹತೆ ಹಾಗೂ ಜನಸಂಪರ್ಕದಲ್ಲಿ ರಾಹುಲ್ ಗಾಂಧಿ ಮೇಲ್ಮಟ್ಟದಲ್ಲಿದ್ದಾರೆ. ಆದರೆ ಈ ಯಾರಿಗೂ ಮೋದಿಯ ಹಾಗೆ ಜನಸಮೂಹವನ್ನು ಸುಳ್ಳಿನ ಮೂಲಕ ಯಾಮಾರಿಸುವ ಕಲೆ ಗೊತ್ತಿಲ್ಲ, ಭ್ರಮೆ ಸೃಷ್ಟಿಸುವ ಮೂಲಕ ಜನರಲ್ಲಿ ಮೇನಿಯಾ ಹುಟ್ಟಿಸುವ ಪ್ರತಿಭೆ ಇಲ್ಲ, ಜಾತಿ ಧರ್ಮವನ್ನು ಒಡೆದು ಮತ ಪಡೆಯುವ ತಂತ್ರ ಕರಗತವಾಗಿಲ್ಲ ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು

ನಿಜಕ್ಕೂ ಸುಳ್ಳು ಹೇಳುವುದೂ ಒಂದು ಕಲೆ. ಅದೂ ಕೇಳುಗರು ನಂಬುವಂತೆ, ಸತ್ಯದ ತಲೆಯ ಮೇಲೆ ಹೊಡೆದಂತೆ ಸುಳ್ಳು ಹೇಳುವುದು ಮಹಾಕಲೆ. ಅಂತಹ ಕಲೆ ನಮ್ಮ ಪ್ರಧಾನಿಗಳಿಗೆ ಸಿದ್ಧಿಸಿದೆ. ಅವರಿಗೆ ಅದರಲ್ಲಿ ಅಪಾರವಾದ ಅನುಭವವೂ ಇದೆ. ಅದರ ಫಲಾನುಭವಿಗಳೂ ಅವರೇ ಆಗಿದ್ದಾರೆ.

ಅಚ್ಚೆ ದಿನ್ ಬರುತ್ತೆ ಅಂತಾ ಹೇಳಿದ್ರು, ಜನ ನಂಬಿದ್ರು, ಬರಲಿಲ್ಲ. ಕಪ್ಪು ಹಣ ತಂದು ಎಲ್ಲರಿಗೂ ಹಂಚಲಾಗುತ್ತೆ ಅಂದ್ರು, ಜನ ನಂಬಿದ್ರು, ಹಂಚಲಿಲ್ಲ. ಹೋಗಲಿ ಡಿಮಾನಿಟೈಸೇಶನ್ ಮಾಡಿದ್ರೆ ದೇಶದೊಳಗಿನ ಕಪ್ಪು ಹಣ ಕರಗಿ ಆರ್ಥಿಕತೆ ಸ್ವಚ್ಛವಾಗುತ್ತೆ ಅಂದ್ರು, ಆಗಲಿಲ್ಲ. ಭಯೋತ್ಪಾದನೆ ನಿಲ್ಲುತ್ತೆ ಅಂದ್ರು, ನಿಲ್ಲಲಿಲ್ಲ. ರೈತರ ಆದಾಯ ದ್ವಿಗುಣ ಆಗಲಿಲ್ಲ, ವರ್ಷಕ್ಕೆ 2 ಕೋಟಿ ಉದ್ಯೋಗಗಳು ಸೃಷ್ಟಿಯಾಗಲಿಲ್ಲ. ಸಬ್ಕಾ ಸಾತ್ ಸಬ್ಕಾ ವಿಕಾಸ್ ಎಂದರು, ಕಾರ್ಪೋರೇಟ್ ಕುಳಗಳನ್ನು ಹೊರತು ಪಡಿಸಿ ಬೇರೆಯವರ ವಿಕಾಸ ಆಗಲಿಲ್ಲ. ಒಟ್ಟಾರೆಯಾಗಿ ಅಚ್ಚೆ ದಿನ್ ಬರಲೇ ಇಲ್ಲ. ಆದರೂ ಹತ್ತು ವರ್ಷಗಳಿಂದ ಈ ಮಹಾನ್ ಮಾಯಾವಿ ಕಲಾವಿದ ಸುಳ್ಳು ಹೇಳುವುದನ್ನು ನಿಲ್ಲಿಸಲೇ ಇಲ್ಲ.

ಈಗ ಮತ್ತೊಮ್ಮೆ ಲೋಕಸಭಾ ಚುನಾವಣೆ ಬಂದಿದೆ. ಸುಳ್ಳು ಹೇಳುವುದರಲ್ಲೇ ಜಗತ್ಪ್ರಸಿದ್ಧವಾದ ವಿಶ್ವಗುರುಗಳು ತಮಗೆ ತಾವೇ ಪೈಪೋಟಿಗೆ ಬಿದ್ದಂತೆ ಸುಳ್ಳು ಪ್ರಚಾರ ಭಾಷಣವನ್ನು ದೇಶಾದ್ಯಂತ ಸಂಚರಿಸಿ ಮಾಡುತ್ತಾ ತಮ್ಮಲ್ಲಿರುವ ಅಮೋಘ ಕಲೆಯನ್ನು ಪ್ರದರ್ಶಿಸುತ್ತಿದ್ದಾರೆ. ಮೆದುಳಿರದ ಭಕ್ತಗಣಗಳು ಚಪ್ಪಾಳೆ ಹೊಡೆದು ಕೇಕೆ ಹಾಕುತ್ತಲೇ ಇವೆ. ಆದರೆ ಮೊದಲಿನಂತೆ ಈಗ ಜನರು ನಂಬುತ್ತಿಲ್ಲ. ಹೇಗಾದರೂ ಮಾಡಿ ನಂಬಿಸಲು ಸುಳ್ಳಿನ ಹೊಸ ಹೊಸ ಮಾದರಿಗಳು ಹೊರಬರುತ್ತಿವೆ. ಅದಕ್ಕೆ ಲೇಟೆಸ್ಟ್ ಉದಾಹರಣೆಗಳು ಹೀಗಿವೆ.

ಹಿಂದೂಗಳ ಆಸ್ತಿ ಮುಸಲ್ಮಾನರಿಗೆ ಹಂಚಿಕೆ

“ಹಿಂದೂಗಳ ಸಂಪತ್ತನ್ನು ಹೆಚ್ಚು ಮಕ್ಕಳಿರುವ ಮುಸ್ಲಿಮರಿಗೆ ಹಂಚಲಾಗುತ್ತದೆ’ ಎಂದು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹೇಳಿದೆ. ಹಿಂದೂ ಮಹಿಳೆಯರ ಮಂಗಳಸೂತ್ರವನ್ನೂ ಕಿತ್ತು ಮುಸಲ್ಮಾನರಿಗೆ ಹಂಚಲಾಗುತ್ತದೆ” ಎಂದು ಮೋದಿಯವರು ಪ್ರಚಾರ ಸಭೆಯಲ್ಲಿ ಹೇಳುತ್ತಲೇ ಹೋದರು. ಇದು ಹಸಿಹಸಿ ಸುಳ್ಳು ಎಂದು ಅವರಿಗೂ ಗೊತ್ತು, ಅವರ ಪಕ್ಷಕ್ಕೂ ಗೊತ್ತು. ಕಾಂಗ್ರೆಸ್ ಪ್ರಣಾಳಿಕೆ ಓದಿದವರಿಗೂ ಗೊತ್ತು. ಓದದೆ ಇರುವ ಮತದಾರರಲ್ಲಿ ಕೋಮುದ್ವೇಷ ಭಾವನೆ ಪ್ರಚೋದಿಸಿ ಮತಗಳನ್ನು ಪಡೆಯುವ ಕಲಾವಂತಿಕೆ ಈ ಸುಳ್ಳಿನ ಹಿಂದಿರುವ ಉದ್ದೇಶವಾಗಿತ್ತು. ಯಾರದೇ ಆಸ್ತಿಯನ್ನು ವಶಪಡಿಸಿಕೊಂಡು ಇನ್ಯಾವುದೋ ಧರ್ಮೀಯರಿಗೆ ಹಂಚುವುದಕ್ಕೆ ಸಂವಿಧಾನದಲ್ಲಿ ಆಸ್ಪದವೇ ಇಲ್ಲ. ಹಾಗೇನಾದರೂ ಬೇರೆ ಸರಕಾರ ಮಾಡಿದರೆ ಇದೇ ಸಂಘಿಗಳು ದೇಶಾದ್ಯಂತ ಬೆಂಕಿ ಹಚ್ಚುವುದರಲ್ಲಿ ಸಂದೇಹವೇ ಇಲ್ಲ. ಆದರೂ ಈ ರೀತಿಯ ಹಸಿ ಹಸಿ ಸುಳ್ಳು ಹೇಳಿ ಜನರನ್ನು ಮತ್ತೆ ನಂಬಿಸುವ ಪ್ರಯತ್ನವನ್ನು ಈ ಮಹಾನ್ ಸುಳ್ಳುಗಾರ ಬಿಡುವುದೂ ಇಲ್ಲಾ.

ಕರ್ನಾಟಕಕ್ಕೆ ಹೆಚ್ಚು ಅನುದಾನ

“ಕರ್ನಾಟಕಕ್ಕೆ ಯುಪಿಎ ಸರಕಾರ ಕೊಟ್ಟಿದ್ದಕ್ಕಿಂತಾ ಹೆಚ್ಚು ಅನುದಾನವನ್ನು ನಮ್ಮ ಸರಕಾರ ಕೊಟ್ಟಿದೆ” ಎಂದು ಕರ್ನಾಟಕದಲ್ಲಿ ಮಾಡಲಾದ ಚುನಾವಣಾ ಭಾಷಣದಲ್ಲಿ ಮೋದಿಯವರು ಹೋದಲ್ಲೆಲ್ಲಾ ಅರ್ಧಸತ್ಯವನ್ನು ಸಂಪೂರ್ಣ ಸತ್ಯವೆಂದು ಹೇಳುತ್ತಾ ಜನರಲ್ಲಿ ಅಪನಂಬಿಕೆ ಸೃಷ್ಟಿಸುತ್ತಿದ್ದಾರೆ.

ಹೌದು ಮೋದಿ ಸರಕಾರ ಹಿಂದಿದ್ದ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರಕ್ಕಿಂತ ಸ್ವಲ್ಪ ಹೆಚ್ಚು ಅನುದಾನವನ್ನು ಕರ್ನಾಟಕಕ್ಕೆ ಕೊಟ್ಟಿದೆ. ಆದರೆ ಆಗ ಕೇಂದ್ರದ ಬಜೆಟ್ ಇದ್ದಿದ್ದೇ 24 ಲಕ್ಷ ಕೋಟಿ. ಕರ್ನಾಟಕದ ತೆರಿಗೆ ಪಾಲು ಹಾಗೂ ಕೇಂದ್ರ ಯೋಜನೆಗಳ ಪಾಲು ಸೇರಿ 46 ಸಾವಿರ ಕೋಟಿ ಹಣ ನಮ್ಮ ರಾಜ್ಯಕ್ಕೆ ಮಂಜೂರಾಗಿತ್ತು. ಈಗ ಕರ್ನಾಟಕ ದೇಶದಲ್ಲೇ ಅತೀ ಹೆಚ್ಚು ಅಂದರೆ 4.31 ಲಕ್ಷ ಕೋಟಿ ಹಣವನ್ನು ಪ್ರತಿವರ್ಷ ಕೇಂದ್ರಕ್ಕೆ ತೆರಿಗೆ ಕಟ್ಟುತ್ತಿದೆ. ಕೇಂದ್ರದ ಬಜೆಟ್ ಗಾತ್ರ ಈಗ 45 ಲಕ್ಷ ಕೋಟಿ ಇದೆ. ಅದಕ್ಕೆ ತಕ್ಕಂತೆ ಅನುದಾನವೂ ದುಪ್ಪಟ್ಟಾಗಿ ಮಂಜೂರಾಗ ಬಹುದಾಗಿತ್ತಲ್ಲವೇ? ಆದರೆ 2023-24 ನೇ ಸಾಲಿನಲ್ಲಿ ಕರ್ನಾಟಕಕ್ಕೆ ಮಂಜೂರಾಗಿದ್ದು ಕೇವಲ 55 ಸಾವಿರ ಕೋಟಿ ಮಾತ್ರ. ಅಂದರೆ ಮೋದಿ ಸರಕಾರ ಕರ್ನಾಟಕಕ್ಕೆ ಮಲತಾಯಿ ಧೋರಣೆ ತೋರಿದೆ. ನ್ಯಾಯಯುತವಾಗಿ ಕೊಡಬೇಕಾದ ಅನುದಾನವನ್ನು ಕೊಡದೇ ವಂಚಿಸಿದೆ. ಅಂದಿನ ಸರಕಾರಕ್ಕಿಂತ ಹೆಚ್ಚು ಅನುದಾನ ಕೊಡಲಾಗಿದೆ ಎಂದು ಮೋದಿ ಸಾಹೇಬರು ಸುಳ್ಳು ಹೇಳಿ ಕನ್ನಡಿಗರನ್ನು ಯಾಮಾರಿಸಲು ಪ್ರಯತ್ನಿಸುತ್ತಿದ್ದಾರೆ.

ನಾಯಕರಿಲ್ಲದ ಕಾಂಗ್ರೆಸ್

“ಕಾಂಗ್ರೆಸ್ ಪಕ್ಷದಲ್ಲಿ ನಾಯಕರೇ ಇಲ್ಲ. ಕಾಂಗ್ರೆಸ್ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದರೆ ವರ್ಷಕ್ಕೊಬ್ಬ ಪ್ರಧಾನ ಮಂತ್ರಿ ಬದಲಾಗುತ್ತಾರೆ” ಎಂದು ಕುಷ್ಟಗಿಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮೋದಿಯವರು ಹೂಂಕರಿಸಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ

ಅಂದರೆ ‘ತನ್ನನ್ನು ಹೊರತು ಪಡಿಸಿ ಈ ದೇಶದಲ್ಲಿ ಪ್ರಧಾನಿ ಆಗಲು ಯಾರಿಗೂ ಯೋಗ್ಯತೆ ಇಲ್ಲ’ ಎನ್ನುವ ಅಹಮಿಕೆಯೇ ಮೋದಿ ಮಾತಿನ ಮರ್ಮವಾಗಿದೆ. ಮೋದಿಯಂತಹ ಚೂರು ಪಾರು ಓದಿದವರು ಈ ದೇಶದ ಪ್ರಧಾನಿ ಆಗಿರಬೇಕಾದರೆ ಇನ್ನು ವಿದ್ಯಾವಂತರಾದ ಅನೇಕ ನಾಯಕರು ಎಲ್ಲಾ ಪ್ರತಿಪಕ್ಷಗಳಲ್ಲೂ ಇದ್ದಾರೆ. ಬಹುಮತ ಹಾಗೂ ಅವಕಾಶ ಸಿಕ್ಕರೆ ದೇಶವನ್ನು ಮುನ್ನಡೆಸುವ ಸಾಮರ್ಥ್ಯ ಇರುವವರು ಬೇಕಾದಷ್ಟಿದ್ದಾರೆ. ಅನುಭವದಲ್ಲಿ ಮಲ್ಲಿಕಾರ್ಜುನ ಖರ್ಗೆ ಮುಂಚೂಣಿಯಲ್ಲಿದ್ದರೆ, ವಿದ್ಯಾರ್ಹತೆ ಹಾಗೂ ಜನಸಂಪರ್ಕದಲ್ಲಿ ರಾಹುಲ್ ಗಾಂಧಿ ಮೇಲ್ಮಟ್ಟದಲ್ಲಿದ್ದಾರೆ. ಆದರೆ ಈ ಯಾರಿಗೂ ಮೋದಿಯ ಹಾಗೆ ಜನಸಮೂಹವನ್ನು ಸುಳ್ಳಿನ ಮೂಲಕ ಯಾಮಾರಿಸುವ ಕಲೆ ಗೊತ್ತಿಲ್ಲ, ಭ್ರಮೆ ಸೃಷ್ಟಿಸುವ ಮೂಲಕ ಜನರಲ್ಲಿ ಮೇನಿಯಾ ಹುಟ್ಟಿಸುವ ಪ್ರತಿಭೆ ಇಲ್ಲ, ಜಾತಿ ಧರ್ಮವನ್ನು ಒಡೆದು ಮತ ಪಡೆಯುವ ತಂತ್ರ ಕರಗತವಾಗಿಲ್ಲ.

ವರ್ಷಕ್ಕೊಮ್ಮೆ ಪ್ರಧಾನಿ ಬದಲಾಗುತ್ತಾರೆ ಎಂದು ಮೋದಿ ಹೇಳಿದ್ದೇ ನಿಜ ಆಗಿದ್ದರೆ ಹಿಂದೆ ಇದ್ದ ಯುಪಿಎ ಸರಕಾರದಲ್ಲೂ ವರ್ಷಕ್ಕೊಬ್ಬ ಪ್ರಧಾನ ಮಂತ್ರಿ ಬದಲಾಗಬೇಕಿತ್ತಲ್ಲಾ?. ಮನಮೋಹನ್ ಸಿಂಗ್ ರವರೇ 10 ವರ್ಷ ಪ್ರಧಾನಿಯಾಗಿ ಸಮರ್ಥವಾಗಿ ದೇಶವನ್ನು ಮುನ್ನೆಡೆಸಿದ್ದರಲ್ಲವೇ?. ಇರಲಿ ಇದೇ ಮೋದಿ ಪಕ್ಷದ ಸರಕಾರ ಕರ್ನಾಟಕದಲ್ಲಿ 2008 ರಿಂದ 2013 ರ ವರೆಗೂ ಅಧಿಕಾರದಲ್ಲಿತ್ತಲ್ಲಾ, ಆಗ ಯಾಕೆ ಮೂವರು ಮುಖ್ಯಮಂತ್ರಿಗಳನ್ನು ಬದಲಾಯಿಸಲಾಯ್ತು?. ಹೋಗಲಿ ಮೋದಿಯವರ ತವರು ರಾಜ್ಯ ಗುಜರಾತಿನಲ್ಲಿ ಯಾಕೆ ಮುಖ್ಯಮಂತ್ರಿಗಳು ಬದಲಾಗುತ್ತಾ ಹೋದರು?. ಅಂದರೆ ಮೋದಿ ಮಹಾತ್ಮರು ಹೇಳುವುದಕ್ಕೂ ವಾಸ್ತವಕ್ಕೂ ಯಾವುದೇ ಸಂಬಂಧ ಇರುವುದಿಲ್ಲ. ತಮ್ಮ ಮೂಗಿನ ನೇರಕ್ಕೆ ಏಕಪಕ್ಷೀಯವಾಗಿ ಸುಳ್ಳು ಹೇಳುತ್ತಲೇ ಇರುತ್ತಾರೆ. ಕೌಂಟರ್ ಪ್ರಶ್ನೆ ಕೇಳಬೇಕೆಂದರೆ ಒಂದೇ ಒಂದು ಪತ್ರಿಕಾ ಗೋಷ್ಟಿಯನ್ನೂ ಕರೆಯದೆ ಪ್ರಶ್ನೆಗಳಿಗೆ ಉತ್ತರಿಸುವ ಗೋಜಿಗೆ ಹೋಗದೇ ಪತ್ರಕರ್ತರಿಂದ ಮೋದಿ ದೂರ ಓಡುತ್ತಾರೆ.

ಕರ್ನಾಟಕದ ಮಕ್ಕಳು ಉಪವಾಸ ಸಾಯುತ್ತಾರೆ

ಅನ್ನ ಭಾಗ್ಯ

ಎ.29 ರಂದು ಬಾಗಲಕೋಟೆಯಲ್ಲಿ ಪ್ರಚಾರ ಭಾಷಣ ಮಾಡಿದ ಸುಳ್ಳೇಶ್ವರರು ” ಮುಂದಿನ ದಿನಗಳಲ್ಲಿ ಸರ್ಕಾರಿ ನೌಕರರಿಗೂ ವೇತನ ನೀಡಲಾಗದಂತಹ ಸ್ಥಿತಿ ಕರ್ನಾಟಕ ಸರಕಾರಕ್ಕೆ ಬರುತ್ತದೆ. ಇಲ್ಲಿಯ ಮಕ್ಕಳು ಉಪವಾಸ ಸಾಯಬೇಕಾದ ಪರಿಸ್ಥಿತಿ ತರುತ್ತಾರೆ” ಎಂದು ಭವಿಷ್ಯ ನುಡಿದರು. ಸುಳ್ಳು ಹೇಳಿ ಆತಂಕ ಸೃಷ್ಟಿಸುವುದು ಈ ಕಲಾಕಾರನ ಅನನ್ಯ ಪ್ರತಿಭೆ. ಸರಿಯಾದ ಸಮಯಕ್ಕೆ  ವೇತನ ನೀಡದ ಪರಿಸ್ಥಿತಿ ಈ ಹಿಂದೆ ಇದ್ದ ಬಿಜೆಪಿ ಸರಕಾರದಲ್ಲಿತ್ತು. ಈಗ ಇಲ್ಲಿಯವರೆಗೂ ಅಂತಹ ದುಸ್ಥಿತಿ ಕರ್ನಾಟಕಕ್ಕೆ ಬಂದಿಲ್ಲ. ಈ ರಾಜ್ಯದಲ್ಲಿ ಯಾರೂ ಉಪವಾಸದಿಂದ ಸಾಯಬಾರದು ಎಂದೇ ಕರ್ನಾಟಕದಲ್ಲಿ ಅನ್ನಭಾಗ್ಯ ಗ್ಯಾರಂಟಿ ಯೋಜನೆ ತರಲಾಗಿದೆ. ಯುಪಿಎ ಸರಕಾರ ಇದ್ದಾಗಲೇ ಆಹಾರ ಭದ್ರತೆ ಕಾಯಿದೆಯನ್ನೂ ತರಲಾಗಿದೆ. ಇಂದಿರಾ ಕ್ಯಾಂಟೀನ್ ಮೂಲಕ ಅತೀ ಕಡಿಮೆ ಬೆಲೆಗೆ ಹಸಿದವರ ಹೊಟ್ಟೆ ತುಂಬಿಸಲಾಗುತ್ತಿದೆ. ಆದರೂ ‘ಮುಂದೆ ಹಸಿವೆಯಿಂದ ಮಕ್ಕಳು ಸಾಯುವ ಸ್ಥಿತಿ ಬರುತ್ತದೆ’ ಎಂದು ಮೋದಿಯವರು ಹಸಿ ಸುಳ್ಳನ್ನು ಹೇಳಿದ್ದು ಅಕ್ಷಮ್ಯ.

ಕಾಂಗ್ರೆಸ್ಸಿಗರ ಹಗರಣದ ಕನಸು

“ಕೋಟ್ಯಾಂತರ ಮೊತ್ತದ ಹಗರಣ ಮಾಡುವ ಕನಸನ್ನು ಕಾಂಗ್ರೆಸ್ ನವರು ಕಾಣುತ್ತಿದ್ದಾರೆ” ಎಂಬ ಇನ್ನೊಂದು ಕಪೋಲ ಕಲ್ಪಿತ ಸುಳ್ಳನ್ನು ಪ್ರಧಾನಿಗಳು ಹರಿಯಬಿಟ್ಟರು. ಕಾಂಗ್ರೆಸ್ ಕಾಣುವ ಕನಸು ಇವರಿಗೆ ಹೇಗೆ ಗೊತ್ತಾಯ್ತು?. ಈ ಸುಳ್ಳುಗಾರನ ಮಾತು “ತಾನು ಕಳ್ಳ ಪರರ ನಂಬ” ಎನ್ನುವಂತಲ್ಲವೇ?. ಮುಂದೆ ಏನಾಗುತ್ತದೋ ಗೊತ್ತಿಲ್ಲ. ಆದರೆ ಇದೇ ಮೋದಿಯವರು ಚುನಾವಣಾ ಬಾಂಡ್ ಮೂಲಕ ಬೃಹತ್ ಭ್ರಷ್ಟಾಚಾರದಿಂದ ಹಣ ಪಡೆದಿದ್ದನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿತ್ತಲ್ಲಾ.. ಅಸಾಂವಿಧಾನಿಕ ಕ್ರಮ ಎಂದೂ ಹೇಳಿತ್ತಲ್ಲಾ. ತನ್ನ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಮರೆಸಲು ಇನ್ನೂ ಅಧಿಕಾರಕ್ಕೆ ಬರದ ಪಕ್ಷದ ಮೇಲೆ ಆರೋಪಿಸುವ ಸುಳ್ಳುಗಾರನಿಗೆ ಯಾವುದೇ ಅತ್ಯುನ್ನತ ಪ್ರಶಸ್ತಿ ಕೊಟ್ಟರೂ ಕಡಿಮೆಯೇ ಆಗಿದೆ.‌

ಇವು ಬರೀ ಇತ್ತೀಚಿನ ಸ್ಯಾಂಪಲ್ ಸುಳ್ಳುಗಳು ಮಾತ್ರ. ಇನ್ನೂ ಬೇಕಾದಷ್ಟಿವೆ.. ಮುಂದಿನ ಭಾಗದಲ್ಲಿ ನೋಡೋಣ.

 ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು

ಇದನ್ನೂ ಓದಿ- ಹಿಡನ್ ಅಜೆಂಡಾಗೆ ಹಿನ್ನಡೆ; ಪೋಸ್ಟ್ ಪೋನ್ ಆಯ್ತು ಸಂವಿಧಾನ ಬದಲಾವಣೆ

More articles

Latest article