ಮುಡಾ ಬದಲಿ ನಿವೇಶನ ಪ್ರಕರಣ ವಿಷಯವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕರು ಷಡ್ಯಂತ್ರ ಮಾಡಿದ್ದಾರೆ. ಆದರೆ ರಾಜ್ಯದ ಜನತೆ, ಶಾಸಕರು ಮತ್ತು ಕೆಲ ಬಿಜೆಪಿ ನಾಯಕರು ಸಹ ಸಿದ್ದರಾಮಯ್ಯ ಅವರೊಂದಿಗಿದ್ದಾರೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಹುಬ್ಬಳ್ಳಿ ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಅಹಿಂದ ವರ್ಗಗಳ ಅಗ್ರಗಣ್ಯ ನಾಯಕರಾಗಿರುವ ಸಿದ್ದರಾಮಯ್ಯನವರ ಜನಪ್ರಿಯತೆಯನ್ನು ಸಹಿಸಲಾಗಿದ ಬಿಜೆಪಿ ನಾಯಕರು ಅವರ ವಿರುದ್ಧ ಪಿತೂರಿ ನಡೆಸಿದ್ದಾರೆ ಮತ್ತು ರಾಜಕೀಯ ಷಡ್ಯಂತ್ರ ಹೂಡಿದ್ದಾರೆ, ಇದನ್ನು ಕಾಂಗ್ರೆಸ್ ಪಕ್ಷ ರಾಜಕೀಯವಾಗೇ ಎದುರಿಸಲಿದೆ ಎಂದು ಹೇಳಿದರು.
ಕಳೆದ 40 ವರ್ಷಗಳಿಂದ ರಾಜಕೀಯದಲ್ಲಿರುವ ಸಿದ್ದರಾಮಯ್ಯ ಶೋಷಿತ ವರ್ಗದವರ ನಾಯಕರಾಗಿ ಕಳಂಕರಹಿತ ರಾಜಕೀಯ ಬದುಕು ನಡೆಸಿದ್ದಾರೆ. ಅವರನ್ನು ಪದಚ್ಯುತಗೊಳಿಸಲು ರಾಜ್ಯದ ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರ ರಾಜ್ಯಪಾಲರ ಕಚೇರಿಯನ್ನು ಬಳಸಿಕೊಂಡು ಹುನ್ನಾರ ನಡೆಸಿದೆ ಎಂದು ಆರೋಪ ಮಾಡಿದ್ದಾರೆ.
ಅದರೆ ರಾಜ್ಯದ ಜನತೆ, ಶಾಸಕರು ಮತ್ತು ಕೆಲ ಬಿಜೆಪಿ ನಾಯಕರು ಸಹ ಸಿದ್ದರಾಮಯ್ಯ ಅವರೊಂದಿಗಿದ್ದಾರೆ ಎಂದು ಲಾಡ್ ಹೇಳಿದರು. ಮುಖ್ಯಮಂತ್ರಿಯವರು ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವಿಸಲ್ಲ, ಕಾಂಗ್ರೆಸ್ ನಾಯಕರು ರಾಜ್ಯಾದ್ಯಂತ ಹೋರಾಟ ನಡೆಸಲಿದ್ದಾರೆ ಎಂದು ಸಚಿವ ಹೇಳಿದರು.