ಅಂಬೇಡ್ಕರ್ ರವರ ಸಂವಿಧಾನವನ್ನೇ ಬದಲಿಸಿ ಹಿಂದೂರಾಷ್ಟ್ರ ಹೆಸರಲ್ಲಿ ಮತ್ತೆ ಮನುಸ್ಮೃತಿಯಾಧಾರಿತ ಸಂವಿಧಾನವನ್ನು ಜಾರಿಗೆ ತರುವುದೇ ಆರೆಸ್ಸೆಸ್ ಹಾಗೂ ಬಿಜೆಪಿ ಪಕ್ಷದ ಗುರಿಯಾಗಿದೆ. ಈ ಗುರಿ ಸಾಧನೆಗೆ ಪೂರಕವಾಗಿ ಈ ಮಾಧ್ಯಮಗಳು ಸನಾತನಿಗಳ ತುತ್ತೂರಿಯಾಗಿ ಕೆಲಸ ಮಾಡುತ್ತಿವೆ. ಕುಂಭಮೇಳಕ್ಕೆ ಅತಿಯಾದ ಪ್ರಚಾರ ಕೊಟ್ಟು ಬಹುಜನರ ಮೆದುಳಲ್ಲಿ ಸನಾತನ ಅಂದರೆ ವೈದಿಕಶಾಹಿ ಬೀಜಗಳನ್ನು ಬಿತ್ತಿ ಸಂಘಿ ಸಂಸ್ಕೃತಿಯ ಕಾರ್ಯಾಚರಣೆಗೆ ವೇದಿಕೆಯನ್ನು ಸಿದ್ಧಗೊಳಿಸುತ್ತಿವೆ – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.
ಜಗತ್ತಿನ ಅತೀ ದೊಡ್ಡ ಧಾರ್ಮಿಕ ಮೇಳ, ಸನಾತನ ಧರ್ಮದ ಅನುಯಾಯಿಗಳ ಬೃಹತ್ ಧಾರ್ಮಿಕ ಜಾತ್ರೆ, 144 ವರ್ಷಗಳ ನಂತರ ಸಂಭವಿಸಿದ ಮಹಾ ಕುಂಭಮೇಳ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನ ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿದೆ.
ಮಕರ ಸಂಕ್ರಾಂತಿಯಿಂದ ಆರಂಭಗೊಂಡು ಶಿವರಾತ್ರಿಯ ವರೆಗಿನ 45 ದಿನಗಳ ಸುದೀರ್ಘ ಕಾಲ ನಡೆಯುವ ಈ ಜಾತ್ರೆಗೆ ದೇಶ ವಿದೇಶದಿಂದ ಸನಾತನಿ ಭಕ್ತರು ಬಂದು ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿ ತಮ್ಮ ಪಾಪಗಳನ್ನು ಕಳೆದುಕೊಂಡು ಪರಿಶುದ್ಧರಾಗುವರು ಎಂಬ ಸಂಕಥನವನ್ನು ಸನಾತನ ಧರ್ಮದ ಪ್ರತಿಪಾದಕರು ಸೃಷ್ಟಿಸಿದ್ದಾರೆ ಹಾಗೂ ಬಹುಜನರನ್ನು ನಂಬಿಸುವ ಪ್ರಯತ್ನದ ಭಾಗವಾಗಿ ಕುಂಭಮೇಳವನ್ನು ಬಳಸಿ ಕೊಳ್ಳುತ್ತಿದ್ದಾರೆ.
ಮಡಿಲ ಮಾಧ್ಯಮಗಳಂತೂ ಸಂಭ್ರಮದಿಂದ ಕುಣಿದಾಡುತ್ತಾ ಸನಾತನ ಧರ್ಮದ ಈ ಆಚರಣೆ ಕುರಿತು ಅತಿರಂಜಿತ ವರದಿಗಳನ್ನು ಕ್ಷಣಕ್ಷಣಕ್ಕೂ ಬಿತ್ತರಿಸುತ್ತಲೇ ಇವೆ; ಹಸಿ ಹಸಿ ಸುಳ್ಳುಗಳನ್ನು ಹೇಳುತ್ತಲೇ ಇವೆ.. ಇವುಗಳ ಹಿಂದೆ ಸನಾತನಿ ಆರೆಸ್ಸೆಸ್ ಸಂಘ ನಿಂತು ಈ ಮಾಧ್ಯಮಗಳನ್ನು ನಿಯಂತ್ರಿಸುತ್ತಿವೆ. ಕೆಲವು ಸ್ಯಾಂಪಲ್ಸ್ ಇಲ್ಲಿವೆ.
45 ಕೋಟಿ ಭಕ್ತರು ಈ ಮೇಳದಲ್ಲಿ ಭಾಗವಹಿಸುತ್ತಾರೆ
45 ಕೋಟಿ ಸನಾತನಿಗಳು ಶ್ರದ್ಧಾಭಕ್ತಿಯಿಂದ ಈ ಮೇಳದಲ್ಲಿ ಭಾಗವಹಿಸುತ್ತಾರೆಂಬ ಶುದ್ಧ ಸುಳ್ಳನ್ನು ಸತ್ಯವೆಂಬಂತೆ ಪ್ರಚಾರಿಸುತ್ತಿದ್ದಾರೆ. 45 ಕೋಟಿ ಅಂದರೆ ಈ ದೇಶದ ಜನಸಂಖ್ಯೆಯ ಮೂರರಲ್ಲಿ ಒಂದು ಭಾಗದಷ್ಟು ಜನರು ಕುಂಭಮೇಳದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಕಪೋಲ ಕಲ್ಪಿತ ಅಂಕಿ ಅಂಶಗಳನ್ನು ಹೇಳುತ್ತಾ ಜನರಲ್ಲಿ ಸನಾತನ ಮೇನಿಯಾವನ್ನು ಹುಟ್ಟಿಸುವ ಪ್ರಯತ್ನದಲ್ಲಿ ಗೋದಿ ಮಾಧ್ಯಮಗಳು ಪೈಪೋಟಿಗೆ ಬಿದ್ದಿವೆ. ಇವರು ಹೇಳವ 45 ಕೋಟಿ ಭಕ್ತರು 45 ದಿನಗಳಲ್ಲಿ ಸೇರಬಹುದು ಹಾಗೂ ಬಂದವರು ನಾಲ್ಕಾರು ದಿನಗಳಿಗಿಂತಲೂ ಹೆಚ್ಚು ದಿನ ಅಲ್ಲಿಯೇ ಇದ್ದು ಹೆಚ್ಚು ಪುಣ್ಯ ಪಡೆಯಲು ಪ್ರಯತ್ನಿಸುವರು ಎಂಬುದನ್ನು ಈ ಸನಾತನ ಸಂತತಿಯ ಮಾಧ್ಯಮಗಳು ಮುಚ್ಚಿಟ್ಟು 45 ಕೋಟಿ ಸನಾತನಿಗಳು ಸೇರುವ ಧಾರ್ಮಿಕ ಆಚರಣೆ ಎಂದು ಹೇಳುತ್ತಲೇ ಇವೆ.
ಆರ್ಥಿಕ ಆದಾಯದ ಹರಿವು ನಾಲ್ಕು ಲಕ್ಷ ಕೋಟಿ
ಇದರ ಜೊತೆಗೆ ಈ ಕುಂಭಮೇಳದಿಂದ ಆಗಬಹುದಾದ ಆರ್ಥಿಕ ಆದಾಯದ ಹರಿವು ನಾಲ್ಕು ಲಕ್ಷ ಕೋಟಿ ಎನ್ನುವ ಹಸಿ ಸುಳ್ಳನ್ನು ಈ ಧರ್ಮಾಂಧ ಮಾಧ್ಯಮಗಳು ಹೇಳುತ್ತಿವೆ. ಒಬ್ಬ ಭಕ್ತ ಕನಿಷ್ಟ 10 ಸಾವಿರ ಹಣ ಖರ್ಚು ಮಾಡುತ್ತಾನೆ ಅಂದರೆ 45 ಕೋಟಿ ಭಕ್ತರಿಂದ ಉತ್ತರಪ್ರದೇಶ ಸರಕಾರಕ್ಕೆ 4 ಲಕ್ಷ ಕೋಟಿಗಳಷ್ಟು ಹಣದ ಹರಿವು ಹರಿದರಿದು ಬರುತ್ತದೆ ಎಂಬುದು ಮಾಧ್ಯಮಗಳು ಲೆಕ್ಕಾಚಾರ. ಇನ್ನೂ ಈ ಮೇಳ ಆರಂಭವಾಗಿ 12 ದಿನ ಕಳೆದಿಲ್ಲ, ಇಲ್ಲಿವರೆಗೂ ಪುಣ್ಯಸ್ನಾನ ಮಾಡಿದವರ ಸಂಖ್ಯೆ ಯುಪಿ ಸರಕಾರವೇ ಹೇಳಿದಂತೆ ನಾಲ್ಕು ಕೋಟಿ ದಾಟಿಲ್ಲ. ಈ ನಾಲ್ಕು ಕೋಟಿ ಭಕ್ತರಲ್ಲಿ ಅಲ್ಲಿಯೇ ಇದ್ದು ಪ್ರತಿ ದಿನ ನದಿಯಲ್ಲಿ ಮುಳುಗೆದ್ದು ಪುಣ್ಯ ಸಂಪಾದಿಸುವ ರಿಪೀಟೆಡ್ ಭಕ್ತರು ಬೇಕಾದಷ್ಟಿರುತ್ತಾರೆ. ಹೀಗಿರುವಾಗ ನಾಲ್ಕು ಲಕ್ಷ ಕೋಟಿ ಆದಾಯ ಹರಿದು ಬರುತ್ತದೆ ಎನ್ನುವುದೇ ಕಪೋಲ ಕಲ್ಪಿತ. ಇದನ್ನೇ ಮತ್ತೆ ಮತ್ತೆ ಹೇಳಿ ಜನರನ್ನು ನಂಬಿಸಿ ಸನಾತನ ಧಾರ್ಮಿಕ ಆಚರಣೆಯಿಂದಾಗುವ ಆರ್ಥಿಕ ಲಾಭದ ಬಗ್ಗೆ ಮಾಧ್ಯಮಗಳು ಪುಂಖಾನುಪುಂಖವಾಗಿ ಪ್ರಚಾರ ಮಾಡುವುದರಲ್ಲಿ ನಿರತವಾಗಿವೆ. ಇಲ್ಲಿ ಧಾರ್ಮಿಕ ನಂಬಿಕೆಯ ನೆಪದಲ್ಲಿ ವ್ಯಾಪಾರೀಕರಣವೇ ಮುಖ್ಯವಾದಂತಿದೆ. ಹೀಗೆ ಜನರ ನಂಬಿಕೆಯನ್ನು ಬಳಸಿಕೊಂಡು ಅದಾಯ ಗಳಿಸುವುದೇ ಆದರೆ ನಾಲ್ಕು ವರ್ಷಕ್ಕೊಮ್ಮೆ ಯಾಕೆ ಪ್ರತಿ ವರ್ಷವೂ ಸರಕಾರ ಕುಂಭಮೇಳ ಆಯೋಜನೆ ಮಾಡಬಹುದಲ್ಲವೇ.
ಆರರಿಂದ ಏಳು ಲಕ್ಷ ಜನರಿಗೆ ತಾತ್ಕಾಲಿಕ ಉದ್ಯೋಗ
ಈ ಕುಂಭಮೇಳದಿಂದ ಆರರಿಂದ ಏಳು ಲಕ್ಷ ಜನರಿಗೆ ತಾತ್ಕಾಲಿಕ ಉದ್ಯೋಗ ದೊರೆಯುತ್ತದೆ ಎಂಬುದು ಮಾಧ್ಯಮಗಳ ಇನ್ನೊಂದು ವಾದವಾಗಿದೆ. ಸನಾತನಿಗಳ ಮಹಾನಾಯಕ ಮೋದಿಯವರು ವರ್ಷಕ್ಕೆ ಒಂದು ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ಕೊಟ್ಟು ಹತ್ತು ವರ್ಷಗಳಾದರೂ ಇನ್ನೂ ಕೊಟ್ಟ ಮಾತು ಈಡೇರಿಸಲಾಗಿಲ್ಲ. ಹೀಗೆ ದೇಶಾದ್ಯಂತ ಧಾರ್ಮಿಕ ಮೇಳಗಳನ್ನು ಕೇಂದ್ರ ಸರಕಾರವೇ ಆಯೋಜಿಸಿ ತಾತ್ಕಾಲಿಕ ಉದ್ಯೋಗಗಳನ್ನು ಸೃಷ್ಟಿಸುವ ಕೆಲಸವನ್ನಾದರೂ ಮಾಡಬಹುದಲ್ಲವೇ? ಈ ದೇಶದಲ್ಲಿ ನಡೆಯುವ ಲಕ್ಷಾಂತರ ಜಾತ್ರೆ ಯಾತ್ರೆಗಳಲ್ಲಿ ಹೀಗೆ ವ್ಯಾಪಾರ ವ್ಯವಹಾರಗಳು ನಡೆಯುತ್ತಲೇ ಇರುತ್ತವೆ. ಅದನ್ನು ಉದ್ಯೋಗ ಎನ್ನಲಾಗದು. ಹೆಚ್ಚು ಜನ ಸೇರುವಲ್ಲಿ ಈ ಮಾರಾಟಗಾರರೂ ಬರುತ್ತಾರೆ, ಒಂದಿಷ್ಟು ಲಾಭವನ್ನೂ ಮಾಡಿಕೊಳ್ಳುತ್ತಾರೆ ಎಂಬುದು ಗೊತ್ತಿರುವ ಸಂಗತಿ. ಆದರೆ ಉತ್ತರ ಪ್ರದೇಶದ ಸರಕಾರವೇ ಏಳೆಂಟು ಸಾವಿರ ಕೋಟಿಗೂ ಹೆಚ್ಚು ಜನರ ತೆರಿಗೆ ಹಣವನ್ನು ಒಂದು ಧರ್ಮದ ಆಚರಣೆಗಾಗಿ ಖರ್ಚು ಮಾಡುತ್ತಿದೆ. ಧಾರ್ಮಿಕ ಆಚರಣೆಯ ನೆಪದಲ್ಲಿ ರಾಜಕೀಯ ಲಾಭ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ ಸನಾತನ ಧರ್ಮವನ್ನು ಒಪ್ಪಿಕೊಳ್ಳಲು ಹಿಂದೂ ಹೆಸರಲ್ಲಿ ಜನರ ಮೆದುಳನ್ನು ತಯಾರಿಗೊಳಿಸಲು ಈ ಕುಂಭಮೇಳವನ್ನು ಸನಾತನಿ ವೈದಿಕಶಾಹಿ ಬಳಸಿಕೊಳ್ಳುತ್ತಿದೆ.
ಇದೆಲ್ಲಾ ಹಿಡನ್ ಅಜೆಂಡಾಗಳನ್ನು ಮುಚ್ಚಿಡುವ ಸನಾತನಿ ಮಾಧ್ಯಮಗಳು ಹಿಂದೂಗಳ ನಂಬಿಕೆ, ಸನಾತನಿಗಳ ಶ್ರದ್ಧೆ, ಪವಿತ್ರ ಪುಣ್ಯಸ್ನಾನ ಎಂದೆಲ್ಲಾ ತಥಾಕಥಿತ ಕಥನಗಳನ್ನು ಸೃಷ್ಟಿಸಿ ಹೇಳುತ್ತಾ ಜನರಲ್ಲಿ ಸನಾತನದ ಮೇಲೆ ಗೌರವ ಹಾಗೂ ನಂಬಿಕೆಯನ್ನು ಹೆಚ್ಚಿಸಲು ಯತ್ನಿಸುತ್ತಿವೆ. ಸಹಸ್ರಾರು ವರ್ಷಗಳ ಸನಾತನ ಸಂಸ್ಕೃತಿ ಹಾಗೂ ಆಚರಣೆಗಳನ್ನು ಹಾಡಿ ಹೊಗಳುತ್ತಿವೆ.
“ಗಂಗೆಯಲ್ಲಿ ಮಿಂದರೆ ಬಡತನ ಹೋದೀತೆ?”
ಯಾವಾಗ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ” ಗಂಗೆಯಲ್ಲಿ ಮಿಂದರೆ ಬಡತನ ಹೋದೀತೆ?” ಎಂದು ಪ್ರಶ್ನಿಸಿದರೋ ಆಗ ಬಿಜೆಪಿ ಹಾಗೂ ಸಂಘ ಪರಿವಾರಗಳಿಗಿಂತ ಹೆಚ್ಚಾಗಿ ಈ ಮಡಿಲ ಮಾಧ್ಯಮಗಳು ಖರ್ಗೆಯವರ ಮಾತನ್ನು ವಿರೋಧಿಸ ತೊಡಗಿದವು. ಹಿಂದೂ ವಿರೋಧಿ ಹೇಳಿಕೆ ಎಂದು ಅಪಪ್ರಚಾರದಲ್ಲಿ ತೊಡಗಿದವು. ಇಷ್ಟಕ್ಕೂ ಖರ್ಗೆಯವರು ಪ್ರಶ್ನಿಸಿದ್ದರಲ್ಲಿ ತಪ್ಪೇನಿರಲಿಲ್ಲ. ಆದರೆ ಈ ಸನಾತನಿಗಳಿಗೆ ಪ್ರಶ್ನಿಸುವವರನ್ನು ಕಂಡರೆ ಆಗಿ ಬರುವುದಿಲ್ಲ. ಈ ಸನಾತನಿಗಳ ಮೌಢ್ಯಾಚಾರಗಳನ್ನು ಪ್ರಶ್ನಿಸಿದವರಲ್ಲಿ ಖರ್ಗೆಯವರು ಮೊದಲಿಗರೂ ಅಲ್ಲ, ಕೊನೆಯವರೂ ಅಲ್ಲ. “ನೀರ ಕಂಡಲ್ಲಿ ಮುಳುಗುವರಯ್ಯಾ” ಎಂದು ಬಸವಣ್ಣನವರೇ ಈ ಡಾಂಭಿಕರನ್ನು ಪ್ರಶ್ನಿಸಿದ್ದಾರೆ. ಬಸವಾದಿ ಶಿವಶರಣರು ಈ ಸನಾತನಿಗಳ ಬಂಡವಾಳವನ್ನು ವಚನಗಳ ಮೂಲಕ ಬಯಲಾಗಿಸಿದ್ದಾರೆ. ಬುದ್ಧ ಬಸವ, ಅಲ್ಲಮ, ಪೆರಿಯಾರ್ ರಿಂದ ಹಿಡಿದು ನಮ್ಮ ಕುವೆಂಪುರವರ ವರೆಗೆ ಸನಾತನಿಗಳ ಮೌಢ್ಯಾಚಾರವನ್ನು ಟೀಕಿಸಿದ್ದಾರೆ, ಪ್ರಶ್ನಿಸಿದ್ದಾರೆ, ಸತ್ಯದ ಸಾಕ್ಷಾತ್ಕಾರ ಮಾಡಿದ್ದಾರೆ.
ಕುಂಭಮೇಳ ಎಲ್ಲಾ ಜಾತಿ ಧರ್ಮದವರದ್ದು..
ಈ ಕುಂಭಮೇಳ ಎಲ್ಲಾ ಜಾತಿ ಧರ್ಮದವರದ್ದು ಎಂದು ಈ ಮಾಧ್ಯಮಗಳು ಹೇಳುತ್ತಿವೆ. ಜೊತೆಗೆ ಸನಾತನ ನಂಬಿಕೆಯ ಭಕ್ತರ ಮೇಳ ಎಂದೂ ಹೇಳುತ್ತಿವೆ. ಅಂದರೆ ಕುಂಭಮೇಳಕ್ಕೆ ಹೋದವರೆಲ್ಲರನ್ನೂ ಸನಾತನ ಧರ್ಮದವರು ಎಂದು ನಂಬಿಸಲಾಗುತ್ತಿದೆ. ಎಲ್ಲಿಯೇ ಯಾವುದೇ ಜಾತ್ರೆ ನಡೆದರೂ ಬೇಕಾದಷ್ಟು ಜನ ಸೇರುತ್ತಾರೆ. ಅಲ್ಲಿ ಸೇರಿದವರೆಲ್ಲಾ ಸನಾತನಿಗಳು ಎಂದು ಹೇಳುವುದೇ ಮೂರ್ಖತನ. ಇಷ್ಟಕ್ಕೂ ಈ ಸನಾತನ ಧರ್ಮ ಎಂದರೆ ವೈದಿಕ ಧರ್ಮ ಎನ್ನುವುದು ಪ್ರಶ್ನಾತೀತ. ಚಾತುರ್ವರ್ಣವನ್ನ ಸೃಷ್ಟಿಸಿ ಶತಮಾನಗಳ ಕಾಲ ಅಬ್ರಾಹ್ಮಣ ಜನರನ್ನು ಶೋಷಿಸುತ್ತಾ ಬಂದಿರುವುದು ಇದೇ ಸನಾತನ ಪುರೋಹಿತಶಾಹಿ ಧರ್ಮ. ಒಟ್ಟು ಜನಸಂಖ್ಯೆಯಲ್ಲಿ 5% ಕೂಡಾ ಇಲ್ಲದ ಈ ಸನಾತನಿ ವೈದಿಕರು ಈಗ ಹಿಂದೂ ಧರ್ಮದ ಹೆಸರಲ್ಲಿ ತಮ್ಮ ಮತಮೌಢ್ಯವನ್ನು ಕುಂಭಮೇಳದ ನೆಪದಲ್ಲಿ ಬಹುಸಂಖ್ಯಾತ ಹಿಂದೂಗಳ ಮೇಲೆ ಹೇರುತ್ತಿದ್ದಾರೆ. ಅಸಮಾನತೆಯನ್ನೇ ಉಸಿರಾಗಿಸಿಕೊಂಡಿರುವ ಸನಾತನ ವೈದಿಕ ಧರ್ಮ ಈಗ ಮತ್ತೆ ಹಿಂದೂರಾಷ್ಟ್ರದ ಹೆಸರಲ್ಲಿ ಮತ್ತೆ ಬಹುಜನರ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದೆ. ಅದಕ್ಕಾಗಿಯೇ 501 ಪುಟಗಳ ಅಖಂಡ ಹಿಂದೂ ರಾಷ್ಟ್ರ ಸಂವಿಧಾನವನ್ನು ಸಿದ್ದಗೊಳಿಸಲಾಗಿದ್ದು ಅದನ್ನು ಮಹಾ ಕುಂಭಮೇಳದಲ್ಲಿ ಫೆಬ್ರವರಿ 3 ರಂದು ಪ್ರಸ್ತುತ ಪಡಿಸಲಾಗುತ್ತಿದೆ.
ಇದು ಸಂವಿಧಾನ ವಿರೋಧಿಯಾದ ರಾಷ್ಟ್ರದ್ರೋಹದ ಕೃತ್ಯ ಎಂದು ಹೇಳುವ ಧೈರ್ಯವನ್ನು ಈ ಯಾವ ಮಡಿಲ ಮಾಧ್ಯಮಗಳೂ ತೋರುತ್ತಿಲ್ಲ. ಅಂಬೇಡ್ಕರ್ ರವರ ಸಂವಿಧಾನವನ್ನೇ ಬದಲಿಸಿ ಹಿಂದೂರಾಷ್ಟ್ರ ಹೆಸರಲ್ಲಿ ಮತ್ತೆ ಮನುಸ್ಮೃತಿಯಾಧಾರಿತ ಸಂವಿಧಾನವನ್ನು ಜಾರಿಗೆ ತರುವುದೇ ಆರೆಸ್ಸೆಸ್ ಹಾಗೂ ಬಿಜೆಪಿ ಪಕ್ಷದ ಗುರಿಯಾಗಿದೆ. ಈ ಗುರಿ ಸಾಧನೆಗೆ ಪೂರಕವಾಗಿ ಈ ಮಾಧ್ಯಮಗಳು ಸನಾತನಿಗಳ ತುತ್ತೂರಿಯಾಗಿ ಕೆಲಸ ಮಾಡುತ್ತಿವೆ. ಕುಂಭಮೇಳಕ್ಕೆ ಅತಿಯಾದ ಪ್ರಚಾರ ಕೊಟ್ಟು ಬಹುಜನರ ಮೆದುಳಲ್ಲಿ ಸನಾತನ ಅಂದರೆ ವೈದಿಕಶಾಹಿ ಬೀಜಗಳನ್ನು ಬಿತ್ತಿ ಸಂಘಿ ಸಂಸ್ಕೃತಿಯ ಕಾರ್ಯಾಚರಣೆಗೆ ವೇದಿಕೆಯನ್ನು ಸಿದ್ಧಗೊಳಿಸುತ್ತಿವೆ.
ಇಂತಹ ಪ್ರಯತ್ನಗಳನ್ನು ಜನಜಾಗೃತಿಯ ಮೂಲಕ ವಿಫಲಗೊಳಿಸುವ ಪ್ರಯತ್ನವನ್ನು ಸ್ವತಂತ್ರ ಸಾಮಾಜಿಕ ಮಾಧ್ಯಮಗಳು ಮಾಡಬೇಕಿವೆ. ಗೋದಿ ಮಾಧ್ಯಮಗಳು ಹುಟ್ಟಿಸುತ್ತಿರುವ ಸನಾತನ ಭ್ರಮೆಯನ್ನು ಬೆತ್ತಲುಗೊಳಿಸಬೇಕಿದೆ. ಗಂಗೆಯಲ್ಲಿ ಮುಳುಗಿದರೆ ಬಡತನ ನಿವಾರಣೆಯಾಗುತ್ತಾ? ಎನ್ನುವ ಪ್ರಶ್ನೆಯನ್ನು ಜನರ ಮುಂದಿಡಬೇಕಿದೆ. ಕುಂಭಮೇಳದ ನೆಪದಲ್ಲಿ ಸನಾತನ ವೈದಿಕ ಸಂಸ್ಕೃತಿಯ ಬೇರುಗಳನ್ನು ಗಟ್ಟಿಗೊಳಿಸುವ ಪ್ರಯತ್ನಗಳ ಹಿಂದಿರುವ ಶಡ್ಯಂತ್ರಗಳನ್ನು ಬಯಲುಗೊಳಿಸಬೇಕಿದೆ. ಇಲ್ಲದೇ ಹೋದರೆ ಈ ದೇಶ ಮತ್ತೆ ಸನಾತನಿಗಳ ಕೈವಶವಾಗುತ್ತದೆ. ಸಮಾನತೆ ಸಾರುವ ಸಂವಿಧಾನದ ಬದಲಾಗಿ ವರ್ಣಾಶ್ರಮ ಪದ್ಧತಿಯ ಮನುಸ್ಮೃತಿ ಆಧಾರಿತ ಹಿಂದೂ ರಾಷ್ಟ್ರ ಸಂವಿಧಾನ ಜಾರಿಯಾಗುತ್ತದೆ. ಇಡೀ ದೇಶ ಸಾವಿರಾರು ವರ್ಷ ಹಿಂದಕ್ಕೆ ಹೋಗುತ್ತದೆ. ದಲಿತರು, ಹಿಂದುಳಿದವರು, ಮಹಿಳೆಯರು ತಮ್ಮ ಸ್ವಾತಂತ್ರ್ಯವನ್ನು ಕಳೆದುಕೊಂಡು ಪುರೋಹಿತರ ಆಡಳಿತದಲ್ಲಿ ಗುಲಾಮರಾಗಿ ಬದುಕಬೇಕಾಗುತ್ತದೆ. ಅಂತಹ ದುಸ್ಥಿತಿ ಈ ದೇಶಕ್ಕೆ ಬಾರದೇ ಇರಲಿ. ಭಾರತದ ಸಂವಿಧಾನ ಚಿರಾಯುವಾಗಲಿ.
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು
ಇದನ್ನೂ ಓದಿ- ಮಹಾತ್ಮ ನೀನು ಸಾವಿಲ್ಲದ ಜಗದ ಜಂಗಮ