ಸೇಂಟ್ ಲೂಸಿಯಾ (ಡೇರನ್ ಸಾಮಿ ಕ್ರೀಡಾಂಗಣ): ಭಾರತ ತಂಡದ ನಾಯಕ ರೋಹಿತ್ ಶರ್ಮಾ ರೊಚ್ಚಿಗೆದ್ದವರಂತೆ ಆಡಿದರು. ಅವರ ಅದ್ಭುತ 92 ರನ್ ಗಳ ಇನ್ನಿಂಗ್ಸ್ ಭಾರತಕ್ಕೆ ಪ್ರಬಲ ಆಸ್ಟ್ರೇಲಿಯಾ ವಿರುದ್ಧ 24 ರನ್ ಗಳ ಭರ್ಜರಿ ಗೆಲುವು ತಂದುಕೊಟ್ಟಿತು.
ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಭಾರತ ತನ್ನಅಜೇಯ ದಾಖಲೆಯನ್ನು ಮುಂದುವರೆಸಿತು. ಆಸ್ಟ್ರೇಲಿಯಾವನ್ನು ಸೋಲಿಸುವ ಮೂಲಕ ಸೆಮಿಫೈನಲ್ ತಲುಪಿತು. ಇನ್ನೊಂದೆಡೆ ಆಸ್ಟ್ರೇಲಿಯಾ ಸತತ ಎರಡು ಸೋಲುಗಳಿಂದಾಗಿ ಸೆಮಿಫೈನಲ್ ತಲುಪುವ ಆಸೆಗಾಗಿ ಅಪಘಾನಿಸ್ತಾನ ಮುಂದಿನ ಪಂದ್ಯದಲ್ಲಿ ಸೋಲುವುದಕ್ಕೆ ಕಾಯಬೇಕಾಗಿದೆ.
ಭಾರತ ಕಲೆ ಹಾಕಿದ 205 ರನ್ ಗಳನ್ನು ಬೆನ್ನೆತ್ತಿದ ಆಸ್ಟ್ರೇಲಿಯಾ ಒಂದು ಹಂತದಲ್ಲಿ ಗೆದ್ದೇ ಬಿಡುತ್ತದೆ ಎಂಬ ಸನ್ನಿವೇಶವಿತ್ತು. ಟ್ರಾವಿಸ್ ಹೆಡ್ ಭಾರತದ ಬೌಲರ್ ಗಳನ್ನು ತೀವ್ರವಾಗಿ ದಂಡಿಸಿ 43 ಎಸೆತಗಳಲ್ಲಿ 76 ರನ್ ಗಳಿಸಿದರು. ನಾಯಕ ಮಿಚಲ್ ಮಾರ್ಶ್ ಕೂಡ ಉಪಯುಕ್ತ 37 ರನ್ ಗಳಿಸಿ ಹೆಡ್ ಗೆ ಬೆಂಬಲವಾಗಿ ನಿಂತಿದ್ದರು. ಮಿಚ್ ಮಾರ್ಶ್ ಔಟಾದ ನಂತರ ಆಡಲು ಬಂದ ಗ್ಲೆನ್ ಮ್ಯಾಕ್ಸ್ ವೆಲ್ ಆಡುತ್ತಿದ್ದ ರೀತಿಗೆ ಭಾರತ ಪಾಳಯ ಆತಂಕಕ್ಕೆ ಒಳಗಾಗಿತ್ತು. ಆದರೆ ಕುಲದೀಪ್ ಯಾದವ್ ಗೂಗ್ಲಿಗೆ ಮ್ಯಾಕ್ಸ್ ವೆಲ್ ಔಟಾಗಿ ತೆರಳಿದರು. ಇನ್ನೊಂದು ಬದಲಿಯಲ್ಲಿ ಆಸ್ಟ್ರೇಲಿಯಾ ಗೆಲುವಿನ ಆಸೆಯನ್ನು ಕಾಪಾಡಿಕೊಂಡುಬಂದಿದ್ದ ಟ್ರಾವಿಸ್ ಹೆಡ್ ಬುಮ್ರಾ ಬೌಲಿಂಗ್ ನಲ್ಲಿ ರೋಹಿತ್ ಶರ್ಮಾಗೆ ಕ್ಯಾಚ್ ನೀಡಿ ಔಟಾಗುವುದರೊಂದಿಗೆ ಭಾರತದ ಕೈ ಮೇಲಾಯಿತು. ಆಸ್ಟ್ರೇಲಿಯಾ ನಿಗದಿತ 20 ಓವರ್ ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು 181 ರನ್ ಗಳಿಸಿ 24 ರನ್ ಗಳಿಂದ ಸೋಲನ್ನಪ್ಪಿತು. ಭಾರತದ ಪರ ಅರ್ಶದೀಪ್ ಮೂರು ವಿಕೆಟ್ ಗಳಿಸಿದರೆ ಕುಲದೀಪ್ ಯಾದವ್ ಎರಡು ವಿಕೆಟ್ ಕಿತ್ತರು. ಜಸ್ಪೀತ್ ಬುಮ್ರಾ ಮತ್ತು ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್ ಉರುಳಿಸಿದರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಭಾರತ ರೋಹಿತ್ ಶರ್ಮಾ 92 (41), ಸೂರ್ಯಕುಮಾರ್ ಯಾದವ್ 31(16), ಶಿವಂ ದುಬೆ 28 (22), ಹಾರ್ದಿಕ್ ಪಾಂಡ್ಯ 237 (17) ಅವರ ಆಕ್ರಮಣಕಾರಿ ಆಟದಿಂದಾಗಿ 20 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿತ್ತು.
8 ಸಿಕ್ಸರ್, 7 ಬೌಂಡರಿ ಸಿಡಿಸಿ 224.39 ಸ್ಟ್ರೈಕ್ ರೇಟ್ ನಲ್ಲಿ 92 ರನ್ ಗಳಿಸಿ ಭಾರತದ ಗೆಲುವಿಗೆ ಕಾರಣರಾದ ರೋಹಿತ್ ಶರ್ಮಾ ಅವರಿಗೆ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ನೀಡಲಾಯಿತು.
ಅಫಘಾನಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳ ನಡುವೆ ನಡೆಯುವ ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ ಅಫಘಾನಿಸ್ತಾನ ಗೆದ್ದರೆ ಭಾರತದೊಂದಿಗೆ ಸೆಮಿಫೈನಲ್ ತಲುಪಲಿದೆ. ಒಂದು ವೇಳೆ ಅಫಘಾನಿಸ್ತಾನ ಪಂದ್ಯ ಸೋತರೆ ಅಫಘಾನಿಸ್ತಾನ, ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶ ತಂಡಗಳಲ್ಲಿ ಒಂದು ರನ್ ರೇಟ್ ಆಧಾರದಲ್ಲಿ ಸೆಮಿಫೈನಲ್ ತಲುಪಲಿದೆ.
ಭಾರತ ಸೆಮಿಫೈನಲ್ ಪಂದ್ಯವನ್ನು ಇಂಗ್ಲೆಂಡ್ ವಿರುದ್ಧ ಆಡಲಿದೆ.