ರಮ್ನನ ಅಮ್ಮ ಫೀಲಿಂಗ್..

Most read


ರಮ್ನ ಬೆಂಗಳೂರಿಗೆ ವಲಸೆ ಬಂದಿದ್ದು ಸುಮಾರು 2007-8ರಲ್ಲಿ. ನಮ್ಮೆಲ್ಲಾ ಟ್ರಾನ್ಸ್ ಮನ್ ಗುಂಪಿನಲ್ಲಿ ಪುಟಾಣಿ ಮಗು ತರ ಕಾಣ್ತಿದ್ದ. ತುಂಬಾ ಚೆನ್ನಾಗಿ ತಾನೆ ಎಸ್ ಪಿ ಬಿ ಎನ್ನುವ ಭಾವದಲ್ಲಿ ಹಾಡೋನು. ಅವನಿಗೆ ಆರ್ಕೆಸ್ಟ್ರಾದಲ್ಲಿ ಹಾಡಿ ಅಭ್ಯಾಸ ಇತ್ತು. ಆ ಕಾಲದಲ್ಲಿ ಹೆಂಗಸಿನ ವೇಷದಲ್ಲಿದ್ದೆ. ಸಮಾಜದ ಮುಂದೆ ಹೇಳಲು ಹೆದರ್ತಿದ್ದೆ. ಆದ್ರೆ ಎಲ್ಲೋದ್ರೂ ಯಾವ ಕೆಲಸ ಮಾಡಬೇಕಾದ್ರೂ ನನಗಿಂತ ಬೇರೆ ಗಂಡಸರು ಬೇಕಿರಲಿಲ್ಲ. ಈ ಡ್ರೆಸ್ಸೊಂದೆ ನನಗೆ ಕೈ ಕೊಡ್ತಿದ್ದಿದ್ದು. ಅದೂ ಬೆಂಗಳೂರಿನಾಚೆಯಿಂದ ಜನ ಬರುವಾಗ ಏನೋ ನಾನೇನೋ ಆ  ಗುಂಪಿನ ಗಟ್ಟಿ ಹೆಂಗಸು ಎಂದು ತಿಳಿಯುತ್ತಿದ್ರು.

ಈ ರಮ್ನ ಕೂಡ ಹಾಗೇ. ರಮ್ನ ಜೊತೆ ಒಬ್ಬಳು ಹುಡುಗಿ, ಅವನ ಸಂಗಾತಿ ಕೂಡ ಬಂದಿದ್ಲು. ಬಂದ ಹೊಸದ್ರಲ್ಲಿ ಅವರಿಬ್ಬರೂ ತಾವು ಕಲಾಕಾರರು ಎಂಬ ಗುಂಗಿನಲ್ಲಿ ಇರ್ತಿದ್ರು. ನಿಜವಾಗಿ ತುಂಬಾ ಚೆನ್ನಾಗಿ ಹಾಡೋವ್ರು. ನಾನು ಹಾಡ್ತೀನಿ ಅಂತ ಗೊತ್ತಾದ ಮೇಲಂತೂ ನನ್ ಮುಂದೇ ಯಾವಾಗ್ಲೂ ಹಾಡ್ತನೇ ಇರ್ತಿದ್ರು. ನಂಗೋ ಖುಷಿ. ಕೆಲಸ ಮಾಡುವಾಗ ನನಗೆ ಸಿನಿಮಾನೋ, ಹಾಡೋ ಜೊತೆಲಿರ್ಬೇಕು ಇಲ್ದಿದ್ರೆ ಕೆಲಸ ಸರ ಸರಾಂತ ಮುಂದೆ ನಡೆಯಲ್ಲ. ರಮ್ನ ಮತ್ತೆ ಆ ಹುಡುಗಿ ಈ ಗ್ಯಾಪನ್ನು ಆಫೀಸಿನಲ್ಲಿ ತುಂಬಿಸ್ತಿದ್ರು.

ಒಂದೊಂದ್ ಸಂಜೆ ಹೀಗೆ ಎಲ್ಲರೂ ಸೇರಿ ಗುಂಡಾಕ್ಕೊಂಡು ಹಾಡ್ತಾ ನಗ್ತಾ ಮಿಮಿಕ್ರಿ ಮಾಡ್ತಾ ಮಜಾ ಮಾಡ್ತಿದ್ವಿ. ಅಂದ್ರೆ ಆ ಗುಂಪಿಗೆ ಕನ್ನಡ ಹೇಳಿಕೊಡುವ ಪ್ರಯತ್ನದಲ್ಲಿ ನಾನು ತಮಿಳು, ಮಳಯಾಳಂ, ತೆಲುಗು, ಮರಾಠಿ ಕಲಿತೆ. ಅವ್ರು ಎಷ್ಟು ಕನ್ನಡ ಕಲ್ತರು ಎಂಬ ಪ್ರಶ್ನೆಗೆ ನಾನೆಷ್ಟು ಅವರ ಭಾಷೆ ಕಲ್ತ್ನೋ ಅವರೂ ಅಷ್ಟೇ ಕಲ್ತ್ರು. ಆಗ್ಲೇ ನಾವೆಲ್ಲಾ ನಾಟಕ ಸ್ವತ: ಕಲ್ತು ನಾನು ಮೊದಲಿಗೆ ನನಗೆ ಸಿಗುತ್ತಿದ್ದ ಅವಕಾಶಗಳನ್ನು ಆ ಗುಂಪಿಗೆ ಕೊಟ್ಟು ನಾವೆಲ್ಲ ಬರೆದು, ರಚಿಸಿ, ನಿರ್ದೇಶಿಸಿದ ನಾಟಕಗಳನ್ನು ಪ್ರದರ್ಶನ ಮಾಡ್ತಿದ್ವಿ.

ರಮ್ನ ಒಳ್ಳೆ ನಟ. ತಮಾಷೆ ಮಾಡೋದ್ರಲ್ಲಿ ಆ ಗುಂಪಿನಲ್ಲಿ 5 ಜನ ಇದ್ರು. ಹೊರಳಾಡಿ ನಗೋಂ ಹಂಗೆ ಮಾಡೋರು…. ಒಮ್ಮೆ ರಮ್ನ ನಮ್ಮನೇಲಿ ಸ್ಟೈಲಾಗಿ ಬಟ್ಟೆ ಹಾಕ್ಕೊಂಡು ಕನ್ನಡಿ ನೋಡ್ಕೋತ ತಲೆ ಬಾಚ್ತಾ “ನಾನಡಿಚ್ಚಾ ತಾಂಗ ಮಾಟ್ಟೆ, ನಾಲು ಮಾಸಂ ತೂಂಗ ಮಾಟ್ಟೆ” ಅಂತ ಜೋರಾಗಿ ಹಾಡ್ತಿದ್ದ.

ಪಕ್ಕದಲ್ಲಿದ್ದ ರವಿ ಎನ್ನುವ ಗುಂಪಿನ ಮತ್ತೊಬ್ಬ “ಹೌದ್ ಕಣೋ ಹೌದು….. ಆದ್ರೆ ನಾನಡಿಚ್ಚ ತಾಂಗ ಮಾಟ್ಟೆ ನಾಲು ಮಾಸಂ ತೂರ ಮಾಟ್ಟೆ “ ಅಂತ ಹಾಡಕ್ಕೆ ಶುರು ಮಾಡ್ದ. ನಮಗ್ಯಾರಿಗೂ ಅಲ್ಲಿ ನಿಲ್ಲಕಾಗ್ಲಿಲ್ಲ. ಅವನು ಹೇಳಿದ್ದು ನಾಲು ಮಾಸಂ … ತಮಿಳು… ತೂರ ಮಾಟ್ಟೆ… ಎಂದ್ರೆ ಮಳಯಾಳಂನಲ್ಲಿ … ಪಾಯಿಖಾನೆಗೆ ಹೋಗಲ್ಲ ಅಂತ. ಈ ಹುಡುಗ್ರು ತಮ್ಮ ಗಂಡಸುತನವನ್ನೇ ಗೇಲಿ ಮಾಡ್ಕೊಂಡು ನಾವೆಲ್ಲಾ ನಗೋದು.

ಒಂದ್ ದಿವ್ಸ ಹೀಗೆ ಒಬ್ಬ ಗೆಳೆಯನ ಟೆರೆಸ್ ಮನೆಯಲ್ಲಿ ನಾವೆಲ್ಲಾ ಕುಡೀತ ಹಾಡ್ತಾ ಇದ್ದಾಗ ನಂಗೊಂದು ಫೋನ್ ಬಂತು. ಇನ್ಯಾವ್ದೋ ಕೇಸಿರಬೇಕು ಅಂತ ಹೋಗಿ ಹಲೋ ಅಂದೆ. ನನ್ ಜೊತೆಗೇ ಎದ್ ಬಂದ ರಮ್ನ ತುಂಬಾ ಎಮೋಷನಲ್ ಆಗಿ “ನಂಗೆ ಅಮ್ಮ ಅಂದ್ರೆ ತುಂಬಾ ರೆಸ್ಪೆಕ್ಟು ” ಅಂದ. ನಾನು ಫೋನಲ್ಲಿ ಇದ್ದವನು ತಿರುಗಿ ನೋಡಿದೆ. ಇವನಿಗೇನಾಯ್ತು ಯಾವ ನಾಟಕದ ಡೈಲಾಗು ಅಂತ ಕೇಳ್ದೆ… ರಮ್ನ ಕಣ್ಣಲ್ಲೆಲ್ಲಾ ನೀರು, ಕೈಲಿ ಬಾಟ್ಲಿ, … ಸೀರಿಯಲ್ ನಲ್ಲಿ ಮಾತಾಡ್ದಂಗೆ “ನಾನು ………. ನಿನಗೆ ಅಮ್ಮ ಮಾದ್ರಿ” ಅಂದ…. ಇಬ್ರಿಗೂ  ಫುಲ್ ಗೊಂದಲ… ನಾನಂದೆ “ಲೋ,, ನೀನು ನನ್ ತಾಯಿ ತರನಾ?, ಏನಾಯ್ತೋ ನಿಂಗೆ”…. ಅದಕ್ಕವನು “ ಅಯ್ಯೋ ಸಾರಿ ನೀನು ನಾನು (ಅಂತ ಕೈ ಮಾಡಿ ತೋರ್ಸಿ) ಅಲ್ಲ ಅಲ್ಲ ನೀನು ನಂಗೆ ಅಮ್ಮ ಮಾದ್ರಿ” ಅಂದ. ನಂಗೆ ತುಂಬಾ ನಗು ಬಂದ್ಬಿಡ್ತು. ಅವನು ಸಿಟ್ಟಿಗೆದ್ದು “ನಿ ನ ಗೆ ಮನಸಿಲಾವೂಲ (ಅರ್ಥ ಆಗಲ್ಲ) ಅಮ್ಮ ಫೀಲಿಂಗ್” …. ನಾನು ಹೊರಳಾಡಿ ನಕ್ಕು… ಅಯ್ಯಪ್ಪಾ ಸ್ವಾಮಿ…ರಮ್ನ!!!! ಆ ಫೀಲಿಂಗ್ ಎಲ್ಲಾ ನನ್ನಲ್ಲಿಲ್ಲ ಅಂದೆ. ಕುಡಿತಿದ್ದ ಬೇರೆ ಇನ್ನೂ ಕೋಪ ಹೆಚ್ಚಾಯ್ತು. “ನನ್ ಫೀಲಿಂಗ್ಸ್ ಅರ್ಥ ಮಾಡ್ಕೊ, ನೀನು ನಂಗೆ ಅಮ್ಮ…. “ ಯೀಈಈಈಈಈಕ್ಸ್ ಅಯ್ಯಯ್ಯೋ ರಮ್ನ ನಂಗೆ ಅಮ್ಮಗಿಮ್ಮ ಎಲ್ಲಾ ಆಗಕ್ಕೆ ಆಗಲ್ಲ. ನಾನು ನಿನ್ ತರನೇ ಕಣೋ …. ಆದ್ರೆ ನಿಂ ತರ ನಂಗೆ ಈಗ ನನ್ನ ಲಿಂಗತ್ವ ಬದಲಾಯಿಸಿಕೊಳ್ಳಲು ಆಗಲ್ಲ” ಅಂದೆ. ಅಂದ್ರೂನೂ ……

ಅವನದು ಮುಗಿಯುವ ಹಾಗೆ ಕಾಣಲಿಲ್ಲ. ತಿರ್ಗಾ ಹೇಳ್ದ “ಅಮ್ಮ ಸೆಂಟಿಮೆಂಟ್ ಅಂದ್ರೆ ನಿಂಗೆ ಗೊತ್ತಿಲ್ಲಾ?  ನಿಂಗೆ ಅಮ್ಮ ಇದೆ ನಂಗೆ ಇಲ್ಲ (ಅಬ್ಬ! ಸಾರ್ಥಕ ಆಯ್ತು. ಒಬ್ಬನಾದ್ರು ಕನ್ನಡ ಸ್ವಲ್ಪ ಕಲಿತನಲ್ಲ!!!) ನಂದು ನಿಮ್ಮಮ್ಮ  ಅಲ್ಲ ನಿಂದು ನಮ್ಮಮ್ಮ ಅಲ್ಲಾ ಸಾರಿ!….. ನೀನು ನಂಗೆ ಅಮ್ಮ ಆಗ್ಬೇಕು”. … ಹೂಫ್…… ಕಡೆಗೂ ಸರಿಯಾಗಿ ಹೇಳಿದ. ಕನ್ನಡಕ್ಕೆ ಸಂತೋಷ ಪಡಲೋ ಅಥವಾ ಅಮ್ಮ ಎನ್ನುವ ಹೊರೆಗೆ ಗಾಬರಿ ಪಡಲೋ.. ತಿಳೀದೆ ಮೂಕನಾಗಿ ನಿಂತಿದ್ದೆ.

ನಂಗೆ ಸಿಕ್ಕ ಅಮ್ಮ ಬಹಳಾ ವಿಚಿತ್ರ. ಇನ್ನೊಬ್ಬರ ಮುಂದೆ ಮಾತ್ರ ತಾಯಿ ಕರುಳು ಅಂತ ಮಾತಾಡೋವ್ರು. ನಾವು ಮಾತ್ರ ಇರುವಾಗ… ಕರುಳು ಗಿರುಳು ಎಲ್ಲಾ ಏನಿಲ್ಲಮ್ಮ ಇದೊಂದು ಪ್ರಕ್ರಿಯೆ ಅನ್ನೋವ್ರು. ನಾನೇನಾದ್ರು “ಅಮ್ಮ ನಿಂಗೆ ಇನ್ನೊಬ್ಬ ಮಗ” ಅಂದಿದ್ರೆ  ಸುತ್ತಿಗೆ ತಗೊಂಡು ತಲೆಮೇಲೆ ರಪ್ ಅಂತ ಬಾರಿಸಿ ಕೊಂದು ಬಿಟ್ಟಿರೋರು.

ಆಯಮ್ಮನ ಮಗನಾಗಿ ನನಗೆ ತಾಯಿ ಕರುಳು ತಾಯ್ತನ ಅಂತ ಏನಿಲ್ಲ. ನಂಗೂ ಚಿಕ್ಕ ವಯಸ್ಸಿನಲ್ಲಿ ತುಂಬಾ ಗೊಂದಲ ಆಗೋದು ‘ಇದೇನು ನನ್ಜೊತೆ ಹುಟ್ಟಿದ್ಯೋ ಅಥವಾ ಅಮ್ಮಾನಾ’ ಅಂತ. ನಾನೇನ್ ತಗೊಂಡ್ರೂ ನಂಗೂ ಬೇಕು ಅನ್ನೋ ಹಠ. ಎನಿವೇ ಕಡೆಗೆ ರಮ್ನಗೂ ನಂಗೂ ಯುದ್ಧನೇ ನಡೀತು. ನಾನು ಹೇಳಿದೆ ನನಗೆ ಸಾಧ್ಯವೇ ಇಲ್ಲ ಅಮ್ಮ ಗಿಮ್ಮ ಆಗಕ್ಕೆ ಅಂತ. ಬರೀ ಹಾಕಿಕೊಳ್ಳುವ ಬಟ್ಟೆಯಿಂದ ಅಷ್ಟು ನೋವು ತಗೊಳ್ಳಕ್ಕೆ ಆಗಲ್ಲ. ನಂಗಂತೂ ನನ್ನ ಜೀವನದಲ್ಲಿ ಕುಟುಂಬ ಅನ್ನೋ ಪದನೇ ಹೇಸಿಹೋಗಿದೆ. ಆ ಪಾತ್ರಗಳನ್ನೆಲ್ಲಾ ನೆನೆಸಿಕೊಂಡ್ರೆ ದಿಗಿಲಾಗುತ್ತೆ.

ಅಮ್ಮ ಅನ್ನುವ

ಹೊಣೆ

ಹೊರೆ

ಹೆತ್ತು ಹೊತ್ತು ಸತ್ತರೂ ಮುಗಿಯದ

ತಾಯ್ತನ.

ನದಿಯ ನೀರಿನ

ಹರಿವಿಗೆ

ಕೊನೆಯಿಲ್ಲದ

ನಿರೀಕ್ಷೆ.

ಮನುಷ್ಯತನವ ಮೀರಿದ

ಬೇಡಿಕೆಗಳು ಒತ್ತಡಗಳು

ಮಡಿ ಮೈಲಿಗೆ ಉಪವಾಸಗಳ

ನಡುವೆ

ಜಾತಿದೇವರುಗಳ ಒಲಿಸಿ

ಮನೆ ಹೂವನ್ನು

ಅರಳಿಸಿ

ಕೀರ್ತಿ ಆರತಿಗಳ

ಅಕ್ಕರೆ, ಒಲವು ಮಮತೆ

ಜೀತ

ಬಿಟ್ಟಿಯಾಗಿ ಮಾಡುವುದೆಲ್ಲಾ

ತಾಯಾಗಿ ಮಾಡಿ

ಕಡೆಗೆ ಸುಡುವಾಗಲೋ

ಹೂಳುವಾಗಲೋ

ಅಮ್ಮನ ಪ್ರೀತಿ

ಎಂದು ಬಿಟ್ಟರೆ…..

ಆ ಪಾತ್ರಕ್ಕೆ

ಮದ ಮತ್ಸರ ಹೊಟ್ಟೆಯುರಿ

ಅಸೂಯೆಗಳಿಲ್ಲವೆ?

ಕಟ್ಟಲು ತಾಯ್ತನ

ಯಾವ ಹೃದಯದ

ಮಿಡಿತವಾದರೇನು

ಅದೊಂದು ಕ್ಷಣವಷ್ಟೆ

ಅದೊಂದು ಅಪ್ಪುಗೆಯಲ್ಲಿ

ಕಣ್ಣಂಚಿನ ಹನಿಯಲ್ಲಿ

ಕ್ಷಣದ ಬದುಕು ರಸ್ತೆಗಳಲ್ಲಿ

ಉಸಿರುವಾಗ

ಉಗುಳು ನುಂಗುವ

ಗಂಟಲ ನೆಮ್ಮದಿಯಂತೆ

ಚಹದ ಹದದಂತೆ

ನೀರಿನ ಗುಳ್ಳೆಯಂತೆ

ಈಗ ಇದೆ

ಈಗ ಇಲ್ಲ.

ರೂಮಿ ಹರೀಶ್‌

ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ, ಲಿಂಗ ಪರಿವರ್ತಿತ ಪುರುಷ ಮತ್ತು ಲೇಖಕರೂ ಆಗಿರುವ ಇವರು  ಕಳೆದ ಸುಮಾರು 2೫ ವರ್ಷಗಳಿಂದ ಲಿಂಗತ್ವ ಅಲ್ಪಸಂಖ್ಯಾತರ ಪರವಾದ ಹೋರಾಟ  ಮತ್ತು  ಲೈಂಗಿಕ ರಾಜಕಾರಣಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ತೊಡಗಿ ಕೊಂಡಿದ್ದಾರೆ.

More articles

Latest article