ಮಹಿಳಾ ದಿನ ವಿಶೇಷ
“ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ” ಅಂದರೆ ಒಳಿತುಗಳ ಮಾರ್ಗದ ಒಗ್ಗೂಡುವಿಕೆ. ಆ ದಾರಿಯಲ್ಲಿ ಹೆಜ್ಜೆ ಹಾಕೋಣ. ಈ ಸಲ ಹಾಸನದಲ್ಲಿ ನಾವೆಲ್ಲ ಮಾತಾಗೋಣ – ಡಾ. ಸಬಿತಾ ಬನ್ನಾಡಿ.
ದೌರ್ಜನ್ಯವನ್ನು ವಿರೋಧಿಸುವ ಮೊದಲು ದೌರ್ಜನ್ಯವೆಂದರೇನು ಎಂಬ ಬಗೆಗೆ ನಮಗೊಂದು ಸ್ಪಷ್ಟತೆ ಬೇಕು. ಸಾಧಾರಣವಾಗಿ ನಾವು ಕಣ್ಣಿಗೆ ಕಾಣುವ ಆಕ್ರಮಣಗಳನ್ನಷ್ಟೇ ದೌರ್ಜನ್ಯ ಎಂದು ಭಾವಿಸುತ್ತೇವೆ. ಮನೆಯ ಹೊರಗಿನವರು ಮಾಡುವ ಹಲ್ಲೆ, ಅವಹೇಳನಗಳನ್ನು ದೌರ್ಜನ್ಯ ಎಂದುಕೊಳ್ಳುತ್ತೇವೆ. ಆದರೆ ಕಣ್ಣಿಗೆ ಕಾಣದ ಆದರೆ ಅನುಭವಕ್ಕೆ ಮಾತ್ರ ಬರುವ ಅಸಂಖ್ಯ ದೌರ್ಜನ್ಯಗಳು ನಮ್ಮ ನಡುವೆ ಜಾರಿಯಲ್ಲಿವೆ. ನಮ್ಮ ಹಿರಿಯಕ್ಕಂದಿರು ನಮಗೆ ಶಿಕ್ಷಣ ಬೇಕು, ಉದ್ಯೋಗದ ಅವಕಾಶ ಬೇಕು ಎಂದು ಹೋರಾಡಿ, ಮನವರಿಕೆ ಮಾಡಿ ಆನಂತರದ ತಲೆಮಾರಿನ ಹೆಣ್ಣುಮಕ್ಕಳು ಹಲವು ಕ್ಷೇತ್ರಗಳಲ್ಲಿ ಮುಂದೆ ಬಂದು ಸಾಧಿಸಿ ತೋರಿಸಲು ಸಾಧ್ಯವಾಗಿದೆ. ಆದರೆ ಇಂದಿಗೂ ಹೆಣ್ಣು ಎಂಬ ಏಕೈಕ ಕಾರಣಕ್ಕೆ ನಮಗೆ ಶಿಕ್ಷಣ ಕೊಡುವುದಿಲ್ಲ ಎಂದು ಹೇಳುವುದಾಗಲೀ, ಉದ್ಯೋಗ ಬೇಕಾಗಿಲ್ಲ ಎಂದು ಹೇಳುವುದಾಗಲೀ, ನನ್ನ ಬಾಳ ಸಂಗಾತಿಯ ಆಯ್ಕೆಯನ್ನು ನಾನೇ ಮಾಡಿಕೊಳ್ಳುತ್ತೇನೆ ಎಂಬ ಸಂವಿಧಾನ ದತ್ತ ಹಕ್ಕನ್ನು ನಿರಾಕರಿಸುವುದಾಗಲೀ ಎಲ್ಲವೂ ದೌರ್ಜನ್ಯಗಳೇ ಆಗಿವೆ ಎಂಬುದು ನಮ್ಮ ಗಮನದಲ್ಲೇ ಇರುವುದಿಲ್ಲ. ಆಚರಣೆ, ಸಂಪ್ರದಾಯಗಳ ಹೆಸರಿನಲ್ಲಿ ಹೆಣ್ಣಿನ ಮೇಲೆ ಬಲವಂತದ ಬದುಕನ್ನು ಹೇರುವುದು ದೌರ್ಜನ್ಯ ಎಂದರೆ ನಂಬುವುದಕ್ಕೂ ತಯಾರಿರುವುದಿಲ್ಲ. ಹೀಗಾಗಿ, ಮೊದಲಿಗೆ ನಾವು ಈ ಅರಿವನ್ನು ಪಡೆಯುವುದೇ ನಮ್ಮ ಬಿಡುಗಡೆಯ ಮೊದಲ ಮೆಟ್ಟಿಲಾಗಿರುತ್ತದೆ.
ನಮ್ಮನ್ನು ನಮ್ಮ ಕಿವಿಗೆ ಕೇಳಿಸುವ ಒಂದು ಸಾಲೆಂದರೆ, “ನನ್ನ ಹೆಂಡ್ತಿ, ನಾನೇನು ಬೇಕಿದ್ರೂ ಮಾಡ್ತೀನಿ” ಅಂತ. ಅದರರ್ಥ ಹೆಂಡ್ತಿಯ ಮೇಲೆ ಗಂಡನಿಗೆ ಹೊಡೆಯಲು, ಬಡಿಯಲು, ಹಿಂಸಾತ್ಮಕವಾಗಿ ಅವಹೇಳನ ಮಾಡಲು ತನಗೆ ಹಕ್ಕು ಇದೆ ಎಂದು ಆತ ತಿಳಿದುಕೊಂಡಿರುತ್ತಾನೆ. ಹೆಂಡತಿಯರೂ ಎಷ್ಟೋ ಬಾರಿ “ಎಷ್ಟಾದರೂ ಗಂಡ. ಏನು ಬೇಕಾದರೂ ಮಾಡಬಲ್ಲ” ಎಂದು ನಂಬಿರುತ್ತಾರೆ. ಅಂದರೆ ಕಾನೂನಿಗೆ ವಿರುದ್ಧವಾದ ಈ ಚಿಂತನೆಗಳನ್ನು ತೊಡಕೇ ಇಲ್ಲದೆ, ಶಿಕ್ಷೆಯೇ ಇಲ್ಲದೆ ಮುಂದುವರಿಸಿಕೊಂಡು ಬರಲಾಗುತ್ತಿದೆ. ಹೆಂಗಸರಿಗೂ, ಗಂಡಸರಿಗೂ ಇದು ಗಂಡನ ಹಕ್ಕಲ್ಲ, ಆತ ಹಾಗೆ ಮಾಡುವುದು ಶಿಕ್ಷಾರ್ಹ ಅಪರಾಧ ಎಂದು ಮನಗಾಣಿಸಬೇಕಾಗಿದೆ. ಕುಟುಂಬದೊಳಗೇ ಇಷ್ಟು ಕಾನೂನು ಬಾಹಿರ ಸಂಗತಿಗಳನ್ನು ಅಡಕಗೊಳಿಸಿಕೊಂಡು ಅದನ್ನು ಬೇಕಾಬಿಟ್ಟಿ ಚಲಾವಣೆಯಲ್ಲಿಟ್ಟಿರುವಾಗ ಇನ್ನು ಮನೆಯ ಹೊರಗಿನ ಸಂಗತಿಗಳ ಗತಿಯೇನು? ಇದನ್ನೇ ನೋಡಿ ಬೆಳೆಯುತ್ತಿರುವ ಮಕ್ಕಳ ಮನಸ್ಥಿತಿ ಆರೋಗ್ಯಕರವಾಗಿ ಬೆಳೆಯುವುದಾದರೂ ಹೇಗೆ? ಹಿಂಸೆಯ ಕೊಂಡಿಯು ಕಳಚಿ ನೆಮ್ಮದಿಯ ಕುಟುಂಬ, ಸಮಾಜಗಳು ರೂಪುಗೊಳ್ಳುವುದು ಹೇಗೆ? ದೌರ್ಜನ್ಯವನ್ನು ಸಾಮಾನ್ಯೀಕರಿಸುವ, ಸಹಜೀಕರಿಸುವ ಬೆಳವಣಿಗೆಯು ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಇನ್ನಷ್ಟು ವೇಗ ಪಡೆದುಕೊಳ್ಳುತ್ತಿರುವುದು ಆತಂಕದ ವಿಷಯವಾಗಿದೆ. ಅಪರಾಧಿಗಳು ಶಿಕ್ಷೆಯಿಲ್ಲದೆ ರಾಜಾರೋಷವಾಗಿ ಓಡಾಡುತ್ತಿರುವುದು, ಶಿಕ್ಷೆಯಾದಾಗಲೂ ಒಳದಾರಿಗಳ ಮೂಲಕ ತಪ್ಪಿಸಿಕೊಳ್ಳುವುದು, ಸಾಮಾಜಿಕ, ಧಾರ್ಮಿಕ, ರಾಜಕೀಯ ನಾಯಕರಂತೆ ಮುಖವಾಡ ಧರಿಸಿ ಮೆರೆಯುತ್ತಿರುವುದು ಹೀಗೆ ಸಮಾಜವು ವಿನಾಶದೆಡೆಗೆ ಪಯಣ ಮಾಡುತ್ತಿರುವುದು ನಮ್ಮ ಕಣ್ಣೆದುರೇ ನಡೆಯುತ್ತಿದೆ.

ಇಂತಹ ಸನ್ನಿವೇಶದಲ್ಲಿ ನಾವು ಏನು ಮಾಡಬೇಕು? ನಮ್ಮ ಪ್ರತಿರೋಧವನ್ನು ಬೇರೆ ಬೇರೆ ರೀತಿಯಲ್ಲಿ ದಾಖಲಿಸುತ್ತಲೇ ಇರಬೇಕು. ಒಳ್ಳೆಯ ಮನುಷ್ಯರೆಲ್ಲರೂ ಒಗ್ಗೂಡಲೇ ಬೇಕು. ಈ ಹಿನ್ನೆಲೆಯಲ್ಲಿ ರೂಪುಗೊಂಡ ಒಂದು ಸಮಾನ ಮನಸ್ಕರ ಜಾಲವೇ “ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ”. 2012ರಲ್ಲಿ ಮಂಗಳೂರಿನಲ್ಲಿ ಹೋಂ ಸ್ಟೇ ದಾಳಿ ಪ್ರಕರಣ, ದೆಹಲಿಯಲ್ಲಿ ನಡೆದ ನಿರ್ಭಯಾ ಪ್ರಕರಣಗಳ ಹಿನ್ನೆಲೆಯಲ್ಲಿ ಇದರೊಂದಿಗೆ ಇನ್ನಿತರ ಹತ್ತು ಹಲವು ದೌರ್ಜನ್ಯಗಳನ್ನು ವಿರೋಧಿಸಲು ಒಂದು ವೇದಿಕೆಯಾಗಿ ಅಸ್ತಿತ್ವಕ್ಕೆ ಬಂದಿತು. 2013ರಲ್ಲಿ ಮೊದಲ ಸಾರ್ವಜನಿಕ ಸಮಾವೇಶವನ್ನು ‘ಇನ್ನು ಸಾಕು’ ಎಂಬ ಘೋಷವಾಕ್ಯದಡಿಯಲ್ಲಿ ಮಂಗಳೂರಿನಲ್ಲಿ ಆಯೋಜಿಸಿತು. ಮುಂದೆ ಅದು ಒಕ್ಕೂಟವಾಗಿ ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಲ್ಲಿ ತನ್ನ ಪಯಣವನ್ನು ಮುಂದುವರೆಸಿ ಇದೀಗ ಹದಿನಾಲ್ಕನೆಯ ಜಿಲ್ಲೆಯಾಗಿ ಹಾಸನಕ್ಕೆ ಕಾಲಿರಿಸಿದೆ. ಇದುವರೆಗೂ ಮಂಗಳೂರು, ಮೈಸೂರು, ಬೆಂಗಳೂರು, ವಿಜಯಪುರ, ಕೊಪ್ಪಳ, ಶಿವಮೊಗ್ಗ, ಧಾರವಾಡ, ಮಂಡ್ಯ, ಕೋಲಾರ, ಕಲಬುರಗಿ, ತುಮಕೂರು, ಉಡುಪಿ, ವಿಜಯನಗರ ಜಿಲ್ಲೆಯ ಹೊಸಪೇಟೆಗಳಲ್ಲಿ ಸಮಾವೇಶಗಳನ್ನು ನಡೆಸಿವೆ. ಆ ಜಿಲ್ಲೆಗಳಲ್ಲಿ ವರ್ಷವಿಡೀ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿ ಬೇರೆ ಬೇರೆ ರೀತಿಯಲ್ಲಿ ತಮ್ಮನ್ನು ಕೆಲಸಗಳಲ್ಲಿ ತೊಡಗಿಸಿಕೊಂಡಿವೆ.
ಈ ಸಲ ಹಾಸನ ಜಿಲ್ಲೆಯಲ್ಲಿ ಇದುವರೆಗೂ 55ಕ್ಕೂ ಹೆಚ್ಚು ಅರಿವಿನ ಪಯಣಗಳನ್ನು ಮಾಡಲಾಗಿದೆ. ಅಧ್ಯಯನ ಶಿಬಿರ ಆಯೋಜಿಸಲಾಗಿದೆ. ಹಾಗೂ ಈ ಸಲದ ವಿಶೇಷವಾಗಿ “ಹಾಸನ ಮಣ್ಣಿನ ಹೆಣ್ಣು ಬೇರುಗಳು” ಎಂಬ ಹಾಸನ ಜಿಲ್ಲೆಯ ಮೂಲೆ ಮುಡುಕುಗಳ ಸಾಧಕಿಯರನ್ನು ಗುರುತಿಸಿ ಲೇಖನಗಳ ಸರಣಿಯನ್ನು ತಂದಿರುವುದೂ ಅಲ್ಲದೆ ಅದು ಪುಸ್ತಕವಾಗಿ ಸಮಾವೇಶದಂದು ಬಿಡುಗಡೆಯಾಗಲಿದೆ. ಹೀಗೆ ಪ್ರತಿ ಜಿಲ್ಲೆಯಲ್ಲೂ ಹೆಣ್ಣು ಚೈತನ್ಯದ ಹೊಸ ಚಹರೆಗಳನ್ನು ಅನ್ವೇಷಿಸುವ, ಆ ಮೂಲಕ ಹೆಣ್ಣು ಮಕ್ಕಳ ಶಕ್ತಿ, ಸಾಧ್ಯತೆಗಳನ್ನು ವಿಸ್ತರಿಸುವ ಕೆಲಸವನ್ನು ಮಾಡಲು ಒಕ್ಕೂಟವು ಒತ್ತಾಸೆಯಾಗಿ ಒದಗಿ ಬರುತ್ತಿರುವುದು ನಮ್ಮ ಉತ್ಸಾಹವನ್ನು ಹೆಚ್ಚಿಸುತ್ತಿದೆ.
ಇದನ್ನೂ ಓದಿ-ಐತಿಹಾಸಿಕ ಮಹಿಳೆಯರು ಮತ್ತು ಹಾಸನ ಜಿಲ್ಲೆ
ಇಷ್ಟಾಗಿ ನಮ್ಮೆಲ್ಲರ ಮನದಲ್ಲಿ ಸದಾ ಕುಟುಕುವ ಪ್ರಶ್ನೆಯೊಂದಿದೆ. ದೌರ್ಜನ್ಯವು ಕಡಿಮೆಯಾಗುತ್ತಿಲ್ಲವಲ್ಲ, ದೌರ್ಜನ್ಯವು ಇನ್ನಷ್ಟು ಹೆಚ್ಚುತ್ತಿದೆಯಲ್ಲ? ಅದರ ಸ್ವರೂಪಗಳು ಇನ್ನಷ್ಟು ಗೂಢವೂ, ಬಲಿಷ್ಠವೂ ಆಗುತ್ತಿದೆಯಲ್ಲ? ಈ ಸವಾಲು ನಮಗೆ ಇದ್ದೇ ಇದೆ. ಈ ಸವಾಲನ್ನು ಕುರಿತು ನಾವು ಚಿಂತನ ಮಂಥನ ಮಾಡಿಕೊಳ್ಳುತ್ತಲೇ ಇರಬೇಕಾಗಿದೆ. ಆ ಕಾರಣದಿಂದಾಗಿಯೇ ಈ ಸಲದ ವಿಚಾರ ಸಂಕಿರಣದಲ್ಲಿ “ಮಹಿಳಾ ದೌರ್ಜನ್ಯ: ಸವಾಲುಗಳು, ಬಿಡುಡೆಯ ಸಾಧ್ಯತೆಗಳು” ಎಂಬ ವಿಷಯದ ಮೇಲೆ ಚರ್ಚೆ ನಡೆಸಲಾಗುತ್ತಿದೆ. ಅರಿವನ್ನು ವಿಸ್ತರಿಸಿಕೊಳ್ಳುವ, ದೌರ್ಜನ್ಯಗಳನ್ನು ತಡೆಯುವ ಉಪಾಯಗಳನ್ನು ಒಗ್ಗೂಡಿ ಪರಿಹರಿಸಿಕೊಳ್ಳುವ ಸಾಧ್ಯತೆಯೆಡೆಗೆ ನಾವು ಆಶಾವಾದಿಗಳಾಗಿ ಮುನ್ನಡೆಯಲೇ ಬೇಕಿದೆ. ನಮ್ಮದೇ ಅನುಭವಗಳಿಂದ ಹೇಳುವುದಾದರೆ, ಶತಮಾನಗಳ ಕಾಲದ ಬಂಧನಗಳನ್ನು ಧ್ವನಿಯೆತ್ತಿ ಕೇಳಿದ್ದರಿಂದಲೇ ನಾವಿಂದು ಹಲವು ಅವಕಾಶಗಳನ್ನು ಪಡೆದಿದ್ದೇವೆ. ಹಳ್ಳಿಯ ಪಕ್ಕದ ಹಳ್ಳಿಯನ್ನೂ ಕಾಣದ ಸ್ಥಿತಿಯಿಂದ ಇಂದು ಎಲ್ಲ ಸವಾಲುಗಳ ನಡುವೆಯೂ ಒಂಟಿಯಾಗಿ ದೇಶ ವಿದೇಶಗಳಿಗೆ ಪ್ರಯಾಣಿಸುತ್ತಿದ್ದೇವೆ. ಹಲವು ಹಕ್ಕುಗಳನ್ನು ಪಡೆದಿದ್ದೇವೆ. ಹಾಗಾದರೆ, ದೌರ್ಜನ್ಯವನ್ನು ಹಿಮ್ಮೆಟ್ಟಿಸಿ ಗಂಡು ಹೆಣ್ಣುಗಳು ಪರಸ್ಪರ ವಿಶ್ವಾಸದಿಂದ, ಪ್ರೀತಿಯಿಂದ, ನಲಿವಿನಿಂದ ಬಾಳಿ ಬದುಕುವ ಸುಂದರ ಕನಸನ್ನು ನನಸಾಗಿಸಿಕೊಳ್ಳಲಾರೆವೇ? ಸಾಧ್ಯವಿದೆ. ಅದಕ್ಕಾಗಿ ಮೊದಲು ನಾವೆಲ್ಲಾ ಅಂದರೆ, ಮಹಿಳೆಯರು ಮತ್ತು ಇಂತಹ ಚಿಂತನೆಗಳಿರುವ ಪುರುಷರು ಒಗ್ಗಟ್ಟಾಗಿ ಹೋರಾಡಬೇಕಾಗಿದೆ. ಒಕ್ಕೂಟವೆಂದರೆ ಒಳಿತುಗಳ ಮಾರ್ಗದ ಒಗ್ಗೂಡುವಿಕೆ. ಆ ದಾರಿಯಲ್ಲಿ ಹೆಜ್ಜೆ ಹಾಕೋಣ. ಈ ಸಲ ಹಾಸನದಲ್ಲಿ ನಾವೆಲ್ಲ ಮಾತಾಗೋಣ.
ಡಾ. ಸಬಿತಾ ಬನ್ನಾಡಿ
ವಿಮರ್ಶೆ, ಕವಿತೆ ಮತ್ತು ಅಂಕಣ ಬರಹಗಳಲ್ಲಿ ಸಕ್ರಿಯರಾಗಿರುವ ಇವರು ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಸಕ್ರಿಯ ಸದಸ್ಯೆಯಾಗಿದ್ದಾರೆ .
ಇದನ್ನೂ ಓದಿ- ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧೀ ಒಕ್ಕೂಟ : ಹಿನ್ನೋಟ


