ಛಿದ್ರವಾದ ಚಿನ್ನದ ಕನಸು – ರಾಜಕೀಯ ಷಡ್ಯಂತ್ರಕ್ಕೆ ಬಲಿಯಾಯಿತೇ ವಿನೇಶ್ ಫೋಗಟ್ ಭವಿಷ್ಯ?

Most read


ಶತಾಯ ಗತಾಯ ವಿನೇಶ್ ಫೋಗಟ್ ಚಿನ್ನದ ಪದಕ ಗೆಲ್ಲಬಾರದು ಎಂಬುದೇ ದುಷ್ಟಕೂಟದ ಉದ್ದೇಶವಾಗಿತ್ತೇ?. ವಿಶ್ವದಾದ್ಯಂತ ಗಮನ ಸೆಳೆದಾಗಿತ್ತು. ತನ್ನ ತಾಕತ್ತು ಎಂತಹುದೆಂದು ತೋರಿಸಿಯಾಗಿತ್ತು.  ಛಲಗಾತಿ ಎಂಬುದು ಸಾಬೀತಾಗಿತ್ತು. ಬಹುಸಂಖ್ಯಾತ ಭಾರತೀಯರ ಹೃದಯವನ್ನು ಗೆದ್ದಾಗಿತ್ತು. ಆದರೆ ಯಾರದೋ ಹುನ್ನಾರಕ್ಕೆ ದೇಶಕ್ಕೆ ದಕ್ಕಬಹುದಾದ ಬಂಗಾರದ ಪದಕವೊಂದು ದಕ್ಕದೇ ಹೋಯ್ತೇ? ದ್ವೇಷ ರಾಜಕಾರಣಕ್ಕೆ, ದೇಶದ್ರೋಹಿ ಕುತಂತ್ರಕ್ಕೆ ದೇಶದ ಸ್ವಾಭಿಮಾನ ಬಲಿಯಾಯ್ತೇ?
-ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.

ಕಳೆದ ನಾಲ್ಕು ದಿನಗಳಿಂದ ದೇಶಾದ್ಯಂತ ಚರ್ಚೆಯಲ್ಲಿರೋದು ಒಂದೇ ಹೆಸರು. ಅದು  ಭಾರತದ ಅಂತಾರಾಷ್ಟ್ರೀಯ ಖ್ಯಾತಿಯ ಮಹಿಳಾ ಕುಸ್ತಿ ಪಟುವಾದ ವಿನೇಶ್ ಫೋಗಟ್ ಅವರದು. ಪ್ಯಾರಿಸ್ ನಲ್ಲಿ ನಡೆಯುತ್ತಿರುವ ಒಲಿಂಪಿಕ್ ನಲ್ಲಿ ಒಂದೇ ದಿನ ಮೂರು ಕುಸ್ತಿ ಕ್ರೀಡೆಗಳನ್ನಾಡಿ ವಿಶ್ವ ಕುಸ್ತಿ ಅಖಾಡದಲ್ಲಿ ಕಂಚು ಬೆಳ್ಳಿ ಪದಕ ಗೆದ್ದು ಚಿನ್ನದ ಪದಕ ಪಕ್ಕಾ ಎಂಬ ಭರವಸೆ ಹುಟ್ಟಿಸಿದ ವಿನೇಶ್ ಫೋಗಟ್ ಎಂಬ ಹೋರಾಟಗಾರ್ತಿ ಕುಸ್ತಿ ಪಟುವಿನ ಮೇಲೆ ಇಡೀ ದೇಶಕ್ಕೆ ದೇಶವೇ ಅಪಾರವಾದ ನಿರೀಕ್ಷೆಯನ್ನಿಟ್ಟು ಕೊಂಡಿತ್ತು. ಆಟ ಆಡಿದರೆ ತಾನೇ ಸೋಲು ಗೆಲುವಿನ ಮಾತು. ಆದರೆ ಸ್ಪರ್ಧಿಸಲು ಇರುವ ಅವಕಾಶವನ್ನೇ ಕಿತ್ತುಕೊಂಡಿದ್ದರಿಂದ, ಅದಕ್ಕಾಗಿ ಕಾಣದ ಕೈಗಳು ನೇಪಥ್ಯದಲ್ಲಿದ್ದೇ ಶಡ್ಯಂತ್ರ ಮಾಡಿದ್ದರಿಂದಾಗಿ ವಿನೇಶ್ ಪಂದ್ಯದಲ್ಲಿ ಆಡಲಿಲ್ಲ. ಚಿನ್ನದ ಪದಕ ಕೊರಳಿಗೇರಲಿಲ್ಲ. ಆದರೆ ಗೆದ್ದಿದ್ದು ಮಾತ್ರ ಬಹುಸಂಖ್ಯಾತ ಭಾರತೀಯರ ಹೃದಯವನ್ನು. ವಿಶ್ವಾದ್ಯಂತ ಕ್ರೀಡಾಭಿಮಾನಿಗಳ ಮನಸ್ಸನ್ನು. ಛಿದ್ರಗೊಳಿಸಿದ್ದು ದುಷ್ಟಕೂಟಗಳ ದುರಹಂಕಾರವನ್ನು.

ವಿನೇಶ್‌ ಫೋಗಟ್

ಆದರೆ ಈ ರೀತಿಯ ಸೋಲಲ್ಲದ ಸೋಲನ್ನು ಸಂಘಿ ಪರಿವಾರದ ಮತಾಂಧ ಭಕ್ತರು ಸಂಭ್ರಮಿಸ ತೊಡಗಿದರು. ದೇಶಕ್ಕೆ ಚಿನ್ನದ ಪದಕ ದಕ್ಕುವುದು ದೇಶದ ಸ್ವಾಭಿಮಾನ ಹಾಗೂ ಹೆಮ್ಮೆಯ ಸಂಗತಿಯಾಗಿತ್ತು. ಆದರೆ ಈ ನಕಲಿ ದೇಶಭಕ್ತರಿಗೆ ಮಾತ್ರ ವಿನೇಶ್ ಸೋಲುವುದು ಬೇಕಾಗಿತ್ತು. ಈ ದೇಶಭಕ್ತರು ಯಾಕೆ ಹೀಗೆ ದೇಶದ್ರೋಹಿಗಳಾದರು, ದೇಶಕ್ಕೆ ಬರಬಹುದಾಗಿದ್ದ ಬಂಗಾರದ ಪದಕ ಕೈ ತಪ್ಪಿದ್ದನ್ನು ವಿಜೃಂಭಿಸತೊಡಗಿದರು ಎನ್ನುವುದನ್ನು ತಿಳಿಯಬೇಕಾದರೆ ಒಂದಿಷ್ಟು ಹಿನ್ನೆಲೆ ಬಗ್ಗೆ ಅರಿತುಕೊಳ್ಳಲೇ ಬೇಕಿದೆ.

ಅವತ್ತು 2023 ಮೇ 28. ಅತ್ತ ದೆಹಲಿಯಲ್ಲಿ ಮೋದಿಯವರ ಪೌರೋಹಿತ್ಯದಲ್ಲಿ ಹೊಸ ಸಂಸತ್ ಭವನದ ಉದ್ಘಾಟನೆಯು ನಡೆಯುತ್ತಿದ್ದರೆ, ಇತ್ತ ದೆಹಲಿಯ ಜಂತರ್ ಮಂತರ್ ನಲ್ಲಿ ಹೋರಾಟ ನಿರತ ಮಹಿಳಾ ಕುಸ್ತಿ ಪಟುಗಳನ್ನು  ಅದೇ ಮೋದಿ ಸರಕಾರದ ಪೊಲೀಸರು ಬಲವಂತವಾಗಿ ಬಂಧಿಸಿ ಎಳೆದೆಳೆದು ವಾಹನಕ್ಕೆ ದಬ್ಬಿ ದೌರ್ಜನ್ಯವೆಸಗುತ್ತಿದ್ದರು. ಬ್ರಿಜ್ ಭೂಷಣ್ ಸಿಂಗ್ ಎನ್ನುವ ಬಿಜೆಪಿ ಸಂಸದ ಹಾಗೂ ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ  ಮಹಿಳಾ ಕುಸ್ತಿ ಪಟುಗಳ ಮೇಲೆ ಎಸಗಿದ ಲೈಂಗಿಕ ಕಿರುಕುಳದ ವಿರುದ್ಧ ತಿರುಗಿ ಬಿದ್ದವರಲ್ಲಿ ವಿನೇಶ್ ಫೋಗಟ್ ಮೊದಲಿಗರಾಗಿದ್ದರು.

ಸಂಸತ್ ಉದ್ಘಾಟನೆಯ ದಿನವೇ ಅಂತಾರಾಷ್ಟ್ರೀಯ ಕುಸ್ತಿ ಕ್ರೀಡೆಯಲ್ಲಿ ಚಿನ್ನದ ಪದಕ ಗಳಿಸಿ ದೇಶಕ್ಕೆ ಹೆಮ್ಮೆ ತಂದಿದ್ದ ವಿನೇಶ್ ಫೋಗಟ್, ಸಾಕ್ಷಿ ಮಲ್ಲಿಕ್ ಹಾಗೂ ಇತರರನ್ನು ರಸ್ತೆಯಲ್ಲಿ ಪೊಲೀಸರು ಅಮಾನವೀಯವಾಗಿ ಎಳೆದಾಡಿದರು. ಹೋರಾಟಗಾರರ ಟೆಂಟ್ ಗಳನ್ನು ಕಿತ್ತು ಅವರ ವಸ್ತುಗಳನ್ನು ಬೀದಿಗೆಸೆದರು. ಕೆಲವೇ ಗಂಟೆಗಳಲ್ಲಿ ಅನೇಕ ಕೇಸುಗಳನ್ನು ದಾಖಲಿಸಿ ಎಫ್ ಐ ಅರ್ ದಾಖಲಿಸಿ ಕಿರುಕುಳ ಕೊಟ್ಟರು.

2023 ರ ಜನವರಿಯಲ್ಲಿ ಭಾರತದ ಮಹಿಳಾ ಕುಸ್ತಿಪಟುಗಳಾದ ವಿನೇಶ್ ಫೋಗಟ್, ಸಾಕ್ಷಿ ಮಲಿಕ್, ಅಂಶು ಮಲಿಕ್, ಬಜರಂಗ್ ಪುನಿಯಾ ಸೇರಿದಂತೆ ಮೂವತ್ತು ಕುಸ್ತಿ ಪಟುಗಳು ಸ್ತ್ರೀಪೀಡಕ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಧರಣಿ ನಡೆಸಿ ಕುಸ್ತಿ ಫೆಡರೇಶನ್ ವಿಸರ್ಜಿಸಲು ಒತ್ತಾಯಿಸಿದರು. ಕೇಂದ್ರ ಸರಕಾರ ಯಾವುದೇ ಕ್ರಮ ತೆಗೆದುಕೊಳ್ಳದೇ ಹೋದಾಗ 2023 ಎಪ್ರಿಲ್ 23 ರಿಂದ ನವದೆಹಲಿಯ ಜಂತರ್ ಮಂತರ್ ನಲ್ಲಿ ಬ್ರಿಜ್ ಭೂಷಣ್ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ ಆರಂಭಿಸಿದ್ದರು. ಸುಪ್ರೀಂ ಕೋರ್ಟ್ ಮೆಟ್ಟಲೇರಿದರು. ಸುಪ್ರೀಂ ಕೊರ್ಟ್ ಸಿಂಗ್ ವಿರುದ್ಧ ಎಫ್ ಐ ಅರ್ ದಾಖಲಿಸಿ ವಿಚಾರಣೆ ನಡೆಸಲು ಎಪ್ರಿಲ್ 25 ರಂದು ಆದೇಶಿಸಿತು. ಏನೇ ಆದರೂ ಹೋರಾಟ ನಿರತ ಮಹಿಳೆಯರ ಪರವಾಗಿ ನಿಲ್ಲಬೇಕಿದ್ದ ಮೋದಿ ಸರಕಾರ ಆರೋಪಿ ಸಿಂಗ್ ಪರವಾಗಿತ್ತು. ಇದರಿಂದ ಹೋರಾಟ ನಿರತ ಬೇಸತ್ತ ಕ್ರೀಡಾಪಟುಗಳು ತಮ್ಮ ಪದಕಗಳನ್ನು ಗಂಗಾ ನದಿಗೆ ಎಸೆಯುವ ನಿರ್ಧಾರ ಮಾಡಿದ್ದರು. ಕೊನೆಗೆ ಸಂಸತ್ ಭವನದ ರಸ್ತೆ ಬದಿಯಲ್ಲಿ ತಮ್ಮ ಪದಕಗಳನ್ನು ತ್ಯಜಿಸಿ ಪೊಲೀಸರ ದೌರ್ಜನ್ಯದ ವಿರುದ್ಧ ಪ್ರತಿಭಟನೆ ದಾಖಲಿಸಿದರು.

ಈ ಘಟನೆ ದೇಶಾದ್ಯಂತ ಮೋದಿ ಸರಕಾರದ ವಿರುದ್ಧ ಆಕ್ರೋಶವನ್ನು ಸೃಷ್ಟಿಸಿತ್ತು. ಜಾಗತಿಕ ಕುಸ್ತಿ ಸಂಸ್ಥೆಯು ಭಾರತೀಯ ಕುಸ್ತಿ ಫೆಡರೇಶನ್ ಮೇಲೆ ನಿಷೇಧ ವಿಧಿಸಿತು. ಜನಾಕ್ರೋಶಕ್ಕೆ ಮಣಿದು ಬ್ರಿಜ್ ಭೂಷಣ್ ಕುಸ್ತಿ ಫೆಡರೇಶನ್ ಗೆ ರಾಜೀನಾಮೆ ಕೊಡಬೇಕಾಯ್ತು. ಮತ್ತೆ ಫೆಡರೇಶನ್ನಿಗೆ ನಡೆದ ಚುನಾವಣೆಯಲ್ಲಿ ತನ್ನ ಬಲಗೈ ಬಂಟನೇ ಅಧ್ಯಕ್ಷನಾಗುವಂತೆ ಬ್ರಿಜ್ ಭೂಷಣ್ ನೋಡಿಕೊಂಡಿದ್ದರಿಂದ ಹತಾಶೆಗೊಂಡ ಸಾಕ್ಷಿ ಮಲಿಕ್ ಕಣ್ಣೀರು ಹಾಕುತ್ತಲೇ ಕುಸ್ತಿ ಕ್ರೀಡೆಗೆ ವಿದಾಯ ಘೋಷಿಸಿ ತಮ್ಮ ಬೂಟುಗಳನ್ನು ಬಿಚ್ಚಿ ಮಾಧ್ಯಮಗಳ ಕ್ಯಾಮರಾ ಮುಂದಿಟ್ಟರು.

ಇಷ್ಟೆಲ್ಲಾ ಆದಮೇಲೆ ಭಕ್ತಾಂಧರು ಸುಮ್ಮನಿರಲು ಸಾಧ್ಯವೇ?. ಆಗಿನಂತೆ ಈಗಲೂ ಈ ಕುಸ್ತಿ ಪಟುಗಳ ಮೇಲೆ ಕೆಂಡದಂತಹ ದ್ವೇಷ ಕಾರತೊಡಗಿದರು. ಸಾಮಾಜಿಕ ಜಾಲತಾಣಗಳಲ್ಲಿ ವಿನೇಶ್ ಫೋಗಟ್ ಮೇಲೆ ಇಲ್ಲಸಲ್ಲದ ಆರೋಪ ಮಾಡತೊಡಗಿದರು. ಈಗಲೂ ಸಹ ದೇಶವಾಸಿಗಳು ವಿನೇಶ್ ಹಾಕಿದ ಕಣ್ಣೀರಿಗೆ ಕಣ್ಣೀರಾಗುವ ಸಮಯದಲ್ಲೂ ದೇಶಭಕ್ತರ ದ್ವೇಷ ಮುಂದುವರೆಯುತ್ತಲೇ ಇದೆ.

ಜಂತರ್‌ ಮಂತರ್‌ ನಲ್ಲಿ ಪೊಲೀಸರು ಬಂಧಿಸುತ್ತಿರುವುದು

ಒಲಿಂಪಿಕ್ಸ್ ನಲ್ಲು ವಿನೇಶ್ ವಿರುದ್ಧ ಶಡ್ಯಂತ್ರ ಮಾಡಿ ಆಕೆಯನ್ನು ಅನರ್ಹ ಗೊಳಿಸುವಂತೆ ಮಾಡಲಾಯಿತಾ ಎನ್ನುವ ಸಂದೇಹ ಭಾರತೀಯರನ್ನು ಕಾಡುತ್ತಿದೆ. ಈ ಅನುಮಾನಕ್ಕೆ ಪೂರಕವಾಗಿ ನಾಲ್ಕು ತಿಂಗಳ ಹಿಂದೆ ವಿನೇಶ್ ರವರು ಸಾರ್ವಜನಿಕವಾಗಿ ವ್ಯಕ್ತಪಡಿಸಿದ ಆತಂಕವೂ ಸಮರ್ಥನೆಯಾಗಿದೆ. “ನನ್ನನ್ನು ಹೇಗಾದರೂ ಮಾಡಿ ಮುಗಿಸಲು ಶಡ್ಯಂತ್ರ ನಡೆಸಲಾಗುತ್ತಿದೆ. ಕುಸ್ತಿ ಫೆಡರೇಶನ್ ಕೋಚ್ ಗಳು ಬ್ರಿಜ್ ಭೂಷಣ್ ನಿಂದ ನೇಮಕವಾದವರಿದ್ದಾರೆ. ಹಾಗಾಗಿ ನನ್ನನ್ನು ಒಲಿಂಪಿಕ್ಸ್ ಗೆ ಹೋಗದಂತೆ ತಡೆಯಲು ಅವರು ಯಾವ ವಾಮಮಾರ್ಗವನ್ನು ಬೇಕಾದರೂ ತುಳಿಯಬಲ್ಲರು. ನನಗೆ ಕೊಡುವ ಆಹಾರದಲ್ಲು ಏನನ್ನಾದರೂ ಮಿಕ್ಸ್ ಮಾಡಿ ಕೊಡಬಹುದು” ಎಂದು ಫೋಗಟ್ ತನ್ನ ಆತಂಕವನ್ನು ವ್ಯಕ್ತಪಡಿಸಿದ್ದರು. ಅದಕ್ಕೆ ತಕ್ಕಂತೆ ಕುಸ್ತಿ ಫೆಡರೇಶನ್ನಿನಿಂದ ಕುತಂತ್ರವನ್ನೂ ಮಾಡಲಾಗಿತ್ತು. 53 ಕೆಜಿ ತೂಕದ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದ ವಿನೇಶ್ ರನ್ನು ಅರ್ಹತಾ ಸುತ್ತಿನಲ್ಲಿ ಸೋಲಿಸಲಾಯ್ತು. ಅದಕ್ಕೂ ಹೆದರದೇ 50 ಕೆಜಿ ವಿಭಾಗದಲ್ಲಿ ಸ್ಪರ್ಧಿಸುವ ಅನಿವಾರ್ಯತೆಗೆ ವಿನೇಶ್ ಸಿದ್ಧರಾದರು. ಆದರೆ ಅದಕ್ಕಾಗಿ ಮೂರ್ನಾಲ್ಕು ಕೆಜಿ ತೂಕ ಕಡಿಮೆ ಮಾಡಲೇಬೇಕಿತ್ತು. ಹೇಗೂ ಇಲ್ಲಿವರೆಗೂ ಒಲಂಪಿಕ್ಸ್ ನ ಕುಸ್ತಿ ಪಂದ್ಯದಲ್ಲಿ ಭಾರತದ ಯಾವುದೇ ಮಹಿಳಾ ಸ್ಪರ್ಧಿ ಯಾವ ಪದಕವನ್ನೂ ಗೆದ್ದಿಲ್ಲವಾದ್ದರಿಂದ ವಿನೇಶ್ ಸಹ ಸೋಲುವುದು ಗ್ಯಾರಂಟಿ ಎನ್ನುವುದು ದುಷ್ಟಕೂಟದ ನಿರೀಕ್ಷೆಯಾಗಿತ್ತು.

ಪ್ಯಾರಿಸ್‌ ಒಲಿಂಪಿಕ್ಸ್‌ ಮಹಿಳಾ ಕುಸ್ತಿಪಟುಗಳ ಆಯ್ಕೆಯ ಸಂದರ್ಭದಲ್ಲಿ ವಿನೇಶ್ ಫೋಗಟ್‌ ಸ್ಪರ್ಧಿಸುವ 53 ಕೆಜಿ ತೂಕದ ವಿಭಾಗದಲ್ಲಿ ಆಕೆಗೆ ಸ್ಥಾನ ಇರಲಿಲ್ಲ. ಆದುದರಿಂದ ಅವರು ಅನಿವಾರ್ಯವಾಗಿ 50 ಕೆಜಿ ತೂಕದ ವಿಭಾಗವನ್ನು ಆಯ್ಕೆ ಮಾಡಿಕೊಳ್ಳಲಾಯಿತು – ಅಶ್ವಿನಿ ನಾಚಪ್ಪ ಅಂತಾರಾಷ್ಟ್ರೀಯ ಮಟ್ಟದ ಓಟಗಾರ್ತಿ

ಇದಕ್ಕೆ ವ್ಯತಿರಿಕ್ತವಾಗಿ ಅದ್ಭುತವಾಗಿ ಕುಸ್ತಿ ಆಡಿದ ವಿನೇಶ್ ಅವರ ನಿರೀಕ್ಷೆಗಳನ್ನೆಲ್ಲಾ ಹುಸಿ ಮಾಡಿದರು.  ಸೋಲನ್ನೇ ಕಾಣದ ವಿಶ್ವ ಚಾಂಪಿಯನ್ ಜಪಾನಿನ ಯೂಯಿ ಸುಸಾಕಿಯನ್ನು ಮೊದಲ ಸುತ್ತಿನಲ್ಲೇ ಸೋಲಿಸಿದಳು. ಲ್ಯಾವಿಚ್ ಳನ್ನು ಮಣಿಸಿದಳು. ಕೊನೆಗೆ ಗುಜ್ಮಾನ್ ಲೋಪೇಜ್ ಳನ್ನೂ ಸೋಲಿಸಿ ಫೈನಲ್ ಗೆ ಎಂಟ್ರಿ ಕೊಟ್ಟು ಶತ್ರುಪಡೆಗಳ ಎದೆಯಲ್ಲು ನಡುಕ ಹುಟ್ಟಿಸಿದಳು. ಫೈನಲ್ ಪಂದ್ಯದಲ್ಲೂ ಗೆದ್ದು ಭಾರತಕ್ಕೆ ಚೊಚ್ಚಲ ಚಿನ್ನದ ಪದಕ ತಂದು ಕೊಡುವುದು ನಿಕ್ಕಿ ಆಗಿತ್ತು. ಆದರೆ ಅಷ್ಟರಲ್ಲಿ ತಾಂತ್ರಿಕ ಸಮಸ್ಯೆಯೊಂದು ಅಡ್ಡವಾಯ್ತು.

ಫೈನಲ್ ಪಂದ್ಯಾವಳಿಗೂ ಮುನ್ನ ಆಕೆಯ ತೂಕ ಚೆಕ್ ಮಾಡಿದಾಗ 50 ಕೆಜಿಗಿಂತ ಕೇವಲ ನೂರೈವತ್ತು ಗ್ರಾಂ ಜಾಸ್ತಿ ಇತ್ತು. ಒಂದು ಗಂಟೆ ಸಮಯ ಕೊಡಿ ಅದನ್ನೂ ಕರಗಿಸುವೆ ಎಂದು ವಿನೇಶ್ ಬೇಡಿಕೊಂಡರೂ ಕೇವಲ 15 ನಿಮಿಷ ಸಮಯ ಕೊಡಲಾಯ್ತು. ಆಗಲೂ ವರ್ಕೌಟ್ ಮಾಡಲು ಪ್ರಯತ್ನ ಪಟ್ಟರೂ ಇನ್ನೂ ನೂರು ಗ್ರಾಂ ತೂಕ ಹೆಚ್ಚಾಗಿತ್ತು. ಇದರಿಂದಾಗಿ ವಿನೇಶ್ ರವರನ್ನು ಒಲಿಂಪಿಕ್ಸ್ ಪಂದ್ಯಾವಳಿಯಿಂದಲೇ ಅನರ್ಹ ಗೊಳಿಸಲಾಯ್ತು. ವಿಷಯ ತಿಳಿದ ವಿನೇಶ್ ಹತಾಶೆಯಿಂದ ಕುಸಿದು ಬಿದ್ದರು. ಡಿಹೈಡ್ರೇಶನ್ ಹೆಚ್ಚಾಗಿ ಆಸ್ಪತ್ರೆಗೆ ಸೇರಿಸಲಾಯ್ತು. ಎಚ್ಚರವಾದಾಗ ಅತೀವ ನೋವಿನಿಂದ ಕುಸ್ತಿಗೆ ವಿದಾಯ ಘೋಷಿಸಿದರು.

ಇದು ವಿನೇಶ್‌ ಅವರ ತಪ್ಪಲ್ಲ. ಕೋಚ್‌ಗಳು, ನೆರವು ಸಿಬ್ಬಂದಿ, ಪೌಷ್ಟಿಕಾಂಶ ತಜ್ಞರು ಈ ಪ್ರಮಾದದ ಪೂರ್ಣ ಹೊಣೆಯನ್ನು ಹೊತ್ತುಕೊಳ್ಳಬೇಕು. ಇವರ ಮೇಲೆ ಕ್ರಮವನ್ನು ಕೈಗೊಳ್ಳಬೇಕು-ಸಂಜಯ್‌ ಕುಮಾರ್‌ ಸಿಂಗ್‌, ಭಾರತ ಕುಸ್ತಿ ಫೆಡರೇಶನ್‌ನ ಅಧ್ಯಕ್ಷ

ಸೆಮಿ ಫೈನಲ್ ಸಮಯದಲ್ಲಿ ಹೆಚ್ಚಾಗಿದ್ದ 2 ಕೆಜಿ ತೂಕವನ್ನು ಕರಗಿಸಲು ಏನೆಲ್ಲಾ ಕಸರತ್ತು ಮಾಡಬೇಕಿತ್ತೋ ಮಾಡಿಯಾಗಿತ್ತು. ರಾತ್ರಿಯೆಲ್ಲಾ ನಿದ್ದೆ ಬಿಟ್ಟು ದೇಹದಂಡನೆ ಮಾಡಲಾಗಿತ್ತು. ಕೊನೆಗೆ ನೂರೈವತ್ತು ಗ್ರಾಮ್ ತೂಕ ಕಳೆಯಲು ಕೂದಲನ್ನೂ ಕತ್ತರಿಸಲಾಯ್ತು. ದೇಹದೊಳಗಿನ ರಕ್ತವನ್ನೇ ಬಸಿದು ಹಾಕಲಾಯ್ತು. ಇಷ್ಟೆಲ್ಲಾ ಮಾಡಿದರೂ ತೂಕ ಇಳಿಸಲಾಗಲಿಲ್ಲ. ಇಳಿಸಲು ಇನ್ನೊಂದು ಗಂಟೆಯೂ ಸಿಗಲಿಲ್ಲ. ಅನರ್ಹತೆ ತಡೆಯಲಾಗಲಿಲ್ಲ. ಎಲ್ಲಾ ಪ್ರಯತ್ನಗಳು ಫಲಿಸದೇ ಹೋದ ಆನಂತರ ಇನ್ಮೇಲೆ ಕುಸ್ತಿ ಪಂದ್ಯದಲ್ಲಿ ಸ್ಪರ್ಧಿಸಲೇ ಬಾರದೆಂಬ ನಿರ್ಧಾರಕ್ಕೆ ವಿನೇಶ್ ಬಂದಾಗಿತ್ತು. ವಿದಾಯ ಘೋಷಿಸಲಾಯ್ತು.

ಈ ರೀತಿಯ ಅನರ್ಹತೆಯ ಹಿಂದೆ ಸಂಘಿಗಳ ಕಾಣದ ಕೈವಾಡ ಇದೆಯಾ ಎಂಬ ಅನುಮಾನ ಕಾಡಿದ್ದಂತೂ ನಿಜ. ಯಾಕೆಂದರೆ ವಿನೇಶ್ ರ ಜೊತೆ ನಿರ್ವಹಣೆಗಾಗಿ ನೇಮಕವಾದವರೆಲ್ಲಾ ಕ್ರೀಡಾ ಫೆಡರೇಶನ್ನಿನ ಬ್ರಿಜ್ ಭೂಷಣ್ ಕಡೆಯವರೇ. ಹೀಗಾಗಿ ವಿನೇಶಾಳ ತೂಕ ಹೆಚ್ಚಾಗುವಂತೆ, ಹೆಚ್ಚಾದ ತೂಕ ಶೀಘ್ರವಾಗಿ ಇಳಿಯದಂತೆ ಆಹಾರ ಕ್ರಮದಲ್ಲಿ ವ್ಯತ್ಯಾಸ ಮಾಡಲಾಯ್ತಾ ಎನ್ನುವ ಸಂದೇಹ ಮುನ್ನೆಲೆಗೆ ಬಂದಿದೆ. ಶತಾಯ ಗತಾಯ ವಿನೇಶ್ ಫೋಗಟ್ ಚಿನ್ನದ ಪದಕ ಗೆಲ್ಲಬಾರದು ಎಂಬುದೇ ದುಷ್ಟಕೂಟದ ಉದ್ದೇಶವಾಗಿತ್ತೇ?. ವಿಶ್ವದಾದ್ಯಂತ ಗಮನ ಸೆಳೆದಾಗಿತ್ತು. ತನ್ನ ತಾಕತ್ತು ಎಂತಹುದೆಂದು ತೋರಿಸಿಯಾಗಿತ್ತು.  ಛಲಗಾತಿ ಎಂಬುದು ಸಾಬೀತಾಗಿತ್ತು. ಆದರೆ ಯಾರದೋ ಹುನ್ನಾರಕ್ಕೆ ದೇಶಕ್ಕೆ ದಕ್ಕಬಹುದಾದ ಬಂಗಾರದ ಪದಕವೊಂದು ದಕ್ಕದೇ ಹೋಯ್ತೇ? ದ್ವೇಷ ರಾಜಕಾರಣಕ್ಕೆ, ದೇಶದ್ರೋಹಿ ಕುತಂತ್ರಕ್ಕೆ ದೇಶದ ಸ್ವಾಭಿಮಾನ ಬಲಿಯಾಯ್ತೇ?.

ವಿಶ್ವ ಒಲಿಂಪಿಕ್ಸ್ ಕ್ರೀಡೆಯಲ್ಲಿ ಭಾರತದ ಸಾಧನೆ ಅತ್ಯಂತ ಕಳಪೆಯಾಗಿದೆ. ಇದುವರೆಗೂ ನಮ್ಮ ದೇಶ ಒಲಂಪಿಕ್ ನಲ್ಲಿ ಗಳಿಸಿದ್ದು 10 ಚಿನ್ನ, 9 ಬೆಳ್ಳಿ ಹಾಗೂ 16 ಕಂಚು. ಅಂದರೆ ಎಲ್ಲಾ ಸೇರಿ ಒಟ್ಟು 35 ಪದಕಗಳಷ್ಟೇ.

ಇಂತಹ ಹುನ್ನಾರಗಳು, ರಾಜಕೀಯ ಹಸ್ತಕ್ಷೇಪ, ಸ್ವಜನಪಕ್ಷಪಾತ, ಭ್ರಷ್ಟಾಚಾರ, ಲೈಂಗಿಕ ಕಿರುಕುಳಗಳು ಕ್ರೀಡಾ ಇಲಾಖೆ ಹಾಗೂ ಫೆಡರೇಶನ್ ಗಳಲ್ಲಿ ಹೆಚ್ಚಿರುವುದರಿಂದಲೇ ಒಲಿಂಪಿಕ್ಸ್ ನಲ್ಲಿ ಭಾರತ ಅತ್ಯಂತ ಕಳಪೆ ಪ್ರದರ್ಶನ ನೀಡುತ್ತಾ ಬಂದಿದೆ. ಅಮೇರಿಕ ಚೀನಾ ಬ್ರಿಟನ್ ಅಷ್ಟೇ ಯಾಕೆ ಪುಟ್ಟ ರಾಷ್ಟ್ರ ಜಪಾನ್ ಸಹ ಒಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ಹೆಚ್ಚೆಚ್ಚು ಪದಕಗಳನ್ನು ಗೆಲ್ಲುತ್ತಿದ್ದರೆ ಭಾರತ ಮಾತ್ರ ಮೂರ್ನಾಲ್ಕು ಕಂಚು ಇಲ್ಲವೇ ಒಂದೆರಡು ಬೆಳ್ಳಿ ಪದಕಗಳಿಗೆ ತೃಪ್ತಿ ಪಡಬೇಕಾಗಿದೆ. ಕಳೆದ ಹತ್ತು ವರ್ಷಗಳ ವಿಶ್ವಗುರು ನಾಮಾಂಕಿತ ಮೋದಿ ಆಡಳಿತದಲ್ಲಿ ಭಾರತದ ಕ್ರೀಡಾಲೋಕ ಇನ್ನೂ ಅಧೋಗತಿಗೆ ಇಳಿದಿದೆ. ವಿಶ್ವದ ಮುಂದೆ ಮುಜುಗರಕ್ಕೀಡಾಗಬೇಕಿದೆ. ವಿನೇಶ್ ಫೋಗಟ್ ರಂತಹ ಛಲಗಾತಿ ಹೋರಾಟಗಾರ್ತಿಯೇ ಈ ರೀತಿ ನಿರಂತರ ಕಿರುಕುಳ ಅನುಭವಿಸಬೇಕಾದರೆ ಉಳಿದ ಕ್ರೀಡಾಳುಗಳ ಗತಿ ಏನು?

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು, ಪತ್ರಕರ್ತರು.

ಇದನ್ನೂ ಓದಿ- ಕ್ರೀಡೆ ಮತ್ತು ಪಿತೂರಿ

More articles

Latest article