ಲಿಂಗಬೇಧದ ಹೇಳಿಕೆ ನೀಡಿ ಸಂವಿಧಾನದ ಆಶಯಕ್ಕೆ ಧಕ್ಕೆ ತರುವ ಪ್ರಯತ್ನ ಮಾಡಿದ ಕಣ್ಣನ್ ಎಂಬ ಅರ್ಚಕನ ಮೇಲೆ ಸರಕಾರ ಕ್ರಮ ಕೈಗೊಳ್ಳಬೇಕಿದೆ. ಮಠಗಳ ದೇವಸ್ಥಾನಗಳನ್ನು ಜಾತಿಕೇಂದ್ರಿತ ಎಂದು ಆರೋಪಿಸಿದ ಈ ಪೂಜಾರಿಯ ವಿರುದ್ಧ ಮಠಗಳು ಕೇಸು ದಾಖಲಿಸಬೇಕಿದೆ. ಅಧಿಕಾರಿಗಳ ಜೊತೆ ಶಾಮೀಲಾಗಿ ಲಕ್ಷಾಂತರ ರೂಪಾಯಿ ಸರಕಾರಿ ಹಣವನ್ನು ಅಕ್ರಮವಾಗಿ ಪಡೆದ ಈ ಕಣ್ಣನ್ ರವರ ವಿರುದ್ದ ಜಿಲ್ಲಾಡಳಿತವು ವಂಚನೆ ದೂರು ದಾಖಲಿಸಿ ಸರಕಾರಿ ಹಣವನ್ನು ವಸೂಲಿ ಮಾಡಬೇಕಿದೆ – ಶಶಿಕಾಂತ ಯಡಹಳ್ಳಿ, ರಂಗಕರ್ಮಿ
ಬೆಂಗಳೂರಿನಿಂದ ಹೊರಟು ಇನ್ನೇನು ಚಿಕ್ಕಮಗಳೂರು ತಲುಪಬೇಕೆನ್ನುವಷ್ಟರಲ್ಲಿ ಎಡಗಡೆ ಹಿರೇಮಗಳೂರು ಅಂತಾ ಊರಿದೆ. ಅಲ್ಲೊಂದು ಮುಜರಾಯಿ ಇಲಾಖೆಯ ರಾಮಮಂದಿರ. ಅದಕ್ಕೊಬ್ಬ ಪ್ರಧಾನ ಅರ್ಚಕ. ಹೆಸರು ಹಿರೇಮಗಳೂರು ಕಣ್ಣನ್. ಎಲ್ಲಾ ಗುಡಿಗಳ ಪುರೋಹಿತರು ಸಂಸ್ಕೃತದಲ್ಲಿ ಮಂತ್ರ ಪಠಣ ಮಾಡಿದರೆ ಈ ಪ್ರಕಾಂಡ ಪಂಡಿತ ನಾಮಧಾರಿ ಅರ್ಚಕ ಕನ್ನಡದಲ್ಲಿ ಮಂತ್ರಗಳನ್ನು ಹೇಳುವುದರಿಂದಾಗಿ ಪ್ರಸಿದ್ದಿ. ಈ ಅಸಾಧ್ಯ ಅಸ್ಕಲಿತ ಮಾತಿನ ಮಲ್ಲನನ್ನು ಹಲವಾರು ಹಾಸ್ಯ ಕಾರ್ಯಕ್ರಮಗಳಲ್ಲಿ ಕಾಣಬಹುದಾಗಿದೆ.
ಇಂತಿಪ್ಪ ಪೂಜಾರಿಗಳು ಇತ್ತೀಚೆಗೆ ಸುದ್ದಿಯಾಗಿದ್ದು ಅರ್ಚಕರಿಗೆ ಮುಜರಾಯಿ ಇಲಾಖೆ ಕೊಡುವ ಸಂಬಳವನ್ನು ಅತಿಯಾಗಿ ಪಡೆದಿದ್ದಕ್ಕಾಗಿ. ಅಧಿಕಾರಿಗಳ ಜೊತೆ ಹೊಂದಾಣಿಕೆಯಿಂದಾಗಿ ಪಡೆದ ಹೆಚ್ಚುವರಿ ಲಕ್ಷಾಂತರ ರೂಪಾಯಿ ಸಂಬಳವನ್ನು ವಾಪಸ್ ಸರಕಾರಕ್ಕೆ ಪಾವತಿಸಬೇಕೆಂದು ಜಿಲ್ಲಾ ವರಿಷ್ಟಾಧಿಕಾರಿಗಳು ಆದೇಶಿಸಿದ್ದರು. ಆದರೂ ರಾಮನ ಹೆಸರು, ರಾಮಭಕ್ತರ ಬೆಂಬಲ ಹಾಗೂ ತನ್ನ ಪುರೋಹಿತಶಾಹಿ ಪ್ರಭಾವ ಬಳಸಿ ಈ ಆದೇಶವನ್ನು ಹಿಂಪಡೆಯುವಂತೆ ಮಾಡಿದ್ದು ಈ ಅರ್ಚಕ ಕಣ್ಣನ್ ರವರ ಇತ್ತೀಚಿನ ಮಹಾಸಾಧನೆ.
ಯಾವಾಗ ಕರ್ನಾಟಕದ ಮುಜರಾಯಿ ಇಲಾಖೆಯ ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆಯ ಅಗತ್ಯವಿಲ್ಲವೆಂದು ಮುಖ್ಯಮಂತ್ರಿಗಳಾದ ಮಾನ್ಯ ಸಿದ್ದರಾಮಯ್ಯನವರು ಘೋಷಿಸಿದರೋ ಆಗ ಬಹುತೇಕ ಪುರೋಹಿತರಂತೆ ಈ ಕಣ್ಣನ್ ರವರಿಗೂ ಉರಿ ಕಿತ್ತುಕೊಂಡು ಬಂತು.
” ವಸ್ತ್ರಸಂಹಿತೆ ಇಲ್ಲವೆಂದು ಸರ್ಕಾರ ಹೇಳಿದಾಗ ಯಾರೂ ಯಾಕೆ ಪ್ರಶ್ನಿಸಲಿಲ್ಲ? ಬೇಕಾದ ಹಾಗೆ ಬಟ್ಟೆ ಧರಿಸಿಕೊಂಡು ಭಕ್ತರು ದೇವಸ್ಥಾನಕ್ಕೆ ಬರುವುದಾದರೆ ಧಾರ್ಮಿಕ ಸ್ವಾತಂತ್ರ್ಯ ಉಳಿಯುವುದಾದರೂ ಹೇಗೆ?” ಎಂದು ಈ ಅರ್ಚಕ ಮಹಾಶಯರು ಮೈಸೂರಲ್ಲಿ ನಡೆದ ಹಿಂದೂ ದೇವಾಲಯ ಭಕ್ತ ಮಂಡಳಿ ಸದಸ್ಯರ ಚಿಂತನಾ ಸಭೆಯಲ್ಲಿ ತಮ್ಮ ಸನಾತನವಾದಿ ಅಸಮಾಧಾನವನ್ನು ಹೊರಹಾಕಿದರು.
ಇವರ ಧಾರ್ಮಿಕ ಸ್ವಾತಂತ್ರ್ಯ ಇರುವುದು ಭಕ್ತರು ಹಾಕುವ ಬಟ್ಟೆಯಲ್ಲಿ ಎನ್ನುವುದು ಖಾತ್ರಿ ಆಯಿತು. ದೇವಸ್ಥಾನಕ್ಕೆ ಬರುವವರು ದೇವರ ದರ್ಶನಕ್ಕೆ ಬರುತ್ತಾರೆಯೇ ಹೊರತು ಫ್ಯಾಶನ್ ಶೋಗಳಿಗಲ್ಲ. ಅಲ್ಲಿ ಅಂತರಂಗದ ಶ್ರದ್ಧೆ ಮುಖ್ಯವೇ ಹೊರತು ಬಹಿರಂಗದ ಉಡುಪುಗಳಲ್ಲ. ದೇವರು ಮೆಚ್ಚುವುದೇ ಆದರೆ ಅದು ಭಕ್ತಿಭಾವಕ್ಕೇ ಹೊರತು ಬಟ್ಟೆಗಳಿಗಲ್ಲ. ಯಾವುದೇ ದೇವರೂ ಇಂತಹುದೇ ವಸ್ತ್ರ ಧರಿಸಿ ತನ್ನ ಭೇಟಿಗೆ ಬರಬೇಕೆಂದು ಎಲ್ಲೂ ಕಟ್ಟಪ್ಪಣೆ ಮಾಡಿಲ್ಲ. ಈ ಭಗವಂತ ಮತ್ತು ಭಕ್ತರ ನಡುವೆ ಈ ದಲ್ಲಾಳಿ ಪುರೋಹಿತರ ಅಡೆತಡೆಗಳೇ ಅತಿಯಾಗಿವೆ. “ಪ್ಯಾಂಟ್ ಹಾಕಿ ಬರಬಾರದು. ಪಂಚೆ ಮಾತ್ರ ಇರಬೇಕು. ಮೈಮೇಲೆ ಅಂಗಿ ಹಾಕದೇ ಬರಿಮೈಲಿ ಅರೆಬೆತ್ತಲಾಗಿ ಗಂಡಸರು ದೇವಸ್ಥಾನ ಪ್ರವೇಶಿಸಬೇಕು. ಮಹಿಳೆಯರು ಜೀನ್ಸ್ ಹಾಕಿಕೊಂಡು ಬರಕೂಡದು” ಎನ್ನುವ ಅನಗತ್ಯ ಕಟ್ಟುಪಾಡುಗಳನ್ನು ಈ ಪುರೋಹಿತ ಪುಂಗವರೇ ವಿಧಿಸುತ್ತಾರೆ. ಅದಕ್ಕೆ ವಸ್ತ್ರಸಂಹಿತೆ ಬೇಕೆಂದು ಸರಕಾರಕ್ಕೆ ಆಗ್ರಹಿಸುತ್ತಾರೆ.
ಬಟ್ಟೆ ಯಾವುದಾದರೇನು ದೇಹ ಮುಚ್ಚುವಂತಿದ್ದರೆ ಸಾಕಲ್ಲವೇ. ಸೌಜನ್ಯದ ಮಿತಿ ಮೀರದಂತಿದ್ದರೆ ಸಾಕಲ್ಲವೇ?. ಅದು ಬಿಟ್ಟು ಹೀಗೇ ಇರಬೇಕು ಎನ್ನುವುದು ಭಕ್ತರ ಮೇಲೆ ಈ ಪೂಜಾರಿಗಳು ಮಾಡುವ ದಮನ ಅಲ್ಲವೇ? ಈ ಪೂಜಾರಿಗಳು ಮಾತ್ರ ತಮ್ಮ ಡೊಳ್ಳು ಹೊಟ್ಟೆಯನ್ನು ಭಕ್ತಾದಿಗಳಿಗೆ ಪ್ರದರ್ಶಿಸುತ್ತಾ ಟಾಪಲೆಸ್ ಆಗಿ ದೇವಸ್ಥಾನದ ತುಂಬಾ ಓಡಾಡುವುದರಿಂದ ಮಂದಿರಕ್ಕೆ ಬರುವ ಮಹಿಳೆಯರಿಗೆ ಮುಜುಗರ ಆಗುವುದಿಲ್ಲವೇ? ಕೆಲವಾರು ದೇವಸ್ಥಾನಗಳಲ್ಲಿ ಪುರುಷರು ಮೇಲ್ವಸ್ತ್ರ ಧರಿಸಿ ಹೋಗುವಂತಿಲ್ಲ. ಯಾಕೆಂದರೆ ಪುರೋಹಿತರಿಗೆ ಬಂದ ಭಕ್ತರು ಬ್ರಾಹ್ಮಣರೋ ಇಲ್ಲಾ ಅಬ್ರಾಹ್ಮಣರೋ ಎಂದು ಗೊತ್ತಾಗಬೇಕೆಂದರೆ ಜನಿವಾರ ದರ್ಶನ ಅಗತ್ಯ. ಅದಕ್ಕಾಗಿ ಅರೆನಗ್ನರಾಗಿ ಬಂದ ಗಂಡಸರಿಗೆ ಮಾತ್ರ ಮಂದಿರದೊಳಗೆ ಪ್ರವೇಶ. ಇದೇನಾ ಸಭ್ಯತೆ, ಇದೇನಾ ಸಂಸ್ಕೃತಿ? ಇಲ್ಲಿ ಪ್ರಶ್ನೆ ಇರುವುದು ಧಾರ್ಮಿಕ ಸ್ವಾತಂತ್ರ್ಯ ಯಾರಿಗೆ ಇರಬೇಕು ಎನ್ನುವುದು. ಅನ್ಯರಿಗೆ ಮುಜುಗರವಾಗದಂತೆ ಬಟ್ಟೆ ತೊಟ್ಟು ಭಕ್ತಿಯಿಂದ ದೇವರ ದರ್ಶನಕ್ಕೆ ಬರುವುದು ಭಕ್ತಾದಿಗಳ ಧಾರ್ಮಿಕ ಸ್ವಾತಂತ್ರ್ಯ ಅಲ್ಲವೇ? ಹೀಗೇಯೇ ಬರಬೇಕು ಎಂದು ಈ ಸನಾತನಿಗಳು ಭಕ್ತರಿಗೆ ಬಲವಂತ ಮಾಡುವುದು ಭಕ್ತಾದಿಗಳ ಧಾರ್ಮಿಕ ಸ್ವಾತಂತ್ರ್ಯದ ದಮನ ಅಲ್ಲವೇ?
“ದೇವಾಲಯ ಸಾರ್ವಜನಿಕರ ಸ್ವತ್ತೇ ಹೊರತು ಸರ್ಕಾರದ್ದಲ್ಲ. ಅವು ಸಂಸ್ಕೃತಿ ಮತ್ತು ಪರಂಪರೆ ಉಳಿಸಲು ಪೂರ್ವಿಕರು ಬಿಟ್ಟು ಹೋದ ಆಸ್ತಿಗಳು. ಅವುಗಳನ್ನು ನಿರ್ವಹಣೆಗಾಗಿ ಸರಕಾರಕ್ಕೆ ನೀಡಿದ್ದೇವಷ್ಟೇ. ದೇವಸ್ಥಾನಗಳು ಸಂಸ್ಕಾರದ ಕೇಂದ್ರಗಳು ಎಂಬುದನ್ನು ಮರೆಯಬಾರದು” ಎಂದು ಕಣ್ಣನ್ ರವರು ಹೇಳಿದ್ದಾರೆ. ಆದರೆ ಸರಕಾರವೂ ಸಾರ್ವಜನಿಕರಿಂದಲೇ ರಚನೆಯಾಗಿದ್ದು ಜನರ ತೆರಿಗೆ ಹಣದಿಂದ ಸರಕಾರ ಕೊಡುವ ಸಂಬಳದಲ್ಲಿ ಈ ಪೂಜಾರಿಗಳು ಬದುಕುತ್ತಿರುವುದು ಎಂಬ ಅರಿವು ಈ ಕಣ್ಣನ್ ರವರಿಗೆ ಇರಬೇಕಲ್ಲವೇ. ಇವರು ಕನ್ನಡದಲ್ಲಿ ಹೇಳುವ ಮಂತ್ರಗಳು ಕಾಸನ್ನು ಸೃಷ್ಟಿಸುವುದಿಲ್ಲ ಹಾಗೂ ಈ ಪರಾವಲಂಬಿ ಅರ್ಚಕರು ಎಂದೂ ಉತ್ತಿ ಬಿತ್ತಿ ಶ್ರಮವಹಿಸಿ ಸಂಪಾದನೆ ಮಾಡುವುದೂ ಇಲ್ಲ. ಸಂಸ್ಕೃತಿ ಮತ್ತು ಪರಂಪರೆಯ ಹೆಸರಲ್ಲಿ ಈ ಪುರೋಹಿತರ ಪೂರ್ವಿಕರು ಕಂದಾಚಾರ ಮೌಢ್ಯಗಳನ್ನೇ ಮುಂದಿನ ಪೀಳಿಗೆಗೆ ಬಿಟ್ಟು ಹೋಗಿದ್ದು ದೇವಸ್ಥಾನಗಳು ಸಂಸ್ಕಾರದ ಕೇಂದ್ರವಾಗಿರದೇ ಶೋಷಣೆಯ ಕೇಂದ್ರಗಳಾಗಿದ್ದಕ್ಕೆ ಇತಿಹಾಸ ಮತ್ತು ವರ್ತಮಾನಗಳೇ ಸಾಕ್ಷಿಯಾಗಿವೆ.
ಅಂತಹುದರಲ್ಲಿ ಬಹುತೇಕ ದೇವಾಲಯಗಳು ಈ ಪುರೋಹಿತರ ಹಿಡಿತದಲ್ಲಿರುವಾಗ ಸಾರ್ವಜನಿಕರ ಸ್ವತ್ತು ಎಂಬುದೇ ಭ್ರಮೆ. ಭಕ್ತರ ಮೇಲೆ ಇಂತವರ ಶೋಷಣೆ ಅತಿಯಾಗಬಾರದೆಂದೇ ಸರಕಾರ ಮುಜರಾಯಿ ಇಲಾಖೆಯ ದೇವಸ್ಥಾನಗಳ ಮೇಲೆ ನಿಯಂತ್ರಣ ಹೊಂದಿದೆ. ಇಲಾಖೆಯ ನಿಯಂತ್ರಣದಲ್ಲಿರುವ ಎಲ್ಲಾ ದೇವಸ್ಥಾನಗಳ ಮುಂದೆ ಎಲ್ಲಾ ಜಾತಿ ಧರ್ಮದವರಿಗೂ ಪ್ರವೇಶ ಇದೆ ಎಂದು ಬೋರ್ಡು ಹಾಕಿಸಲಾಗಿದೆ. ಇಲ್ಲದೇ ಹೋಗಿದ್ದರೆ ಈ ಪುರೋಹಿತರು ಜಾತಿ ಧರ್ಮ ಬೇಧಗಳು ಹಿಂದೂ ಸಂಸ್ಕೃತಿ ಹಾಗೂ ಪರಂಪರೆಯ ಭಾಗವೆಂದು ವರ್ಣಾಧಾರಿತ ಅಧಿಪತ್ಯ ನಡೆಸುತ್ತಿದ್ದವು. ಇಷ್ಟಕ್ಕೂ ಈ ದೇವಸ್ಥಾನಗಳು ಸರ್ಕಾರದ ಸ್ವತ್ತಲ್ಲ ಎನ್ನುವುದೇ ಆದರೆ ಸರಕಾರದ ಅನುದಾನವನ್ನು, ಮಂದಿರಗಳ ಅಭಿವೃದ್ದಿಗೆ ಸಹಾಯಧನವನ್ನು, ಅರ್ಚಕರಿಗೆ ಸಂಬಳ ಸವಲತ್ತುಗಳನ್ನು ಯಾಕೆ ಈ ಪುರೋಹಿತರು ಪಡೆಯುತ್ತಾರೆ?
ಇಷ್ಟಕ್ಕೇ ಸುಮ್ಮನಾಗದ ಈ ಅರ್ಚಕ ಮಹೋದಯರು “ನಮ್ಮ ಸಂಸ್ಕೃತಿ ಮತ್ರು ಜನರ ಸಂಸ್ಕಾರದ ಉಳಿವಿಗೆ ದೇವಸ್ಥಾನದ ಅರ್ಚಕ ವೃತ್ತಿಯನ್ನು ಪುರುಷರಿಗೆ ಮಾತ್ರವೇ ಮೀಸಲಿಡಬೇಕು. ಮಹಿಳೆಯರನ್ನು ಅರ್ಚಕರನ್ನಾಗಿ ನೇಮಿಸುವ ನಿರ್ಧಾರ ಸೂಕ್ತವಲ್ಲ” ಎಂದು ಹೇಳವ ಮೂಲಕ ತಮ್ಮ ಸನಾತನ ಪರಂಪರೆಯ ಮಹಿಳಾ ವಿರೋಧಿತನವನ್ನು ಸಾಬೀತುಪಡಿಸಿದ್ದಾರೆ. ಇವರ ದೇವರ ಸೃಷ್ಟಿಯಲ್ಲಿ ಗಂಡು ಹೆಣ್ಣು ಎರಡೂ ಸಮಾನವಾಗಿರುವಾಗ ಯಾಕೆ ಮಹಿಳೆಯರು ಅರ್ಚಕರಾಗಬಾರದು?. ಯಾಕೆಂದರೆ ಇವರೆಲ್ಲಾ “ನ ಸ್ತ್ರೀ ಸ್ವಾತಂತ್ರ್ಯಂ ಅರ್ಹತಿ” ಎನ್ನುವ ಡಿ ಎನ್ ಎ ಗೆ ಸಂಬಂಧಿಸಿದವರು. ಇವರ ವರ್ಣಾಶ್ರಮ ಧರ್ಮ ಹೋಗಿ ಸಂವಿಧಾನವೇ ಈ ದೇಶದ ಧರ್ಮವಾಗಿದೆ. ಬಾಬಾಸಾಹೇಬರ ಸಂವಿಧಾನದಲ್ಲಿ ಜಾತಿ ಬೇಧ ಹಾಗೂ ಲಿಂಗ ತಾರತಮ್ಯಗಳು ನಿಷಿದ್ಧವಾಗಿವೆ. ಸರ್ವರಿಗೂ ಸಮಪಾಲು, ಸಮಬಾಳು ಸಂವಿಧಾನದ ಆಶಯವಾಗಿದೆ.
ಆದರೆ ಈ ಸನಾತನ ಸಂಸ್ಕೃತಿಯ ಪಳೆಯುಳಿಕೆಗಳು ಮಾತ್ರ ಇನ್ನೂ ಮನುಸ್ಮೃತಿಗೆ ಜೋತುಬಿದ್ದಿವೆ. ಮಹಿಳೆಯರಿಗೆ ಸಮಾನ ಅವಕಾಶವನ್ನು ಕೊಡುವ ಯಾವುದೇ ಪ್ರಯತ್ನವನ್ನೂ ವಿರೋಧಿಸಲಾಗುತ್ತಿದೆ. ಸುಶ್ರಾವ್ಯವಾಗಿ ದೇವರ ಹಾಡು ಸ್ತೋತ್ರಗಳನ್ನು ಹಾಡುವ ಹೆಣ್ಮಕ್ಕಳಿಗೆ ಮಂತ್ರಪಠನ ಮಾಡಲು ಬರುವುದಿಲ್ಲವಾ? ಮಹಿಳೆಯರು ಅರ್ಚಕರಾದರೆ ಆ ದೇವರು ಒಪ್ಪುವುದಿಲ್ಲವಾ? ಅರ್ಹತೆ ಪಡೆಯುವ ಮಹಿಳೆಯರಿಗೆ ಅವಕಾಶ ನಿರಾಕರಿಸುವುದೂ ಸಂವಿಧಾನ ವಿರೋಧಿ ಸಂಚು ಎನ್ನುವುದನ್ನು ಈ ಸನಾತನಿಗಳಿಗೆ ಯಾರು ವಿವರಿಸಿ ಹೇಳುವುದು?.
“ಮಠಗಳು ಒಂದು ಸಮುದಾಯ ಮತ್ತು ಜಾತಿಯ ಪ್ರತಿನಿಧಿಯಾದರೆ ದೇವಸ್ಥಾನಗಳು ಇಡೀ ಸಮಾಜದ ಪ್ರತಿನಿಧಿಯಾಗುತ್ತವೆ. ಅದು ಜ್ಯಾತ್ಯಾತೀತವಾಗಿರಬೇಕು. ಪ್ರತಿ ದೇವಾಲಯಗಳು ಇರುವುದು ಮಾನವನ ಉದ್ಧಾರಕ್ಕಾಗಿಯೇ” ಎಂದು ಹೇಳಿ ಸನಾತನ ಸಂಸ್ಕಾರದ ಪೀಠಿಕೆಯ ಮೇಲೆ ಜ್ಯಾತ್ಯಾತೀತೆಯ ಸೋಗು ಹಾಕುವ ಈ ಅರ್ಚಕ ಪಂಡಿತರಿಗೆ ಸತ್ಯ ಗೊತ್ತಿಲ್ಲವೆಂದೇನಲ್ಲ. ಸನಾತನ ಧರ್ಮದ ವಿಚಾರ ಆಚಾರಗಳಿಗೂ ಹಾಗೂ ಜ್ಯಾತ್ಯಾತೀತತೆಗೂ ಎಣ್ಣೆ ಸೀಗೇಕಾಯಿ ಸಂಬಂಧ. ಹಿರೇಮಗಳೂರಿನ ಕೋದಂಡರಾಮ ದೇವಸ್ಥಾನದ ಗರ್ಭಗುಡಿಯಲ್ಲಿ ಈ ಅರ್ಚಕ ಕಣ್ಣನ್ ಯಾವತ್ತಾದರೂ ಅಬ್ರಾಹ್ಮಣರಿಗೆ ಪ್ರವೇಶ ಕೊಟ್ಟಿದ್ದಾರಾ? ದೇವರ ಮೂರ್ತಿಯನ್ನು ಮುಟ್ಟಲು ಅವಕಾಶ ಕೊಟ್ಟಿದ್ದಾರಾ? ಇಲ್ಲವೆಂದ ಮೇಲೆ ಇವರು ಜ್ಯಾತ್ಯಾತೀತತೆಯ ಬಗ್ಗೆ ಮಾತಾಡುವುದೇ ಸೋಗಲಾಡಿತನವಾಗುತ್ತದೆ.
ಇಷ್ಟಕ್ಕೂ ಬಹುತೇಕ ಪ್ರಸಿದ್ದ ದೇವಸ್ಥಾನಗಳು ಯಾವುದಾದರೂ ಮಠಮಾನ್ಯಗಳ ನಿಯಂತ್ರಣದಲ್ಲಿಯೇ ಇರುತ್ತವೆ. ಆ ದೇವಸ್ಥಾನಗಳಿಗೂ ಎಲ್ಲಾ ಜಾತಿಗಳ ಜನರೂ ಬಂದು ದೇವರ ದರ್ಶನ ಮಾಡಿ ಹೋಗುತ್ತಾರೆ. ಹೀಗಿರುವಾಗ ಇವರ ದೇವಸ್ಥಾನಗಳು ಮಾತ್ರ ಇಡೀ ಸಮಾಜದ ಪ್ರತಿನಿಧಿಯಾಗುತ್ತವೆ ಹಾಗೂ ಮಠಗಳ ಮಂದಿರಗಳು ಜಾತಿ ಕೇಂದ್ರಿತವಾಗುತ್ತವೆ? ಪ್ರತಿ ದೇವಸ್ಥಾನಗಳು ಇರುವುದು ಈ ಪುರೋಹಿತಶಾಹಿಗಳ ಉದ್ದಾರಕ್ಕಾಗಿಯೇ ಹೊರತು ಮಾನವರ ಉದ್ದಾರಕ್ಕಾಗಿಯಂತೂ ಅಲ್ಲ. ಮಾನವರ ಉದ್ದಾರವೇ ಎಲ್ಲಾ ದೇವಸ್ಥಾನಗಳ ಉದ್ದೇಶವಾಗಿದ್ದರೆ ಈ ಸಹಸ್ರಾರು ವರ್ಷಗಳಲ್ಲಿ ಮನುಕುಲ ಉದ್ದಾರವಾಗಬಹುದಾಗಿತ್ತು. ಮೇಲು ಕೀಳು, ಜಾತಿ ಲಿಂಗ ತಾರತಮ್ಯ ಕೊನೆಯಾಗಬಹುದಾಗಿತ್ತು. ಜಗತ್ತಿನಲ್ಲಿ ಕೇಡು ಕೊನೆಯಾಗಿ ಒಳಿತೇ ಉಳಿಯಬೇಕಿತ್ತು. ಆದರೆ ಆಗಿದ್ದೇನು? ಜಾತಿಬೇಧ ಲಿಂಗಬೇಧ ವರ್ಗತಾರತಮ್ಯಗಳನ್ನು ದೇವರು ಹಾಗೂ ಧರ್ಮಗಳ ಹೆಸರಲ್ಲಿ ಮುಂದುವರೆಸಿಕೊಂಡು ಹೋಗಿದ್ದೇ ಈ ಪುರೋಹಿತಶಾಹಿಗಳು. ಅಂಧಶ್ರದ್ದೆ ಹಾಗೂ ಮೌಢ್ಯಭಕ್ತಿಯನ್ನು ಬಿತ್ತಿ ಬೆಳೆಸಿದ್ದೇ ಈ ಸನಾತನಿಗಳು. ಕರ್ಮ ಧರ್ಮದ ಹೆಸರಲ್ಲಿ ಸ್ವರ್ಗದ ಆಸೆ ಹಾಗೂ ನರಕದ ಆತಂಕವನ್ನು ಹುಟ್ಟುಹಾಕಿದ್ದೇ ಈ ವೈದಿಕಶಾಹಿಗಳು. ಇಂತವರ ಪ್ರತಿನಿಧಿಯಾದ ಕಣ್ಣನ್ ಎನ್ನುವ ಅರ್ಚಕನ ಬಾಯಲ್ಲಿ ಇನ್ನೇನು ತಾನೆ ಬರಲು ಸಾಧ್ಯ?
ಇದನ್ನೂ ಓದಿ-ಹೀಗೊಂದು ಕ್ವಿಯರ್ ರಾಮಾಯಣ
ಲಿಂಗಬೇಧದ ಹೇಳಿಕೆ ನೀಡಿ ಸಂವಿಧಾನದ ಆಶಯಕ್ಕೆ ಧಕ್ಕೆ ತರುವ ಪ್ರಯತ್ನ ಮಾಡಿದ ಈ ಅರ್ಚಕನ ಮೇಲೆ ಸರಕಾರ ಕ್ರಮ ಕೈಗೊಳ್ಳಬೇಕಿದೆ. ಮುಜರಾಯಿ ಇಲಾಖೆಯ ದೇವಸ್ಥಾನಗಳನ್ನು ಸರ್ಕಾರದ್ದಲ್ಲವೆಂದು ಘೋಷಿಸಿ ಭಕ್ತರನ್ನು ಸರಕಾರದ ವಿರುದ್ಧ ಎತ್ತಿ ಕಟ್ಟುತ್ತಿರುವ ಈ ಅರ್ಚಕನನ್ನು ಮುಜರಾಯಿ ಇಲಾಖೆ ಕೂಡಲೇ ಅಮಾನತುಗೊಳಿಸಬೇಕಿದೆ. ಮಠಗಳ ದೇವಸ್ಥಾನಗಳನ್ನು ಜಾತಿಕೇಂದ್ರಿತ ಎಂದು ಆರೋಪಿಸಿದ ಈ ಪೂಜಾರಿಯ ವಿರುದ್ಧ ಮಠಗಳು ಕೇಸು ದಾಖಲಿಸಬೇಕಿದೆ. ಅಧಿಕಾರಿಗಳ ಜೊತೆ ಶಾಮೀಲಾಗಿ ಲಕ್ಷಾಂತರ ರೂಪಾಯಿ ಸರಕಾರಿ ಹಣವನ್ನು ಅಕ್ರಮವಾಗಿ ಪಡೆದ ಈ ಕಣ್ಣನ್ ರವರ ವಿರುದ್ದ ಜಿಲ್ಲಾಡಳಿತವು ವಂಚನೆ ದೂರು ದಾಖಲಿಸಿ ಸರಕಾರಿ ಹಣವನ್ನು ವಸೂಲಿ ಮಾಡಬೇಕಿದೆ. ಎಲ್ಲಕ್ಕಿಂತ ಹೆಚ್ಚಾಗಿ ಇಂತಹ ಆಶಾಡಭೂತಿ ಅರ್ಚಕರ ಬಗ್ಗೆ ಭಕ್ತರು ಎಚ್ಚರದಿಂದ ಇರಬೇಕಿದೆ.
ಶಶಿಕಾಂತ ಯಡಹಳ್ಳಿ
ರಂಗಕರ್ಮಿ, ಪತ್ರಕರ್ತರು