ಜೂನ್-21 ನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸಲಾಗುತ್ತದೆ. ದೇಶದಲ್ಲಿ 10ನೇ ವರ್ಷದ ಆಚರಣೆಯು ಮಹಿಳೆಯರ ಸಬಲೀಕರಣದಲ್ಲಿ ಯೋಗದ ಪಾತ್ರ ಎಂಬ ಘೋಷಣೆಯೊಂದಿಗೆ ಆಚರಣೆಗೊಳ್ಳುತ್ತಿದೆ. ಯೋಗ ದಿನದ ಹಿನ್ನೆಲೆಯಲ್ಲಿ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಗಂಗಾಧರಯ್ಯ ಹಿರೇಮಠ ಅವರ ಲೇಖನ ಇಲ್ಲಿದೆ.
ಮಹಿಳಾ ಸಬಲೀಕರಣವೆಂಬುದು ಅತ್ಯಂತ ಸಂಕೀರ್ಣವಾದ ಪರಿಭಾವನೆ. ಅದೊಂದು ಬಹುಮುಖಿಯಾದ, ಬಹುಹಂತದ ಹಾಗೂ ಬಹುಶಿಸ್ತೀಯವಾದ ಪರಿಕಲ್ಪನೆಯಾಗಿದೆ. ಮಹಿಳಾ ಸಬಲೀಕರಣವೆಂದರೆ ಅವರಲ್ಲಿ ಆತ್ಮವಿಶ್ವಾಸ, ಅಭಿವ್ಯಕ್ತಿ ಸಾಮರ್ಥ್ಯ, ಸ್ವ-ಅರಿವನ್ನು ಉಂಟು ಮಾಡುವುದಾಗಿದೆ. ಅಲ್ಲದೆ ಕಾನೂನು ಹಾಗೂ ಸರ್ಕಾರದ ಕಾರ್ಯನೀತಿ, ಕಾರ್ಯಕ್ರಮಗಳ ಮಾಹಿತಿ, ಅರಿವು ಪಡೆದು ಅವುಗಳನ್ನು ಬಳಸಿಕೊಳ್ಳುವುದು, ತಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಂಡು ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಪ್ರಕ್ರಿಯೆಯೇ ಆಗಿದೆ. ಸಬಲೀಕರಣ ಎಂಬುದು ಸ್ತ್ರೀಯರ ಅಭಿವೃದ್ಧಿಗಷ್ಟೇ ಸೀಮಿತವಾಗದೆ, ಇಡೀ ಸಮಾಜದ, ದೇಶದ ಅಭಿವೃದ್ಧಿಗೆ ಪೂರಕವಾದ ಪ್ರಮುಖ ಸಾಧನವಾಗಿದೆ.
ಲಿಂಗ ತಾರತಮ್ಯ, ಅಸಮಾನತೆ, ಅನರ್ಹತೆ ಹಾಗೂ ಇನ್ನಿತರ ಬಗೆಯ ಸಂಕಷ್ಟಗಳಿಗೆ ಒಳಗಾಗಿರುವ ಸ್ತ್ರೀಯರಿಗೂ ಕೂಡ ಪುರುಷರಿಗೆ ಸರಿಸಮನಾದ ಅಂತಸ್ತು, ಹಾಗೂ ಅವಕಾಶಗಳನ್ನು ನೀಡಿ ಅವರನ್ನು ಸಶಕ್ತರನ್ನಾಗಿಸಲು ಹಮ್ಮಿಕೊಳ್ಳಲಾಗಿರುವ ಅಭಿವೃದ್ಧಿಯಾತ್ಮಕ ಕಾರ್ಯಯೋಜನೆಗಳ ಪ್ರಕ್ರಿಯೆಯನ್ನು ಮಹಿಳಾ ಸಬಲೀಕರಣ ಎನ್ನಬಹುದು. 21ನೇ ಶತಮಾನವನ್ನು ಮಹಿಳಾ ಸಬಲೀಕರಣದ ಶತಮಾನವೆಂದು ಗುರುತಿಸಲಾಗಿದೆ. ಮಹಿಳಾ ಸಬಲೀಕರಣ ಬಹುಮುಖಿ ಅಂದೋಲನವಾಗಿದ್ದು ವಿವಿಧ ಆಯಾಮಗಳನ್ನು ಒಳಗೊಂಡಿದೆ.
ಮಹಿಳಾ ಸಬಲೀಕರಣದ ವಿವಿಧ ಆಯಾಮಗಳು
ಭೌತಿಕ ಸಬಲೀಕರಣ – ಆರೋಗ್ಯ, ಪೌಷ್ಠಿಕತೆ, ಆಹಾರ, ಬೆಳವಣಿಗೆ, ಜೀವಿತಾವಧಿ ಹೆಚ್ಚಳ ಇತ್ಯಾದಿ.
ಮಾನಸಿಕ ಸಬಲೀಕರಣ – ಸಾಕ್ಷರತೆ, ಆತ್ಮವಿಶ್ವಾಸ, ವೃತ್ತಿಪರ ಕೌಶಲ್ಯ, ಉದ್ಯಮಶೀಲತೆ, ತರಬೇತಿ ಇತ್ಯಾದಿ.
ಸಾಮಾಜಿಕ ಸಬಲೀಕರಣ – ಆಸ್ತಿಯಲ್ಲಿ ಮಾಲೀಕತ್ವದ ಹಕ್ಕು, ಕುಟುಂಬದಲ್ಲಿ ಅಂತಸ್ತು, ವಿವಾಹದಲ್ಲಿ ಸಂಗಾತಿಯ ಆಯ್ಕೆಯ ಸ್ವಾತಂತ್ರ್ಯ, ಸಮಾನತೆ, ಸ್ವಾತಂತ್ರ್ಯ, ಕುಟುಂಬ ಯೋಜನೆ, ಕುಟುಂಬ ಕಲ್ಯಾಣ, ಶಿಕ್ಷಣ ಇತ್ಯಾದಿ.
ಆರ್ಥಿಕ ಸಬಲೀಕರಣ – ಆಸ್ತಿಹಕ್ಕು, ಉದ್ಯೋಗಾವಕಾಶ, ಸಂಪನ್ಮೂಲಗಳ ನಿಯಂತ್ರಣ, ಆದಾಯ ಮೂಲಗಳಲ್ಲಿ ಲಭ್ಯತೆ, ಜೀವನಮಟ್ಟದಲ್ಲಿ ಸುಧಾರಣೆ ಇತ್ಯಾದಿ.
ಶಾಸನಾತ್ಮಕ ಸಬಲೀಕರಣ- ಮೂಲಭೂತ ಹಕ್ಕುಗಳು, ಸಂವಿಧಾನದ ರಕ್ಷಣೆಗಳು, ಲಿಂಗ-ತಾರತಮ್ಯದ ವಿರುದ್ಧ ರಕ್ಷಣೆ, ಮಹಿಳಾ ಕಲ್ಯಾಣಕ್ಕೆ ಕಾನೂನಿನ ಅವಕಾಶಗಳು ಇತ್ಯಾದಿ.
ಧಾರ್ಮಿಕ ಸಬಲೀಕರಣ – ನೀತಿ, ಪ್ರಮಾಣಿಕತೆ, ನೈತಿಕ ಬದ್ಧತೆ, ಸಚ್ಚಾರಿತ್ರ್ಯ, ವೈಚಾರಿಕತೆ, ಮಾನವೀಯ ಮೌಲ್ಯಗಳ ಸಂರಕ್ಷಣೆ, ಧಾರ್ಮಿಕ ಸ್ವಾತಂತ್ರ್ಯ, ಕಂದಾಚಾರ ಮೂಢನಂಬಿಕೆಗಳಿಂದ ವಿಮೋಚನೆ, ಯೋಗ ಮತ್ತು ಧ್ಯಾನ.
ಹೀಗೆ ಮಹಿಳೆಯರು ಸಬಲೀಕರಣದತ್ತ ಹೆಜ್ಜೆಹಾಕಲು ಅಥವಾ ಸಮಾಜದ ಮುಖ್ಯವಾಹಿನಿಗೆ ಬರಲು ರಾಜಕೀಯ, ಆರ್ಥಿಕ ಹಾಗೂ ಸಾರ್ವಜನಿಕ ಕ್ಷೇತ್ರಗಳಿಗೆ ಸಂಬಂಧಿಸಿದ ಪ್ರಮುಖ ಸ್ಥಾನಗಳಲ್ಲಿ ಆದ್ಯತೆ ನೀಡಿ ಅವರನ್ನು ಪ್ರೋತ್ಸಾಹಿಸುವ ಅಭಿವೃದ್ಧಿ ಪ್ರಕ್ರಿಯೆಯೇ ಮಹಿಳಾ ಸಬಲೀಕರಣವಾಗಿದೆ.
ಯೋಗ ಎಂದರೇನು?
‘ಯೋಗ’ ಎಂದರೆ ಅದೊಂದು ಬದುಕಿನ ಕಲೆ, ನಾವು ಬದುಕುವುದು ಏಕೆ? ಎಂದು ತಿಳಿಸುವುದಾಗಿದೆ. ನಮ್ಮ ಚಂಚಲ ಮನಸ್ಸು, ವೇಗ ಹಾಗೂ ಸೂಕ್ಷ್ಮತೆಗಳನ್ನು ಜಡವಾದ ಶರೀರದೊಡನೆ ಸೇರಿಸುವುದು ‘ಯೋಗ’ವೇ ಆಗಿದೆ. ಯೋಗ ಪಿತಾಮಹ ಪತಂಜಲಿ ಮುನಿಗಳು ತಿಳಿಸುವಂತೆ “ಚಿತ್ತ ವೃತ್ತಿಗಳ ನಿರೋಧ ಅಥವಾ ನಿಯಂತ್ರಿಸುವುದೇ ಯೋಗ” ಎಂದಿರುವರು. ಹಾಗೆಯೇ ಮನಸ್ಸನ್ನು ಪ್ರಶಮನಗೊಳಿಸುವ, ಶಾಂತಗೊಳಿಸುವ ಉಪಾಯವೇ ಯೋಗ. ಒಟ್ಟಾರೆ ‘ಯೋಗವು’ ಒಂದು ಶುದ್ಧ ಮನಃಶಾಸ್ತ್ರವಾಗಿದೆ. ಶಾರೀರಿಕ ದೃಢತೆ ಮತ್ತು ಮಾನಸಿಕ ಸ್ಥಿರತೆ ಈ ಎರಡನ್ನು ಯೋಗಾಸನಗಳು ನೀಡುತ್ತವೆ. ಶರೀರದ ಜೊತೆ ಮನಸ್ಸನ್ನು ಪಳಗಿಸುವ ಕ್ರಿಯೆ ಇಲ್ಲಿದೆ.
ಯೋಗ ನಮ್ಮ ಸಂಸ್ಕೃತಿಯ ಪ್ರತೀಕ
ಯೋಗ ನಮ್ಮ ದೇಶದ ವಿಶಿಷ್ಟ ಕೊಡುಗೆ, ಸಂಸ್ಕೃತಿಯ ಪ್ರತೀಕ. ಇಂದು ಅದಕ್ಕೆ ಜಾಗತಿಕ ಮಹತ್ವ ದೊರಕಿರುವುದು ಸಂತಸದ ಸಂಗತಿ. ಈ ಕುರಿತು ಅನೇಕ ಪ್ರಾಚೀನ ಗ್ರಂಥಗಳು ಪ್ರಕಟವಾಗಿವೆ. ಇದು ಏನನ್ನು ತೊರೆಯಬೇಕೆಂದು ಹೇಳುವ ತತ್ವವಲ್ಲ. ಮನಸ್ಸನ್ನು ನಿಯಂತ್ರಿಸುವ, ಏಕಾಗ್ರತೆ ಸಾಧಿಸಲು ಉಪಯುಕ್ತವಾದದ್ದು. ಅಭ್ಯಾಸ, ಪ್ರಯತ್ನಗಳಿಂದ ಶರೀರದ ಬೇರೆಬೇರೆ ಅಂಗಗಳಿಗೆ, ಸ್ನಾಯುಗಳಿಗೆ, ಮತ್ತು ನರನಾಡಿಗಳಿಗೆ ಸುಖ ವ್ಯಾಯಾಮದಿಂದ ಹೊಸ ಚೈತನ್ಯ ನೀಡಬಹುದೆಂಬುದನ್ನು ಯೋಗವು ವೈಜ್ಞಾನಿಕ ವಿಧಾನದಲ್ಲಿ ತಿಳಿಸುತ್ತದೆ. ಪತಂಜಲಿ, ಘೇರಂಡ ಮುಂತಾದ ಯೋಗ ವಿಜ್ಞಾನಿಗಳು ತಿಳಿಸುವಂತೆ ಯೋಗಾಸನಗಳಲ್ಲಿ ಸ್ಥಿರಸುಖ ಇರಬೇಕು ಎಂದು. ಸ್ಥಿರತೆ ಮತ್ತು ಸುಖತ್ವಗಳು ಯೋಗಾಸನದ ಲಕ್ಷಣಗಳು.
ಮೆದುಳಿನ ಬಲಭಾಗಕ್ಕೆ ಉತ್ತೇಜನ
ದೇಹ ಮತ್ತು ಮನಸ್ಸನ್ನು ಸಮತೋಲನಗೊಳಿಸುವ ಯೋಗದ ಸಾಧನೆಗೆ ಧ್ಯಾನವು ಒಂದು ಪರಿಕರ ಎನ್ನಬಹುದು. ಧ್ಯಾನಕ್ಕೆ ವಿಶಿಷ್ಟ ಸ್ಥಾನವಿದೆ. ಶರೀರವು ಗಡಸುತನವನ್ನು ಬಿಟ್ಟುಕೊಟ್ಟು, ಮನಸ್ಸು ವೃಥಾ ಅಲೆಯುವುದನ್ನು ತಪ್ಪಿಸಿ, ಏಕತಾನತೆಯನ್ನು ಮೈಗೂಡಿಸಿಕೊಳ್ಳುವುದೇ ಧ್ಯಾನ. ಯೋಗದ ಒಂದು ಭಾಗ ಧ್ಯಾನವಾಗಿದೆ. ಮಿದುಳಿನ ಬಲಭಾಗವನ್ನು ಉತ್ತೇಜನಗೊಳಿಸುವುದು ಧ್ಯಾನದ ಆಶಯ.
ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ
ಸದೃಢ ಆರೋಗ್ಯವಂತ ಶರೀರ ಹೊಂದಲು ಶಾರೀರಿಕ ಪರಿಶ್ರಮ ಅಗತ್ಯ. ನಗರವಾಸಿಗಳು ಅಂತಹ ಅವಕಾಶಗಳಿಂದ ವಂಚಿತರಾಗಿದ್ದಾರೆ. ಮಾನಸಿಕ ಪರಿಶ್ರಮಕ್ಕಿರುವ ಆದ್ಯತೆ ದೇಹಶ್ರಮಕ್ಕಿಲ್ಲ. ಸಮಯದ ಅಭಾವ, ಯಂತ್ರಗಳನ್ನು ಬಳಸುವುದು, ಕಲುಷಿತ ವಿಷಕಾರಕ ವಸ್ತುಗಳ ಸೇವನೆ, ಅಶುದ್ಧಗಾಳಿ, ನೀರು ಹೀಗೆ ಹಲವು ಕಾರಣಗಳು. ಇದರಿಂದ ಹಲವು ರೋಗಗಳಿಗೆ ನಾವು ತುತ್ತಾಗುತ್ತಿದ್ದೇವೆ. ಪ್ರತಿದಿನ ಒಂದು ಗಂಟೆ ಯೋಗಾಭ್ಯಾಸ ಕ್ರಮದಲ್ಲಿ ತೊಡಗಿಕೊಂಡರೆ ಅಂಗಾಂಗಗಳಿಗೂ ಸೂಕ್ತವಾದ ವ್ಯಾಯಾಮ ದೊರೆತು ಆರೋಗ್ಯ ವರ್ಧನೆಗೆ ಪೂರಕವಾಗುತ್ತದೆ. ವಿವಿಧ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ಯೋಗಾಭ್ಯಾಸ ಕ್ರಮದಲ್ಲಿ ಅಡಗಿದೆ ಎಂಬುದನ್ನು ಅಂತಾರಾಷ್ಟ್ರೀಯ ಯೋಗದಿನವಾದ ಇಂದು ಇದರ ಮಹತ್ವ ಅರಿತು – ಆಚರಿಸೋಣ, ಉತ್ತಮ ಆರೋಗ್ಯಕ್ಕೆ ಚಿಂತನಶೀಲರಾಗೋಣ.
ಮಹಿಳಾ ಸಬಲೀಕರಣದಲ್ಲಿ ಯೋಗದ ಪಾತ್ರ
ಮಹಿಳೆಯರನ್ನು ಒತ್ತಡ ಜೀವನದಿಂದ ಮುಕ್ತಗೊಳಿಸಲು, ಅವರು ಶಾಂತಿ ನೆಮ್ಮದಿ ಹಾಗೂ ಸೌಖ್ಯಜೀವನ ಸಾಗಿಸಲು, ಅನಾರೋಗ್ಯದಿಂದ ಅವರನ್ನು ಮುಕ್ತಗೊಳಿಸಲು. ಮಾನಸಿಕ, ಶಾರೀರಿಕ ಸದೃಢರನ್ನಾಗಿ ಮಾಡಲು, ತಮ್ಮ ಕಾರ್ಯದಲ್ಲಿ ಹೆಚ್ಚು ಕ್ರಿಯಾಶಿಲರನ್ನಾಗಿಸಲು, ಋಣಾತ್ಮಕ ಗುಣಗಳನ್ನು ಹೆಚ್ಚಿಸಲು, ಉತ್ತಮ ಆರೋಗ್ಯ ಸಂವರ್ಧನೆಗೆ ಯೋಗ ಸಹಕಾರಿಯಾಗಿದೆ. ಮಹಿಳೆಯರಿಗೆ ಉಚಿತವಾಗಿ ದೊರಕುವುದು ಯೋಗ, ಧ್ಯಾನ, ಪ್ರಾಣಾಯಾಮ. ಗರ್ಭಿಣಿ ಮಹಿಳೆಯರಿಗೂ ಸಹಜ ಹೆರಿಗೆ ಪ್ರಕ್ರಿಯೆಗೆ ಪೂರಕವಾಗಿದೆ. ಮಹಿಳೆಯರ ಬೌದ್ಧಿಕ, ವೈಚಾರಿಕ ಬೆಳವಣಿಗೆಗೆ ಯೋಗ ಪೂರಕವಾಗಿದೆ. ಪ್ರತಿನಿತ್ಯ ಯೋಗ ಮಾಡುವುದರಿಂದ ಅವರ ಆಯಷ್ಯ, ಆರೋಗ್ಯ ಹೆಚ್ಚುವುದು. ಸಮಾಧಾನದ ಬದುಕಿಗೆ ಯೋಗ ಪೂರಕವಾಗಿದೆ. ಯೋಗದಿಂದ ಮಹಿಳೆಯರಲ್ಲಿ ಸಿಟ್ಟು, ಕೋಪ, ಅಸಹನೆಯಂತಹ ಭಾವನೆಗಳು ಕಡಿಮೆಯಾಗುತ್ತವೆ. ಯೋಗದಿಂದ ಮಹಿಳೆಯರ ಸೌಂದರ್ಯ ಹೆಚ್ಚುತ್ತದೆ. ಮಹಿಳೆಯರಲ್ಲಿದ್ದ, ಬಿ.ಪಿ. ಶುಗರ್, ಮಂಡಿಬೇನೆ, ಸೊಂಟನೋವು, ಬೆನ್ನುನೋವು, ತಾಮಸ ಗುಣಗಳು ಕಡಿಮೆಯಾಗುತ್ತವೆ. ಹೀಗೆ, ಯೋಗವು ಮಹಿಳೆಯರ ಸಬಲೀಕರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಯೋಗ, ಧ್ಯಾನ, ನೈತಿಕ ಶಿಕ್ಷಣ ಅಗತ್ಯ
ಸದೃಢ ಶರೀರ ಹಾಗೂ ಸ್ವಸ್ಥ ಮನಸ್ಸಿಗೆ ಯೋಗ-ಧ್ಯಾನ ಮಾರ್ಗ ಮಹತ್ವದ್ದು. ಯೋಗ, ಧ್ಯಾನ ಮತ್ತು ನೈತಿಕ ಶಿಕ್ಷಣ ವಿದ್ಯಾರ್ಥಿ ದಿಸೆಯಿಂದಲೇ ಆರಂಭಗೊಳ್ಳಬೇಕು. ಅಂದಾಗ ಸುಸ್ಥಿರ ಸಮಾಜದ ಬುನಾದಿ ಆಗಬಲ್ಲದು. ವೈದ್ಯಕೀಯ ಕ್ಷೇತ್ರ ಬೆಳೆಯುತ್ತಿದೆ. ಅದರ ಜತೆಗೇ ಜನರ ಅನಾರೋಗ್ಯ ವ್ಯವಸ್ಥೆ ದ್ವಿಗುಣಗೊಳ್ಳುತ್ತಿದೆ. ಇದಕ್ಕೆ ಕಾರಣ ಹಲವು. ನಮ್ಮ ಗ್ರಾಮೀಣರು ಶತಾಯುಷಿಗಳಾಗಿ ಒಂದು ದಿನವೂ ವೈದ್ಯರ ಹತ್ತಿರ ಹೋಗದೆ ಬದುಕಿ ಬಾಳಿದ್ದು ನೆನಪಿಸಿ ಕೊಳ್ಳೋಣ. ಕಾರಣ ದೈಹಿಕ ಶ್ರಮ. ನಗರವಾಸಿಗಳಾದ ನಮಗೆ ಹಲವು ಬಗೆಯ ಒತ್ತಡಗಳಿವೆ. ದಿನನಿತ್ಯದ ಬದುಕಿನ ಒತ್ತಡ, ಉದ್ವೇಗ, ಅತೃಪ್ತಿಗಳಿಗೆ ನಿಯಂತ್ರಣ ಸಾಧಿಸುವಲ್ಲಿ ಯೋಗ ಮತ್ತು ಧ್ಯಾನ ಪರಿಹಾರ ಒದಗಿಸಬಲ್ಲದು ಎಂಬುದು ನನ್ನ ಆಶಯ.
ಡಾ. ಗಂಗಾಧರಯ್ಯ ಹಿರೇಮಠ
ವಿಶ್ರಾಂತ ಪ್ರಾಧ್ಯಾಪಕರು, ದಾವಣಗೆರೆ.
ಇದನ್ನೂ ಓದಿ- ರೇಣುಕಾಸ್ವಾಮಿ ಹತ್ಯೆಗೆ ಕಾರಣ ಪುರುಷಹಂಕಾರ ದರ್ಶನ