ಅನ್ನದ ನೆರಳೂ ದೆವ್ವದ ಕಾಟವೂ

Most read

ಕಡು ಬಡತನದಲ್ಲಿ ಓದಿ ಬೆಳೆದು ತೃಪ್ತಿಯ ಬದುಕು ಕಟ್ಟಿಕೊಂಡು ಇದೀಗ ತನ್ನ ಓದಿನ ದಿನಗಳ ಸಂಕಷ್ಟಗಳಿಗೆ ಅಕ್ಷರ ರೂಪ ನೀಡಿ ಮನ ಮಿಡಿಯುವ ಕಥೆಯಾಗಿಸಿದ್ದಾರೆ ಸಹ ಪ್ರಾಧ್ಯಾಪಕ ಡಾ. ಅಣ್ಣಪ್ಪ ಎನ್‌ ಮಳೀಮಠ್.‌ ಸ್ವಾನುಭವದ ಮೊದಲ ಭಾಗ ಇಲ್ಲಿದೆ.

ಪ್ರೈಮರಿ ಮುಗಿಸಿ ಹೈಸ್ಕೂಲ್‍ಗೆ ಹೋಗಬೇಕಿದ್ದ ನನಗೆ ಯಾವ ಶಾಲೆಗೆ ಹೋಗಬೇಕು ಎಂಬ ಅರಿವೂ ಇರಲಿಲ್ಲ. ಏಳನೇ ಕ್ಲಾಸ್ ಪಾಸಾದ ನನ್ನನ್ನು ಅಪ್ಪ “ಹುಡ್ಗ ಎಲ್ಲಿಗೆ ಹೋತೀಯ, ಇಲ್ಲೇ ಅರಸಾಳಿಗೆ ಓಡಾಡು” ಅಂದ. ಈಗಾಗಲೇ ನನ್ನ ಅಕ್ಕಂದಿರು, ಊರಿನ ಬಹುತೇಕ ಹುಡುಗರು ಅಲ್ಲಿಗೇ ಹೋಗ್ತಾ ಇದ್ದರಿಂದ ನನ್ನನ್ನು ಅಲ್ಲಿಗೆ ಕಳಿಸಲು ಸಮ್ಮತಿ ಸಿಕ್ತು. ಸಣಣ್ಣ ಅದಕ್ಕೆ ಬೇಕಾದ ದಾಖಲಾತಿಗಳನ್ನು ಜೋಡಿಸಿಕೊಟ್ಟು ಕಳಿಸಿದ. ಅಂತೂ ಹೈಸ್ಕೂಲಿಗೆ ಹೆಜ್ಜೆ ಹಾಕಿದೆ. ನಮ್ಮೂರಿಂದ ಅರಸಾಳಿನ ಹೈಸ್ಕೂಲಿಗೆ ಏಳು ಕಿಲೋಮೀಟರ್. ಬೆಳಿಗ್ಗೆ ಎಂಟಕ್ಕೆ ಹೊರಟರೆ ಶಾಲೆ ಮುಗಿಸಿ ಬರುವುದು ಹೆಚ್ಚು ಕಡಿಮೆ ಕತ್ತಲಾಗುತ್ತಿತ್ತು. ದಿನಕ್ಕೆ ಬರೊಬ್ಬರಿ ಹದಿನಾಲ್ಕು ಕಿಲೋಮೀಟರ್ ನಡಿಗೆ ನಮ್ಮದಾಗಿತ್ತು. ನಮ್ಮೂರಿಂದ ನಾನು, ರಾಜು, ಸುರೇಶ, ನನ್ನಕ್ಕ ಗೌರಿ, ಕುಶಾಲ ಹೊಕ್ತಿದ್ರೆ ಮುಂದೆ ಕೊಳವಂಕದಿಂದ ಸಾಕಷ್ಟು ಸಂಖ್ಯೆಯಲ್ಲಿ ಸಾಲುಗಟ್ಟಿ ಹೆಜ್ಜೆ ಹಾಕ್ತಿದ್ರು. ಶಾಲೆಗೆ ಹೋಗೋ ಎಲ್ಲರೂ ಊಟ ಕಟ್ಕಂಡು ಹೋಗ್ತಿರಲಿಲ್ಲ. ಕೆಲವರಿಗೆ ಅನ್ನದ ಕೊರತೆಯಿದ್ದರೆ, ಕೆಲವರಿಗೆ ಬ್ಯಾಗು ಗತಿಯಿಲ್ಲದ್ದರಿಂದ, ಪುಸ್ತಕಗಳನ್ನು ಒಯ್ಯಲು ಕಷ್ಟವಾಗುತಿತ್ತು. ಇದರಿಂದ ಊಟದ ಡಬ್ಬಿ ಬಿಟ್ಟು ಹೋಗೋದು ಸಹಜವಾಗಿತ್ತು. ನನಗೆ ಡಬ್ಬಿ ಕೆಲವಾರು ದಿನಗಳಲ್ಲಿ ತೆಗೆದುಕೊಂಡು ಹೋಗಬಹುದಿತ್ತೇನೋ, ಆದರೆ ಬ್ಯಾಗು ಕೊಳ್ಳುವ ಶಕ್ತಿಯಂತೂ ಇರಲಿಲ್ಲ. ಹಂಗಾಗಿ ನಾನು ಅಣ್ಣ ತೊಟ್ಟು ಬಿಟ್ಟ ಹಳೇ ಕಾಚದ ಎಲೆಸ್ಟಿಕ್ ದಟ್ಟಿಯನ್ನು ತಕ್ಕಂಡು, ಅದನ್ನು ಪುಸ್ತಕಗಳಿಗೆ ಸುತ್ತಿ, ಅದರ ಒಂದು ಬದಿಯಲ್ಲಿ ಜ್ಯಾಮಿಟ್ರಿ ಬಾಕ್ಸ್ ಸಿಕ್ಕಿಸಿಕೊಂಡು ಹೋಕ್ತಿದ್ದೆ. ಅನಂತರ ಕೆಲವು ದಿನಗಳಲ್ಲಿ ಊರಿಗೆ ಹತ್ತಿ ಬೆಳೆ ಕಾಲಿಟ್ಟದ್ದರಿಂದ, ಹತ್ತಿ ಬೀಜಗಳನ್ನು ಒಂದು ಬಟ್ಟೆ ಚೀಲದಲ್ಲಿ ಕೊಡ್ತಿದ್ದರು. ಇದು ಒಳ್ಳೆ ಸಮಯ ಎಂದು ಭಾವಿಸಿದ ನಾನು, ಅವ್ವನಿಗೆ “ಈ ಚೀಲ ಮಾತ್ರ ನನಗೆ ಬೇಕು, ಇದನ್ನು ಸ್ಕೂಲಿಗೆ ತಗೊಂಡು ಹೋಗಾಕೆ ‘ಬ್ಯಾಗ್’ ಆಗುತ್ತೆ ಅಂದೆ. ಅಲ್ಲಿಯವರೆಗೆ ಚೀಲ ಅಂದ್ರೆ ಮನೆಯಲ್ಲಿ ಬಳಸೋದು, ಬ್ಯಾಗ್ ಅಂದ್ರೆ ಸ್ಕೂಲಿಗೆ ತಗೊಂಡು ಹೋಗೋದು ಎನ್ನುವ ಭಾವನೆ ನನ್ನಲ್ಲಿತ್ತು. ಅಂತೂ ಸ್ಕೂಲಿಗೆ ಬ್ಯಾಗ್ ನನಗೆ ಸಿಕ್ತು, ಕೆಲವೊಮ್ಮೆ ನನ್ನ ಬ್ಯಾಗು ಕೊಳೆಯಾದಾಗ ಪುನಃ ಅಣ್ಣನ ಕಾಚದ ಎಲೆಸ್ಟಿಕ್ ದಟ್ಟಿಯೇ ಗತಿಯಾಗುತ್ತಿತ್ತು.

ಅರಸಾಳಿನ ಹೈಸ್ಕೂಲಿಗೆ ಹೋಗುವಾಗ ಪ್ರತಿದಿನ ನಮ್ಮೂರಿನ ಕಡೆ ನಮ್ಮ ಪ್ರಾಥಮಿಕ ಶಾಲೆಗೆ ಬರುವ  ಶೇಷಗಿರಿ ಮೇಷ್ಟ್ರು ಸಿಕ್ತಾ ಇದ್ರು. ಅವರು ಯಾಕೋ ನನ್ನ ಮೇಲೆ ವಿಶೇಷ ಅಭಿಮಾನ ಇಟ್ಕಂಡಿದ್ದರು. ಹಾಗೇನೆ ನಮ್ಮೂರಿಂದ ಹೋಗೋ ಎಲ್ಲರಿಗೂ ಅವರ ಮೇಲೆ ವಿಶೇಷ ಗೌರವ, ಭಕ್ತಿಯಿತ್ತು. ಒಂದು ದಿನ ಸಿಕ್ಕಾಗ “ಏ ಮಜ್ಜಿಗೆ ಯಾಕೋ ಈ ಕಲ್ಲು ರಸ್ತೆಯಲ್ಲಿ ಚಪ್ಪಲಿ ಇಲ್ದೆ ಹೋಕ್ತೀಯ ಅಂದ್ರು. ನಾನು ಹಾಗೇನೆ ನಕ್ಕು ಸುಮ್ಮನಾದೆ.. ನಿಮ್ಮ ಅಣ್ಣನಿಗೆ ಹೇಳ್ತೀನಿ… ಚಪ್ಪಲಿ ಇಲ್ಲೇನೋ ಅಂದ್ರು” ನಾನು ಏನು ಉತ್ತರ ಕೊಡಲಿಲ್ಲ. ನನ್ನ ದೊಡ್ಡಣ್ಣನಿಗೆ ಮೇಷ್ಟ್ರು ಕರೆಯೋ ಅಡ್ಡ ಹೆಸರು ಈ ಮಜ್ಜಿಗೆ ಮಂಜ ಅಂತ.  ಇದಕ್ಕೆ ಕಾರಣ ಅವನು ಶಾಲೆಗೆ ಹೋದಾಗ ಮಜ್ಜಿಗೆ ಬೇಕು ಅಂತ ರಚ್ಚೆ ಹಿಡಿದಿದ್ದನಂತೆ. ಅದಕ್ಕೆ ಮೇಷ್ಟ್ರು ಅವತ್ತಿಂದ ಅವನಿಗೆ ಮಜ್ಜಿಗೆ ಅಂತ ಕರೆತಿದ್ರು. ಮುಂದೆ ನಾನು ಶಾಲೆಗೆ ಸೇರಿದ ಮೇಲೆ ನನಗೂ ಅದೇ ಹೆಸರು ಖಾಯಂ ಆತು. ಮೇಷ್ಟ್ರು ಬಾಯಲ್ಲಿ ನನಗೆ ಮಜ್ಜಿಗೆ ಅನ್ನೋದೆ ಇವತ್ತಿನ ಬ್ರಾಂಡ್ ತರ ಆಗಿತ್ತು. ಚಪ್ಪಲಿ ಇಲ್ದೆ ಅದೆಷ್ಟೋ ದಿನಗಳು ಕಲ್ಲು ರಸ್ತೆಯಲ್ಲಿ ನಡೆಯೋದು ನನಗೆ ಅಭ್ಯಾಸವಾಗಿ ಬಿಟ್ಟಿತು. ಹೊಸ ಚಪ್ಪಲಿ ಅಂದ್ರೆ ನನಗೆ ಒಂದು ಕನಸು. ಪ್ರೈಮರಿಗೆ ಹೋಗುವಾಗ ಮನೆಯಲ್ಲಿ ಅಡಿಕೆ ಹಾಳೆಯನ್ನು ಚಪ್ಪಲಿಯಾಗಿ ಮಾಡಿಕೊಂಡು, ಅದರಲ್ಲಿ ನಡೆದು ಚಪ್ಪಲಿಯ ಕಲ್ಪನೆ ಮಾಡಿಕೊಳ್ಳುತ್ತಿದ್ದೆ. ಮುಂದೆ ಹೈಸ್ಕೂಲಿಗೆ ಸೇರಿದಾಗಲೂ ಚಪ್ಪಲಿಯ ಧ್ಯಾನದಲ್ಲಿದ್ದೆ. ಆದರೆ ಚಪ್ಪಲಿ ಇರಲಿಲ್ಲ. ಅನಂತರ ಅಪ್ಪ ಒಂದು ದಿನ ಹೊಸ ಚಪ್ಪಲಿ ಕೊಡಿಸಿದ. ಬೇಗ ಸವೆಯಬಾರದು ಅಂತ ಪ್ಯಾರಗಾನಿನ ದಪ್ಪ ಚಪ್ಪಲಿ ತಗೊಂಡು, ಓಡಾಡಕ್ಕೆ ಸುರುಮಾಡ್ದೆ. ಆದರೆ ಕಾಲು ಚಪ್ಪಲಿಗೆ ಹೊಂದಿಕೊಳ್ಳದೇ ಕಾಲಿನ ಹಿಂಮ್ಡಿ ತಿರು ತಿರುಗಿ ಹೋಗ್ತಾ ಇತ್ತು. ಅಂತೂ ನಿಧಾನಕ್ಕೆ ಚಪ್ಪಲಿ ಅಭ್ಯಾಸವಾಯಿತು. ಎಷ್ಟೋ ದಿನ ಯಾರಾದ್ರು ಈ ಚಪ್ಪಲಿ ಕದ್ದು ಬಿಟ್ಟಾರು ಅಂತ, ಒಂದು ಕಣ್ಣು ಅದರ ಮೇಲೆ ಇಟ್ಟಿದ್ದೆ.

ಈ ಎಂಟನೇ ಕ್ಲಾಸು ನನಗೆ ಒಂದು ವಿಚಿತ್ರ ಅನುಭವ ನೀಡಿತು. ಹಳ್ಳಿ ಕಲ್ಲು ರಸ್ತೆಯಲ್ಲಿ ತಿರುಗಾಡಿದ ನನಗೆ ಅರಸಾಳಿನ ಟಾರು ರಸ್ತೆ, ಡಾಂಬಾರಿನ ಗಮಗಮ ವಾಸನೆ, ಪ್ಯಾಂಟು ಹಾಕಿಕೊಂಡು ಬರುವ ಹುಡುಗರು, ಹೊಸ ಹೊಸ ಚೂಡಿದಾರ, ಲಂಗದಾವಣಿ ಹಾಕಿಕೊಂಡು ಬರುವ ಹುಡುಗಿಯರನ್ನು ನೋಡಿ ಯಾವುದೋ ಹೊಸ ಜಗತ್ತಿಗೆ ಪ್ರವೇಶವಾದಂತೆ ಅನಿಸಿತು. ಪ್ರೈಮರಿಯಲ್ಲಿ ಹಿಂದಿ ಅನ್ನೋ ವಿಷಯವಿದೆ ಎಂಬ ಸಣ್ಣ ಅರಿವು ಇರಲಿಲ್ಲ. ಹೈಸ್ಕೂಲಿನಲ್ಲಿ ಸರಸ್ವತಿ ಅನ್ನೋ ಹಿಂದಿ ಟೀಚರ್ ಬರ್ತಿದ್ರು, ಏನೇನೊ ಹೇಳ್ತಿದ್ರು. ಅವರು ಹೇಳಿದ್ದು ಮಧ್ಯಾವಧಿ ಪರೀಕ್ಷೆ ಬಂದ್ರು ಅರ್ಥವಾಗಲಿಲ್ಲ. ಪರೀಕ್ಷೆ ಬಂತು, ಏನು ಬರೆಯಬೇಕು ಅನ್ನೋದು ಗೊತ್ತಿರಲಿಲ್ಲ. ಸೀನಿಯರ್ ಗೆಳೆಯರ ಹತ್ರ ಕೇಳ್ದೆ ಅವರು “ಏ ಏನಕ್ಕೆ ಹೆದರಕ್ಕೋತೀಯ, ಹಿಂದಿ ಅಂದ್ರೆ ಹಿಂದೆ ಮುಂದೆ ಬರೆಯೋದು” ಅಂದ್ರು. ಓ ಇಷ್ಟೆನಾ ಅಂದುಕ್ಕೊಂಡು ಪ್ರಶ್ನೆ ಪತ್ರಿಕೆಯ ಮೇಲಿನ ಪ್ರಶ್ನೆಗಳಿಗೆ ಕೆಳಗಿನ ಪ್ರಶ್ನೆಗಳೇ ಉತ್ತರ, ಕೆಳಗಿನ ಪ್ರಶ್ನೆಗಳಿಗೆ ಮೇಲಿನ ಪ್ರಶ್ನೆಗಳೇ ಉತ್ತರವೆಂದು ಬರೆದು ಮಧ್ಯಾವಧಿ ಪರೀಕ್ಷೆ ಮುಗಿಸಿದೆ. ಮೌಲ್ಯಮಾಪನ ಮಾಡಿದ ಟೀಚರ್ “ಏ, ನೀನು ಎಲ್ಲಿ ಹಿಂದೆ ಕಲ್ತಿದ್ದೀಯ, ಯಾವ ಊರು, ಯಾವ ಶಾಲೆಯಿಂದ ಬಂದಿದ್ದೀಯ? ಯಾವ ಮೇಷ್ಟ್ರು ನಿನಗೆ ಹಿಂದೆ ಕಲಿಸಿದ್ದು” ಎಂದೆಲ್ಲಾ ಜೋರು ಧ್ವನಿಯಿಂದ ಹೆದರಿಸಿದರು. ಮಾತೆ ಬಾರದ ನಾನು “ಇಲ್ಲ ಮೇಡಂ, ನೀವೆ ನನಗೆ ಮೊದಲು ಹಿಂದೆ ಕಲಿಸ್ತೀರೋದು. ಇಲ್ಲಿಯವರೆಗೆ ಹಿಂದೆ ಕಲಿತಿಲ್ಲ” ಎಂದೆ. ಅಲ್ಲಿಂದ ಅವರು ಮೌನಿಯಾಗಿ ಹಿಂದಿ ವರ್ಣಮಾಲೆಯನ್ನು ಹಾಕಿಕೊಟ್ಟು ಕಲಿಸಿದರು. ಅಂತೂ ಇಂತೆಲ್ಲಾ ಜಂಜಾಟದಲ್ಲಿ ಒಂದು ವರ್ಷ ಎಂಟನೇ ಕ್ಲಾಸ್ ಮುಗಿಸಿದೆ. ಮುಗಿಸಿದೆ ಅನ್ನೋದಕ್ಕಿಂತ ಮುಗಿತು ಅಷ್ಟೆ. ಮೊದಲೇ ಸಣಕಲು ದೇಹದ ನನ್ನನ್ನು ಇಲ್ಲಿ ಓಡಾಡಿದ್ರೆ ಇವನು ಉದ್ದಾರ ಆಗಲ್ಲ ಅಂತ, ಅಣ್ಣ ಕೋಡೂರಿನ ಹೈಸ್ಕೂಲ್‍ಗೆ ಒಂಬತ್ತನೇ ತರಗತಿಗೆ ನನ್ನನ್ನು ಕರೆದುಕೊಂಡು ಹೋಗಿ ಸೇರಿಸಿ, ಅಲ್ಲೇ ಸ್ಕೂಲ್ ಎದುರಿಗಿರುವ ಬಿ.ಸಿ.ಎಂ ಹಾಸ್ಟೆಲ್‍ಗೂ ಬಿಟ್ಟು ಹೋದ.

(ಮುಂದಿನ ಭಾಗ ನಾಳೆ (22-01-2025) ಪ್ರಕಟವಾಗಲಿದೆ)


ಡಾ. ಅಣ್ಣಪ್ಪ ಎನ್‌ ಮಳೀಮಠ್‌

ಸಹ ಪ್ರಾಧ್ಯಾಪಕರು

ಇದನ್ನೂ ಓದಿಕೊರಗರ ಆಕ್ರೋಶ ರ್‍ಯಾಲಿ : ಇತಿಹಾಸ-ವರ್ತಮಾನ-ಭವಿಷ್ಯ

More articles

Latest article