ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರು ಸದಾಶಿವನಗರದ ಸ್ವಗೃಹದಲ್ಲಿ ಮಂಗಳವಾರ ಬೆಳಗಿನ ಜಾವ 2:30ರ ಸುಮಾರಿಗೆ ವಿಧಿವಶರಾಗಿದ್ದಾರೆ. ಇವರ ನಿಧನಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ ಎ ನಾರಾಯಣ ಗೌಡರು ಸಂತಾಪ ವ್ಯಕ್ತಪಡಿಸಿದರು.
“ನಾಡಿನ ಹಿರಿಯ ಚೇತನ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅಗಲಿದ್ದಾರೆ. ಬೆಂಗಳೂರಿಗೆ ಸಿಲಿಕಾನ್ ಸಿಟಿ, ಐಟಿ ಸಿಟಿ, ಐಟಿ ರಾಜಧಾನಿ ಇತ್ಯಾದಿ ಹೆಸರುಗಳು ಬರಲು ಮುಖ್ಯ ಕಾರಣ ಎಸ್.ಎಂ.ಕೃಷ್ಣ ಅವರು. ಅವರು ತಮ್ಮ ದೂರದೃಷ್ಟಿತ್ವ, ಅಭಿವೃದ್ಧಿಪರ ಚಿಂತನೆಯಿಂದ ಬೆಂಗಳೂರಿನ ಚಿತ್ರವನ್ನೇ ಬದಲಾಯಿಸಿದರು” ಎಂದು ತಮ್ಮ ʼಎಕ್ಸ್ʼನಲ್ಲಿ ಪೋಸ್ಟ್ ಮಾಡಿದ್ದಾರೆ.
“ಸಜ್ಜನರು, ಸಹೃದಯಿಯೂ ಆಗಿದ್ದ ಎಸ್.ಎಂ. ಕೃಷ್ಣ ಅಜಾತಶತ್ರುವೆಂದು ಕರೆಯಿಸಿಕೊಂಡಿದ್ದರು. ಮುಖ್ಯಮಂತ್ರಿ, ರಾಜ್ಯಪಾಲ, ಕೇಂದ್ರ ಸಚಿವ ಹೀಗೆ ತಮಗೆ ಒದಗಿಬಂದ ಎಲ್ಲ ಬಗೆಯ ಅಧಿಕಾರವನ್ನೂ ಜನರ ಒಳಿತಿಗೆ ಬಳಸಿಕೊಂಡರು. ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅತ್ಯಂತ ಕಠಿಣ ಸಮಸ್ಯೆಗಳು ತಲೆದೋರಿದ್ದವು. ವರನಟ ಡಾ.ರಾಜಕುಮಾರ್ ಅಪಹರಣ, ಕಾವೇರಿ ವಿವಾದ.. ಹೀಗೆ ಒಂದಿಲ್ಲೊಂದು ಸಮಸ್ಯೆಗಳನ್ನು ಅವರು ನಿಭಾಯಿಸಬೇಕಾಯಿತು. ಇಷ್ಟೆಲ್ಲದರ ನಡುವೆಯೂ ಅವರು ಆರ್ಥಿಕ ಕ್ಷೇತ್ರದಲ್ಲಿ ಕರ್ನಾಟಕವನ್ನು ಇಡೀ ದೇಶದಲ್ಲಿ ಮುಂಚೂಣಿಗೆ ತಂದು ನಿಲ್ಲಿಸಿದರು. ಇದು ಅವರ ಆಳವಾದ ರಾಜಕೀಯ ಪ್ರಜ್ಞೆ, ಅಧ್ಯಯನಶೀಲತೆ, ಕ್ರಿಯಾಶೀಲತೆ, ಅಪಾರವಾದ ಜ್ಞಾನವನ್ನು ತೋರಿಸುತ್ತದೆ” ಎಂದು ಹೇಳಿದರು.
“ಹಲವು ಬಾರಿ ಎಸ್.ಎಂ.ಕೃಷ್ಣ ಅವರನ್ನು ಭೇಟಿ ಮಾಡಿದಾಗ ನಾನು ಗಮನಿಸಿದ್ದು ಅವರ ಸೂಕ್ಷ್ಮಗ್ರಾಹಿ ಗುಣ, ಸಂದರ್ಭವನ್ನು ಅರಿತು ನಿರ್ಧಾರ ತೆಗೆದುಕೊಳ್ಳುವ ಅವರ ರಾಜಕೀಯ ಚತುರತೆ. ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಕನ್ನಡ ಚಳವಳಿ ಏರುಗತಿಯನ್ನು ಪಡೆದುಕೊಂಡಿತ್ತು. ಹೀಗಾಗಿ ನಾವು ಹಲವು ಬಾರಿ ಬಂಧನಕ್ಕೊಳಗಾಗಿ ಜೈಲು ಸೇರಬೇಕಾಯಿತು. ಒಮ್ಮೆ ಬಳ್ಳಾರಿ ಜೈಲುವಾಸವನ್ನೂ ಅನುಭವಿಸಿದೆವು. ಎಲ್ಲ ಜೈಲು ನೋಡಿದ್ವಿ, ಅಂಡಮಾನ್ ಜೈಲೊಂದನ್ನು ನೋಡುವ ಆಸೆ, ಅಲ್ಲಿಗೂ ಕಳಿಸಿಬಿಡಿ ಎಂದು ಎಸ್.ಎಂ.ಕೃಷ್ಣ ಅವರಿಗೆ ಒಮ್ಮೆ ತಮಾಶೆಯಾಗಿ ಹೇಳಿದ್ದೆ. ಆದರೆ ಅವರು ಆಡಳಿತಾತ್ಮಕವಾಗಿ ಏನೇ ತೀರ್ಮಾನ ತೆಗೆದುಕೊಂಡರೂ ಅದರಲ್ಲಿ ವೈಯಕ್ತಿಕ ಹಗೆ, ಸೇಡು ಇತ್ಯಾದಿಯನ್ನು ಎಂದಿಗೂ ಮಿಶ್ರಣ ಮಾಡುತ್ತಿರಲಿಲ್ಲ. ಹೀಗಾಗಿ ಅವರ ಮೇಲಿನ ಅಭಿಮಾನಕ್ಕೆ ಎಂದೂ ಧಕ್ಕೆಯಾಗಿರಲಿಲ್ಲ” ಎಂದು ನೆನೆದರು.
“ಇವತ್ತಿನ ದ್ವೇಷ, ಸೇಡಿನ ರಾಜಕಾರಣಕ್ಕೆ ವ್ಯತಿರಿಕ್ತವಾಗಿ ಸ್ನೇಹ, ಪ್ರೀತಿಯ ರಾಜಕಾರಣವನ್ನು ನಡೆಸಿದವರು ಎಸ್.ಎಂ.ಕೃಷ್ಣ ಅವರು. ಈ ಗುಣಗಳಿಗಾಗಿಯೇ ಅವರು ಕರ್ನಾಟಕದ ರಾಜಕಾರಣದ ಇತಿಹಾಸದಲ್ಲಿ ಸದಾ ಸ್ಮರಣೀಯರಾಗಿರುತ್ತಾರೆ. ಎಸ್.ಎಂ. ಕೃಷ್ಣ ಅವರ ಅಗಲಿಕೆಯ ನೋವನ್ನು ತಡೆದುಕೊಳ್ಳುವ ಶಕ್ತಿ ಅವರ ಕುಟುಂಬ ವರ್ಗಕ್ಕೆ, ಅಭಿಮಾನಿಗಳಿಗೆ ದೊರೆಯಲಿ. ಹೋಗಿ ಬನ್ನಿ ಸರ್, ನಿಮ್ಮ ಕೊಡುಗೆಯನ್ನು ಕರ್ನಾಟಕ ಎಂದಿಗೂ ಮರೆಯದು. ಭಾವಪೂರ್ಣ ಶ್ರದ್ಧಾಂಜಲಿಗಳು” ಎಂದು ಭಾವುಕರಾದರು.