ಛಲವಾದಿಯೊಳಗೊಬ್ಬ ಮಾನವೀಯ ಸಹೃದಯ ಸದಾನಂದ ಸುವರ್ಣ

Most read

ಸದಾನಂದ ಸುವರ್ಣರು (1931-2024) ನಿಜವಾಗಿ ಏನು? ರಂಗತಪಸ್ವಿ, ಸಿನಿಮಾ ನಿರ್ಮಾಪಕ, ಸಿನಿಮಾ ನಿರ್ದೇಶಕ ಇಷ್ಟೆಯೇ? ಇಷ್ಟಕ್ಕೆ ಮಾತ್ರ ಅವರು ಸ್ಮರಣಾರ್ಹರೇ?

ನಿಜ. ತುಳು ಕನ್ನಡ ರಂಗಭೂಮಿ ಹಾಗೂ ಕನ್ನಡ ಚಲನಚಿತ್ರ ರಂಗದ ಕೆಲವೇ ಕೆಲವು ಸೃಜನಶೀಲ ಪ್ರತಿಭೆಗಳಲ್ಲಿ ಸದಾನಂದ ಸುವರ್ಣ ಅವರೂ ಒಬ್ಬರು. ನಟ, ನಿರ್ದೇಶಕ, ರಂಗತಜ್ಞ, ಕನ್ನಡ ಪರಿಚಾರಕ, ಲೇಖಕ, ಪ್ರಕಾಶಕ, ಸಂಘಟಕ ಹೀಗೆ ಹತ್ತಾರು ನೆಲೆಗಳಿಂದ ರಂಗಭೂಮಿಯೊಡನೆ ಗರಿಷ್ಠ ಸಂಬಂಧವನ್ನು ಬೆಸೆದು ಉಳಿಸಿಕೊಂಡು ಬಂದ ಸದಾನಂದ ಸುವರ್ಣರದು ನಿಜ ಅರ್ಥದಲ್ಲಿ ಬಹುಮುಖ ಪ್ರತಿಭೆ.

ಬಣ್ಣವೇ ಬದುಕು

ಜನಪ್ರಿಯವೂ, ಉತ್ಕೃಷ್ಟವೂ ಆದ ಟಿವಿ ಧಾರಾವಾಹಿಗಳು, ಸಾಕ್ಷ್ಯ ಚಿತ್ರಗಳು, ಹಾಗೂ ಜಾಹೀರಾತುಗಳ ರೂವಾರಿ, ನಾಟಕಕಾರ, ಸಾಹಿತಿ ಸುವರ್ಣರು ತಮ್ಮ ಮುಂಬಯಿ ವಾಸದ ಆದಿಯಲ್ಲಿ ಬೆರಳಚ್ಚುಗಾರ, ಕಾರಕೂನ, ಮಾರಾಟ ಪ್ರತಿನಿಧಿ, ರಾತ್ರಿ ಶಿಕ್ಷಕ, ಪುಟ್ಟ ಪಬ್ಲಿಸಿಟಿ ಸಂಸ್ಥೆಯ ಜಾಹೀರಾತು ವಿಭಾಗದ ಇನ್ ಚಾರ್ಜ್, ಪೆಯಿಂಟ್ ಸೇಲ್ಸ್ ಮನ್ ಮುಂತಾದ ಹತ್ತು ಹಲವು ಉದ್ಯೋಗ ಪರ್ವಗಳನ್ನು ಕಳೆದು, ತನ್ನದೇ ಆದ ಪೆಯಿಂಟ್ ಅಂಗಡಿ ತೆರೆದು, ಮೂರು ದಶಕಗಳ ತನಕ ತನ್ನ ಬಣ್ಣದ ಬದುಕನ್ನು ಮುಂದುವರಿಸಿದವರು. ಈ ಅರ್ಥದಲ್ಲಿ ನಿಜಕ್ಕೂ ಅವರದು ಬಣ್ಣದ ಬದುಕು. ಪೆಯಿಂಟ್ ಉದ್ಯಮ ಅವರ ಜೀವನೋಪಾಯವಾಗಿದ್ದರೆ, ರಂಗದ ಬಣ್ಣ ಅವರಿಗೆ ಆತ್ಮ‌ತೃಪ್ತಿಯನ್ನು ತಂದುಕೊಟ್ಟಿತು, ಬದುಕನ್ನು ಸಾರ್ಥಕ ಪಡಿಸಿಕೊಳ್ಳುವ ಅವಕಾಶ ಒದಗಿಸಿಕೊಟ್ಟಿತು, ಜನಮನದಲ್ಲಿ ಅವರು ಚಿರಸ್ಥಾಯಿಯಾಗುವಂತೆ ಮಾಡಿತು.

ಸದಾನಂದ ಸುವರ್ಣ ಅವರಲ್ಲಿ ಎದ್ದು ಕಾಣುವ ಗುಣವೆಂದರೆ, ಪ್ರಯೋಗಶೀಲತೆ. ಅವರ ಇಡೀ ಬದುಕೇ ಪ್ರಯೋಗಗಳಿಂದ ಕೂಡಿದೆ. ಈ ಪ್ರಯೋಗಶೀಲತೆ ಮತ್ತು ಕ್ರಿಯಾಶೀಲತೆಯ ವಿಷಯದಲ್ಲಿ ಕಡಲತಡಿಯ ಭಾರ್ಗವ ಶಿವರಾಮ ಕಾರಂತರು ಅವರ ಮೇಲೆ ದಟ್ಟ ಪ್ರಭಾವ ಬೀರಿರಬಹುದೇ?

ಕಾರಂತರನ್ನು ಸುವರ್ಣರು ಅಪಾರವಾಗಿ ಗೌರವಿಸುತ್ತಿದ್ದರು, ಪ್ರೀತಿಸುತ್ತಿದ್ದರು. ಕಾರಂತರನ್ನು ಮುಂಬೈಗೆ ಕರೆಸಿ ಅಸಂಖ್ಯ ಕಾರ್ಯಕ್ರಮಗಳನ್ನು ಸುವರ್ಣರು ಏರ್ಪಡಿಸಿದ್ದರು. ಕಾರಂತರ ಬಗ್ಗೆ ಸಾಕ್ಷ್ಯಚಿತ್ರವನ್ನೂ ನಿರ್ಮಿಸಿದ್ದರು. ಕಾರಂತರು ತೀರಿಕೊಂಡ ಬಳಿಕವೂ ಅವರ ಹೆಸರಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಮಾಡಿಕೊಂಡು ಅವರ ನೆನಪನ್ನು ಚಿರಸ್ಥಾಯಿಗೊಳಿಸುವ ಕೆಲಸದಲ್ಲಿ ತನ್ನದೇ ಆದ ಕೊಡುಗೆ ನೀಡಿದರು. ಕಾರಂತರು ವಿಶೇಷವಾಗಿ ಯಕ್ಷಗಾನ ರಂಗದಲ್ಲಿ ಪ್ರಯೋಗಶೀಲತೆಯನ್ನು ತೋರಿದರೆ ಸುವರ್ಣರು ಆ ಕೆಲಸವನ್ನು ರಂಗಭೂಮಿಯಲ್ಲಿ ತೋರಿದರು.

ಸಿನಿಮಾ ರಂಗದಲ್ಲಿಯೂ ಆಸಕ್ತಿ ತೋರಿದ ಸುವರ್ಣರು ‘ಘಟಶ್ರಾದ್ಧ’ (ಸ್ವರ್ಣ ಕಮಲ ಮತ್ತು 19 ರಾಷ್ರೀಯ ಪ್ರಶಸ್ತಿ), ‘ತಬರನ ಕತೆ’, ‘ಕುಬಿ ಮತ್ತು ಇಯಾಲ’, ‘ಮನೆ’, ‘ಕ್ರೌರ್ಯ’ ಇತ್ಯಾದಿ ಸಿನಿಮಾ, ‘ಗುಡ್ಡೆದ ಭೂತ’ದಂತಹ ಜನಪ್ರಿಯ ಟೆಲಿ ಧಾರಾವಾಹಿ ನೀಡಿದರು. ಆದರೆ ಹೃದಯಾಘಾತವೊಂದರ ಕಾರಣವಾಗಿ ಸಿನಿಮಾ ರಂಗದಲ್ಲಿ ಮುಂದುವರಿಯುವುದು ಸಾಧ‍್ಯವಾಗಲಿಲ್ಲ. ಅಲ್ಲಿಗೆ ವಿದಾಯ ಹೇಳಿ ಮತ್ತೆ ರಂಗಭೂಮಿಗೆ ಮರಳಿದರು. 2006 ರಲ್ಲಿ ಮುಂಬೈಗೂ ವಿದಾಯ ಹೇಳಿ ತುಳುನಾಡಿಗೆ ಮರಳಿ ಮಂಗಳೂರಿನಲ್ಲಿ ನೆಲ ನಿಂತರು. ಕೊನೆಯ ಉಸಿರಿನ ತನಕವೂ ರಂಗಭೂಮಿಗೆ ಸಂಬಂಧಿಸಿದಂತೆ ಒಂದಲ್ಲ ಒಂದು ಕೆಲಸದಲ್ಲಿ ತೊಡಗಿಕೊಂಡರು.

ಅಸಹಾಯಕರ ಆಪತ್ಬಾಂಧವ

ಇದು ಸುವರ್ಣರ ಒಂದು ಮುಖ. ಇಷ್ಟೇ ಆಗಿದ್ದರೆ ಅದರಲ್ಲಿ ಅಂತಹ ವಿಶೇಷವೇನೂ ಇಲ್ಲ. ಶಿವರಾಮ ಕಾರಂತರನ್ನು ಅನೇಕ ರೀತಿಯಲ್ಲಿ ತನ್ನ ಗುರುವಾಗಿ ಪರಿಗಣಿಸಿದ್ದ ಸುವರ್ಣರು ಕಾರಂತರಲ್ಲಿದ್ದ ಪರೋಪಕಾರಿ ಗುಣವನ್ನೂ ತನ್ನ ಬದುಕಿನಲ್ಲಿ ಅಳವಡಿಸಿಕೊಂಡಿದ್ದರು ಎನ್ನುವುದು ವಿಶೇಷ.

ಒಂದು ಕಾಲದಲ್ಲಿ ಕಾರಂತರು ಕಡುಬಡತನ ಕಂಡವರು, ಉಂಡವರು ಅದನ್ನೇ ಹಾಸಿಹೊದ್ದವರು. ಆದರೆ ಬದುಕಿನ ಉತ್ತರಾರ್ಧದಲ್ಲಿ ತನ್ನ ಕೃತಿಗಳ ಸಂಭಾವನೆಗಳ ಮೂಲಕ ಅಪಾರ ಹಣ ಕೈ ಸೇರಲಾರಂಭಿಸಿದಾಗ ಅದರಲ್ಲಿ ಬಹುಭಾಗವನ್ನು ಅಸಹಾಯಕರಿಗೆ ನೆರವಿನ ಮೂಲಕ ಹಂಚಿದವರು. ‘ಅಳಿದ ಮೇಲೆ’ ಕಾದಂಬರಿ ಈ ಅರ್ಥದಲ್ಲಿ ಕಾರಂತರದೇ ಬದುಕಿನ ಚಿತ್ರ.

ಕಾರಂತರ ಹಾಗೆಯೇ ಸುವರ್ಣರೂ ಕಂಡು ಕೇಳರಿಯದ ಸಂಕಷ್ಟಗಳ ಬಾಲ್ಯವನ್ನು ಅನುಭವಿಸುತ್ತಾ ಛಲ ಮತ್ತು ಪರಿಶ್ರಮಗಳ ಮೂಲಕ ಬದುಕು ಕಟ್ಟಿಕೊಂಡವರು. ಕಡುಕಷ್ಟಗಳ ಅರಿವಿದ್ದ ಕಾರಣವಾಗಿಯೇ ಕಷ್ಟದಲ್ಲಿರುವವರಿಗೆ ನೆರವಾಗುವ ಮಾನವೀಯ ಮನಸೂ ಅವರಲ್ಲಿ ಮೂಡಿತು ಎನ್ನಬಹುದು. ಹೆಂಡತಿ ಮಕ್ಕಳು ಇಲ್ಲದ ಅವರು ಜಗತ್ತನ್ನೇ ತಮ್ಮ ಕುಟುಂಬವನ್ನಾಗಿಸಿಕೊಂಡವರು. ತಮ್ಮ ಸಂಪಾದನೆಯ ಬಹುಪಾಲನ್ನು ಅಸಹಾಯಕರಿಗೆ, ಅಸಹಾಯಕರ ಪರ ಕೆಲಸ ಮಾಡುವ ಸಂಸ್ಥೆಗಳಿಗೆ ಹಂಚುತ್ತ ಹೋದವರು.

“ಆರ್ಥಿಕ ಬಡತನದ ಬಗ್ಗೆ ಸುವರ್ಣರಿಗೆ ಅರಿವಿದೆ. ಸಂಕಟದಲ್ಲಿರುವವರಿಗೆ ತಾನು ಹೇಗಾದರೂ ನೆರವಾಗಲೇಬೇಕು ಎನ್ನುವುದು ಅವರ ಒಳಮನಸಿನ ಹಂಬಲ. ಬಡವರಿಗಾಗಿ ಅವರ ಮಾನವೀಯತೆ ಮಿಡಿಯುತ್ತಿರುತ್ತದೆ. ಹಾಗಾಗಿ ಯಾರಿಗಾದರೂ ಸಹಾಯದ ಅನಿವಾರ್ಯತೆ ಇರುವುದು ಮನದಟ್ಟಾದರೆ ಅಂಥವರಿಗೆ ತನ್ನ ಇತಿಮಿತಿಯೊಳಗೆ ಎಷ್ಟು ಸಾಧ‍್ಯವೋ ಅಷ್ಟರಮಟ್ಟಿಗೆ ಅವರು ನೆರವಾಗುತ್ತ ಬರುತ್ತಿದ್ದಾರೆ

ಈ ಛಲವಾದಿಯೊಳಗೊಬ್ಬ ಮಾನವೀಯ ಸಹೃದಯ ಇದ್ದಾನೆ. ನೊಂದವರಿಗೆ ಸಾಂತ್ವನ ಹೇಳುವ, ಉಪಕರಿಸುವ, ಧೈರ್ಯ ತುಂಬುವ ಹಿರಿಯ ಚೇತನ ಇದ್ದಾನೆ. ಯಾವುದನ್ನೂ ಸುದ್ದಿಯಾಗಿಸುವುದೇ ಇಲ್ಲ. ಬಲಗೈ ಕೊಟ್ಟದ್ದು ಎಡಗೈಗೆ ಗೊತ್ತಾಗಬಾರದಲ್ಲ? ಹಾಗೆ ಅವರ ನಡೆ ನುಡಿ. ಅವರೊಳಗಿನ ತಾಯ್ತನ, ಸ್ನೇಹಶೀಲತೆ ಅನುಭವಿಸಿದವರಿಗಷ್ಟೇ ಅರ್ಥವಾದೀತು. ಪೆಯಿಂಟ್ ಉದ್ಯಮ ನಡೆಸುತ್ತಿದ್ದ ದಿನಗಳಲ್ಲಿ ವೃದ್ಧಾಪ್ಯಕ್ಕೆಂದು ಕೂಡಿಟ್ಟಿದ್ದ ಅಲ್ಪಸ್ವಲ್ಪ ಹಣದಿಂದಲೇ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿವೇತನ, ಅನಾರೋಗ್ಯದಿಂದ ಬಳಲುತ್ತಿರುವವರಿಗೆ, ಅಸಹಾಯಕರಿಗೆ, ಅನಾಥ ಮಕ್ಕಳು ವೃದ್ಧರನ್ನು ಸಲಹುವ ಸಂಸ್ಥೆಗಳಿಗೆ ಧನಸಹಾಯವನ್ನು ಮಾಡುತ್ತ ನೆಮ್ಮದಿ ಅನುಭವಿಸುತ್ತಿದ್ದರು. ನೆರೆ, ಅನಾವೃಷ್ಟಿ, ಇನ್ನಿತರ ಸಂತ್ರಸ್ತರಿಗೂ ಅವರು ಬಹುಬೇಗ ಸ್ಪಂದಿಸಿ ನೆರವಾಗುತ್ತಾರೆ. ‘ಚೈಲ್ಡ್ ರೈಟ್ಸ್ ಅಂಡ್ ಯು’, ‘ಓಲ್ಡ್ ಏಜ್ ಹೋಮ್’, ‘ಕ್ಯಾನ್ಸರ್ ಸೊಸೈಟಿ’  ಇತ್ಯಾದಿ ಸಂಸ್ಥೆಗಳಿಗೆ ಅವರು ನಿರಂತರ ಹಣಕಾಸಿನ ನೆರವು ನೀಡುತ್ತಿದ್ದಾರೆ. ಇನ್ನೊಬ್ಬರಿಗೆ ನೆರವಾಗುವುದು ಸಾಧ‍್ಯವಾಯಿತಲ್ಲ ಎನ್ನುವ ಆತ್ಮತೃಪ್ತಿಯೇ ಅವರ ಖುಷಿಯನ್ನು ಹಾಗೂ ಆರೋಗ್ಯವನ್ನು ಕಾಯ್ದುಕೊಂಡಿತ್ತು” ಎಂದು ಅವರ ಬಗ್ಗೆ ಸಂಪ್ರಬಂಧ ರಚಿಸಿ ‘ಸುವರ್ಣ ಸಂಪದ’ ಕೃತಿ ರಚಿಸಿದ ಸೀತಾಲಕ್ಷ್ಮಿ ಕರ್ಕಿಕೋಡಿ ಬರೆಯುತ್ತಾರೆ.

ಮಾನವೀಯ ಸಹೃದಯ; ನನ್ನ ಅನುಭವ

ನನಗೆ ಸುವರ್ಣರ ಪರಿಚಯವಾದುದು ಮಂಗಳೂರಿನಲ್ಲಿ ಅವರು ‘ಉರುಳು’ ನಾಟಕ ಪ್ರದರ್ಶಿಸಿದ ದಿನಗಳಲ್ಲಿ (1996). ಆ ನಾಟಕ ವೀಕ್ಷಿಸಿ ಖುಷಿಪಟ್ಟ ನಾನು ಎರಡು ದಿನಪತ್ರಿಕೆಗಳಲ್ಲಿ ಅದರ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ದಾಖಲಿಸಿದೆ. ಅದನ್ನು ಸುವರ್ಣರು ಬಹಳ ಮೆಚ್ಚಿಕೊಂಡರು.

ಆನಂತರ ಒಮ್ಮೆ ಅವರು ಕಿನ್ನಿಗೋಳಿ ಬಳಿಯಲ್ಲಿ ನಾಗಮಂಡಲವನ್ನು ಚಿತ್ರೀಕರಿಸುವ ಕೆಲಸದಲ್ಲಿ ತೊಡಗಿದ್ದಾಗ ಅದಕ್ಕೆ ನನ್ನದೇ ಆದ ರೀತಿಯಲ್ಲಿ ಸಹಾಯ ಮಾಡಿದ್ದೆ. ಇಷ್ಟೇ ನಾನು ಅವರಿಗೆ ಮಾಡಿದ ಸಹಾಯ. ಆದರೆ ಈ ಸಣ್ಣ ಸಹಾಯವನ್ನು ಅವರು ಎಂದೂ ಮರೆಯದೆ ನನ್ನ ಬಗ್ಗೆ ಅಪಾರ ಪ್ರೀತಿ ತೋರ ತೊಡಗಿದರು. 1998 ರಲ್ಲಿ ನಾನು ಅವಘಡವೊಂದರಲ್ಲಿ ಬೆನ್ನುಹುರಿಗೆ ಜಖಂ ಮಾಡಿಕೊಂಡು ಮಣಿಪಾಲದ ಆಸ್ಪತ್ರೆಯಲ್ಲಿ ಮಲಗಿದ್ದಾಗ ಗೆಳೆಯ, ಸಿನಿಮಾ ನಿರ್ದೇಶಕ ನಟೇಶ್ ಉಳ್ಳಾಲ್ ಜತೆಯಲ್ಲಿ ಅಲ್ಲಿಗೆ ಬಂದು ಸಾಂತ್ವನ ಹೇಳಿದ್ದರು.

ಅವಘಡದ ಕಾರಣವಾಗಿ ನಾನು ಗಾಲಿಕುರ್ಚಿ ಅವಲಂಬಿಸುವುದು ಅನಿವಾರ್ಯವಾಯಿತು. ನಾವೊಂದು ಪುಟ್ಟ ಮನೆ ಕಟ್ಟ ಹೊರಟೆವು. ಕೈಯಲ್ಲಿ ಹಣವಿರಲಿಲ್ಲ. ಇದನ್ನು ತಿಳಿದು ಮನೆಗೇ ಬಂದ ಸುವರ್ಣರು ಐದು ಸಾವಿರ ರುಪಾಯಿ ಕೊಟ್ಟಿದ್ದರು. ಕಾಲು ಶತಮಾನ ಹಿಂದೆ ಅದು ಎಷ್ಟು ದೊಡ್ಡ ಮೊತ್ತ ಊಹಿಸಿ.

ಆನಂತರ ಮಂಗಳೂರು ನಗರದಲ್ಲಿ ಮನೆ ಮಾಡಿದ್ದಾಗ ಎರಡು ಬಾರಿ ಆಗಮಿಸಿ ಮಾತನಾಡಿಸಿ ಹೋಗಿದ್ದರು. ಅವರ ಬಹು ಜನಪ್ರಿಯ ‘ಕೋರ್ಟ್ ಮಾರ್ಶಲ್’ ಮತ್ತು ‘ಮಳೆ ನಿಂತ ಮೇಲೆ’ ನಾಟಕಗಳನ್ನು ನನಗೆ ನೋಡಲಾಗದ ಕಾರಣ ಅದರ ಡಿವಿಡಿಯನ್ನು ನನಗೆ ತಲಪಿಸಿದ್ದರು.

ಕ್ರಮೇಣ ಅವರೂ ಹೆಚ್ಚು ಹೆಚ್ಚು ದುರ್ಬಲರಾದರು. ಅವರನ್ನು ಭೇಟಿಯಾಗುವುದು ಅಸಾಧ್ಯವಾಯಿತು. ಇಂತಹ ಹೊತ್ತಿನಲ್ಲಿ ನಾವು ದೀರ್ಘಕಾಲ ಫೋನ್ ನಲ್ಲಿಯೇ ಹರಟುತ್ತಿದ್ದೆವು. ಅವರನ್ನು ಮಗಳ ನೆಲೆಯಲ್ಲಿ ನಿಂತು ನೋಡಿಕೊಳ್ಳುತ್ತಿದ್ದ ಪತ್ರಕರ್ತೆ, ಲೇಖಕಿ ಸೀತಾಲಕ್ಷ್ಮಿ ಕರ್ಕಿಕೋಡಿ ಸುವರ್ಣರನ್ನು ಪ್ರತಿ ಗುರುವಾಗ ಕದ್ರಿ ಪಾರ್ಕ್ ಗೆ ಕಾರಿನಲ್ಲಿ ಒಯ್ಯುತ್ತಿದ್ದರು. “ಒಂದು ದಿನ ಸುವರ್ಣರನ್ನು ನಿಮ್ಮ ಮನೆಗೆ ಕರೆ ತರುತ್ತೇನೆ, ನಿಮ್ಮನ್ನು ನೋಡಬೇಕಂತೆ” ಎಂದು ಹೇಳಿದ್ದರು ಸೀತಾಲಕ್ಷ್ಮಿ. ಆನಂತರ ಕೇವಲ ಎರಡು ವರ್ಷಗಳಲ್ಲಿ ಸೀತಾಲಕ್ಷ್ಮಿ ಗಂಭೀರ ಆರೋಗ್ಯ ಸಮಸ್ಯೆಗೆ ಈಡಾಗಿ ತೀರಿಕೊಂಡರು (ಬದುಕಿನ ಕೊನೆಗಾಲದಲ್ಲಿ ಊರುಗೋಲಿನಂತಿದ್ದ ಹೆಣ್ಣುಮಗಳ ಸಾವು ಸುವರ್ಣರ ಮನಸನ್ನು ತೀವ್ರವಾಗಿ ಘಾಸಿಗೊಳಿಸಿತು, ಮುಂದೆ ಇದು ಅನೇಕ ವಿಷಾದಕರ ತಿರುವುಗಳಿಗೆ ಕಾರಣವಾಯಿತು). ಅಲ್ಲಿಗೆ ಯಾರಾದರೂ ನನ್ನ ಮತ್ತು ಸುವರ್ಣರ ಭೇಟಿ ಮಾಡಿಸುವ ಕೊನೆಯ ಅವಕಾಶವೂ ಇಲ್ಲವಾಯಿತು. ಈಗ ಸುವರ್ಣರೂ ಭೌತಿಕವಾಗಿ ಇಲ್ಲವಾಗಿದ್ದಾರೆ.

ಜಾತಸ್ಯ ಮರಣಂ ಧ್ರುವಂ

ಹುಟ್ಟುತ್ತಲೇ ನಮ್ಮ ಮರಣವೂ ನಿರ್ಧಾರವಾಗಿರುತ್ತದೆ. ಹುಟ್ಟಿನ ಬಳಿಕ ನಮ್ಮ ಪಯಣ ಮರಣದ ಕಡೆಗೇ ಇರುತ್ತದೆ. ಈ ಹುಟ್ಟು ಸಾವುಗಳ ನಡುವೆ ನಾವು ಏನು ಮಾಡಿದ್ದೇವೆ ಎನ್ನುವುದಷ್ಟೇ ನಮ್ಮ ಬದುಕಿನ ಸಾರ್ಥಕತೆಯನ್ನು ನಿರ್ಧರಿಸುತ್ತದೆ. ದೀರ್ಘಕಾಲ ಬದುಕಿದ ಸುವರ್ಣರು ಮಾಡಿದ ಸಾರ್ಥಕ ಕೆಲಸವೂ ಅಗಾಧ. ಒಬ್ಬ ಮನುಷ್ಯ ಇದಕ್ಕಿಂತ ಹೆಚ್ಚಿನ ಏನನ್ನು ಸಾಧಿಸಬಹುದು? ಸುವರ್ಣರು ಭೌತಿಕವಾಗಿ ಈಗ ನಮ್ಮ ಮುಂದಿಲ್ಲ. ಆದರೆ ಅವರ ಕೆಲಸಗಳು, ಅವರ ಆದರ್ಶಗಳು ಸದಾ ನಮ್ಮೊಂದಿಗಿರುತ್ತವೆ, ನಡೆವ ಹಾದಿಗೆ ಬೆಳಕಿನ ಕಂದೀಲುಗಳಾಗಿರುತ್ತವೆ.

ಈಗಾಗಲೇ ಉಲ್ಲೇಖಿಸಿದ ಹಾಗೆ, ಸುವರ್ಣರಿಗೆ ತಮ್ಮದೇ ಆದ ಕುಟುಂಬವಿರಲಿಲ್ಲ. ಅವರಿಗೆ ಜಗತ್ತೇ ಒಂದು ಕುಟುಂಬವಾಗಿತ್ತು. ಅವರು ಜನರಿಗೆ ಪ್ರೀತಿಯನ್ನು ಕೊಟ್ಟರು. ಅದೇ ರೀತಿಯಲ್ಲಿ ಜಗತ್ತೂ ಅವರಿಗೆ ಪ್ರೀತಿ ಕೊಟ್ಟಿತು. ಅವರ ನಿಕಟವರ್ತಿಗಳಲ್ಲಿ ಕೆಲವರಾದರೂ ಅವರನ್ನು ಕೊನೆಯ ಕ್ಷಣದವರೆಗೂ ಕುಟುಂಬ ಸಂಬಂಧಿಗಿಂತಲೂ ಹೆಚ್ಚಿನ ಪ್ರೀತಿಯಿಂದ ನೋಡಿ ಕೊಂಡರು. ಸ್ವಂತ ಮಕ್ಕಳ ಸ್ಥಾನದಲ್ಲಿ ನಿಂತು ಇಳಿವಯಸಿನಲ್ಲಿ ಸುವರ್ಣರನ್ನು ನೋಡಿಕೊಂಡ ಸೀತಾಲಕ್ಷ್ಮಿ ಕರ್ಕಿಕೋಡಿ, ನಟೇಶ್ ಉಳ್ಳಾಲ್ ಮೊದಲಾದ ಮಾನವೀಯ ಹೃದಯಿಗಳ (ಇನ್ನೂ ಅನೇಕರಿರಬಹುದು, ಅವರ ಹೆಸರು ನನಗೆ ಗೊತ್ತಿಲ್ಲ. ಕ್ಷಮೆಯಿರಲಿ) ನಿಸ್ವಾರ್ಥ ಸೇವೆಯನ್ನು ಈ ಹೊತ್ತು ಇಲ್ಲಿ ಸ್ಮರಿಸಲೇಬೇಕು; ಕೊಂಡಾಡಲೇಬೇಕು.

ಶ್ರೀನಿವಾಸ ಕಾರ್ಕಳ

ರಂಗಭೂಮಿ ಕಲಾವಿದರು

More articles

Latest article