Sunday, September 8, 2024

ನಿಂಗಪ್ಪಜ್ಜನೂ.. ನಿಂಗಮ್ಮಜ್ಜಿಯೂ..

Most read

ದೊಡ್ನಿಂಗಪ್ಪಜ್ಜ ಹಳ್ಳಿಯ ಆ ವಯಸ್ಸಾದ ಮರದ ಕೆಳಗೆ ಕೂತು ಒಂದು ಚಿಂದಿ ಗಿಟಾರಿನ ತರದ ವಾದ್ಯವನ್ನು ನುಡಿಸುತ್ತಾ ಹರಿದ ಬಟ್ಟೆಗಳ ಗೋಪುರದ ಮೇಲೆ ಕೂತು ಇಬ್ಬರಿಗೆ ಕೇಳಿಸುವಂತೆ ಹಾಡುತ್ತಾ ಇರುತ್ತಿದ್ದ. ಅಜ್ಜನಿಗೆ ದೊಡ್ಡನಿಂಗಪ್ಪಜ್ಜ ಎಂಬ ಹೆಸರಿಟ್ಟಿದ್ದು ನಾನೆ. ನಿಂಗಪ್ಪನ ಜೊತೆ ಅವರಿಗಿಂತ ವಯಸ್ಸಾದ ಹೆಂಗಸು. ಅವರಿಗೂ ನಾನೇ ಹೆಸರಿಟ್ಟೆ. ನಿಂಗಮ್ಮಜ್ಜಿ. ಆಯಮ್ಮ ಯಾವಾಗಲೂ ಬಟ್ಟೆ ಜೊತೆ ಬಟ್ಟೆ ಸೇರಿಸಿ ಹೊಲಿತಾನೇ ಇರುತ್ತೆ. ಆ ಮರದ ಕೆಳಗೆಯೇ ಆ ಮರದ ಕಟ್ಟೆಯ ಮೇಲೆ ಅವರ ಬದುಕು. ಅಜ್ಜಿಗೆ ಅಜ್ಜನಿಗಿಂತಾ ವಯಸ್ಸಾಗಿತ್ತು. ಮಳೆ ಚಳಿ ಗಾಳಿ ಬಿಸಿಲು ಎಲ್ಲಾದಕ್ಕೂ ಆ ಮರವೇ ಅವರಿಗೆ  ರಕ್ಷಣೆ. ಮರದ ಕಟ್ಟೆಯನ್ನು ಊರಿನವರೆಲ್ಲರೂ ಬಂದು ತಮ್ಮದಾಗಿಸಿಕೊಂಡು ತಮ್ಮ ತಮ್ಮ ಸುದ್ದಿಗಳನ್ನು, ಮಾಡಬೇಕಾದ ಮಹಾನ್ ಕಾರ್ಯಗಳನ್ನು ಒಬ್ಬರಿಗೊಬ್ಬರು ಪೈಪೋಟಿಯಲ್ಲಿ ಹಂಚುತ್ತ ಇರುವಾಗ ಸರಿಯಾಗಿ  ಆಗ ಅಜ್ಜ ತನ್ನ ಕಛೇರಿಯನ್ನು ಶುರು ಮಾಡ್ತದೆ.

ಹಾಗಾದ್ರೆ ಈ ‘ನಾನು’ ಯಾರು? ನಾನೊಬ್ಬ ತಿರಬೋಕಿ. ಅಲೆಮಾರಿ. ಹೆಸರು ಏನುಬೇಕಾದ್ರೂ ಕರೀರಿ. ನಾನು ಎಲ್ಲಿಗೂ ಸಲ್ಲದ ಯಾರಿಗೂ ಸಲ್ಲದ ಒಂದು ದ್ರಾಬೇಸಿ. ಈ ಕತೆ ನಾನೇ ನೋಡ್ತಿರೋದು. ನಾನೇ ಹೇಳ್ತಿರೋದು. ಇದೊಂದು ವಿಚಿತ್ರ ಕತೆ ಅಂತ ಹೇಳಕ್ಕಾಗಲ್ಲ.

ನಾನು ಅಲೆಯುವಾಗೆಲ್ಲಾ ಇಲ್ಲಿ ಬಂದು ಮರದ ಕಟ್ಟೆ ಮೇಲೆ ಸುಸ್ತಾಗಿ ಕೂತಾಗ ಆ ಅಜ್ಜಿ ಒಂದ್ ಲೋಟ ನೀರ್ ತಂದ್ಕೊಡುತ್ತೆ ಅದ್ರೆ ಮಾತೇನಿಲ್ಲ, ಎಷ್ಟೇ ಪ್ರಶ್ನೆ ಕೇಳಿದರೂ ತಲೆ ಅಲ್ಲಾಡಿಸಿ ಮುಗಿಸುತ್ತೆ. ಈ ಸಾರಿ ಹಾಗೇ ಬಂದು ಆ ಮರದ ಕಟ್ಟೆಯ ಮೇಲೆ ಕೂತೆ. ಅಜ್ಜ ತನ್ನಪಾಡಿಗೆ ತಾನು ಆ ವಾದ್ಯ ನುಡಿಸುತ್ತಿದ್ದ. ಅಜ್ಜಿ ಆ ಬಟ್ಟೆಗಳನ್ನೆಲ್ಲಾ ಸೇರಿಸಿಕೊಂಡು ಹಾಗೇ ಮರಕ್ಕೆ ಒರಗಿ ಕಣ್ಣು ಮುಚ್ಚಿದ್ಲು. ನಂಗ್ ಯಾಕೋ ಸ್ವಲ್ಪ ಭಯ ಆಯ್ತು. ಅಜ್ಜ ಒಂದು ರೀತಿಯ ಹತಾಶಾ ಭಾವನೆಯಲ್ಲಿ ವಾದ್ಯ ನುಡಿಸುತ್ತಲೇ ಇದ್ದ. ಸುಮಾರು ಹೊತ್ತಾದ ಮೇಲೆ ಅಜ್ಜ ಅವಳನ್ನು ಎಬ್ಬಿಸಿಕೊಂಡು ಕಟ್ಟೆಯ ಹಿಂದೆ ಹೋದ. ಅವನು ಮಾತ್ರ ಮತ್ತೆ ಬಂದು ಆ ಬಟ್ಟೆಗಳನ್ನೆಲ್ಲಾ ತನ್ನ ಮೇಲೆ ಹೊದ್ದುಕೊಂಡು ಆ ವಾದ್ಯ ನುಡಿಸುತ್ತಾ ಕೂತ.

ಅವನು ಬಾರಿಸುತ್ತಿದ್ದ ಸಂಗೀತ ಬಹಳ ಗಂಭೀರವಾಗಿತ್ತು. ಅಳು ಬರುವಂತೇನೂ ಇರಲಿಲ್ಲ. ನನ್ನೊಳಗೆ ಒಂದು ಹೆದರಿಕೆ ಹುಟ್ಟಿತು ಆ ಅಜ್ಜಿ ತೀರಿದ್ಲಾ ಅಂತ. ಅಜ್ಜನ ಮುಖ ದಲ್ಲಿ ಏನೋ ನೋವಿನ ವಿಶಾದದ ಗೆರೆಗಳು. ಯಾವತ್ತೂ ಬಾಯಿ ಬಿಡದ ಅಜ್ಜ ಮೆಲ್ಲಗೆ ಹಲ್ಲಿಲ್ಲದ ಬಾಯನ್ನೆಲ್ಲಾ ನಾಲಿಗೆಯಲ್ಲಿ ಕ್ಲೀನ್ ಮಾಡಿಕೊಂಡು ಹೇಳಿದ “ಅದಕ್ಕೆ ಸ್ವಲ್ಪ ಇರುಸು ಮುರುಸು ಆಗಿದೆ. ಅದಕ್ಕೆ ಬಟ್ಟೆ ಹೊಲೆಯೋದ್ ಬಿಟ್ಟು ಹಾಗೇ ಮಲಗಿಬಿಟ್ಟಿತ್ತು. ಅದಕ್ಕೆ ಒಳಗೆ ಮಲಗಿಸಿದೆ. ಏನಾಗಿಲ್ಲ ಅದುಕ್ಕೆ”. ಅಜ್ಜನ ಮಾತು ಕೇಳಿ ನನಗೆ ಯಾಕೋ ಅಲ್ಲಿಂದ ಹೋಗಕ್ಕೆ ಮನಸ್ಸು ಬರಲಿಲ್ಲ. ನಾನು ಇಲ್ಲೇ ಮಲಗ್ಲಾ? ತುಂಬಾ ರಾತ್ರಿ ಆಯ್ತು ಅಂತ ಯೋಚನೆ ಮಾಡ್ತಿರುವಾಗ ಅಜ್ಜ ಮತ್ತೆ ಬಾಯೆಲ್ಲಾ ಕ್ಲೀನ್ ಮಾಡ್ಕೊಂಡ್ “ಅದಕ್ಕೇನಾದ್ರೂ ಆಗ್ಬಿಟ್ರೆ ನಾನು ಹೆಂಗೆ ಬದುಕೋದು? ನಂಗೆ ಅದು ಅಂತ ಇರೋದು ಕಳೆದ ೧೩ ವರ್ಷಗಳಿಂದ. ಅದು ಯಾರು ಅಂತ ನಾನೊಂದು ದಿವಸನೂ ಕೇಳಿಲ್ಲ, ಅದೂ ನಾನು ಯಾರು ಅಂತನೂ ಕೇಳಿಲ್ಲ.  ಅಂತೂ ಇಬ್ರೂ ಜೊತೆಗೆ ಇದ್ದೀವಿ.” ಈ ಅಜ್ಜ ಹೇಳಿದ್ದನ್ನು ಕೇಳಿ ನಂಗೆ ಒಂದ್ ಕಡೆ ನನ್ನ ದರಬೇಸಿ ಬುದ್ದಿ – ಇವ್ರು ಯಾರಾದ್ರೆ ನಂಗೇನು? ಇನ್ನೊಂದ್ ಕಡೆ ಇವರ ಜೊತೆ ಏನೋ ಆ ಬಟ್ಟೆಯಂತೆ ಸೇರಿಕೊಂಡ ಭಾವನೆ. ಏನೋ ಅಜ್ಜನನ್ನು ಬಿಟ್ಟುಹೋಗದೇ ಇರುವ ಮನಸು..

ಸಣ್ಣ ಮಳೆ…ಅಜ್ಜ ನಡುಗುತ್ತಾ ಕಟ್ಟೆಯ ಒಂದು ಮೂಲೆಯಲ್ಲಿ ಕೂತ. ಅಜ್ಜನ ದನಿ ಏನೋ ಹಾಡುತ್ತಿದ್ದಂತೆ ಅನಿಸಿತು. ಹೇಗೋ ಯೋಚನೆ ಮಾಡಿ ಅಜ್ಜನ ಪಕ್ಕದಲ್ಲಿ ಕೂತೆ. ಅಜ್ಜ ತನಗೆ ತಾನೇ ಮಾತಾಡಿದಂತೆ ಹಾಡಿದಂತೆ ಅನಿಸುತ್ತಿತ್ತು. ತಕ್ಷಣ ಅಜ್ಜ ಎದ್ದು ಕೈ ಸನ್ನೆಯಲ್ಲಿ ಕರೆದು ಒಳಗೆ ಕಟ್ಟೆಯ ಹಿಂದೆ ಹೋದ. ಆ ಅಜ್ಜಿ ಮಲಗಿತ್ತು. ಉಸಿರು ಇತ್ತೋ ಇಲ್ವೋ ಗೊತ್ತಿಲ್ಲ. ಅಜ್ಜ ನನ್ನ ಒಳಗೆ ಕರೆದು ತಾನು ಅಜ್ಜಿಯ ತಲೆಯನ್ನು ತನ್ನ ತೊಡೆಯ ಮೇಲೆ ಇಟ್ಟುಕೊಂಡು, ಯಾವುದೇ ಭಾವನೆಗಳಿಲ್ಲದೇ ಹಾಡಲು ಶುರು ಮಾಡಿದ. ಒಂದು ಕೈಯಲ್ಲಿ ತಲೆ ನೀವುತ್ತಾ ಒಂದು ಕೈ ಹಾಡಿನ ವಿನ್ಯಾಸ ಅನುಸರಿಸುತ್ತಿತ್ತು. ಮಳೆ ತಾಳಕ್ಕೆ ಸರಿಯಾಗಿ ಹೆಚ್ಚಾಗುತ್ತಿತ್ತು.

ನಂಟೋ ಬಂಧನವೋ

ಪ್ರೀತಿ ಪ್ರೇಮವೋ

ಮಳೆಯಲ್ಲಿ ಎಲ್ಲಾ ತೋಯ್ದು

ಹೇಳಲತೀತವಾಗಿತ್ತು

ಅವನ ಹಾಡಿನಂತೆ

ರಾತ್ರಿಯ ಆಳ ಸಾಂದ್ರತೆ ಹೆಚ್ಚಾದಂತೆ ಅಜ್ಜನ ಹಾಡು ಅಳುವೋ ರೋಧನವೋ ತಿಳಿಯದೆ ಆ ಮಳೆಯ ಚಳಿಯಲ್ಲಿ ಆಚೆ ಬಂದು ಅಜ್ಜಿ ಸತ್ತ ವಿಷಯವನ್ನು ಅರಗಿಸಿಕೊಳ್ಳಲು ಒಂದು ಬೀಡಿ ಹತ್ತಿಸಿ ಕಟ್ಟೆಯ ಮೇಲೆ ಕೂತೆ. ಮಳೆ ನಿಂತು ಬೆಳಗಾಗಿ ಅಜ್ಜಿಯ ದೇಹವನ್ನು ಆಚೆ ಕಟ್ಟೆಯ ಮೇಲಿಟ್ಟಾಗ ಅಜ್ಜಿ ಹೊಲೆಯುತ್ತಿದ್ದ ಆ ಬಟ್ಟೆಯನ್ನು ಹೊದಿಸಿ ಎಲ್ಲರೂ ಸುತ್ತಲೂ ನಿಂತರು. ಊರಿನವರೆಲ್ಲಾ ಸೇರಿದ ಕೂಡಲೆ ಮನಸ್ಸಿನ ಕಟ್ಟೆ ಒಡೆಯಲು ಶುರುವಾಯ್ತು ಅಜ್ಜನಿಗೆ.

ಅಜ್ಜಿಯ ಹೆಸರು – ಗೊತ್ತಿಲ್ಲ

ಅಜ್ಜಿಯ ಜಾತಿ – ಗೊತ್ತಿಲ್ಲ

ಅಜ್ಜಿಯ ಧರ್ಮ – ಗೊತ್ತಿಲ್ಲ

ಅಜ್ಜಯ ಊರು – ಗೊತ್ತಿಲ್ಲ.

ಅಜ್ಜಿಯ ಸಂಬಂಧಿಕರು – ಗೊತ್ತಿಲ್ಲ.

ಈ ಎಲ್ಲಾ ಗೊತ್ತಿಲ್ಲಗಳು ಜನರಲ್ಲಿ ಗೊಂದಲ ಉಂಟುಮಾಡಿ ಅಜ್ಜಿಯ ಹೆಣವನ್ನು ಏನು ಮಾಡಬೇಕು ಎಂಬ ಮಾತುಗಳು ಶುರುವಾಯಿತು. ಅಜ್ಜನ ಕಣ್ಣಲ್ಲಿ ಒಂದು ಹನಿ ನೀರಿಲ್ಲ.

ಖಾಲಿ ಕಣ್ಣುಗಳ

ದುಗುಡ,

ಹೊಲೆದ ದಾರಗಳ ಗಂಟುಗಳು

ಮಾತೇ ಇಲ್ಲದ ನಂಟು

ರಾಗವಿಲ್ಲದೇ ಪದಗಳು ಸ್ವರಗಳು

ಜಗಳವಾಡುತ್ತಾ

ಹೆಸರು ಜಾತಿ ವಯಸ್ಸು ಅಂತೆಲ್ಲ ಕೇಳುವಾಗ

ಅಜ್ಜನ ಆ ವಾದ್ಯಕ್ಕೆ ಮಾತ್ರ

ಉತ್ತರ ಗೊತ್ತು.

ಈ ಸಮಯದಲ್ಲೇ ಆ ಊರಿನವರಿಗೆ ತಿಳಿದಿದ್ದು ಅಜ್ಜಿ ಅಜ್ಜ ಒಂದು ಮಾತೂ ಆಡಿಲ್ಲ. ಒಬ್ಬರ ಬಗ್ಗೆ ಒಬ್ಬರು ತಿಳಿದು ಕೊಂಡಿಲ್ಲ. ಹಾಗಾದರೆ ಇವರು ಒಟ್ಟಿಗೆ ಹೇಗೆ ಬದುಕಿದರು. ಊರಿನವರಿಗೆ ಇವರಿಬ್ಬರೂ ಇಲ್ಲಿ ಯಾವಾಗ ಬಂದರು ಅನ್ನೋದೇ ಮರೆತು ಹೋಗಿದೆ.

ಎಲ್ಲರೂ ಮುರ ಮುರ ಅಂತ ಮಾತಾಡಿಕೊಳ್ಳುತ್ತಿರುವಾಗ ಅಜ್ಜ ಎದ್ದು ಕಟ್ಟೆಯ ಹಿಂದೆ ಅವರ ಗೂಡು ಇರುವ ಹತ್ರ ಮಣ್ಣು ಅಗೆದು ಅಗೆದು ಅಜ್ಜಿಯನ್ನು ಎತ್ತಿ ಹೂಳಿದ. ಅಜ್ಜನ ಜೊತೆ ಕೆಲವರು ನಿಂತರು. ಊರೇ ಮಾತಾಡುತ್ತಾ ಮಾತಾಡುತ್ತಾ ಬಾಯಿ ನಾಲಿಗೆ ಹರಿದಾಗ ಅಜ್ಜಿಯ ಹೊಲಿಗೆ ಮತ್ತೆ ಮತ್ತೆ ಅದನ್ನು ಹೊಲಿಯುತ್ತಿತ್ತು. ಆದ್ರೇ ಗಂಟುಗಳು…!!!!

ರೂಮಿ ಹರೀಶ್‌

ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ, ಲಿಂಗ ಪರಿವರ್ತಿತ ಪುರುಷ ಮತ್ತು ಲೇಖಕರೂ ಆಗಿರುವ ಇವರು  ಕಳೆದ ಸುಮಾರು 2೫ ವರ್ಷಗಳಿಂದ ಲಿಂಗತ್ವ ಅಲ್ಪಸಂಖ್ಯಾತರ ಪರವಾದ ಹೋರಾಟ  ಮತ್ತು  ಲೈಂಗಿಕ ರಾಜಕಾರಣಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ತೊಡಗಿ ಕೊಂಡಿದ್ದಾರೆ.

More articles

Latest article