ಅನ್ನದ ನೆರಳೂ ದೆವ್ವದ ಕಾಟವೂ- ಭಾಗ 2

Most read

ಕಡು ಬಡತನದಲ್ಲಿ ಓದಿ ಬೆಳೆದು ತೃಪ್ತಿಯ ಬದುಕು ಕಟ್ಟಿಕೊಂಡು ಇದೀಗ ತನ್ನ ಓದಿನ ದಿನಗಳ ಸಂಕಷ್ಟಗಳಿಗೆ ಅಕ್ಷರ ರೂಪ ನೀಡಿ ಮನ ಮಿಡಿಯುವ ಕಥೆಯಾಗಿಸಿದ್ದಾರೆ ಸಹ ಪ್ರಾಧ್ಯಾಪಕ ಡಾ. ಅಣ್ಣಪ್ಪ ಎನ್‌ ಮಳೀಮಠ್.‌ ಸ್ವಾನುಭವದ ಎರಡನೇ ಭಾಗ ಇಲ್ಲಿದೆ


ಭಾಗ ಒಂದು ಓದಿದ್ದೀರಾ? ಅನ್ನದ ನೆರಳೂ ದೆವ್ವದ ಕಾಟವೂ

ಕೋಡೂರು ನನ್ನ ಬದುಕಿನ ಕಷ್ಟದ ದಿನಗಳು ಹೌದು, ಒಂದು ರೀತಿಯಲ್ಲಿ ಸ್ವಲ್ಪ ಪರಿವರ್ತನೆಯ ದಿನವೂ ಹೌದು. ಅಲ್ಲಿ ನನಗಿಂತ ಕಷ್ಟ ಅನುಭವಿಸಿದ ಗೆಳೆಯರ ಒಡನಾಟ ಸಿಕ್ತು. ಒಂದೆರಡು ದಿನ ಹೆಂಗೋ ದಿನ ಕಳೆದೆ. ಹಾಸ್ಟೆಲ್ ಅಂದ್ರೆ ಅದು ದಿವಾಕರಣ್ಣನ ಹಂಚಿನ ಮನೆ. ಈ ಮನೆಗೆ ಹೊಕ್ಕರೆ ಮೊದಲು ಮುಂದಿನ ಕಡಿಮಾಡು ಇತ್ತು. ಜಗುಲಿಯಲ್ಲಿ ಎರಡು ಕೋಣೆಗಳಿದ್ದವು. ಅದರಲ್ಲಿ ಒಂದು ವಾರ್ಡನ್ ಗೋಲಿಯನಾಯ್ಕರ ಕಛೇರಿಯಾಗಿತ್ತು. ಅದರ ಪಕ್ಕದಲ್ಲಿ ಒಂದು ಕೋಣೆಯಿತ್ತು. ಅದರಲ್ಲಿ ಈರುಳ್ಳಿ, ಅಕ್ಕಿ, ಕೆಲವು ತರಕಾರಿ, ಕಾಳು ಬೇಳೆ, ಸಕ್ಕರೆ ಮುಂತಾದ ಹುಡುಗರಿಗೆ ಸಿಗದ ಅಮೂಲ್ಯ ವಸ್ತುಗಳ ದಾಸ್ತಾನು ಕೊಠಡಿಯಾಗಿತ್ತು. ಆದರೆ ಅದಕ್ಕೆ ಬಾಗಿಲಿರಲಿಲ್ಲ. ಹಂಗಾಗಿ ಊಟವೆಂದ್ರೆ ಕಷ್ಟಪಡುತ್ತಿದ್ದ ನಾನು ಆವಾಗೀವಾಗ ನಂಚಾಕೆ ಈರುಳ್ಳಿ ಕದಿಯುತ್ತಿದ್ದೆ. ನಂತರದ ದಿನಗಳಲ್ಲಿ ಅದು ಇನ್ನೊಂದು ಕಡೆಗೆ ವರ್ಗಾವಣೆಯಾಗಿ ಈರುಳ್ಳಿ ನನ್ನ ಕನಸಾಗಿ ಉಳಿಯಿತು. ರೇಶನ್ನಿನ ಆ ರೂಮು ವಾರ್ಡನ್ನಿನ ಆಪ್ತ ವಿದ್ಯಾರ್ಥಿ ಬಳಗವಾಗಿದ್ದ ಹಿರಿಯ ವಿದ್ಯಾರ್ಥಿಗಳ ಪಾಲಾಗಿರುತ್ತಿತ್ತು. ಆದರೆ ಎಸ್.ಎಸ್.ಎಲ್.ಸಿ ಯ ಆ ಹಿರಿಯ ವಿದ್ಯಾರ್ಥಿಗಳು ಓದಲೆಂದೇ ಹಾಸ್ಟೆಲ್ ಬಿಟ್ಟು ಕೋಡೂರಿನ ಊರೊಳಗೆ ರೂಮು ಮಾಡಿಕೊಂಡಿದ್ದರು. ಹಂಗಾಗಿ ನಮ್ಮ ತರಗತಿಯಲ್ಲಿ ಗಟ್ಟಿಮುಟ್ಟಾದ ರಮೇಶ, ಸ್ವಾಮಿ, ಪುಟ್ಟ, ಪುರುಷೋತ್ತಮರು ವಾರ್ಡನ್ನಿನ ವಿಧೇಯ ವಿದ್ಯಾರ್ಥಿಗಳಾದ್ದರಿಂದ, ಅದೇ ಕೊಠಡಿ ಅವರಿಗೆ ಮುಂದುವರಿಯಿತು.

ಕಡಿಮಾಡಿನ ಅರ್ಧ ಅಡಿ ಎತ್ತರದ ಜಗುಲಿಯ ಮೇಲೆ ಸಾಲಾಗಿ ನಾನು, ರತ್ನಾಕರ, ಯೋಗೇಂದ್ರ, ಧರ್ಮಪ್ಪ, ಉಮೇಶ, ಸತೀಶ, ವಸಂತ ಮುಂತಾದವರ ವಾಸಸ್ಥಾನವಾಗಿತ್ತು. ಇಲ್ಲಿ ಮಲಗಿದರೆ ಅದರ ಮೇಲ್ಭಾಗದಲ್ಲಿ ಒಂದು ದೊಡ್ಡ ತೊಲೆ ವಾಲಿದ ಕಂಬದ ಮೇಲೆ ನಿಂತಿತ್ತು. ಇದು ಬೀಳಬಹುದಾದ ಸ್ಥಿತಿಯಲ್ಲಿತ್ತು. ಆಕಸ್ಮಿಕವಾಗಿ ಬಿದ್ದರೆ ಎಲ್ಲರ ಸೊಂಟದ ಮೇಲೆ ಬೀಳುತ್ತಿತ್ತು, ಪ್ರತಿದಿನ ಮಲಗುವಾಗ ಆ ತೊಲೆಯ ಸುದ್ದಿ ಮಾತಾಡಿ, ನಿದ್ರೆಗೆ ಜಾರುತ್ತಿದ್ದೆವು. ಅದೃಷ್ಟವೋ ಎನ್ನುವಂತೆ ಅದು ಬೀಳಲಿಲ್ಲ. ನಾವು ಎದ್ದೆವು, ಗೆದ್ದೆವು. ಈ ಹೊತ್ತಿಗೆ ನಮಗೆಲ್ಲ ಈ ಎಸ್.ಎಸ್.ಎಲ್.ಸಿ ಹುಡ್ರು ಕಾಟ ಜಾಸ್ತಿಯಿತ್ತು. ಅವರೆಲ್ಲ ನಮ್ಮಿಂದ ಗೌರವ ನಿರೀಕ್ಷಿಸುತ್ತಿದ್ದರು. ಕೆಲವೊಮ್ಮೆ ಇಲ್ಲಸಲ್ಲದ ವಿಚಾರಗಳಿಗೆ ಜಗಳ ಮಾಡ್ತ ಇದ್ರು. ಅದರಲ್ಲಿ ಶೇಖರಪ್ಪ, ಗಣೇಶ, ಯೋಗೇಂದ್ರ, ರಾಮಚಂದ್ರ, ಮಂಜಪ್ಪ, ಯೋಗೇಶ ಇತ್ಯಾದಿ. ಇದರಲ್ಲಿ ಮುಂಚೂಣಿ ನಾಯಕ ಶೇಖರಪ್ಪ. ಕುಳ್ಳಕ್ಕೆ, ದಪ್ಪಕ್ಕೆ, ಕರ್ರಗೆ ಇದ್ದ ಈತ ಅಪ್ಪಟ ಕುಸ್ತಿ ಪಟು. ಇಲ್ಲಸಲ್ಲದ ಪದ ಬಳಕೆಯಿಂದ ಫೇಮಸ್ಸು ಆಗಿ, ಒಂದು ತರದ ನಾಯಕನ ಪಟ್ಟ ತನಗೆ ತಾನೇ ಪಡೆದುಕೊಂಡಿದ್ದನು. ಇವನ ಹತ್ರ ನಾವೆಲ್ಲಾ ಎಸ್.ಎಸ್.ಎಲ್.ಸಿ ಅಂದ್ರೆ ಏನು? ಅಂತ ಕೇಳಿದ್ರೆ, ಅದಕ್ಕೆ ಅವನು “ಸುಶೀಲಕ್ಕನ ಸೀರೆ, ಲಲಿತಕ್ಕನ ಕಾಚ” ಅಂತ ಹೇಳುತ್ತಿದ್ದನು. ಅವನ ಪಾಲಿಗೆ ಹಾಗೆಯೇ ಮಾಡಿಕೊಂಡು ಎರಡೆರಡು ಬಾರಿ ಡುಮ್ಕಿ ಹೊಡೆದನು. ಅಲ್ಲಿಂದ ಓದಿನಲ್ಲಿ ಮುಂದೆ ಹೋಗಲೇ ಇಲ್ಲ. ಇವನ ಜೊತೆಗೆ ಎಂಟನೇ ತರಗತಿಗೆ ಸೇರಿಕೊಂಡಿದ್ದ ಇವರ ಊರಿನವನೇ ಆದ ಹಾಲಪ್ಪ ಸದಾ ಒಡನಾಡಿ. ಗುಣದಲ್ಲಿ ಇಬ್ಬರೂ ಮೇಲಲ್ಲ, ಕೀಳಲ್ಲ. ಶೇಖರಪ್ಪನಿಗೆ ಓದು ಮಾತ್ರ ದೂರವೇ. ಎಸ್.ಎಸ್.ಎಲ್.ಸಿ ಯಲ್ಲಿ ಬುದ್ಧಿವಂತನಾಗಿದ್ದವನು ಯೋಗೇಶ. ಈತ ಮುಖ್ಯ ಪರೀಕ್ಷೆಯಲ್ಲಿ ವಾರ್ಡನ್ನಿನ ಅಪೇಕ್ಷೆಯಂತೆ ಕೆಲವರ ಪಾಸಿಗೂ ಕಾರಣವಾದವನು. ಒಮ್ಮೊಮ್ಮೆ ಈತ ಗೆಳೆಯರ ಜೊತೆ ರೂಮಿಗೆ ಹೋಗದೆ ಹಾಸ್ಟೆಲ್‍ನಲ್ಲಿ ಉಳಿದುಕೊಳ್ಳುತ್ತಿದ್ದ. ತನ್ನ ಕಿರಿಯ ಮಿತ್ರರೊಂದಿಗೆ ಹೆಚ್ಚು ಬೆರೆಯುವ ಗುಣ ಇವನಲ್ಲಿರಲಿಲ್ಲ. ಶೇಖರಪ್ಪ ಹೆಂಗಾದ್ರೂ ಮಾಡಿ, ಒಂಬತ್ತನೇ ತರಗತಿಯ ನಮ್ಮ ಮೇಲೆ ಜಗಳಕ್ಕಾಗಿ ಕಾಯುತ್ತಿದ್ದನು. ವಾರ್ಡನ್ ಹೆದರಿಕೆಯಿಂದ ಕೆಲವೊಮ್ಮೆ ಜಗಳದಿಂದ ದೂರವಾಗಿದ್ದೂ ಉಂಟು. ಅವರು ಇಲ್ಲದಾಗ ನೋಡಿ ಕಾದಾಟಕ್ಕೆ ಸುರುಮಾಡೋದು ಇವನ ಜಾಯಮಾನವಾಗಿತ್ತು.

ನಮ್ಮ ಒಂಬತ್ತನೇ ತರಗತಿಯಲ್ಲಿ ಹೋರಾಟದ ಮುಂದಾಳು ಏಕೈಕ ವ್ಯಕ್ತಿ ದೊಂಬರಹಳ್ಳದ ಯೋಗೇಂದ್ರಪ್ಪ. ನಮ್ಮಂತ ಸಣಕಲು ದೇಹದವರ ರಕ್ಷಕ. ಓದಕ್ಕೂ ಸೈ ಹೊಡೆದಾಟಕ್ಕೂ ಸೈ ಅನ್ನೋ ಒಂದು ರೀತಿಯ ಪ್ರಾಕ್ಟಿಕಲ್ ಮ್ಯಾನ್. ಯಾವುದನ್ನು ನೇರ ನೇರ ಬೈಯ್ಯುವ, ತಮಾಷೆ ಬಂದಾಗ ತಮಾಷೆಯಾಗಿ ಇರುವ ಗುಣ ಇವನಲ್ಲಿತ್ತು. ಚಿಕಿತ್ಸಕ ಮನೋಭಾವದ ಈತ ಎಲ್ಲರ ಪ್ರೀತಿಗೆ ಪಾತ್ರನಾಗಿದ್ದನು. ಆದರೆ ಎಲ್ಲರೊಂದಿಗೆ ಅಷ್ಟು ಸರಳವಾಗಿ ಬೆರೆಯದ ಯಜಮಾನ ಸ್ವಭಾವ ಇವನಲ್ಲಿತ್ತು. ಕಡಿಮೆ ಮಾತಿನಲ್ಲಿಯೂ ತಮಾಷೆಯಾಗಿ ಇರುವ ಈತ, ನನಗೆ ಇವನು ಆಪ್ತನಾಗಿದ್ದು ಇಬ್ಬರು ಅಕ್ಕಪಕ್ಕದಲ್ಲಿ ಮಲಗುತ್ತಿದ್ದೆವು. ಆದರೆ ಓದಿನ ವಿಚಾರದಲ್ಲಿ ನನಗಿಂತ ಭಿನ್ನನಾಗಿಯೇ ಇದ್ದವನು. ಕಡಿಮೆ ಓದು, ಹೆಚ್ಚಿನ ತಿಳುವಳಿಕೆಯುಳ್ಳ ಈತನ ಶುಚಿತ್ವದಲ್ಲಿ ಮಾತ್ರ ಗಬ್ಬು. ಸ್ನಾನ ವಾರಕ್ಕೊಂದು ಸಾರಿ ಮಾಡಿದರೆ ದೊಡ್ಡದು. ಅವನ ಕೊಳಕು ಬನಿಯನ್ ನನಗೆ ಇಂದಿಗೂ ಕಣ್ಣು ಮುಂದೆಯೇ ನಿಲ್ಲುತ್ತದೆ. ಬಗಲಿನ ರೋಮದಲ್ಲಿ ಬಿಳಿಯದಾದ ಗೊಣ್ಣೆ ನಿಂತುಕೊಂಡು ಸಹಿಸಲು ಅಸಾಧ್ಯವಾದ ವಾಸನೆ ಘಮ್ಮೆಂದು ಹೊರಬಂದು, ಒಮ್ಮೊಮ್ಮೆ ಪಕ್ಕದಲ್ಲಿದ್ದವರ ತಲೆಸುತ್ತು ಬರುವ ಹಾಗಿತ್ತು. ನಾವೆಲ್ಲ ಸ್ನಾನಕ್ಕೆಂದು ಹಾಸ್ಟೆಲ್ ಹಿಂಬಾಗ ಗುಡ್ಡದಿಂದ ಇಳಿಯುವ ಸರಕ್ಕೆ ಹೋದರೆ, ಇವನು ಹಾಸ್ಟೆಲ್ ಹಿಂಬಾಗ ದಿವಾಕರಣ್ಣನ ಬಾವಿಯಿಂದ ಎರಡು ಬಕೆಟ್ ನೀರಲ್ಲಿ ತನ್ನ ವಾರದ ಪೂರ್ತಿ ಕೊಳೆಯನ್ನು ತೆಗೆದೆನೆಂಬ ಭ್ರಮೆಯಲ್ಲಿ ಇರುತ್ತಿದ್ದನು.

ನಮಗೆಲ್ಲಾ ಪ್ರತಿದಿನದ ಬೆಳಿಗ್ಗೆ ಮತ್ತು ಸಂಜೆ ಮುಖ ತೊಳೆಯಲು ಮತ್ತು ಸ್ನಾನದ ಪ್ರಮೇಯ ಬಂದರೆ ಸ್ನಾನಕ್ಕೂ ಹಾಸ್ಟೆಲ್ ಹಿಂಬಾಗದ ಸರದ ನೀರೆ ಗತಿ. ಇದು ನಮ್ಮ ಪಾಲಿನ ಸರೋವರ. ಬೆಳಿಗ್ಗೆ ಎದ್ದವರು ಟೂಥ್ ಬ್ರಶ್ಶಿಗೆ ಪೇಸ್ಟ್ ಹಾಕ್ಕೊಂಡು ಹಲ್ಲುಜ್ಜುತ್ತಾ ಗುಡ್ಡ ಹತ್ತುತ್ತಿದ್ದೆವು. ಅದೊಂದು ಸಣ್ಣ ಸರ. ಸದಾ ನೀರು ಹರಿದು, ಕೆಳಗಿಳಿದು ಒಂದು ಕೆರೆಗೆ ಬಂದು ಸೇರುತ್ತಿತ್ತು. ಆ ಕೆರೆಯೆಂದರೆ ಕೋಡೂರಿನ ಎಲ್ಲಾ ಗಲೀಜು ಅಲ್ಲಿ ಬಂದು ಸೇರುವ ಹಾಗಿತ್ತು. ಕೋಡೂರಿನ ಗೊಬ್ಬರದ ಗುಂಡಿ ಎಂದರೆ ತಪ್ಪಲ್ಲ. ಆದರೆ ನಾವು ಹೋಗುವ ಸರದಲ್ಲಿ ಒಂದು ಹಾಸುಗಲ್ಲಿಗೆ ನೀರು ಬಂದು ಇಳಿಯುತ್ತಿತ್ತು. ಹಾಸುಗಲ್ಲಿನ ಒಂದು ಚಿಕ್ಕ ಹೊಂಡದಲ್ಲಿ ಬಂದು ಸೇರಿ, ಪುನಃ ಕೆಳಗೆ ಜಾರುತ್ತಿತ್ತು. ಈ ಹೊಂಡವೇ ನಮ್ಮ ಎಲ್ಲಾ ದೈನಂದಿನ ಕರ್ಮಗಳನ್ನು ಕೊನೆಗಾಣಿಸುವ ಕಲ್ಯಾಣಿ. ಆದರೆ ನಾವೆಲ್ಲ ಈ ಕಲ್ಯಾಣಿಯ ಆಸುಪಾಸಿನಲ್ಲಿ ದಿನದ ಕರ್ಮಗಳನ್ನು ತೆಗೆಯುತ್ತಾ ಇದ್ದರೆ, ರಮೇಶ, ಸ್ವಾಮಿ, ಪುಟ್ಟ ಇಂತಹ ಕಿಲಾಡಿ ಹುಡುಗರು ನಮಗ್ಯಾರಿಗೂ ಅರಿವು ಬಾರದ ಹಾಗೆ, ಮೇಲೆ ಹೋಗಿ ತಮ್ಮ ಮಲಮೂತ್ರಗಳನ್ನು ಅದರಲ್ಲಿ ಹರಿಸುತ್ತಿದ್ದರು. ಕೆಳಭಾಗದಲ್ಲಿ ನಾವೆಲ್ಲಾ ಮುಖಮೂತಿ ತೊಳೆಯುತ್ತಿದ್ದರೆ, ಇವರೆಲ್ಲಾ ಅದಕ್ಕೆ ವಿರುದ್ಧವಾದದ್ದರ ತೊಳೆಯುವ ಸಾಹಸ ಕಾರ್ಯದಲ್ಲಿ ಲೀನವಾಗುತ್ತಿದ್ದರು. ಕೊನೆಗೂ ಯಾವ ಗತಿಯಿಲ್ಲದ ನಾವೆಲ್ಲಾ “ಹರಿಯುವ ನೀರಿಗೆ ಸೂತಕವಿಲ್ಲ, ಏನೂ ಆಗಲ್ಲ ಬರ್ರೋ” ಅಂತಾ ಸಮಧಾನ ಮಾಡಿಕೊಂಡು ಬರುತ್ತಿದ್ದೆವು. ಆದರೆ ರಮೇಶ ಮತ್ತು ಸ್ವಾಮಿಯವರ ಕೆಲಸ ನಿರಂತರವಾದಾಗ ಸಿಟ್ಟು ಬಂದ ಧರ್ಮಪ್ಪ ಒಂದು ದಿನ ವಾರ್ಡನ್ ಗೆ ದೂರು ಹೇಳಲು ನಿರ್ಧರಿಸಿ, “ ಸಾ ಸಾ ನಾವೆಲ್ಲ ಕೆಳಗೆ ಮುಖ ತೊಳಿತಿದ್ರೆ, ಈ ರಮೇಶ ಮತ್ತು ಸ್ವಾಮಿ ಗ್ಯಾಂಗ್ ಮೇಲೆ ಹೋಗಿ ಮುಕ್ಳಿ ತೊಳಿತಾರೆ, ಹೇಳಿ ಸಾ, ಹೇಳಿ ಸಾ” ಎಂದು ಹೇಳಿದನು. ಅದಕ್ಕೆ ವಾರ್ಡನ್ ಮುಸಿ ಮುಸಿ ನಕ್ಕು ಸುಮ್ಮನಾದರು. ಇದೆಲ್ಲಾ ಅರಿವಿದ್ದ ನಾವು ಭಾನುವಾರ ಮಾತ್ರ ಗುಡ್ಡದ ಮೇಲೆ ಮೇಲೆ ಹೋಗಿ ಯಾರಿಗೂ ಸಿಗದ ಒಂದು ಹೊಂಡವನ್ನು ನೋಡಿಕೊಂಡು ಅಲ್ಲಿ ಸ್ನಾನ ಮಾಡಲು ಸುರಮಾಡಿದೆವು. ಅಂತೂ ನಮ್ಮ ಈ ಸರೋವರ ನಮ್ಮೆಲ್ಲರ ಕಲ್ಮಷ ತೊಳೆದ ಮಹಾತಾಯಿ ಎಂದು ಭಾವಿಸಿದ್ದೆವು.
(ಮುಂದುವರಿದ ಭಾಗ ನಾಳೆ ಪ್ರಕಟವಾಗಲಿದೆ)

ಡಾ. ಅಣ್ಣಪ್ಪ ಎನ್‌ ಮಳೀಮಠ್‌

ಸಹ ಪ್ರಾಧ್ಯಾಪಕರು.

ಇದನ್ನೂ ಓದಿ- http://ವಾರಾಂತ್ಯ ಬಂತೆಂದರೆ… https://kannadaplanet.com/when-the-weekend-comes/

More articles

Latest article