ಸನಾತನ ಸಿದ್ಧಾಂತ ಮತ್ತು ಮಹಾಕುಂಭಮೇಳ ದುರಂತ

Most read

ಕುಂಭಮೇಳದ ಸಾವು ನೋವುಗಳಿಗೆ ಹೊಣೆ ಯಾರು? ಪವಿತ್ರ ಸ್ನಾನದ ಹೆಸರಲ್ಲಿ ಪಾಪದ ಭಯ ಹಾಗೂ ಪುಣ್ಯದ ಆಸೆ ಹುಟ್ಟಿಸಿದ ಸನಾತನಿ ವೈದಿಕಶಾಹಿಗಳು ಈ ಸಾವಿಗೆ ಪ್ರೇರಣೆಯಲ್ಲವೇ? ಸನಾತನ ಧರ್ಮ ಹಾಗೂ ಮನುವಾದಿ ಸಿದ್ಧಾಂತವನ್ನು ಮತ್ತೆ ಜಾರಿಗೆ ತರುವ ಗುರಿಯನ್ನು ಹೊಂದಿರುವ ಆರೆಸ್ಸೆಸ್ ಹಾಗೂ ಅದರ ಭಾಗವೇ ಆಗಿರುವ ಬಿಜೆಪಿ ಪಕ್ಷ ಈ ಸಾವುಗಳ ಹೊಣೆ ಹೊರಬೇಕಲ್ಲವೇ? ವಿಐಪಿ ಸಂಸ್ಕೃತಿಯನ್ನು ಕುಂಭಮೇಳದಲ್ಲಿ ವ್ಯವಸ್ಥೆಗೊಳಿಸಿ ಭಕ್ತರ ಸುರಕ್ಷತೆಯತ್ತ ಗಮನ ಹರಿಸದ ಯೋಗಿ ನೇತೃತ್ವದ ಸರಕಾರ ಈ ದುರ್ಘಟನೆಯ ಜವಾಬ್ದಾರಿ ಹೊರಬೇಕಲ್ಲವೇ? ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.

ಸನಾತನಿಗಳ ಶತಮಾನದ ಧಾರ್ಮಿಕ ಆಚರಣೆ ಎಂದು ನಂಬಿಸಲಾದ ಕುಂಭಮೇಳವೆಂಬ ಜಾತ್ರೆಯಲ್ಲಿ ಕಾಲ್ತುಳಿತಕ್ಕೆ ಐವತ್ತಕ್ಕೂ ಹೆಚ್ಚು ಜನರು ಬಲಿಯಾಗಿದ್ದರೆ ನೂರಾರು ಜನ ಗಾಯಗೊಂಡಿದ್ದಾರೆ. ಇನ್ನೂ ಕೆಲವರು ನಾಪತ್ತೆಯಾಗಿದ್ದಾರೆ. ಗಂಗೆಯಲ್ಲಿ ಹೆಣಗಳು ತೇಲಿ ಬರುತ್ತಿವೆ. ಧಾರ್ಮಿಕ ಸಂಭ್ರಮ ಸೂತಕವಾಗಿ ಬದಲಾಗಿದೆ. 

ಬೆಳಿಗ್ಗೆ 2 ಗಂಟೆಗೆ ಈ ದುರಂತ ನಡೆದಿದ್ದರೂ ಮಧ್ಯಾಹ್ನ 2 ರ ವರೆಗೆ ಸಾವಿನ ಸಂಗತಿಯನ್ನು ಮುಚ್ಚಿಡಲು ಉತ್ತರ ಪ್ರದೇಶದ ಸರಕಾರ ಹರಸಾಹಸ ಮಾಡಿತು. ಸಂಘಿ ಮಾಧ್ಯಮಗಳು ಕಾಲ್ತುಳಿತದಲ್ಲಿ ಕೆಲವರು ಗಾಯಗೊಂಡಿದ್ದು ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದೇ ಹೇಳತೊಡಗಿದ್ದವು. ಖುದ್ದು ಪ್ರಧಾನಿಗಳೇ “ಕೆಲವು ಪುಣ್ಯಾತ್ಮಗಳನ್ನು ಕಳೆದುಕೊಂಡಿದ್ದೇವೆ” ಎಂದು ಹೇಳಿದಾಗಲೇ ಮರಣ ಮೃದಂಗದ ಸಂಗತಿ ದೇಶಕ್ಕೆ ಗೊತ್ತಾಯಿತು. 

ಮೊನ್ನೆ ತಾನೇ ಮಲ್ಲಿಕಾರ್ಜುನ ಖರ್ಗೆಯವರು ” ಗಂಗೆಯಲ್ಲಿ ಮಿಂದರೆ ಬಡತನ ನಿವಾರಣೆಯಾಗುತ್ತದಾ? ಎಂದು ಪ್ರಶ್ನಿಸಿದ್ದರು. ಬಿಜೆಪಿಯಾದಿಯಾಗಿ ಇಡೀ ಸಂಘಿ ಪರಿವಾರ ಅವರ ಹೇಳಿಕೆಯನ್ನು ಖಂಡಿಸಿತ್ತು. ಆದರೆ ಈಗ ಕುಂಭಮೇಳದಲ್ಲಿ ಗಂಗೆಯಲ್ಲಿ ಮಿಂದರೆ ಸಾವು ಬಾರದಿರುತ್ತದೆಯೇ? ಎಂದು ಪ್ರಶ್ನಿಸಬೇಕಿದೆ. 

ಈ ರೀತಿಯ ದುರಂತ ಸಾವುಗಳು ಕುಂಭಮೇಳಕ್ಕೆ ಹೊಸತೇನೂ ಅಲ್ಲ.‌ 1954 ರಲ್ಲಿ ಇದೇ ಪ್ರಯಾಗ್ ರಾಜ್ ನಲ್ಲಿ ಇಂತಹುದೇ ಮೌನಿ ಅಮವಾಸ್ಯೆಯ ದಿನದಂದು ಮಹಾ ಕಾಲ್ತುಳಿತ ಸಂಭವಿಸಿ 800 ಕ್ಕೂ ಹೆಚ್ಚು ಭಕ್ತರು ಮಸಣ ಸೇರಿದ್ದರೆ ಅದಕ್ಕಿಂತಲೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿದ್ದವು. 1996 ರಲ್ಲಿ ಹರಿದ್ವಾರದಲ್ಲಿ ನಡೆದ ಕುಂಭಮೇಳದಲ್ಲಿಯೂ ಸಹ ಇನ್ನೂರಕ್ಕೂ ಹೆಚ್ಚು ಭಕ್ತರ ಸಾವುಗಳಾಗಿದ್ದವು. 2003 ರಲ್ಲೂ ಮಹಾರಾಷ್ಟ್ರದ ನಾಸಿಕ್ ನ ಗೋದಾವರಿ ನದಿ ದಂಡೆಯಲ್ಲಿ 39 ಭಕ್ತರು ಇಲ್ಲವಾಗಿದ್ದರು. 2013 ರಲ್ಲಿ ಕುಂಭದ ಸಂದರ್ಭದಲ್ಲಿ ಅಲಹಾಬಾದ್ ರೈಲು ನಿಲ್ದಾಣದ ಪಾದಾಚಾರಿ ಸೇತುವೆ  ಕುಸಿದಾಗ ನಡೆದ ಕಾಲ್ತುಳಿತದಲ್ಲಿ 42 ಜನರು ಉಸಿರು ಚೆಲ್ಲಿದ್ದರು. ಇವೆಲ್ಲಾ ಸರಕಾರಿ ಅಂಕಿ ಅಂಶಗಳು. ಲೆಕ್ಕಕ್ಕೆ ದಕ್ಕದ ಇನ್ನೂ ಎಷ್ಟೋ ಸಾವುಗಳು ಹಾಗೂ ನೋವುಗಳು ಕುಂಭದ ಚರಿತ್ರೆಯಲ್ಲಿ ಸಮಾಧಿಯಾಗಿವೆ. 

ಯಾವುದೇ ಸರಕಾರ ಈ ಹಿಂದೆ  ಆದ ದುರಂತಗಳಿಂದ ಪಾಠ ಕಲಿತು ಭಕ್ತರ ಸುರಕ್ಷತೆಯ ಬಗ್ಗೆ ಮೊದಲ ಆದ್ಯತೆ ಕೊಡಬೇಕು. ಸಾಧ್ಯವಾದಷ್ಟೂ ಭಕ್ತರ ಹರಿವನ್ನು ಕಡಿಮೆ ಗೊಳಿಸಬೇಕು. ಆದರೆ ಈ ಯೋಗಿ ಸರಕಾರ ಒಂದು ವರ್ಷದ ಮೊದಲಿನಿಂದಲೂ ಮಹಾಕುಂಭದ ಕುರಿತು ವ್ಯಾಪಕ ಪ್ರಚಾರದಲ್ಲಿ ತೊಡಗಿತು. ದೇಶದ ಮೂಲೆ ಮೂಲೆಗಳಿಂದ ಭಕ್ತರು ಬರಬೇಕೆಂದು ಕರೆ ಕೊಟ್ಟಿತು. ವಿಶೇಷ ರೈಲು ಹಾಗೂ ವಿಮಾನಗಳ ವ್ಯವಸ್ಥೆ ಮಾಡಿತು. ಈ ಕುಂಭ ಎಂಬ ಸನಾತನ ಧಾರ್ಮಿಕ ಆಚರಣೆ ಮಹಾ ಪವಿತ್ರವೆಂದೂ, ಇಲ್ಲಿ ಬಂದು ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದರೆ ಮಾಡಿದ ಪಾಪಗಳೆಲ್ಲ ಪರಿಹಾರವಾಗುತ್ತವೆ ಎಂಬ ಭಾವನಾತ್ಮಕ ಭ್ರಮೆಯನ್ನೂ ಪ್ರಚಾರ ಪಡಿಸಲಾಯ್ತು. ಪಾಪ ನಿವಾರಣೆ ಹಾಗೂ ಪುಣ್ಯ ಸಂಪಾದನೆಯ ಆಸೆಯಿಂದ ಕೋಟ್ಯಂತರ ಭಕ್ತಾದಿಗಳು ಸಂಕ್ರಾಂತಿಯ ದಿನದಿಂದ ಪ್ರಯಾಗ್ ರಾಜ್ ನತ್ತ ಹರಿದು ಬರತೊಡಗಿದರು. 

ಪುಣ್ಯ ಸಂಪಾದನೆಗೆ ಕಾತರಿಸಿ ಹಾತೊರೆದು ಹೋದ ಭಕ್ತರಿಗೆ ಅಲ್ಲಿ ಆಗಿದ್ದು ನರಕದರ್ಶನ. 22 ಕಿಮೀ ಗೂ ಹೆಚ್ಚು ದೂರ ಜನಸಂದಣಿಯ ನಡುವೆ ನಡೆದು ಹೋಗಬೇಕಿತ್ತು. ಬಂದ ಜನಸಂಖ್ಯೆಗೂ ಅಲ್ಲಿ ಮಾಡಲಾದ ವ್ಯವಸ್ಥೆಗಳಿಗೂ ವಿಪರೀತ ವ್ಯತ್ಯಾಸ ಇದ್ದುದರಿಂದ ಭಕ್ತರು ಪರದಾಡಬೇಕಾಯ್ತು. ಮೌನಿ ಅಮಾವಾಸ್ಯೆಯ ಗಂಗಾಸ್ನಾನ ಇನ್ನೂ ಪವಿತ್ರ ಎಂಬ ನಂಬಿಕೆಯನ್ನೇ ನೆಚ್ಚಿ ಹೋದ ಕೋಟ್ಯಂತರ ಭಕ್ತರು ಅಹೋರಾತ್ರಿ ನಿಲ್ಲಲು ಕೂಡಲು ಜಾಗವಿಲ್ಲದೆ ಒಬ್ಬರಿಗೊಬ್ಬರು ಅಂಟಿಕೊಂಡೆ ಇಂಚುಗಳ ಲೆಕ್ಕದಲ್ಲಿ ಮುಂದುವರೆಯ ಬೇಕಾಗಿತ್ತು. ಜನವರಿ 29 ರಂದು ಮಧ್ಯರಾತ್ರಿ ಕೆಲವು ಭಕ್ತರ ಸಹನೆಯ ಕಟ್ಟೆ ಒಡೆಯಿತು. ಬ್ಯಾರಿಕೇಡ್ ಬ್ರೇಕ್ ಮಾಡಲಾಯ್ತು. ಹಿಂದಿದ್ದವರು ಮುಂದೆ ಹೋಗಲು ನೂಕಾಟ ಶುರು ಮಾಡಿದರು. ಒತ್ತಡ ತಾಳಲಾಗದ ಹಲವರು ಕೆಳಗೆ ಬಿದ್ದರು. ಹಿಂದಿದ್ದವರು ಮುಂದೆ ಬಿದ್ದವರನ್ನು ತುಳಿದುಕೊಂಡೇ ಜೀವ ಉಳಿಸಿಕೊಳ್ಳಲು ಪರದಾಡಿದರು. ಆ 15 ನಿಮಿಷಗಳಲ್ಲಿ ಆಗಬಾರದ ಅನಾಹುತ ಆಗಿಯೇ ಬಿಟ್ಟಿತ್ತು. ಕೆಲವರ ಪ್ರಾಣ ಹಾರಿಹೋದರೆ ಹಲವರು ಗಾಯಗೊಂಡು ನರಳಾಡ ತೊಡಗಿದರು. ಐದಾರು ಟ್ರ್ಯಾಕ್ಟರ್ ಲೋಡಿನಷ್ಟು ಬಟ್ಟೆಗಳು ಹಾಗೂ ಚಪ್ಪಲಿಗಳ ರಾಶಿ ನಡೆದ ದುರಂತಕ್ಕೆ ಸಾಕ್ಷಿಯಾಗಿದ್ದವು. ಕಾಲ್ತುಳಿತಕ್ಕೆ ಸಿಕ್ಕು ಕರ್ನಾಟಕದ ಬೆಳಗಾವಿಯ ನಾಲ್ವರೂ ಸಹ ಅಸುನೀಗಿದ್ದರು. 

ಇಷ್ಟೆಲ್ಲಾ ಅನಾಹುತವಾದರೂ ಮಡಿಲ ಮಾಧ್ಯಮಗಳು ಡ್ಯಾಮೇಜ್ ಕಂಟ್ರೋಲಿಗೆ ಮುಂದಾಗಿದ್ದವು. “ಭಕ್ತರು ಮಾಡಿದ ಪ್ರಮಾದದಿಂದ ಕಾಲ್ತುಳಿತ ಉಂಟಾದರೂ ಕೇವಲ ಎರಡೇ ಗಂಟೆಗಳಲ್ಲಿ ಯೋಗಿ ಸರಕಾರ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದು ದಕ್ಷ ಆಡಳಿತಕ್ಕೆ ಸಾಕ್ಷಿ” ಎಂದು ಸಾವಿನಲ್ಲೂ ಸಂಘಿ ಸರಕಾರವನ್ನು ಹೊಗಳ ತೊಡಗಿದ್ದವು. ಈ ಮಾರಕೊಂಡ ಮಾಧ್ಯಮಗಳು ಇರೋದೇ ಹೀಗೆ. ಇದರ ಜೊತೆಗೆ “ಇಂತಹ ಬೃಹತ್ ಮೇಳಗಳಲ್ಲು ಚಿಕ್ಕಪುಟ್ಟ ದುರಂತಗಳು ಸಂಭವಿಸುತ್ತವೆ” ಎಂದು ಬಿಜೆಪಿ ನಾಯಕರು ಹೇಳಿದ್ದು ಅವರ ಅಮಾನವೀಯತೆಗೆ ಪುರಾವೆಯಾಗಿದೆ. ಹೀಗೆ ಹೇಳುವವರ ಕುಟುಂಬದ ಸದಸ್ಯರುಗಳು ಹೀಗೆ ಕಾಲ್ತುಳಿತಕ್ಕೆ ಸಿಕ್ಕಿ ದುರಂತ ಅಂತ್ಯ ಕಂಡಿದ್ದರೆ ಈ ಮಹಾನುಭಾವರು ಹೀಗೆ ಹೇಳುತ್ತಿದ್ದರಾ?. ಈ ನಾಯಕರುಗಳಾಗಲೀ ಇಲ್ಲವೇ ಅವರ ಮನೆಯವರಾಗಲೀ ಹೀಗೆ ದುರಂತ ಅಂತ್ಯ ಕಾಣಲು ಸಾಧ್ಯವೇ ಇಲ್ಲ, ಯಾಕೆಂದರೆ ಸರಕಾರದಿಂದ ಇವರಿಗೆಲ್ಲಾ ವಿಐಪಿ ಸೌಲಭ್ಯ ಒದಗಿಸಲಾಗಿದೆ.

ಅಸಲಿಗೆ ಈ ದುರಂತಕ್ಕೆ, ಇಷ್ಟೊಂದು ಸಾವು ನೋವುಗಳಿಗೆ ಈ ವಿಐಪಿ ವ್ಯವಸ್ಥೆಯೇ ಕಾರಣವಾಗಿದೆ. ಕುಂಭಮೇಳದಲ್ಲಿ ಭಾಗವಹಿಸುವ ರಾಜಕಾರಣಿಗಳಿಗೆ, ಪ್ರಭಾವಿಗಳಿಗೆ, ಅಧಿಕಾರಿಗಳಿಗೆ ವಿಐಪಿ ಪಾಸ್ ಗಳನ್ನು ಸರಕಾರ ವಿತರಿಸಿದೆ. ಯಾವುದೇ ಜನಜಂಗುಳಿ ಇಲ್ಲದೆ, ಸುದೀರ್ಘ ನಡಿಗೆ ಹಾಗೂ ಕಾಯುವಿಕೆ ಇಲ್ಲದೇ ಈ ವಿಐಪಿಗಳು ನೇರವಾಗಿ ತ್ರಿವೇಣಿ ಸಂಗಮಕ್ಕೆ ಹೋಗಿ ಗಂಗೆಯಲ್ಲಿ ಮುಳುಗೆದ್ದು ಮಾಡಿದ ಪಾಪಗಳನ್ನು ಕಳೆದುಕೊಳ್ಳುವ ವ್ಯವಸ್ಥೆಯನ್ನು ಯೋಗಿ ಸರಕಾರ ಬಹಳ ಮುತುವರ್ಜಿಯಿಂದ ಮಾಡಿದೆ. ಒಂದು ಕಡೆ ಭಕ್ತ ಗಣ ಗಂಗೆಯನ್ನು ತಲುಪಲು ಹರಸಾಹಸ ಮಾಡುತ್ತಿದ್ದರೆ, ವಿಐಪಿ ಗಳಿಗಾಗಿ ಪಕ್ಕದಲ್ಲಿದ್ದ ಮಾರ್ಗ ಖಾಲಿಯಾಗಿದೆ. ಇದನ್ನು ಗಮನಿಸಿದ ಕೆಲವು ಭಕ್ತರು ಬ್ಯಾರಿಕೇಡ್ ಮುರಿದು ಹಾಕಿ ಪಕ್ಕದಲ್ಲಿ ಖಾಲಿ ಇದ್ದ ವಿಐಪಿ ಮಾರ್ಗಕ್ಕೆ ನುಗ್ಗಿದ್ದಾರೆ. ಆಗ ಉಂಟಾದ ಕಾಲ್ತುಳಿತಕ್ಕೆ ಸಿಕ್ಕು ಅನೇಕರು ಸಾವಿಗೀಡಾಗಿದ್ದಾರೆ. ದುರಂತದ ನಂತರ ಸರಕಾರ ವಿಐಪಿ ಪಾಸ್ ಗಳನ್ನೇನೋ ರದ್ದು ಮಾಡಿದೆಯಾದರೂ ಅಷ್ಟರಲ್ಲಿ ಶವವಾದವರಿಗೆ ಮರಳಿ ಜೀವ ತುಂಬಲು ಸಾಧ್ಯವೇ? ಸತ್ತವರನ್ನು ಮತ್ತೆ ಗಂಗೆಯಲ್ಲಿ ಮುಳುಗಿಸಿದರೆ ಹೋದ ಜೀವ ಮರಳಿ ಬರಬಹುದೇ? 

ಹೋಗಲಿ ಇಷ್ಟೊಂದು ಸಾವು ನೋವುಗಳಿಗೆ ಹೊಣೆ ಯಾರು? ಪವಿತ್ರ ಸ್ನಾನದ ಹೆಸರಲ್ಲಿ ಪಾಪದ ಭಯ ಹಾಗೂ ಪುಣ್ಯದ ಆಸೆ ಹುಟ್ಟಿಸಿದ ಸನಾತನಿ ವೈದಿಕಶಾಹಿಗಳು ಈ ಸಾವಿಗೆ ಪ್ರೇರಣೆಯಲ್ಲವೇ? ಸನಾತನ ಧರ್ಮ ಹಾಗೂ ಮನುವಾದಿ ಸಿದ್ಧಾಂತವನ್ನು ಮತ್ತೆ ಜಾರಿಗೆ ತರುವ ಗುರಿಯನ್ನು ಹೊಂದಿರುವ ಆರೆಸ್ಸೆಸ್ ಹಾಗೂ ಅದರ ಭಾಗವೇ ಆಗಿರುವ ಬಿಜೆಪಿ ಪಕ್ಷ ಈ ಸಾವುಗಳ ಹೊಣೆ ಹೊರಬೇಕಲ್ಲವೇ? ವಿಐಪಿ ಸಂಸ್ಕೃತಿಯನ್ನು ಕುಂಭಮೇಳದಲ್ಲಿ ವ್ಯವಸ್ಥೆಗೊಳಿಸಿ, ಪುಣ್ಯಸಂಪಾದನೆಯ ಆಸೆಯಿಂದ ಬಂದ ಭಕ್ತರ ಸುರಕ್ಷತೆಯತ್ತ ಗಮನ ಹರಿಸದ ಯೋಗಿ ನೇತೃತ್ವದ ಸರಕಾರ ಈ ದುರ್ಘಟನೆಯ ಜವಾಬ್ದಾರಿ ಹೊರಬೇಕಲ್ಲವೇ? ಹೋಗಲಿ ಈ ಕುಂಭಮೇಳಕ್ಕೆ ವ್ಯಾಪಕ ಪ್ರಚಾರಕೊಟ್ಟು, ಭಾವನಾತ್ಮಕ ಭ್ರಮೆಗಳನ್ನು ಬಿತ್ತಿ, ಹೆಚ್ಚು ಜನರನ್ನು ಪ್ರಯಾಗ್ ರಾಜ್ ಗೆ ಬರುವಂತೆ ಮಾಡಿದ ಸಂಘಿ ಸಿದ್ಧಾಂತದ ಪ್ರತಿಪಾದಕರಾದ ಮಡಿಲ ಮಾಧ್ಯಮಗಳು ಈ ದುರಂತದ ಹೊಣೆಗಾರಿಕೆ ಹೊರಬೇಕಲ್ಲವೇ? 

ಆದರೆ.. ಇಷ್ಟೊಂದು ಸಾವು ನೋವುಗಳಿಗೆ ಪ್ರತ್ಯಕ್ಷ ಹಾಗೂ ಪರೋಕ್ಷ ಕಾರಣವಾದ ಈ ಯಾರೂ ಸಹ ದುರಂತದ ಹೊಣೆಗಾರಿಕೆಯನ್ನು ಹೊತ್ತುಕೊಳ್ಳಲು ಸಾಧ್ಯವೇ ಇಲ್ಲ. ಯಾಕೆಂದರೆ ಈ ಯಾರಿಗೂ ಆತ್ಮವೂ ಇಲ್ಲ, ಆತ್ಮಸಾಕ್ಷಿಯೂ ಇಲ್ಲ. ಎಲ್ಲಾ ತಪ್ಪನ್ನು ನೂಕು ನುಗ್ಗಲು ಮಾಡಿದ ಭಕ್ತರ ಮೇಲೆ ಹಾಕಿ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಕೆಲಸ ಮಾಡಲಾಗುತ್ತಿದೆ. ಸತ್ತವರಿಗೆ ಒಂದಿಷ್ಟು ಪರಿಹಾರ ಕೊಡುವ ಮೂಲಕ ಹೋದ ಜೀವಕ್ಕೆ ಬೆಲೆ ಕಟ್ಟಲಾಗುತ್ತದೆ. ಆದರೆ ಇಷ್ಟೊಂದು ಭಕ್ತರು ಸನಾತನಿಗಳು ಹುಟ್ಟಿಸಿದ ಪಾಪ ಪುಣ್ಯಗಳ ಭ್ರಮೆಗೆ ಬಲಿಪಶು ಆದರು ಎಂಬುದನ್ನು ಯಾರೂ ಒಪ್ಪುವುದಿಲ್ಲ. ಈ ಹಿಂದಿನ ದುರಂತಗಳಿಂದ ಆಡಳಿತಾಂಗ ಎಂದೂ ಪಾಠ ಕಲಿಯುವುದಿಲ್ಲ. ಧಾರ್ಮಿಕ ಜಾತ್ರೆಗಳಲ್ಲಿ ಅಂತಿಮಯಾತ್ರೆಗೆ ಒಳಗಾದವರ ಕುಟುಂಬಗಳ ನೋವು ಸಂಕಟ ಯೋಗಿ ಮೋದಿಯಂತಹ ಕುಟುಂಬ ರಹಿತರಿಗೆ ಎಂದೂ ಅರ್ಥವಾಗುವುದಿಲ್ಲ. ಹೀಗಾಗಿ ಇಂತಹ ಮಾನವ ನಿರ್ಮಿತ ದುರಂತಗಳಿಗೆ ಕೊನೆ ಮೊದಲಿಲ್ಲ.

ಕಾಲ್ತುಳಿತಕ್ಕೆ ಸಿಕ್ಕಿ ಮರಣವನ್ನಪ್ಪಿದ ಬೆಳಗಾವಿಯ ನಾಲ್ವರು

ಇಂತಹ ಅನೇಕಾನೇಕ ನಂಬಿಕೆ ಮೂಢನಂಬಿಕೆ, ದುರಂತಗಳಿಗೆ ಸಾಕ್ಷಿಯಾಗಿ ಗಂಗೆ ತನ್ನ ಪಾಡಿಗೆ ತಾನು ಹರಿಯುತ್ತಲೇ ಇದ್ದಾಳೆ. ಪವಿತ್ರ ಸ್ನಾನದ ಹೆಸರಲ್ಲಿ ಗಂಗೆಯಲ್ಲಿ ಮಿಂದೇಳುವ ಕೋಟ್ಯಂತರ ಭಕ್ತರು ತಾವು ಪವಿತ್ರವಾದೆವು ಎಂಬ ಭ್ರಮೆಯನ್ನು ಹೊತ್ತು ಗಂಗೆಯನ್ನು ಮಾಲಿನ್ಯ ಮಾಡುವುದರ ಮೂಲಕ ಅಪವಿತ್ರಗೊಳಿಸುತ್ತಲೇ ಇದ್ದಾರೆ. ಹೆಸರು ಯಾವುದಾದರೇನು ನೀರು ನೀರೇ. ಎಲ್ಲಾ ಜಲಮೂಲಗಳು ಜೀವಿಗಳಿಗೆ ಜೀವಜಲವೇ ಆಗಿವೆ. ಹರಿಯುವ ನೀರಿಗೂ ಪವಿತ್ರ ಅಪವಿತ್ರ ಎನ್ನುವ ಆರೋಪವನ್ನು ಹೇರುವ ಧರ್ಮಾಂಧರುಗಳು ನದಿಗಳಲ್ಲೂ ಬೇಧವನ್ನುಂಟು ಮಾಡಿದ್ದಾರೆ. ಆದರೆ ಈ ಸನಾತನಿಗಳು ಅದೆಷ್ಟೇ ತಾರತಮ್ಯ ಸೃಷ್ಟಿಸಲಿ, ಮೌಢ್ಯಗಳನ್ನು ಹುಟ್ಟಿಸಲಿ, ಹರಿಯುವ ನದಿಗಳಿಗೆ ಅದು ಲೆಕ್ಕಕ್ಕೇ ಇಲ್ಲ. ಮನುಷ್ಯರು ಧಾರ್ಮಿಕತೆಯ ನೆಪದಲ್ಲಿ ಮಾಡುವ ಮಾಲಿನ್ಯವನ್ನು ಸಹ ಹೊತ್ತು ಚಲಿಸುವ ನದಿಗಳಿಗೆ ಭಿನ್ನಬೇಧಗಳಿಲ್ಲ. ಆದರೆ ಪಾಪ ಪುಣ್ಯ, ಪವಿತ್ರ ಅಪವಿತ್ರಾದಿಗಳನ್ನು ಹುಟ್ಟಿಸಿ ಶತಶತಮಾನಗಳಿಂದ ಜನರನ್ನು ಶೋಷಿಸುತ್ತಾ ಬಂದಿರುವ ಪುರೋಹಿತಶಾಹಿಗಳಿಗೆ ಗಂಗೆ ಪವಿತ್ರವಾಗುತ್ತಾಳೆ. ಗಂಗಾಸ್ನಾನ ಪಾಪವಿಮೋಚನೆಗೆ ದಾರಿಯಾಗುತ್ತದೆ. ಗಂಗೆಯಲ್ಲಾದ ಸಾವುಗಳು ಮುಕ್ತಿಗೆ ಗುರಿಯಾಗುತ್ತವೆ. ಮನುಕುಲ ಇರುವವರೆಗೂ ಇದು ಮುಂದುವರೆಯುತ್ತಲೇ ಇರುತ್ತದೆ. ಮಾನವ ನಿರ್ಮಿತ ದುರಂತಗಳು ನಿರಂತವಾಗಿ ಘಟಿಸುತ್ತಲೇ ಇರುತ್ತವೆ. ಸನಾತನಿಗಳು ಸೃಷ್ಟಿಸಿದ ಪಾಪ ಪುಣ್ಯ, ಕರ್ಮ ಸಿದ್ಧಾಂತಗಳಿಂದ ಮುಕ್ತಿ ಪಡೆದು ಬೌದ್ಧಿಕ ಅರಿವನ್ನು ಪಡೆಯುವುದೊಂದೇ ಜನರಿಗೆ ಇರುವ ಮಾರ್ಗವಾಗಿದೆ. ಅದು ಆಗದಂತೆ ತಡೆಯಲೆಂದೇ ಕುಂಭಮೇಳದಂತಹ ಧಾರ್ಮಿಕ ಆಚರಣೆಗಳನ್ನು ಆಯೋಜಿಸಲಾಗುತ್ತಿದೆ. ಇದೇ ವಾಸ್ತವ. 

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು.


ಇದನ್ನೂ ಓದಿ – ಸನಾತನಿಗಳ ಕುಂಭಮೇಳ ಮತ್ತು ಮಡಿಲ ಮಾಧ್ಯಮಗಳ ಜೋಗುಳ https://kannadaplanet.com/sanatanis-kumbh-mela-and-medias-jogula/

More articles

Latest article