ಬೆಂಗಳೂರು: ರಾಜ್ಯ ಸರ್ಕಾರ ಕೃಷಿ ನವೋದ್ಯಮಗಳಿಗೆ ರೂ.14 ಕೋಟಿ ಬಿಡುಗಡೆ ಮಾಡಿದ್ದು, ಮುಂದಿನ ಬಜೆಟ್ ನಲ್ಲಿ ಇನ್ನಷ್ಟು ಹೊಸ ಯೋಜನೆಗಳನ್ನು ಜಾರಿಗೊಳಿಸಲಾಗುವುದು. ಇದರಿಂದ ಕೃಷಿಕರ ಉತ್ಪಾದನೆ ಹೆಚ್ಚಳ ಹಾಗೂ ಉತ್ಪನ್ನಗಳ ಮೌಲ್ಯವರ್ಧನೆಗೆ ಅನುಕೂಲವಾಗಲಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ.
ನಗರದ ಬಹುಮಹಡಿಗಳ ಕಟ್ಟಡದ ಐಟಿ ,ಬಿಟಿ ಸಭಾಂಗಣಲ್ಲಿಂದು ಕೃಷಿ ಇಲಾಖೆ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಗಳ ವತಿಯಿಂದ ಆಯೋಜಿಸಲಾಗಿದ್ದ ಅಗ್ರಿ ಸ್ಟಾರ್ಟ್ ಅಪ್ ಉದ್ದಿಮೆದಾರರೊಂದಿಗೆ 2025-26ನೇ ಸಾಲಿನ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಸಚಿವರು ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನಗಳ ಅಳವಡಿಕೆಯೊಂದಿಗೆ ನವೋದ್ಯಮಗಳು ಪ್ರಾರಂಭವಾಗುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದರು.
ಕೃಷಿ ಇಲಾಖೆ ವತಿಯಿಂದ ರಾಜ್ಯದ 19 ಜಿಲ್ಲೆಗಳಲ್ಲಿ ಕೃಷಿ ನವೋದ್ಯಮ ಅನುಷ್ಠಾನಗೊಂಡಿದ್ದು, ನವೋದ್ಯಮಗಳಿಗೆ ರೂ.808 ಲಕ್ಷಗಳ ಅನುದಾನ ವೆಚ್ಚ ಮಾಡಲಾಗಿದೆ. ರೂ.678 ಲಕ್ಷಗಳ ಬ್ಯಾಂಕ್ ಸಾಲಗಳ ಮೂಲಕ ಒದಗಿಸಲಾಗಿದೆ ಎಂದು ಚಲುವರಾಯಸ್ವಾಮಿ ಮಾಹಿತಿ ನೀಡಿದರು.
ಕೃಷಿಯಲ್ಲಿನ ನವೀನ ತಾಂತ್ರಿಕತೆಗಳು ಹಾಗೂ ನೂತನ ಪರಿಕಲ್ಪನೆಗಳಿಂದ ಕೃಷಿಯಲ್ಲಿ ನವೋದ್ಯಮಗಳನ್ನು ಪ್ರಾರಂಭಿಸಿ ಕೃಷಿ ವಲಯದಲ್ಲಿ ಉದ್ಯಮಶೀಲತೆ ಹೆಚ್ಚಿಸುವುದು, ಕೃಷಿ ಪದವೀಧರರು, ವಿದ್ಯಾವಂತ ಯುವಕರು, ಪ್ರಗತಿಪರ ರೈತರು ಕೃಷಿಯಲ್ಲಿ ನವೋದ್ಯಮ ಪ್ರಾರಂಭಿಸಲು ಸಹಾಯ ನೀಡಿ ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಜನೆ ಮಾಡುವುದು ಕೃಷಿ ಇಲಾಖೆ ಆಶಯವಾಗಿದೆ ಎಂದು ಅವರು ಹೇಳಿದರು.
ಕೃಷಿ ವಿಶ್ವವಿದ್ಯಾಲಯಗಳಲ್ಲಿ ಹಾಗೂ ಇತರೆ ಸಂಸ್ಥೆಗಳಲ್ಲಿ ಅಭಿವೃದ್ಧಿಪಡಿಸಲಾದ ನೂತನ ಆವಿಷ್ಕಾರಗಳು ಹಾಗೂ ತಾಂತ್ರಿಕತೆಗಳ ವಾಣಿಜ್ಯಕರಣವನ್ನು ಉತ್ತೇಜಿಸಲು ಕೃಷಿ ಇಲಾಖೆಯಿಂದ ಕ್ರಮವಹಿಸಲಾಗುತ್ತಿದೆ. ಕೃಷಿ ನವೋದ್ಯಮಿಗಳು ಇದರ ಲಾಭ ಪಡೆದು ರೈತರಿಗೂ ಅನುಕೂಲಗಳನ್ನು ವರ್ಗಾಯಿಸಬೇಕೆಂದು ಕೃಷಿ ಸಚಿವರು ಕರೆ ನೀಡಿದರು.
ಇದೇ ವೇಳೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಐಟಿ ,ಬಿಟಿ ಇಲಾಖೆ ವತಿಯಿಂದಲೂ ಅಗ್ರಿಸ್ಟಾರ್ಟ್ ಅಪ್ ಗಳಿಗೆ ಹೆಚ್ಚಿನ ನೆರವು ಹಾಗೂ ಮಾರುಕಟ್ಟೆ ಪ್ರೋತ್ಸಾಹಕ್ಕೆ ಸಹಾಯ ಒದಗಿಸಲಾಗುತ್ತಿದೆ ಎಂದರು.
ಕೃಷಿ ವಲಯ ಬಲವರ್ಧನೆಗೊಂಡರೆ ಗ್ರಾಮೀಣ ಆರ್ಥಿಕತೆಗೆ ಹೆಚ್ಚಿನ ಶಕ್ತಿ ಬರಲಿದೆ ಜೊತೆಗೆ ಭೂಮಿಯ ಫಲವತ್ತತೆ ನಿರ್ವಹಣೆ ಅಧಿಕ ಲಾಭಗಳಿಕೆಗೆ ಅನುಕೂಲವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇದೇ ವೇಳೆ ಕೃಷಿ ನವೋದ್ಯಮಿಗಳು ತಾವು ಪ್ರಾರಂಭಿಸಿರುವ ಹೊಸ ಸಂಸ್ಥೆಗಳ ಕಾರ್ಯವೈಖರಿಗಳ ಸಂಕ್ಷಿಪ್ತ ಪರಿಚಯ ಮಾಡಿಕೊಟ್ಟರು. 40ಕ್ಕೂ ಹೆಚ್ಚು ನವೋದ್ಯಮಿಗಳು / ಸಂಸ್ಥೆಗಳು ಪಾಲ್ಗೊಂಡು ಸರ್ಕಾರದಿಂದ ಪಡೆದಿರುವ ಸೌಲಭ್ಯ ಹಾಗೂ ವಿಸ್ತರಣೆಗೆ ಅಗತ್ಯವಿರುವ ನೆರವಿನ ಬಗ್ಗೆ ಪ್ರಾತ್ಯಕ್ಷಿತೆ ನೀಡಿದರು.
ಐಟಿ ಬಿಟಿ ಕಾರ್ಯದರ್ಶಿ ಏಕ್ರೂಪ್ ಕೌರ್, ಕೃಷಿ ಇಲಾಖೆ ಕಾರ್ಯದರ್ಶಿ ಡಾ|| ರವಿಶಂಕರ್, ಆಯುಕ್ತ ವೈ.ಎಸ್.ಪಾಟೀಲ್, ನಿರ್ದೇಶಕ ಡಾ||ಪುತ್ರ, ಜಲಾನಯನ ಆಯುಕ್ತ ಮಹೇಶ ಬಿ ಶಿರೂರ, ನಿರ್ದೇಶಕ ಬಂಥನಾಳ ಮತ್ತಿತರರು ಉಪಸ್ಥಿತರಿದ್ದರು.