ನಿರ್ದಿಷ್ಟ ರಾಜಕೀಯ ಸ್ಪಷ್ಟತೆಯಿಲ್ಲದೆ ಶೋಷಣೆಗೆ ಸುಲಭವಾಗಿ ಬಲಿಪಶುಗಳಾಗಿರುವ ದಲಿತರು ಮತ್ತು ಹಿಂದುಳಿದ ಸಮುದಾಯಗಳು ಹಿಂದೆಂದಿಗಿಂತ ಇಂದು ಒಂದಾಗಲೇ ಬೇಕಾದ ಅನಿವಾರ್ಯತೆಯಿದೆ. ನಾವು ಒಂದೇ ಮೂಲದವರು, ಸಮಾನ ಶೋಷಿತರು ಎಂಬುದು ಎಲ್ಲಿಯವರೆಗೆ ಇವರಿಗೆ ಅರ್ಥವಾಗುವುದಿಲ್ಲವೋ, ಅಲ್ಲಿಯವರೆಗೂ ಮೇಲಿನವರ ಕಾಲುಗಳನ್ನು ತಮ್ಮ ತಲೆಯ ಮೇಲಿರಿಸಿಕೊಂಡು ಬೇಡುವ ಕೈಗಳನ್ನೊತ್ತು ನಡುಬಗ್ಗಿಸಿಕೊಂಡು ಬದುಕುತ್ತಾರೆ – ಪಿ. ಆರಡಿಮಲ್ಲಯ್ಯ ಕಟ್ಟೇರ, ಸಂಶೋಧಕರು.
ಸಮಾನ ಪ್ರಾತಿನಿಧ್ಯತೆ ಮತ್ತು ಸಾಮರಸ್ಯವನ್ನು ಸಂವಿಧಾನಾತ್ಮಕವಾಗಿ ಸಾಧಿಸಿಕೊಳ್ಳಲಾಗಿರುವಂತೆ, ವಾಸ್ತವದ ಬದುಕಿನಲ್ಲಿ ಪ್ರಾಯೋಗಿಕವಾಗಿ ಸಾಧಿಸಲಾಗಿಲ್ಲ. ದಿನದಿಂದ ದಿನಕ್ಕೆ ನಮ್ಮ ನಡುವೆ ಹೆಚ್ಚುತ್ತಿರುವ ದ್ವೇಷ, ಅಸೂಯೆ, ನಿಂದನೆಗಳು ಅಸಹನೆಯ ಕೂರಲಗುಗಳಂತೆಯೇ ಕಾಣುತ್ತವೆ. ಈ ಅಸಹನೆ ಧರ್ಮ, ಜಾತಿನೆಲೆಯಿಂದ ಮಾತ್ರವಲ್ಲದೆ ಆರ್ಥಿಕ, ಶೈಕ್ಷಣಿಕ ಕಾರಣಗಳಿಂದಲೂ ಕಂಡುಬರುತ್ತಿವೆ. ಸಂವಿಧಾನದಲ್ಲಿ ನಾವು ರಾಜಕೀಯ ಸಮಾನತೆಯನ್ನು ಪಡೆದಿದ್ದೇವೆಯೇ ಹೊರತು ಸಾಮಾಜಿಕ, ಆರ್ಥಿಕ ಸಮಾನತೆಯ ಪ್ರಾತಿನಿಧ್ಯವನ್ನು ಸಾಧಿಸಲಾಗಿಲ್ಲ ಎಂಬುದು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಹೇಳಿಕೆ. ಈ ವಿಷಯವನ್ನು ದಲಿತರು ಮತ್ತು ಹಿಂದುಳಿದವರ ನೆಲೆಯಿಂದ ಗಮನಿಸಿದಾಗ, ದಲಿತರಿಗಿಂತ ಹಿಂದುಳಿದ ವರ್ಗದವರು ಹೆಚ್ಚು ಸಂಕಟಕ್ಕೆ ಈಡಾಗಿ ಒಡಲ ಬೇಗೆಯನ್ನು ಅನುಭವಿಸುತ್ತಿದ್ದಾರೆ ಎಂಬುದು ಹೊರನೋಟದಲ್ಲಿ ಕಾಣದ ಅಗ್ನಿಕುಂಡ.
ಲೋಹಿಯಾ ಅವರ ಮಾತನ್ನೊಮ್ಮೆ ನೆನಪಿಸಿಕೊಳ್ಳಲು ಸೂಕ್ತ ಸಮಯವಿದು. ‘ಅಸ್ಪೃಶ್ಯರ ನೋವು ಕಣ್ಣಿಗೆ ಕಾಣುತ್ತದೆ. ಆದರೆ ಹಿಂದುಳಿದ ವರ್ಗಗಳ ಯಾತನೆ ಯಾರ ಕಣ್ಣಿಗೂ ಕಾಣುವುದಿಲ್ಲ. ಅದನ್ನು ಅನುಭವಿಸಿದವರಿಗೇ ಗೊತ್ತು. ಆದ್ದರಿಂದ ಹಿಂದುಳಿದ ವರ್ಗಗಳು ಜೀವಿಸುವ ಪ್ರದೇಶಗಳು ನನಗೆ ಯಾತನಾ ಶಿಬಿರಗಳಂತೆ ಕಾಣುತ್ತವೆ’ ಎಂದಿದ್ದರು. ಇನ್ನೂ ಪರಿಣಾಮಕಾರಿಯಾಗಿ ಹೇಳಬೇಕೆಂದರೆ, ದಲಿತರದು ಸುಟ್ಟಗಾಯ. ಹೊರಜಗತ್ತಿಗೆ ಸ್ಪಷ್ಟವಾಗಿ ಕಾಣುತ್ತದೆ. ಕಾಣುವ ಕಾರಣಕ್ಕೆ ಅದರ ಬಗ್ಗೆ ಕೊನೇಪಕ್ಷ ಕನಿಕರವಿದೆ. ಕನಿಕರ ಇರುವ ಕಾರಣಕ್ಕೆ ಪರಿಹಾರವೂ ಇದೆ. ಕೆಲವು ಕಾನೂನುಗಳ ಕಾರಣಕ್ಕಾದರೂ ದಲಿತರ ಬಗ್ಗೆ ಭಯವಿದೆ. ಹಿಂದುಳಿದ ವರ್ಗದವರದು ಶ್ವಾಸಕೋಶಕ್ಕೆ ಹೊತ್ತಿಕೊಂಡಿರುವ ಕ್ಯಾನ್ಸರ್. ಅದು ಹೊರ ಜಗತ್ತಿಗೆ ಕಾಣುವುದಿಲ್ಲ. ನೋವನ್ನು ಅನುಭವಿಸುತ್ತಾ, ಭಂಡ ಧೈರ್ಯದಲ್ಲಿ ನಗುವ ಒಳನೋವು. ಆದರೆ ಅದು ದೇಹದ ಒಳಗಿನ ಎಲ್ಲವನ್ನು ನಾಶ ಮಾಡಿದರೂ, ಹೊರಗಿನವರಿಗೆ ಅರ್ಥವಾಗುವುದಿಲ್ಲ. ಅದು ಕಾಣದ ಕಾರಣಕ್ಕೆ ಕರುಣೆಯನ್ನೂ ನಿರೀಕ್ಷಿಸಲಾಗದು. ಕನಿಕರವಿಲ್ಲದೆ, ಒಲವಿಲ್ಲದೆ ಪರಿಹಾರವೂ ಕೂಡ ಇಲ್ಲ.
ಹಿಂದುಳಿದ ವರ್ಗದವರಿಗೆ, ದಲಿತರಿಗೆ ಇರುವಂತೆ ಜ್ಞಾನದ ದಾಹವಿಲ್ಲ. ಬಲಿತವರಿಗಿರುವಂತೆ ಸಾಮಾಜಿಕ ಘನತೆಯೂ ಇಲ್ಲ. ಇದರಿಂದಾಗಿ ಇವರು ದಲಿತರ ಮೇಲೆ ಕಾರಿಕೊಳ್ಳುವ ಅಸಹನೆ ಮತ್ತು ಬಲಿತವರಂತೆ ವರ್ತಿಸುವ ನಡವಳಿಕೆ ಎರಡೂ ಭ್ರಮೆಯಿಂದ ಕೂಡಿದ ತಿಳುವಳಿಕೆ. ದಲಿತರು ಹಿಂದುಳಿದ ವರ್ಗದವರನ್ನು ಒಪ್ಪಿಕೊಳ್ಳುವಂತೆ, ಹಿಂದುಳಿದ ವರ್ಗದವರು ದಲಿತರನ್ನು ಒಪ್ಪಿಕೊಳ್ಳುವುದಿಲ್ಲ. ದಲಿತರಿಗೆ ಬಲಿತವರ ವಿಷಯದಲ್ಲಿ ಇರುವ ಐತಿಹಾಸಿಕ ಸ್ಪಷ್ಟತೆಯೂ ಹಿಂದುಳಿದ ವರ್ಗದವರಿಗೆ ಅಷ್ಟಿಲ್ಲ. ನಿಜವಾದ ಅರ್ಥದಲ್ಲಿ ಹೇಳುವುದಾದರೆ, ಬಲಿತವರ ಕುಲುಮೆಯಲ್ಲಿ ತಯಾರಾಗುವ ಕೇವಲ ಆಯುಧಗಳಿವರು. ಇಂಥವರಿಂದ ಹಿಂದುಳಿದ ವರ್ಗದ ಸಮುದಾಯಗಳು ಹೊರಬರಬೇಕು. ತಮ್ಮ ನಿಜವಾದ ವಾಸ್ತವ ಏನು? ಎಂಬುದರ ಅರಿವನ್ನು ಪಡೆದು ದಲಿತರನ್ನು ಮನಸ್ಪೂರ್ವಕವಾಗಿ ಒಪ್ಪಿಕೊಳ್ಳಬೇಕು. ಈರ್ವರ ಮಧ್ಯೆ ತುಂಬಿರುವ ಅಸಹನೆಯನ್ನು ಕಾರಣ ಸಮೇತ ಅರ್ಥಮಾಡಿಕೊಂಡು ಅದನ್ನು ನಿವಾರಿಸಿ ಕೊಳ್ಳುವುದು ಅಗತ್ಯವಾದ ನಡೆ. ಮೇಲರಿಮೆಯು ಹೇಗೆ ಅಹಂಕಾರವೋ, ಕೀಳರಿಮೆಯೂ ಅಷ್ಟೇ ತೀವ್ರವಾದ ಅಹಂಕಾರವಾಗಿರುತ್ತದೆ. ದಲಿತ-ಹಿಂದುಳಿದವರು ತಮ್ಮ ಅಹಂಕಾರಗಳಿಂದ ಹೊರಬಂದು ಒಂದಾಗಬೇಕು.
ಸಮಾನತೆ ನಮ್ಮ ಸಂವಿಧಾನದ ಪ್ರಧಾನ ಆಶಯ. ನಾವೆಲ್ಲರೂ ಭಾರತದ ಪ್ರಜೆಗಳು ಎಂಬುದು ಸಂವಿಧಾನದ ಪೀಠಿಕೆಯಲ್ಲಿದೆ. ಸಮಾನತೆ ಮೂಡಬೇಕೆಂದರೆ ಸಹೋದರತೆ ಅತ್ಯಂತ ಅಗತ್ಯ. ದಲಿತರು ಶೈಕ್ಷಣಿಕವಾಗಿ ಸದೃಢರಾಗುವುದು ಮಾತ್ರವಲ್ಲದೆ ಸಾಂಪ್ರದಾಯಿಕ ಮನಸ್ಥಿತಿ ಮತ್ತು ಕರುಬುತನದಿಂದ ಹೊರಬಂದು ಆರ್ಥಿಕ ಶಕ್ತಿಯನ್ನು ಸಾಧಿಸಿಕೊಳ್ಳಬೇಕು. ಆರ್ಥಿಕ ಶಕ್ತಿಯು ರಾಜಕೀಯ ಶಕ್ತಿಯನ್ನು ಪಡೆಯಲು ಮಾರ್ಗದರ್ಶಕ. ನಿಜವಾದ ಅರ್ಥದಲ್ಲಿ ಆರ್ಥಿಕ ಶಕ್ತಿಯು ಸಮಾನತೆಯನ್ನು ರೂಪಿಸಲು ಇರುವ ವಸ್ತುನಿಷ್ಟ ಮಾರ್ಗವಾಗಿದೆ. ದಲಿತರು ಮತ್ತು ಹಿಂದುಳಿದವರ ಮಧ್ಯೆ ಸಾಮರಸ್ಯ ಮೂಡಲು ಆರ್ಥಿಕ ಶಕ್ತಿ ‘ಘನವಾಗಿ’ ಕೆಲಸ ಮಾಡಬಲ್ಲದು. ವೈವಾಹಿಕ ಕೊಳು-ಕೊಡುಗೆಗಳಾಗಲು ಸಾಧ್ಯವಾಗುತ್ತದೆ. ಈ ಕಾರಣಕ್ಕಾಗಿ ರಾಜಕೀಯ ‘ಮಿಥ್ಯಾಕಲ್ಪನೆ’ಗಳನ್ನು ಅರ್ಥಮಾಡಿಸ ಬೇಕಿದೆ. ಮೀಸಲಾತಿ ಪಡೆಯುತ್ತಿರುವವರು ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಗಳೆಂದು ಹಿಂದುಳಿದ ವರ್ಗದವರಲ್ಲಿ ತಪ್ಪು ಕಲ್ಪನೆಯನ್ನು ಹುಟ್ಟು ಹಾಕಲಾಗಿದೆ. ಹಿಂದುಳಿದ ವರ್ಗಗಳ ಅಶಿಕ್ಷಿತರು-ಶಿಕ್ಷಿತರು ತಮಗೆ ಮೀಸಲಾತಿ ಇಲ್ಲವೆಂದೇ ನಂಬಿದ್ದಾರೆ. ಹೀಗಾಗಿ ದಲಿತರ ಮೇಲೆ ಅವರಿಗೆ ಅಸಹನೆಯಿದೆ. ಬಲಿತವರಿಗೆ ಈಗಾಗಲೇ ಇದ್ದ ಎಲ್ಲಾ ಮೀಸಲಾತಿಗಳ ಜೊತೆಗೆ EWS.ನಲ್ಲಿ 10 % ಮೀಸಲಾತಿ ಕೊಟ್ಟಾಗಲೂ ಹಿಂದುಳಿದ ವರ್ಗದವರಿಗೆ ‘ಇದು ನ್ಯಾಯಯುತವಾಗಿದೆ’ ಎಂದೇ ಅನಿಸಿದೆ. ಇದನ್ನು ಸಂವಿಧಾನಾತ್ಮಕವಾಗಿ ಅಧ್ಯಯನ ಶಿಬಿರಗಳ ಮೂಲಕ ಅರ್ಥಮಾಡಿಸದೆ ಬೇರೆ ದಾರಿಯಿಲ್ಲ. ಶಿಕ್ಷಣ ವ್ಯವಸ್ಥೆಯಲ್ಲಿ ಸರಾಗವಾಗಿ ತೂರಿಕೊಂಡು ತಳದಿಂದ ಇಂಥ ಮಿಥ್ಯಾಕಲ್ಪನೆಗಳನ್ನು ಬಿತ್ತುವುದನ್ನು ಕಾನೂನಿನ ಮೂಲಕ ಕಠಿಣವಾಗಿ ನಿಗ್ರಹಿಸಬೇಕು.
ಇವರ ಮಧ್ಯೆ ಸಮಾನತೆ ಮತ್ತು ಸಾಮರಸ್ಯ ರೂಪಿಸಲು ಒಳಮೀಸಲಾತಿಯು ಪ್ರಧಾನವಾದ ಅಸ್ತ. ಇದನ್ನು ರಾಜಕೀಯ ಲಾಭ-ನಷ್ಟಗಳ ನೆಲೆಯಲ್ಲಿ ಲೆಕ್ಕಹಾಕದೆ, ಜನರಿಗೆ ಅರ್ಥಮಾಡಿಸುವುದು ಕೂಡ ಸರ್ಕಾರದ ಜವಾಬ್ದಾರಿಯಾಗಬೇಕು. ಬಹುಸಂಖ್ಯಾತರನ್ನು ಎಲ್ಲಾ ಕ್ಷೇತ್ರಗಳಲ್ಲಿ ಕತ್ತಲೆಯಲ್ಲಿಟ್ಟು ಆಡಳಿತ ನಡೆಸುವ ಯಾವ ದೇಶವೂ ಉದ್ಧಾರವಾದ ಚರಿತ್ರೆ ಜಗತ್ತಿನಲ್ಲಿ ಕಂಡುಬರುವುದಿಲ್ಲ. ಭಾರತದಲ್ಲಿ ಜನಿಸಿದವರೆಲ್ಲರಿಗೂ ಸಮಾನ ಪ್ರಾತಿನಿಧ್ಯ ನೀಡುವುದಾದರೆ, ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಒಳಮೀಸಲಾತಿಯು ಸೂಕ್ತ ಮಾರ್ಗ. ದಲಿತರ ಒಳಜಾತಿಗಳಲ್ಲಿಯೂ ಸಾಮಾಜಿಕ ಸಮಾನತೆಯ ಕೊರತೆಯಿರುವಂತೆ, ಹಿಂದುಳಿದ ವರ್ಗಗಳಲ್ಲಿ ದಲಿತರಿಗಿಂತ ನಿಕೃಷ್ಟ ಸ್ಥಿತಿಯಲ್ಲಿ ಬದುಕುವವರಿದ್ದಾರೆ. ಈ ಅಂಚಿನ ಜನರಿಗೆ ಒಳಮೀಸಲಾತಿಯ ಮೂಲಕ ಸಾಮಾಜಿಕ ನ್ಯಾಯ ದೊರೆತರೆ ಆರ್ಥಿಕ ಸಬಲತೆ ಸಾಧ್ಯವಾಗುತ್ತದೆ. ಆಗ ಸಮಾನತೆ ಸಹಜವಾಗಿಯೇ ಮೂಡುತ್ತದೆ. ಆಗ ಸಮಾನತೆಯ ಮಧ್ಯೆ ಸಾಮರಸ್ಯವು ಸುಲಭ. ಅಂತರ್ಜಾತಿ ವಿವಾಹಗಳ ಸಂಖ್ಯೆ ಹೆಚ್ಚಬಹುದು. ಮಾನಗೇಡಿ ಹತ್ಯೆಗಳು ಜರುಗುವುದೂ ಆರ್ಥಿಕವಾಗಿ ದುರ್ಬಲರಾದವರ ಮೇಲೆಯೆ ಹೊರತು ಸಬಲರ ಮೇಲಲ್ಲ. ಸಾಮಾಜಿಕವಾಗಿ ಘನತೆಯ ಬದುಕನ್ನು ರೂಪಿಸಿ ಕೊಂಡವರು ಅಂತರ್ಜಾತಿ ವಿವಾಹವಾದಾಗ ಮಾನಗೇಡಿ ಹತ್ಯೆಗಳಾಗುವುದು ತೀರಾ ವಿರಳ.
ಉತ್ತಮ ಉದೇಶವನ್ನಿಟ್ಟುಕೊಂಡು ರೂಪಿಸಲ್ಪಡುವ ಕಾನೂನು ಜಾರಿಯಾಗುವಾಗ ಭ್ರಮೆಯನ್ನು ಉಂಟುಮಾಡುತ್ತಿರುವುದಂತೂ ನಿಜ. ಕೆಲವೊಮ್ಮೆ ಅವು ದುರುಪಯೋಗವಾಗುವುದನ್ನು ತಪ್ಪಿಸಲಾಗದಂತೆ ವರ್ತಿಸಲಾಗುತ್ತದೆ. ಅಟ್ರಾಸಿಟಿಯಂಥ ಕಾನೂನುಗಳು ಪರಿಶಿಷ್ಟರಿಗೆ ಬೆಂಬಲವಾಗಿ ನಿಂತರೂ, ಅದರ ಬೆನ್ನುಮೂಳೆ ಮುರಿದು ದಶಕಗಳೇ ಕಳೆದಿವೆ. ಇಂಥಾ ಸಂದರ್ಭದಲ್ಲಿ ಸರಿಯಾದ ಕ್ರಿಯಾಯೋಜನೆಯಾಗುವುದು ಅತ್ಯಂತ ಸೂಕ್ತ. ಅಟ್ರಾಸಿಟಿಯೂ ಕೆಲವೊಮ್ಮೆ ದುರುಪಯೋಗ ಆಗುವುದಿಲ್ಲ ಎಂದಲ್ಲ. ಇದರಿಂದ ಹಿಂದುಳಿದ ವರ್ಗ ಮತ್ತು ದಲಿತರ ಮಧ್ಯೆ ಸಾಕಷ್ಟು ಬಿರುಕುಗಳಾಗಿವೆ. ಇದರ ಪ್ರಯೋಗ ಮತ್ತು ಪರಿಣಾಮಗಳು ಬಹುತೇಕ ಎರಡು ವರ್ಗಗಳ ಮಧ್ಯೆಯೇ ಜಾಸ್ತಿ ಇರುವ ಕಾರಣ, ಈ ಸಮೂಹಗಳು ಸಾಮರಸ್ಯದಿಂದ ಬದುಕಿದರೆ, ಕಾನೂನುಗಳು ದುರುಪಯೋಗವಾಗುವುದೂ ನಿಲ್ಲುತ್ತದೆ. ಮಾನಸಿಕ ಬದಲಾವಣೆಯು ಬುದ್ಧನಿಂದಾದ ಅಂಗುಲಿಮಾಲನ ಪರಿವರ್ತನೆಯಂತಿರಬೇಕು.
ನಿರ್ದಿಷ್ಟ ರಾಜಕೀಯ ಸ್ಪಷ್ಟತೆಯಿಲ್ಲದೆ ಶೋಷಣೆಗೆ ಸುಲಭವಾಗಿ ಬಲಿಪಶುಗಳಾಗಿರುವ ದಲಿತರು ಮತ್ತು ಹಿಂದುಳಿದ ಸಮುದಾಯಗಳು ಹಿಂದೆಂದಿಗಿಂತ ಇಂದು ಒಂದಾಗಲೇಬೇಕಾದ ಅನಿವಾರ್ಯತೆಯಿದೆ. ನಾವು ಒಂದೇ ಮೂಲದವರು, ಸಮಾನ ಶೋಷಿತರು ಎಂಬುದು ಎಲ್ಲಿಯವರೆಗೆ ಇವರಿಗೆ ಅರ್ಥವಾಗುವುದಿಲ್ಲವೋ, ಅಲ್ಲಿಯವರೆಗೂ ಮೇಲಿನವರ ಕಾಲುಗಳನ್ನು ತಮ್ಮ ತಲೆಯ ಮೇಲಿರಿಸಿಕೊಂಡು ಬೇಡುವ ಕೈಗಳನ್ನೊತ್ತು ನಡುಬಗ್ಗಿಸಿಕೊಂಡು ಬದುಕುತ್ತಾರೆ. ಧಾರ್ಮಿಕ ಸಂಸ್ಥೆಗಳನ್ನು ಸೇರಿಕೊಂಡು ರಾಜಕೀಯ ನಿರ್ಲಕ್ಷ್ಯ ಮಾಡಿರುವ ಹಿಂದುಳಿದ ವರ್ಗಗಳು ಮೀಸಲಾತಿ ಮತ್ತು ಒಳಮೀಸಲಾತಿಗಳ ಚಳವಳಿಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳದೆ ತಮಗೆ ಅಸ್ತಿತ್ವವಿಲ್ಲ ಎಂಬುದನ್ನು ಅರ್ಥಮಾಡಿ ಕೊಳ್ಳಬೇಕು. ಸಂಸತ್ತಿನಲ್ಲಿ ಹಿಂದುಳಿದ ವರ್ಗಗಳ ಪ್ರಾತಿನಿಧ್ಯತೆ ಕಡಿಮೆಯಾಗುತ್ತಾ ಬಂದಿರುವುದನ್ನು ಅಂಕಿ ಅಂಶಗಳು ಸ್ಪಷ್ಟವಾಗಿ ಹೇಳುತ್ತಿವೆ. ಇದು ಹೀಗೇ ಮುಂದುವರಿದರೆ, ಬಹುತೇಕ ಹಿಂದುಳಿದ ವರ್ಗಗಳು ಎಲ್ಲಾ ಸ್ತರಗಳಲ್ಲೂ ಅಂಚಿಗೆ ತಳ್ಳಲ್ಪಡುವ ದಿನಗಳು ದೂರವಿಲ್ಲ.
ವೈಜ್ಞಾನಿಕ ಯುಗದಲ್ಲಿ ಬದುಕುತ್ತಿರುವ ನಮಗೆ ವಂಶವಾಹಿ ಸಂಶೋಧನಾ ವರದಿಗಳು ಸುಲಭವಾಗಿ ದೊರಕುತ್ತಿವೆ. ಇಲ್ಲಿನ ಫಲಿತಗಳನ್ನು ಸರಿಯಾಗಿ ಜನರಿಗೆ ತಲುಪಿಸುವಲ್ಲಿ ಸರ್ಕಾರಗಳು ತಮ್ಮ ಜವಾಬ್ದಾರಿಯಿಂದ ಹಿಂದೆ ಸರಿಯುತ್ತಿವೆ. ಹೊಸಜ್ಞಾನವನ್ನು ತನ್ನ ದೇಶದ ಕಟ್ಟಕಡೆಯ ಪ್ರಜೆಗೂ ತಲುಪಿಸುವ ಜವಾಬ್ದಾರಿ ಯಾವತ್ತೂ ಸರ್ಕಾರಗಳದ್ದಾಗಿರುತ್ತದೆ. ರಾಜಕೀಯ ಲೆಕ್ಕಚಾರದಲ್ಲಿ ದೇಶದ ಪ್ರಜೆಗಳನ್ನು ಅಂಧಕಾರದಲ್ಲಿಡುವುದು ಜಾಗತಿಕ ಅಪರಾಧವು ಹೌದು. ವಂಶವಾಹಿ ಫಲಿತಗಳ ಪ್ರಕಾರ ಭಾರತದ ಪರಿಶಿಷ್ಟ- ಹಿಂದುಳಿದ ವರ್ಗಗಳು ಒಂದೇ ಮೂಲದವರು. ಇವರ ಮಧ್ಯೆ ಇರುವ ಅಸಹನೆಗೆ ಈ ಜ್ಞಾನದ ಕೊರತೆಯೂ ಕಾರಣ. ಇದನ್ನು ಅರ್ಥಮಾಡಿಸುವ ಮೂಲಕ ಇವರಲ್ಲಿ ಸಮಾನತೆ, ಸಾಮರಸ್ಯ ಮೂಡಿಸುವುದು ಕಷ್ಟದ ಕೆಲಸವೇನಲ್ಲ. ಕೊನೆಯದಾಗಿ ಸ್ವಾರ್ಥಬಿಟ್ಟು ಒಂದಾಗಬೇಕು, ಅದಾಗದಿದ್ದರೆ, ನಾಶವಾಗಲು ಸಿದ್ದರಾಗಬೇಕು.
ಜಗತ್ತಿನ ಸಂಶೋಧನಾ ಕ್ಷೇತ್ರಕ್ಕೆ ಹೋಲಿಸಿ ನೋಡಿದರೆ, ಮಾನವಶಾಸ್ತ್ರದ ಸಂಶೋಧನೆಯಲ್ಲಿ ಭಾರತ, ಅದರಲ್ಲೂ ಕರ್ನಾಟಕ ಹಿಂದುಳಿದಿದೆ. ಇಂದಿಗೂ ಅನೇಕ ಬುಡಕಟ್ಟು ಜನಸಮುದಾಯಗಳ ಜಾತಿಪ್ರಮಾಣಪತ್ರವು ಗೊಂದಲದಲ್ಲಿದೆ. ಯಾವುದೇ ಪೂರ್ವಾಗ್ರಹಗಳಿಲ್ಲದೆ ರಾಜಕೀಯ, ಧರ್ಮ, ಜಾತಿ ಲೆಕ್ಕಾಚಾರಕ್ಕೆ ಎಡೆಮಾಡಿ ಕೊಡದಂತೆ ಸರ್ಕಾರವು ಪರಿಶಿಷ್ಟ ಮತ್ತು ಹಿಂದುಳಿದ ವರ್ಗಗಳ ಬಹುಶಿಸ್ತೀಯ ‘ವಂಶವಾಹಿ ಕುಲಶಾಸ್ತ್ರೀಯ’ ಸಂಶೋಧನೆಗೆ ಒತ್ತು ಕೊಡಬೇಕು. ಜನಸಮುದಾಯಗಳ ಸಮಗ್ರ ಕುಲಬೆಡಗು, ಕುಲಚಿಹ್ನೆಗಳ ಅಧ್ಯಯನವಾಗಬೇಕು. ಮೂಲದಲ್ಲಿ ಇವರೆಲ್ಲಾ ಒಂದಾಗಿದ್ದರು ಎಂಬುದನ್ನು ಬಹಿರಂಗ ಪಡಿಸಬೇಕು. ನಾವೆಲ್ಲಾ ಒಂದು ಎಂಬ ಪ್ರಜ್ಞೆ ತಕ್ಷಣಕ್ಕೆ ಬರದೇ ಇದ್ದರೂ ನಿಧಾನವಾಗಿಯಾದರೂ ಇವರಲ್ಲಿ ಮೊಳೆಯುತ್ತದೆ. ಇಂಥ ಫಲಿತಗಳನ್ನು ಶಿಕ್ಷಣವ್ಯವಸ್ಥೆಯ ಪಠ್ಯಕ್ರಮಗಳಲ್ಲಿ ಅಳವಡಿಸುವುದರ ಮೂಲಕ ವಿದ್ಯಾರ್ಥಿಗಳಿಗೆ ತಲುಪಿಸಬೇಕು. ಇದು ಸಾಧ್ಯವಾದರೆ, ಮುಂದಿನ ಇಪ್ಪತೈದು ವರ್ಷಗಳಲ್ಲಿ ಭಾರತ ‘ಪ್ರಬುದ್ಧ ಭಾರತ’ವಾಗುವುದನ್ನು ತಡೆಯಲು ಯಾವ ದುಷ್ಟಶಕ್ತಿಯಿಂದಲೂ ತಡೆಯಲು ಸಾಧ್ಯವಿಲ್ಲ.
ಪಿ. ಆರಡಿಮಲ್ಲಯ್ಯ ಕಟ್ಟೇರ
ಸಂಶೋಧಕರು/ ಕನ್ನಡ ಪ್ರಾಧ್ಯಾಪಕರು
ಇದನ್ನೂ ಓದಿ- ‘ಕೆನೆಪದರ’ ನೀತಿ ಅನ್ವಯ; ದಲಿತರಿಗೆ ಮಾಡುವ ಅನ್ಯಾಯ