ಸಂಪುಟದ ನಿರ್ಣಯ ಇನ್ನೂ ಅಧಿಕೃತ ಆದೇಶವಾಗಿಲ್ಲ. ಈಗಲಾದರೂ ಮಾನ್ಯ ಸಿದ್ದರಾಮಯ್ಯನವರು ಶಾಲೆ ಕಾಲೇಜು ದೇವಸ್ಥಾನ ಮುಂತಾದ ಸಾರ್ವಜನಿಕ ಜಾಗಗಳಲ್ಲಿ ಯಾವುದೇ ಸಂಘ ಸಂಸ್ಥೆಗಳು ಯಾವುದೇ ರೀತಿಯ ಕಾರ್ಯಕ್ರಮಗಳನ್ನು ಮಾಡಕೂಡದು ಹಾಗೂ ಅಂತವುಗಳಿಗೆ ಯಾರೂ ಅನುಮತಿಯನ್ನು ಕೊಡಬಾರದು, ಹಾಗೇನಾದರೂ ಮಾಡಿದರೆ ಶಿಕ್ಷೆ ಮತ್ತು ದಂಡ ವಿಧಿಸಲಾಗುವುದು ಎಂದು ಆದೇಶ ಮಾಡಬೇಕಿದೆ. ಆಗ ಮಾತ್ರ ಸಂಘದ ಶಾಖೆ, ಬೈಠಕ್ಕು ಕವಾಯತುಗಳನ್ನು ನಿಯಂತ್ರಿಸಬಹುದಾಗಿದೆ – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.
ಸಂಘಿಗಳ ದಾರಿ ಹಾಗೂ ಗುರಿಯ ಬಗ್ಗೆ ಗೊತ್ತಿರುವಂತಹುದೇ. ತಮ್ಮ ಮನು ಪ್ರೇರಿತ ಹಿಂದುತ್ವವಾದಿ ರಾಷ್ಟ್ರ ಸ್ಥಾಪನೆಯ ಗುರಿ ಮುಟ್ಟಲು ಆರೆಸ್ಸೆಸ್ ಯಾವ ದಾರಿಯನ್ನು ಬೇಕಾದರೂ ಬಳಸಿಕೊಳ್ಳುತ್ತದೆ. ಶಾಖೆಯ ಹೆಸರಲ್ಲಿ ಯುವಜನರ ಮೆದುಳಲ್ಲೂ ಸಹ ಮತಾಂಧತೆಯನ್ನು ಬಿತ್ತುತ್ತದೆ.
ಆದರೆ ಈ ಕಾಂಗ್ರೆಸ್ಸಿಗರಿಗೆ ಏನಾಗಿದೆ?. ಸರಕಾರಿ ಜಾಗಗಳಲ್ಲಿ ಆರೆಸ್ಸೆಸ್ ಚಟುವಟಿಕೆಗಳನ್ನು ನಿರ್ಬಂಧಿಸುವ ಕುರಿತು ಮಾತಾಡುತ್ತಾರೆ. ಸಚಿವ ಪ್ರಿಯಾಂಕ ಖರ್ಗೆಯವರು ಈ ಕುರಿತು ಮುಖ್ಯಮಂತ್ರಿಗೆ ಪತ್ರ ಬರೆಯುತ್ತಾರೆ. ಸಿಎಂ ಅದನ್ನು ಜಾರಿಗೆ ತರುವುದಾಗಿ ಹೇಳುತ್ತಾರೆ. ತಮಿಳುನಾಡು ಮಾದರಿಯ ವಿವರ ಪಡೆದು, ಸಚಿವ ಸಂಪುಟ ಸಭೆಯಲ್ಲಿ ನಿರ್ಬಂಧದ ಕುರಿತು ಚರ್ಚಿಸಲಾಗುತ್ತದೆ. ಆದರೆ ಸಭೆಯಲ್ಲಿ ಆರೆಸ್ಸೆಸ್ ಚಟುವಟಿಕೆ ನಿಷೇಧಕ್ಕೆ ಹಲವಾರು ಸಚಿವರುಗಳೇ ತಮ್ಮ ವಿರೋಧ ವ್ಯಕ್ತಪಡಿಸುತ್ತಾರೆ. ಹೀಗಾಗಿ ಖಡ್ಡಾಯವಾಗಿ ಸಂಪೂರ್ಣ ನಿಷೇಧ ಮಾಡುವ ಬದಲಾಗಿ ಖಡ್ಡಾಯ ಅನುಮತಿಯ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ.
ಆರೆಸ್ಸೆಸ್ ಎನ್ನುವ ಸಂವಿಧಾನ ವಿರೋಧಿ ಸಂಘಟನೆಯ ಬ್ರೇನ್ ವಾಶ್ ಚಟುವಟಿಕೆಗಳನ್ನು ಸರಕಾರಿ ಸ್ವತ್ತುಗಳಲ್ಲಿ ನಿಷೇಧಿಸುವ ಧೈರ್ಯವನ್ನು ಕಾಂಗ್ರೆಸ್ ತೆಗೆದುಕೊಳ್ಳುತ್ತದೆ ಎಂದು ನಂಬಿದವರಿಗೆ ನಿರಾಸೆಯಾಗಿದ್ದಂತೂ ಸತ್ಯ. ಕಾಂಗ್ರೆಸ್ ನಲ್ಲಿಯೇ ಸಂಘಿ ಮನಸ್ಥಿತಿಯ ಸಚಿವರಿದ್ದಾರೆ. ಅಂತವರು ಖಡ್ಡಾಯ ನಿಷೇಧಕ್ಕೆ ವಿರೋಧವಾಗಿದ್ದಾರೆ. ಈ ಸಚಿವರುಗಳ ವಿರೋಧ ಕಟ್ಟಿಕೊಳ್ಳಲಾಗದ ಮುಖ್ಯಮಂತ್ರಿಗಳು ತಮ್ಮ ನಿರ್ಧಾರದಲ್ಲಿ ರಾಜಿ ಮಾಡಿಕೊಂಡಿರುವುದು ಸ್ಪಷ್ಟವಾಗಿದೆ.
ರಾಜಿ ಸೂತ್ರದ ಅನ್ವಯ “ಸರ್ಕಾರಿ ಶಾಲಾ – ಕಾಲೇಜುಗಳು, ಅನುದಾನಿತ ಶಿಕ್ಷಣ ಸಂಸ್ಥೆಗಳು, ಉದ್ಯಾನವನಗಳು, ಆಟದ ಮೈದಾನಗಳು, ಸಾರ್ವಜನಿಕ ರಸ್ತೆಗಳು ಹಾಗೂ ಇತರೆ ಸ್ಥಳಗಳನ್ನು ಯಾವುದೇ ಖಾಸಗಿ ಸಂಘ – ಸಂಸ್ಥೆ, ಸಂಘಟನೆಗಳು ತಮ್ಮ ಚಟುವಟಿಕೆಗಳಿಗೆ ಬಳಸುವ ಮುನ್ನ ಸ್ಥಳದ ಮಾಲೀಕತ್ವ ಹೊಂದಿದ ಸಕ್ಷಮ ಪ್ರಾಧಿಕಾರಗಳಿಂದ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಿ ನಿರ್ಣಯ ತೆಗೆದುಕೊಳ್ಳಲಾಯ್ತು. ಇದಕ್ಕಿಂತಲೂ ಸಾರ್ವಜನಿಕ ಸ್ಥಳಗಳಲ್ಲಿ ಸಂಘದ ಚಟುವಟಿಕೆಗಳನ್ನು ನಿಲ್ಲಿಸಲು 2013 ರಲ್ಲಿ ಬಿಜೆಪಿ ಸರಕಾರದ ಅವಧಿಯಲ್ಲಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್ ರವರು ಹೊರಡಿಸಿದ ಸುತ್ತೋಲೆಯೇ ಸಾಕಾಗಿತ್ತು. ಅದರಲ್ಲಿ “ಶಾಲಾ ಮೈದಾನ ಹಾಗೂ ಆವರಣಗಳನ್ನು ಯಾವುದೇ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಶೈಕ್ಷಣಿಕೇತರ ಚಟುವಟಿಕೆಗಳಿಗೆ / ಉದ್ದೇಶಗಳಿಗೆ ಬಳಸಬಾರದು ಹಾಗೂ ಅನುಮತಿಯನ್ನು ನೀಡಬಾರದು” ಎಂದು ಸೂಚಿಸಲಾಗಿತ್ತು.
ಅನುಮತಿ ಪಡೆದು ಚಟುವಟಿಕೆ ಮಾಡುವುದಕ್ಕೂ ಹಾಗೂ ಅನುಮತಿಯನ್ನೇ ನಿರ್ಬಂಧಿಸುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಬಿಜೆಪಿಯ ಸುತ್ತೋಲೆಯಂತೆ ಯಾವುದೇ ಸಕ್ಷಮ ಪ್ರಾಧಿಕಾರ ಯಾವುದೇ ಕಾರಣಕ್ಕೂ ಸರಕಾರಿ ಸ್ವತ್ತುಗಳಲ್ಲಿ ಯಾವುದೇ ಚಟುವಟಿಕೆ ಮಾಡಲು ಅನುಮತಿಯನ್ನು ನೀಡುವಂತಿರಲಿಲ್ಲ. ಆದರೆ ಈಗ ಈ ಕಾಂಗ್ರೆಸ್ ಸರಕಾರ ಈ ಸುತ್ತೋಲೆಗೆ ವಿರುದ್ಧವಾಗಿ “ಸಕ್ಷಮ ಪ್ರಾಧಿಕಾರಗಳಿಂದ ಕಡ್ಡಾಯವಾಗಿ ಅನುಮತಿ ಪಡೆದು ಕಾರ್ಯಕ್ರಮ ನಡೆಸಬಹುದು” ಎಂದು ನಿರ್ಣಯಿಸಿದೆ. ಇದು ತಮಿಳುನಾಡು ಮಾದರಿ ಎಂದೂ ಹೇಳಿದ್ದಾರೆ.
ಇಷ್ಟೆಲ್ಲಾ ಮಾಡುವ ಬದಲಾಗಿ 2013 ರ ಬಿಜೆಪಿ ಸರಕಾರದ ಸುತ್ತೋಲೆಯನ್ನೇ ಕಟ್ಟುನಿಟ್ಟಾಗಿ ಜಾರಿಗೆ ತಂದಿದ್ದರೆ ಸಾರ್ವಜನಿಕ ಜಾಗಗಳಲ್ಲಿ ಸಂಘದ ಚಟುವಟಿಕೆಗಳನ್ನು ನಿಷೇಧಿಸಬಹುದಾಗಿತ್ತು. ಆ ಸುತ್ತೋಲೆ ಪ್ರಕಾರ ಯಾರೂ ಅನುಮತಿಯನ್ನೇ ಕೊಡುವ ಹಾಗಿಲ್ಲವೆಂದಾಗ ಎಲ್ಲಾ ಚಟುವಟಿಕೆಗಳು ನಿಂತು ಹೋಗುತ್ತಿದ್ದವು. ‘ಏನೋ ಮಾಡಲು ಹೋಗಿ ಇದ್ದಿದ್ದನ್ನೂ ಹಾಳು ಮಾಡಿದರು’ ಎನ್ನುವಂತೆ ಈಗಾಗಲೇ ಚಾಲ್ತಿಯಲ್ಲಿದ್ದ ಸರಕಾರಿ ಆದೇಶವನ್ನು ಡೈಲ್ಯೂಟ್ ಮಾಡಿ ಅಧಿಕೃತವಾಗಿಯೇ ಅನುಮತಿ ಪಡೆದು ಯಾರು ಬೇಕಾದರೂ ಸರಕಾರಿ ಜಾಗಗಳಲ್ಲಿ ಕಾರ್ಯಕ್ರಮ ಮಾಡಬಹುದಾದ ಆದೇಶ ಖಂಡಿತಾ ಸಾಧುವಲ್ಲ, ಇದರಿಂದ ಸಂಘದ ಬ್ರೈನ್ ವಾಶ್‌ನ ಶಿಬಿರಗಳು ನಿಲ್ಲುವುದಿಲ್ಲ.
ಯಾಕೆಂದರೆ ನಮ್ಮ ಆಡಳಿತಾಂಗ ವ್ಯವಸ್ಥೆಯಲ್ಲಿ ಸಂಘಿ ಮನಸ್ಥಿತಿಯ ಅಧಿಕಾರಿಗಳು ಬೇಕಾದಷ್ಟಿದ್ದಾರೆ. ಯಾವುದೋ ಸಬೂಬು ಹೇಳಿ ಸಂಘದ ಚಟುವಟಿಕೆಗಳಿಗೆ ಅನುಮತಿ ಕೊಡುತ್ತಾರೆ. ಇಲ್ಲವೇ ಈ ಆರೆಸ್ಸೆಸ್ ನವರು ಸಂಘದ ಶಾಖೆಯ ಬೈಠಕ್ ಎಂದು ಹೇಳದೇ ಕರಾಟೆ, ಯೋಗ, ಹಾಡು, ಕುಣಿತ ಕಲಿಸುತ್ತೇವೆ, ವ್ಯಕ್ತಿತ್ವ ವಿಕಸನದ ಶಿಬಿರ ಮಾಡುತ್ತೇವೆ, ಆಟೋಟಗಳನ್ನು ಹೇಳಿಕೊಡುತ್ತೇವೆ ಎಂದೆಲ್ಲಾ ನೆಪ ಹೇಳಿ ಅನುಮತಿಯನ್ನು ಪಡೆದುಕೊಂಡು ಸಂಘಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತಾರೆ. ಇದರಿಂದಾಗಿ ಸಾರ್ವಜನಿಕ ಪ್ರದೇಶಗಳಲ್ಲಿ ಆರೆಸ್ಸೆಸ್ ಚಟುವಟಿಕೆಗಳನ್ನು ನಿರ್ಬಂಧಿಸಬೇಕು ಎನ್ನುವ ಉದ್ದೇಶವೇ ಈಡೇರದಂತಾಗುತ್ತದೆ.
ಈ ಹಿಂದೆ ಬಿಜೆಪಿ ತಂದ ಸುತ್ತೋಲೆಗಿಂತಲೂ ಈಗ ಕಾಂಗ್ರೆಸ್ಸಿಗರು ತರುತ್ತಿರುವ ಆದೇಶ ಸಂಘದ ಚಟುವಟಿಕೆಗಳಿಗೆ ಉತ್ತೇಜನ ಕೊಡುವಂತಿದೆ. ತಮ್ಮ ಉದ್ದೇಶ ಸಾಧನೆಗಾಗಿ ನಾಮ ವೇಷ ಬದಲಾಯಿಸುವಲ್ಲಿ ಎಕ್ಸ್‌ಪರ್ಟ್ ಆಗಿರುವ ಸಂಘಿಗಳು ಯಾವುಯಾವುದೋ ಕಾರಣಗಳನ್ನು ಹೇಳಿ ಅನುಮತಿ ಪಡೆಯಬಲ್ಲರು. ಮುಂದೆ ಕಾಂಗ್ರೆಸ್ ಸರಕಾರ ಹೋಗಿ ಬಿಜೆಪಿ ನೇತೃತ್ವದ ಸರಕಾರ ಬಂದಾಗಂತೂ ಈ ಸಿದ್ದರಾಮಯ್ಯನವರ ಸರಕಾರದ ಅನುಮತಿ ಆದೇಶ ಸಂಘಿಗಳಿಗೆ ವರದಾನವಾಗುವುದಂತೂ ಶತಸಿದ್ಧ. ಇಲ್ಲಿವರೆಗೆ ಈ ಹಿಂದೆ ಇದ್ದ ಅನುಮತಿ ನಿಷೇಧ ಸುತ್ತೋಲೆಯಂತೆ ಸಂಘಿಗಳು ಸರಕಾರಿ ಜಾಗಗಳಲ್ಲಿ ತಮ್ಮ ಶಾಖಾ ಕಾರ್ಯಕ್ರಮಗಳನ್ನು ನಡೆಸಿದರೆ ಯಾರು ಬೇಕಾದರೂ ಪ್ರಶ್ನಿಸಬಹುದಾಗಿತ್ತು. ದೂರನ್ನೂ ಕೊಡಬಹುದಾಗಿತ್ತು, ಕೋರ್ಟಿಗೂ ಹೋಗಬಹುದಾಗಿತ್ತು. ಆದರೆ ಈಗ ಕಾಂಗ್ರೆಸ್ ಸರಕಾರ ಅನುಮತಿ ಪಡೆದು ಕಾರ್ಯಕ್ರಮ ಮಾಡಿ ಎನ್ನುವ ಆದೇಶ ಜಾರಿಗೆ ಬಂದಿದ್ದೇ ಆದರೆ ಯಾರೂ ಪ್ರಶ್ನಿಸುವಂತಿಲ್ಲ, ಹೇಗಾದರೂ ಯಾವುದಾದರೂ ರೂಪದಲ್ಲಿ ಅನುಮತಿ ಪಡೆಯುವ ಕಲೆಯನ್ನು ಸಂಘಿಗಳಿಗೆ ಯಾರೂ ಹೇಳಿಕೊಡಬೇಕಾಗಿಲ್ಲ. ಇಷ್ಟಕ್ಕೂ ಯಾವುದೇ ಸರಕಾರಿ ಶಾಲೆ ಕಾಲೇಜುಗಳ ಆವರಣಗಳಲ್ಲಿ ಯಾವುದೇ ಸಂಘ ಸಂಸ್ಥೆ ಯಾವುದೇ ಕಾರ್ಯಕ್ರಮಗಳನ್ನು ಮಾಡಬೇಕಾದರೂ ಅನುಮತಿಯನ್ನು ಪಡೆದುಕೊಳ್ಳಲೇ ಬೇಕಿತ್ತು. ಅನುಮತಿ ಇಲ್ಲದೇ ಯಾರೂ ಕಾರ್ಯಕ್ರಮ ಮಾಡುತ್ತಿರಲಿಲ್ಲ. ಈಗಲೂ ಅದನ್ನೇ ಸಂಘಿಗಳು ಮುಂದುವರೆಸುತ್ತಾರೆ. ಯಾವುದೋ ರೂಪದಲ್ಲಿ ಅನುಮತಿ ಗಿಟ್ಟಿಸಿಕೊಳ್ಳುತ್ತಾರೆ. ಹೀಗಾದಾಗ ಈ ಕೈ ಸರಕಾರ ಏನು ಘನಂದಾರಿ ಆದೇಶ ತಂದಂತಾಯ್ತು? ಈಗಾಗಲೇ ಇರುವ ಆದೇಶದ ಉದ್ದೇಶವನ್ನೇ ಹಾಳು ಮಾಡಿದಂತಾಯ್ತು.
ಹೌದು. ತಮಿಳುನಾಡಿನಲ್ಲಿ ಇದೇ ರೀತಿ ಖಡ್ಡಾಯವಾಗಿ ಅನುಮತಿ ಪಡೆದು ಕಾರ್ಯಕ್ರಮ ಮಾಡಬೇಕೆಂಬ ಆದೇಶ ಮಾಡಲಾಗಿದೆ. ಅಲ್ಲಿ ಬಿಜೆಪಿಗಾಗಲೀ ಆರೆಸ್ಸೆಸ್ ಗಾಗಲೀ ಜನಮಾನ್ಯತೆ ಇಲ್ಲ. ಸಂಘದ ಚಟುವಟಿಕೆಗಳೂ ಅಷ್ಟಕ್ಕಷ್ಟೇ. ಹೀಗಾಗಿ ಸಂಘದ ಹಿಂದುತ್ವವಾದಿ ಸಿದ್ಧಾಂತವನ್ನು ವಿರೋಧಿಸುವ ಪಕ್ಷಗಳೇ ಆ ರಾಜ್ಯದಲ್ಲಿ ಸರಕಾರ ರಚಿಸುತ್ತವೆ. ಹಾಗೂ ಆಡಳಿತಾಂಗದಲ್ಲೂ ಸಂಘಿ ಮನಸ್ಥಿತಿಯವರು ಇಲ್ಲ. ಹೀಗಾಗಿ ಸಂಘದ ಚಟುವಟಿಕೆಗಳಿಗೆ ತಮಿಳುನಾಡಿನಲ್ಲಿ ಅನುಮತಿ ಸಿಗುವುದು ಕಷ್ಟಸಾಧ್ಯ.
ಆದರೆ.. ಕರ್ನಾಟಕದಲ್ಲಿ ಬಿಜೆಪಿ ಯ ಅಸ್ತಿತ್ವ ವ್ಯಾಪಕವಾಗಿದೆ. ಸರಕಾರ ಯಾವುದೇ ಇದ್ದರೂ ಆರೆಸ್ಸೆಸ್ ಶಾಖೆಯ ಚಟುವಟಿಕೆಗಳು ನಿರಂತರವಾಗಿ ನಿರಾತಂಕವಾಗಿ ನಡೆಯುತ್ತಿವೆ. ಸರಕಾರಿ ಜಾಗಗಳಲ್ಲಿ ಖಾಸಗಿ ಸಂಘ ಸಂಸ್ಥೆಗಳು ಯಾವುದೇ ಕಾರ್ಯಕ್ರಮ ಮಾಡುವಂತಿಲ್ಲ ಎಂದು 2013 ರಲ್ಲಿ ಬಿಜೆಪಿ ಸರಕಾರವೇ ಆದೇಶ ಮಾಡಿದ್ದರೂ ಅದು ಪಾಲನೆಯಾಗಿಲ್ಲ. ಸಂವಿಧಾನವನ್ನೇ ನಂಬದ ಸಂಘಿಗಳು ಸರಕಾರಿ ಆದೇಶಕ್ಕೆ ಮಾನ್ಯತೆ ಕೊಡಲು ಸಾಧ್ಯವಿಲ್ಲ. ಹೀಗಾಗಿ ಸಂಘ ಪರಿವಾರದವರಿಂದ ಕೋಮುಗಲಭೆಗಳು ಕರ್ನಾಟಕದಲ್ಲಿ ಹೆಚ್ಚುತ್ತಲೇ ಇವೆ. ಅದಕ್ಕೆ ಶಾಖೆಗಳಲ್ಲಿ ಮೆದುಳು ತೊಳೆಸಿಕೊಂಡು ಬಂದು ಧರ್ಮದ ಅಮಲೇರಿಸಿಕೊಂಡ ಮತಾಂಧರು ಕಾರಣರಾಗಿದ್ದಾರೆ.
“ದಮ್ಮು ತಾಕತ್ತು ಇದ್ದರೆ ಆರೆಸ್ಸೆಸ್ ಕಾರ್ಯಕ್ರಮಗಳನ್ನು ನಿಷೇಧಿಸಿ ನೋಡೋಣ” ಎಂದು ಸರಕಾರಕ್ಕೆ ಧಮಕಿ ಹಾಕುತ್ತಿದ್ದ ರಾಜ್ಯ ಬಿಜೆಪಿ ನಾಯಕರು ಈಗ ನಿರಾಳರಾಗಿದ್ದಾರೆ. ಎಲ್ಲೂ ಸಿದ್ದರಾಮಯ್ಯನವರ ಸರಕಾರ ಸಾರ್ವಜನಿಕ ಸ್ಥಳಗಳಲ್ಲಿ ಸಂಘದ ಚಟುವಟಿಕೆಗಳನ್ನು ನಿಷೇಧಿಸುತ್ತದೋ ಎನ್ನುವ ಆತಂಕದಲ್ಲಿದ್ದ ಬಿಜೆಪಿಗೆ ಈಗ ಒಂದಿಷ್ಟು ಸಮಾಧಾನವೂ ಆಗಿ ಹೋರಾಟ ಹಾರಾಟದ ತೀವ್ರತೆ ತಗ್ಗಿದೆ. ಶೆಟ್ಟರ್ ಸರಕಾರದ ಅನುಮತಿ ನಿಷೇಧಕ್ಕಿಂತಲೂ ಸಿದ್ದರಾಮಯ್ಯನವರ ಸರಕಾರದ ಅನುಮತಿ ಪಡೆದು ಕಾರ್ಯಕ್ರಮ ಮಾಡಬಹುದಾದ ಆದೇಶ ಬಿಜೆಪಿಗರಿಗೆ ಸ್ವಲ್ಪ ನೆಮ್ಮದಿ ತಂದಿದೆ. ಆರೆಸ್ಸೆಸ್ ನವರೂ ನಿರಾಳತೆಯ ನಿಟ್ಟುಸಿರು ಬಿಟ್ಟಿದ್ದಾರೆ.
ಈ ಕಾಂಗ್ರೆಸ್ಸಿಗರು ಇರೋದೇ ಹೀಗೆ. ಯಾವುದನ್ನೂ ಸರಿಯಾಗಿ ಮಾಡಿಲ್ಲ. ಸಂಘದ ಚಟುವಟಿಕೆಗಳು ಹೆಚ್ಚಾದಷ್ಟೂ ಬಿಜೆಪಿ ಪಕ್ಷ ಬಲಗೊಳ್ಳುತ್ತದೆ, ಆರೆಸ್ಸೆಸ್ ಬಲಶಾಲಿಯಾಗುತ್ತದೆ ಹಾಗೂ ಅದರಿಂದ ಸಂವಿಧಾನಕ್ಕೆ, ಸಹಬಾಳ್ವೆಗೆ ಧಕ್ಕೆ ಆಗುತ್ತದೆ ಎನ್ನುವ ಕನಿಷ್ಟ ಅರಿವು ಈ ಕಾಂಗ್ರೆಸ್ ಸರಕಾರಕ್ಕೆ ಇದ್ದಿದ್ದೇ ಆಗಿದ್ದರೆ ಯಾರೇ ಆಗಲಿ ಸಾರ್ವಜನಿಕ ಸರಕಾರಿ ಜಾಗಗಳಲ್ಲಿ ಯಾವುದೇ ಕಾರ್ಯಕ್ರಮಗಳಿಗೆ ಅನುಮತಿ ಕೊಡುವುದನ್ನೇ ಕಡ್ಡಾಯವಾಗಿ ನಿರ್ಬಂಧಿಸಬೇಕಿತ್ತು. ಶೆಟ್ಟರ್ ಸರಕಾರದ ಸುತ್ತೋಲೆಯನ್ನು ಸಕ್ರಿಯವಾಗಿ ಜಾರಿಗೆ ತರಬೇಕಿತ್ತು. ಆದರೆ.. ಆ ದಮ್ಮು ತಾಕತ್ತನ್ನು ಕಾಂಗ್ರೆಸ್ ಸರಕಾರ ತೋರಿಸಲಿಲ್ಲ. ಸಂಘ ವಿರೋಧಿ ಹೇಳಿಕೆಗಳನ್ನು ಕೊಡುವ ಸಿದ್ದರಾಮಯ್ಯನವರಿಂದ ಇದನ್ನು ನಿರೀಕ್ಷಿಸಿರಲಿಲ್ಲ.
ಈಗಲೂ ಏನೂ ಆಗಿಲ್ಲ. ಸಂಪುಟದ ನಿರ್ಣಯ ಇನ್ನೂ ಅಧಿಕೃತ ಆದೇಶವಾಗಿಲ್ಲ. ಈಗಲಾದರೂ ಮಾನ್ಯ ಸಿದ್ದರಾಮಯ್ಯನವರು ಶಾಲೆ ಕಾಲೇಜು ದೇವಸ್ಥಾನ ಮುಂತಾದ ಸಾರ್ವಜನಿಕ ಜಾಗಗಳಲ್ಲಿ ಯಾವುದೇ ಸಂಘ ಸಂಸ್ಥೆಗಳು ಯಾವುದೇ ರೀತಿಯ ಕಾರ್ಯಕ್ರಮಗಳನ್ನು ಮಾಡಕೂಡದು ಹಾಗೂ ಅಂತವುಗಳಿಗೆ ಯಾರೂ ಅನುಮತಿಯನ್ನು ಕೊಡಬಾರದು, ಹಾಗೇನಾದರೂ ಮಾಡಿದರೆ ಶಿಕ್ಷೆ ಮತ್ತು ದಂಡ ವಿಧಿಸಲಾಗುವುದು ಎಂದು ಆದೇಶ ಮಾಡಬೇಕಿದೆ. ಆಗ ಮಾತ್ರ ಸಂಘದ ಶಾಖೆ, ಬೈಠಕ್ಕು ಕವಾಯತುಗಳನ್ನು ನಿಯಂತ್ರಿಸಬಹುದಾಗಿದೆ. ಇದಕ್ಕೆ ಬಿಜೆಪಿ ವಿರೋಧಿಸಿದಾಗ ಅವರದೇ ಸರಕಾರದ ಶೆಟ್ಟರ್ ರವರ ಸುತ್ತೋಲೆಯನ್ನು ಗುರಾಣಿಯಾಗಿ ಬಳಸಬಹುದಾಗಿದೆ. ಹೀಗೆ ಮಾಡಿದರೆ ಅದೆಷ್ಟೋ ಯುವಕರನ್ನು ಮತಾಂಧತೆಯಿಂದ ರಕ್ಷಿಸಬಹುದಾಗಿದೆ. ಸಂವಿಧಾನ ವಿರೋಧಿ ಸನಾತನಿಗಳ ಬ್ರೈನ್ ವಾಶ್ ಶಿಬಿರಗಳನ್ನು ನಿರ್ಬಂಧಿಸ ಬಹುದಾಗಿದೆ. ತಮಿಳುನಾಡು ಮಾದರಿಯನ್ನು ಬಿಟ್ಟು ಶೆಟ್ಟರ್ ಮಾದರಿಯ ಸುತ್ತೋಲೆಯನ್ನು ಹೊರಡಿಸಲು ಮಾನ್ಯ ಸಿದ್ದರಾಮಯ್ಯನವರಿಂದ ಸಾಧ್ಯವೇ?
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು
ಇದನ್ನೂ ಓದಿ- ದಲಿತರಿಂದ ದಲಿತರನ್ನು ಹತ್ತಿಕ್ಕುವ ತಂತ್ರದಲ್ಲಿ ಆರ್‌ಎಸ್‌ಎಸ್