ಆರ್ಟೂ ಇಲ್ಲ.. ಲಿವಿಂಗೂ ಇಲ್ಲ..

Most read

ನಂಗೆ ಹುಡುಗಿ!!!! ಇಷ್ಟ ಆಯ್ತು. ಆದ್ರೆ ಆರ್ಟ್ ಆಫ್ ಲಿವಿಂಗ್ ಕೋರ್ಸ್ ಮಾಡಿದ್ರೆ ಮದ್ವೆ ಆಗ್ತೀನಿ” ಅಂದ. ಅದೆಲ್ಲಿತ್ತೋ ಕೋಪ.. ಜೋರಾಗಿ ಕಿರುಚ್ತಾ ಆರ್ಟೂ ಇಲ್ಲ ಲಿವಿಂಗೂ ಇಲ್ಲ ಎದ್ದೇಳು”… ಅಂತ ಹೇಳ್ತಾ ಒಂದ್ ಹೆಜ್ಜೆ ಮುಂದೆ ಇಟ್ಟೆ. ಕಾಲಿಗೆ ಸೀರೆ ಸಿಗಾಕ್ಕೊಂಡು ದಡ್ ಅಂತ ಬಿದ್ದು ಬಾಯಲ್ಲೆಲ್ಲಾ ರಕ್ತ – ರೂಮಿ ಹರೀಶ್.

ಕಿರ್ಚಾಡ್ಕೊಂಡು ಎದ್ದೆ. ಕಣ್ ತೆಗೆಯಕ್ಕೇ ಭಯ. ಮತ್ತೆ ಅದೇ ಸುಳಿಯಲ್ಲಿ ಸಿಕ್ಕೊಂಡು ವದ್ದಾಡ್ತೀನ? ನಿಧಾನಕ್ಕೆ ಕಣ್ ತೆಗೆದೆ. ತಲೆ ಫ್ಯಾನಿಗಿಂತ ಜೋರಾಗಿ ಸುತ್ತುತ್ತಿತ್ತು. ಹಾಗೇ ಕೈನ ಹಾಸಿಗೆ ಮೇಲೆ ಊರಿ ಸುತ್ತ ನೋಡಿದೆ… ಮೇಲೆ ಎರಡು ಫ್ಯಾನು, ಅಂಬೇಡ್ಕರರ ಫೋಟೋ, ಮತ್ತೆ ನಂ ಮೇಷ್ಟ್ರದ್ದು, ನನ್ ತಾಯಿಯ ಗುರು ವಾದಿರಾಜ್ ಅವರದ್ದು. ಹಾಗೇ ನೋಡುತ್ತಾ ಸುನಿಲನ ಕಂಡೆ. ಸ್ವಲ್ಪ ಮನಸ್ಸಿಗೆ ಧೈರ್ಯ ಬಂತು. ಇದು ನಂ ಮನೆ ಅಂತ ಖಾತ್ರಿ ಆಯ್ತು. ಹಾಗೇ ಒರಗಿ ಮಲಗಿದೆ. ಕಣ್ಣು ಎಳೆಯ ತೊಡಗಿತು. ಕಣ್ಣು ಮುಚ್ಚಿದೆ………..

ಮತ್ತದೇ ತಿರುಗು ಮೇಜು (ಟರ್ನ್‌ ಟೇಬಲ್). ಎದೆ ಧಗ್ ಅಂತು. ಇಷ್ಟೊತ್ತು ಅದರ ಮೇಲೆ ಬ್ಯಾಲೆನ್ಸ್ ಮಾಡಲು ಶ್ರಮಿಸಿ ಶ್ರಮಿಸಿ ಅದರಿಂದ  ಹೊರ ಬಿದ್ದೆ ಪಾತಾಳಕ್ಕೆ. ಚೇತರಿಸಿಕೊಂಡು, ಮತ್ತೆ ಎದ್ದು ನಿಂತರೆ ಪಾತಾಳ ಇಲ್ಲ ಅದೇ ಟರ್ನ್‌ ಟೇಬಲ್. ನಿಂತ್ಕೊಳ್ಳಕ್ಕೇ ಆಗ್ತಿಲ್ಲ. ಅದರ ಲಯವೇ ಅರ್ಥ ಆಗ್ತಿಲ್ಲ. ಇದು ಇರುವುದಾದರೂ ಎಲ್ಲಿ ಅಂತ ಸುತ್ತ ನೋಡಕ್ಕೂ ಆಗ್ತಿಲ್ಲ. ಯಾಕಂದ್ರೆ ತಲೆ ಆ ಕಡೆ ಈ ಕಡೆ ತಿರುಗಿಸಿದರೆ ಲಯ ಆಯ ತಪ್ಪಿ ಮತ್ತೆ ಪಾತಾಳಕ್ಕೆ …. ಹೋಗಲಿ ಪಾತಾಳದಲ್ಲಾದರೂ ಒಂದು ನಿಮಿಷ ಸುಧಾರಿಸಿ ಕೊಳ್ಳೋಣ ಎಂದರೆ ಕಾಲು ಇಟ್ಟಲ್ಲಿ ಟರ್ನ್‌ ಟೇಬಲ್. ಇದೆಂಥಾ ಹುಚ್ಚು ಇದರ ಮೇಲೆ ನಿಂತರೆ ಆಯ ತಪ್ಪುತ್ತೇನೆ, ಬೇರೆ ನಿಲ್ಲಲು ಜಾಗವೇ ಇಲ್ಲ…. ಟೆನ್ಷನ್ ಹೆಚ್ಚಾಗಿ ಉಸಿರು ಕಟ್ಟಲು ಶುರುವಾಯಿತು. ಹಾಗೇ ಯೋಚನೆಯೊಳಗೆ ಬಿದ್ದಾಗ ಹೇಗೋ ಆಯ ತಪ್ಪದೆ ಹಾಗೇ ನಡೀತಿದ್ದೆ. ನಂಗೇನಾದ್ರೂ ಸ್ಲೀಪ್ ಆಪ್ನಿಯಾ ಆಗಿದ್ಯ.. ಇಲ್ಲ ಮಾನಸಿಕ ಆರೋಗ್ಯ ಕೆಟ್ಟಿದ್ಯಾ ಅಂತ ಯೋಚನೆ ಬಂತು….. ಹಾಗೇ ಆಲೋಚನೆಯಲ್ಲಿರುವಾಗ ಮತ್ತೆ ಆಯ ತಪ್ಪಿ ಬಿದ್ದೆ……

ಆ ಪಾತಾಳಕ್ಕೆ ಬೀಳೋದು ಏನೋ ಸ್ಲೋ ಮೋಶನ್ನಲ್ಲಿ ಬೀಳೋ ಥರ ….. ಉಸಿರು ತೆಗೆದುಕೊಂಡ್ರೂ ಗಾಳಿನೇ ಇಲ್ಲ…. ಲಂಗ್ಸ್ ನಲ್ಲಿ ಏನೋ ಹಾಕಿ ಚುಚ್ಚಿದಂತಾಗಿ ಮತ್ತೆ ಎದ್ದೆ. ತಿರ್ಗಾ ಗಾಬ್ರಿಯಲ್ಲಿ ಇದ್ದೆ. ಅಷ್ಟು ಹೊತ್ತಿಗೆ ಮತ್ತೆ ತಿರುಗಿ ಟೈಮ್ ನೋಡ್ದೆ. ತಲೆ ತಿರುಗಿಸಿದಾಗ ಗಿರ್ ಅಂತ ಮತ್ತೆ ಆಯ ತಪ್ಪಿ ಬಿದ್ದೆ. ಥೋ! ಇದೇನು ಹೀಗೆ? ಟರ್ನ್‌ ಟೇಬಲ್ ಟರ್ನ್‌ ಟೇಬಲ್ ಟರ್ನ್‌ ಟೇಬಲ್ …. ಮೊದ್ಲೇ ನಾನು ಲಯದಲ್ಲಿ ಸ್ವಲ್ಪ ವೀಕ್…. ಹೇಗೋ ತಾಳಕ್ಕೆ ಸೇರ್ತೀನಿ.

ಇದನ್ನೂ ಓದಿ-ಟಿ ಎಮ್ ಕೃಷ್ಣ, ಸಂಗೀತ ಕಲಾನಿಧಿ ಪ್ರಶಸ್ತಿ ಮತ್ತು ನಾನು

ಹೀಗೇ ಆಗೋದು ಆ ಟರ್ನ್‌ ಟೇಬಲ್ ನ ಲಯಕ್ಕೆ ಒಗ್ಗಿಕೊಳ್ಳೋಣ ಅಂದ್ರೆ ಮುಗ್ಗರಿಸಿ ಬೀಳ್ತೀನಿ. ನನ್ನೊಳಗಿನ ನಾನು ನಾನಾಗಲು ದಾರಿ ತೋರಿಸಲ್ಲ…. ಈ ಜಗತ್ತಿಗೂ ಒಗ್ಗಲೂ ಬಿಡಲ್ಲ. ಆದ್ರೆ ಟರ್ನ್‌ ಟೇಬಲ್ ಮತ್ತೆ ಕಾಲಿನ ಕೆಳಗೆ ಓಡ್ತಿತ್ತು….. ನಿಂತ್ರೆ ಬೀಳ್ತೀನಿ, ಓಡಲು ಲಯ ಗೊತ್ತಿಲ್ಲ.. ಬರಲ್ಲ. ಬಿದ್ರೂ ತಿರ್ಗಾ ಅಲ್ಲೇ ಟರ್ನ್‌ ಟೇಬಲ್ ಮೇಲೇ ನಿಲ್ತೀನಿ…..

ಈ ವಿಷ ವಲಯದಿಂದ ಮುಕ್ತಿನೇ ಇಲ್ವಾ?

ಮತ್ತೆ ಕನಸಿನಿಂದ ಎಚ್ಚರಿಕೆ…..ಅಬ್ಬಾ! ಇನ್ನು ನಿದ್ದೆ ಹೋದ್ರೆ ಹೀಗೆ ನಡ್ಗತಾ ಕೂಗಾಡ್ಕೊಂಡು ಎಲ್ರಿಗೂ ತೊಂದ್ರೆ ಆಗುತ್ತೆ ಅಂತ ಸ್ವಲ್ಪ ಸಮಾಧಾನ ಮಾಡ್ಕೊಂಡು ನಿಧಾನವಾಗಿ ಎದ್ದು ಟೇಬಲ್ ಹತ್ರ ಹೋಗಿ ನೀರು ಕುಡಿದೆ. ಚೇರ್ ಮೇಲೆ ಕೂತು ತಲೆ ಹಿಂದೆ ಆನಿಸಿ ತಲೆ ಮೇಲೆತ್ತಿ ನೋಡಿದೆ. ನಮ್ಮ ಫ್ಲಾಟಿಗೆ ಸೂರೇ ಇಲ್ಲ ಅನಿಸಿ 3 ಗಂಟೆ ಬೆಳಗಿನ ಕತ್ತಲು ಕಿರಣಗಳಿಗೆ ನನ್ನ ತಾನ್ಪುರ ಶೃತಿ ಮಾಡಿದೆ. ಜೀವನದ ಕೆಲಸ, ಸುತ್ತಾಟಕ್ಕೆ ಈ ತಂತಿಗಳು. ಸ್ವಲ್ಪ ಬ್ರೇಕ್ ಹಾಕಿದಂತಾಗಿ ಯಾವುದೋ ಒಂದು ಸ್ವರ ಹಾಗೇ ಗೊಣಗಲು ಶುರು ಮಾಡಿದೆ….

ಸೂರಿಲ್ಲದ ಕಟ್ಟಡ

ಕಾಣದ ಸ್ವರಗಳು

ಪೊಲೀಸ್ ಹೊಡೆತದ ಚಿನ್ಹೆಗಳು

ಅವಳು ಅವನು ಅವರು

ಜೊತೆ ನಿಂತು ಕೂಗಾಡಿದ ದನಿ

ಗಾಡಿಯಲ್ಲಿ ತಿರುಗಿದ ಮೈಲಿಗಳು

ಜೋರು ವಾದಗಳಲ್ಲಿ

ತಡೆಯಲಾರದೇ ಬಂದ ಅಳು

ಅಸಂಖ್ಯ ನಿದ್ದೆ ಇಲ್ಲದ ರಾತ್ರಿಗಳು

ಜೀವಮಾನಕ್ಕೂ ಮುಗಿಯದ

ಕೆಲಸಗಳು

ಹೇರಿಕೊಂಡ ಸ್ನೇಹಗಳು

ಎಲ್ಲೂ ಸಿಗದ ನನ್ನತನದ ಬಿಸಿ ಅಪ್ಪುಗೆ

ಇವೆಲ್ಲದರ ಜೊತೆ

ಪ್ರೇಮ ಪ್ರೀತಿಯ ಹಂಗಿಸುವ ಪ್ರಶ್ನೆ…..

“ಇನ್ನೂ ಮದುವೆಯ ಭಯನಾ?” ಎಂಬ

ಬೊಬ್ಬೆ ಹೊಡೆಯುವ ನಗು…

ರೂಮಿ ಹರೀಶ್‌

ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ, ಲಿಂಗ ಪರಿವರ್ತಿತ ಪುರುಷ ಮತ್ತು ಲೇಖಕರೂ ಆಗಿರುವ ಇವರು  ಕಳೆದ ಸುಮಾರು 2೫ ವರ್ಷಗಳಿಂದ ಲಿಂಗತ್ವ ಅಲ್ಪಸಂಖ್ಯಾತರ ಪರವಾದ ಹೋರಾಟ  ಮತ್ತು  ಲೈಂಗಿಕ ರಾಜಕಾರಣಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ತೊಡಗಿ ಕೊಂಡಿದ್ದಾರೆ.

More articles

Latest article