ಟಿಕೆಟ್ ಕೇಳುವ ಮೊದಲು, ನಿಮ್ಮ ಕ್ಷೇತ್ರದಲ್ಲಿ ನೀವು ಏನು ಸಾಧನೆ ಮಾಡಿದ್ದೀರಿ..? ಎಷ್ಟು ಅಭಿವೃದ್ಧಿ ಕೆಲಸಗಳು ನಡೆದಿವೆ? ಎಷ್ಟು ಯುವಕರಿಗೆ ಉದ್ಯೋಗ ಸಿಕ್ಕಿದೆ? ಎಷ್ಟು ಜನರ ಜೀವನದಲ್ಲಿ ಬದಲಾವಣೆ ತಂದಿದ್ದೀರಿ?. ಈ ಪ್ರಶ್ನೆಗಳಿಗೆ ಉತ್ತರ ಕೊಟ್ಟ ನಂತರವೇ ಯಾವುದೇ ಸೌಲಭ್ಯ ಕೇಳುವುದು ನ್ಯಾಯ. ಇಲ್ಲವಾದರೆ, ಇದು ಜನ ಸೇವೆ ಅಲ್ಲ—ಇದು ಸ್ವಾರ್ಥ ಸೇವೆ ಎನ್ನಲೇ ಬೇಕಾಗುತ್ತದೆ -ಅಷ್ಪಾಕ್. ಎಂ. ಜಿ, ಬಿ. ಎ ಪದವಿ ವಿದ್ಯಾರ್ಥಿ
ಇತ್ತೀಚಿನ ಅಧಿವೇಶನದಲ್ಲಿ ಕೇಳಿಬಂದ ಒಂದು ಬೇಡಿಕೆ ಇಂದು ರಾಜ್ಯದ ರಾಜಕೀಯ ಚರ್ಚೆಗೆ ಕಾರಣವಾಗಿದೆ—ಎಲ್ಲಾ ಶಾಸಕರಿಗೂ IPL ಪಂದ್ಯಗಳಿಗಾಗಿ 5 ಟಿಕೆಟ್ಗಳನ್ನು ನೀಡಬೇಕು ಎನ್ನುವುದು. ಕೆಲವರು ಇದನ್ನು “ಪ್ರತಿಷ್ಠೆಯ ವಿಷಯ”ವೆಂದು ಹೇಳಿದ್ದು ಇನ್ನಷ್ಟು ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಸಾಮಾನ್ಯವಾಗಿ ಕ್ರೀಡೆಗೆ ಸಂಬಂಧಿಸಿದ ವಿಷಯವಾಗಿ ಕಾಣಿಸಿಕೊಳ್ಳುವ ಈ ಬೇಡಿಕೆ, ಆಳದಲ್ಲಿ ನೋಡಿದರೆ ನಾಯಕತ್ವದ ಮನೋಭಾವವನ್ನು ಬಿಚ್ಚಿಡುವ ಒಂದು ಉದಾಹರಣೆಯಾಗಿದೆ.
ಇದರ ನಡುವೆ ಹೊರಬಂದ ಕೆಲ ಹೇಳಿಕೆಗಳು ಇನ್ನೂ ಚಿಂತಾಜನಕ. ಇವರ ಮಾತುಗಳ ಪ್ರಕಾರ, ಪಂದ್ಯ ವೀಕ್ಷಣೆಗೆ ಹೋದಾಗ ಇವರನ್ನು ಸಾಮಾನ್ಯ ಜನರು ಕುಳಿತುಕೊಳ್ಳುವ ಸ್ಥಳದಲ್ಲಿ ಕೂರಿಸಲಾಗುತ್ತದೆ—ಅದೇ ಇವರಿಗೆ ಅವಮಾನವಂತೆ! ಅದಕ್ಕಾಗಿ ಇವರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕಂತೆ! ಇದರ ಅರ್ಥ ಏನು?
“ನಾವು ಶ್ರೇಷ್ಠರು… ಜನ ಸಾಮಾನ್ಯರು ನಮಗಿಂತ ಕೆಳಗಿನವರು” ಎಂಬ ಅಹಂಕಾರದ ಪ್ರತಿಬಿಂಬವೇ ಅಲ್ಲವೇ ಇದು..? ಇದೇ ಸ್ಪಷ್ಟವಾದ ಜಮೀನ್ದಾರಿ ಮನೋಭಾವ.
ಜನರಿಂದ ಆಯ್ಕೆಯಾದವರು, ಜನರ ಮಧ್ಯೆ ಕುಳಿತುಕೊಳ್ಳುವುದನ್ನು ಅವಮಾನವೆಂದು ಕಾಣುವುದು—ಇದು ಪ್ರಜಾಪ್ರಭುತ್ವದ ಆತ್ಮಕ್ಕೆ ವಿರುದ್ಧ. ನಾಯಕತ್ವ ಎಂದರೆ ಜನರ ನಡುವೆ ನಿಂತು, ಅವರ ಅನುಭವವನ್ನು ಹಂಚಿಕೊಳ್ಳುವುದು. ಆದರೆ ಇಲ್ಲಿ “ವಿಶೇಷ ವ್ಯವಸ್ಥೆ”ಗಾಗಿ ಹಂಬಲಿಸುವುದು, ಅಧಿಕಾರವನ್ನು ಸೇವೆಯಾಗಿ ನೋಡುವ ಬದಲು ಸವಲತ್ತಾಗಿ ಬಳಸಿಕೊಳ್ಳುವ ಮನೋಭಾವವನ್ನು ತೋರಿಸುತ್ತದೆ.

ಒಂದೆಡೆ, ಬ್ಲಾಕ್ ಟಿಕೆಟ್ಗಳ ವಿರುದ್ಧ ಧ್ವನಿ ಎತ್ತಬೇಕಾದವರು—“ಇದು ತಪ್ಪು ಎಂದು ಹೇಳಬೇಕಾದವರು ಇನ್ನೊಂದೆಡೆ ಅದೇ ಟಿಕೆಟ್ಗಳನ್ನು “ನಮಗೆ ಕೊಡಿಸಿ” ಎಂದು ಕೇಳುತ್ತಿರುವುದು ವಿಪರ್ಯಾಸವೇ ಸರಿ. ಇದು ಕೇವಲ ಮಾತಿನ ದ್ವಂದ್ವವಲ್ಲ; ಇದು ಸ್ವಾರ್ಥದ ಸ್ಪಷ್ಟ ರೂಪ. ನಿಯಮಗಳನ್ನು ಜನರ ಮೇಲೆ ಜಾರಿಗೊಳಿಸುವವರು, ತಮ್ಮ ಲಾಭಕ್ಕೆ ಅದನ್ನೇ ಮಡಚಿಕೊಳ್ಳಲು ಯತ್ನಿಸುವುದು ಜಮೀನ್ದಾರಿ ಚಿಂತನೆಯ ಇನ್ನೊಂದು ಮುಖ.
ಇನ್ನೂ ಗಮನಿಸಬೇಕಾದ ಸಂಗತಿ ಎಂದರೆ ಜನರನ್ನು ವಿಭಜಿಸುವ ವಿಚಾರಗಳಲ್ಲಿ ಪಕ್ಷಗಳ ಸಿದ್ಧಾಂತಗಳನ್ನು ಎತ್ತಿಹಿಡಿಯುವ ನಾಯಕರು, ಇಂತಹ ಸ್ವಾರ್ಥದ ವಿಚಾರದಲ್ಲಿ ಮಾತ್ರ ಎಲ್ಲರೂ ಒಟ್ಟಾಗಿರುವುದು. ಇಲ್ಲಿ ತತ್ವಗಳಿಲ್ಲ, ಭೇದಗಳಿಲ್ಲ—ಇದು ಕೇವಲ ಲಾಭದ ಒಗ್ಗಟ್ಟು. ಜನರು ಇದನ್ನು ಗಮನಿಸಲೇಬೇಕು. ಏಕೆಂದರೆ ಇದು “ಜನರಿಗಾಗಿ ರಾಜಕೀಯ”ವಲ್ಲ, “ಸೌಲಭ್ಯಗಳಿಗಾಗಿ ರಾಜಕೀಯ”.
ಶಾಸಕರಿಗೆ ಈಗಾಗಲೇ ಅನೇಕ ಸೌಲಭ್ಯಗಳು ದೊರೆಯುತ್ತಿವೆ—ಸಂಬಳ, ಭತ್ಯೆಗಳು, ವಾಹನ, ನಿವಾಸ, ಭದ್ರತೆ, ಪ್ರವಾಸ ಸೌಲಭ್ಯಗಳು… ಇವೆಲ್ಲವೂ ಜನರ ತೆರಿಗೆ ಹಣದಿಂದಲೇ. ಇಂತಹ ಸವಲತ್ತುಗಳ ನಡುವೆ ಇನ್ನೂ ಉಚಿತ ಟಿಕೆಟ್ಗಳ ಬೇಡಿಕೆ ಇಡುವುದು “ಸೇವೆ”ಯನ್ನು “ಹಕ್ಕು” ಆಗಿ ಪರಿವರ್ತಿಸುವ ಪ್ರಯತ್ನ. ಇದೇ ಜಮೀನ್ದಾರಿ ಮನೋಭಾವದ ಮುಂದುವರಿಕೆ.
ಇದರ ಮಧ್ಯೆ ಗಮನಿಸಬೇಕಾದ ಗಂಭೀರ ವಿಷಯವೆಂದರೆ ಸಭಾಧ್ಯಕ್ಷರ (Speaker)ಪಾತ್ರ. ಸಭೆಯ ಗೌರವವನ್ನು ಕಾಪಾಡಬೇಕಾದ, ಸಮತೋಲನದಿಂದ ನಿರ್ಧಾರ ತೆಗೆದುಕೊಳ್ಳಬೇಕಾದ ಸ್ಥಾನದಲ್ಲಿ ಇರುವವರು, ಇಂತಹ ಬೇಡಿಕೆಗೆ ತಕ್ಷಣವೇ “ಹೌದು” ಎಂದು ತಲೆ ಅಲ್ಲಾಡಿಸಿ, ವ್ಯವಸ್ಥೆ ರೂಪಿಸಲು ಒಪ್ಪಿರುವುದು ಸರಿಯಾದ ಕ್ರಮವಲ್ಲ. ಇದು ಕೇವಲ ಒಬ್ಬ ವ್ಯಕ್ತಿಯ ನಿರ್ಧಾರವಲ್ಲ; ಇದು ಸಂಪೂರ್ಣ ವ್ಯವಸ್ಥೆಯ ನೈತಿಕತೆ ಮೇಲೆ ಪರಿಣಾಮ ಬೀರುವ ವಿಚಾರ.
ಸಭಾಧ್ಯಕ್ಷರು ನಿಷ್ಪಕ್ಷಪಾತಿ (impartial) ಆಗಿರಬೇಕು. ಅವರ ನಿರ್ಧಾರಗಳು ಜನರ ಹಿತವನ್ನು ಮೊದಲಿಗೆ ಕಾಪಾಡಬೇಕು. ಆದರೆ ಇಲ್ಲಿ ಜನರ ಸಮಸ್ಯೆಗಳಿಗಿಂತ ಶಾಸಕರ ಸೌಲಭ್ಯಗಳಿಗೆ ಆದ್ಯತೆ ನೀಡಿರುವಂತೆ ಕಂಡುಬಂದು ಆ ಸ್ಥಾನಮಾನದ ಗಾಂಭೀರ್ಯವನ್ನು ಪ್ರಶ್ನಿಸುತ್ತದೆ. ಇದು “ಸೌಲಭ್ಯಗಳಿಗೆ ವೇಗ—ಸಮಸ್ಯೆಗಳಿಗೆ ಮೌನ” ಎಂಬ ಭಾವನೆಯನ್ನು ಜನ ಸಾಮಾನ್ಯರಲ್ಲಿ ಮೂಡಿಸುವಂತಾಗಿದೆ.
ಆದರೆ, ಈ ಎಲ್ಲಾ ಚರ್ಚೆಗಳ ನಡುವೆ ನಾವು ಮರೆಯಬಾರದ ದೊಡ್ಡ ವಾಸ್ತವಗಳಿವೆ…
ಇಂದು ಸಾವಿರಾರು ವಿದ್ಯಾರ್ಥಿಗಳು ನಿರುದ್ಯೋಗದಿಂದ ಹತಾಶರಾಗಿದ್ದಾರೆ. ಉದ್ಯೋಗಕ್ಕಾಗಿ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಒಳ ಮೀಸಲಾತಿ ವಿಚಾರವಾಗಿ ಪ್ರತಿಭಟನೆಗಳು ನಡೆಯುತ್ತಿವೆ. ರೈತರು ತಮ್ಮ ಹಕ್ಕಿಗಾಗಿ ಹೋರಾಟಕ್ಕಿಳಿದಿದ್ದಾರೆ. ದೇಶದ ಭವಿಷ್ಯ ರೂಪಿಸುವ ಶಿಕ್ಷಕರು ಇಂದು ತಮ್ಮ ಹಕ್ಕುಗಳಿಗಾಗಿ ಸಂಕಷ್ಟದಲ್ಲಿದ್ದಾರೆ.
ಈ ಎಲ್ಲ ಹೋರಾಟಗಳ ಬಗ್ಗೆ ಎಷ್ಟು ಶಾಸಕರು ಕಾಳಜಿ ವಹಿಸಿದ್ದಾರೆ? ಎಷ್ಟು ಮಂದಿ ಅವರಿಗೆ ಧ್ವನಿಯಾಗಿದ್ದಾರೆ..? ಎಷ್ಟು ಶಾಸಕರು ಜನರ ನೋವನ್ನು ತಮ್ಮ ನೋವನ್ನಾಗಿ ಮಾಡಿಕೊಂಡಿದ್ದಾರೆ..?
ಈ ಪ್ರಶ್ನೆಗಳಿಗೆ ಉತ್ತರ ಕೊಡದೇ, IPL ಟಿಕೆಟ್ಗಳ ಬಗ್ಗೆ ಮಾತನಾಡುವುದು—ಜನರ ನೋವಿಗೆ ನೀಡುವ ಅವಮಾನ. ಇದು ಕೇವಲ ನಿರ್ಲಕ್ಷ್ಯವಲ್ಲ; ಇದು ಹೊಣೆಗಾರಿಕೆಯಿಂದ ಓಡುವುದು.

ಇದರ ಜೊತೆಗೆ, ಕ್ರೀಡೆಯು ಕೂಡ ತನ್ನ ಶುದ್ಧತೆಯನ್ನು ಕಳೆದುಕೊಳ್ಳುತ್ತಿದೆ. ಒಂದು ಕಾಲದಲ್ಲಿ ಕ್ರೀಡೆ ಎಂದರೆ ಉತ್ಸಾಹ, ಏಕತೆ. ಆದರೆ ಇಂದು ಅದು ಹಣದ ಲೆಕ್ಕಾಚಾರ, ಪ್ರಭಾವದ ಪ್ರದರ್ಶನವಾಗಿ ಬದಲಾಗಿದೆ. ಕ್ರೀಡೆಯನ್ನೇ ಕೆಲವರು ಪ್ರಭಾವದ ಸಾಧನವಾಗಿ ಬಳಸಿಕೊಳ್ಳುತ್ತಿರುವುದು, ಅದು ಜನರ ಹಬ್ಬವಾಗಿರಬೇಕಾದ ಅರ್ಥವನ್ನೇ ಕಳೆದುಕೊಳ್ಳುವಂತೆ ಮಾಡುತ್ತಿದೆ.
ಈ ಎಲ್ಲಾ ಹಿನ್ನೆಲೆಯಲ್ಲೊಂದು ಸರಳವಾದ ಪ್ರಶ್ನೆ ಎದುರಾಗುತ್ತದೆ—
ಟಿಕೆಟ್ ಕೇಳುವ ಮೊದಲು, ನಿಮ್ಮ ಕ್ಷೇತ್ರದಲ್ಲಿ ನೀವು ಏನು ಸಾಧನೆ ಮಾಡಿದ್ದೀರಿ..? ಎಷ್ಟು ಅಭಿವೃದ್ಧಿ ಕೆಲಸಗಳು ನಡೆದಿವೆ? ಎಷ್ಟು ಯುವಕರಿಗೆ ಉದ್ಯೋಗ ಸಿಕ್ಕಿದೆ? ಎಷ್ಟು ಜನರ ಜೀವನದಲ್ಲಿ ಬದಲಾವಣೆ ತಂದಿದ್ದೀರಿ?
ಈ ಪ್ರಶ್ನೆಗಳಿಗೆ ಉತ್ತರ ಕೊಟ್ಟ ನಂತರವೇ ಯಾವುದೇ ಸೌಲಭ್ಯ ಕೇಳುವುದು ನ್ಯಾಯ. ಇಲ್ಲವಾದರೆ, ಇದು ಜನ ಸೇವೆ ಅಲ್ಲ—ಇದು ಸ್ವಾರ್ಥ ಸೇವೆ ಎನ್ನಲೇ ಬೇಕಾಗುತ್ತದೆ.
ಅಂತಿಮವಾಗಿ…
ಜನರ ಜೊತೆ ಕುಳಿತುಕೊಳ್ಳುವುದೇ ಅವಮಾನವೆಂದು ಭಾವಿಸುವ ಮನೋಭಾವ ಅದು ಪ್ರಜಾಪ್ರಭುತ್ವವಲ್ಲ… ಅದು ಜಮೀನ್ದಾರಿ ನಡೆ.
ಜನರ ಕಷ್ಟಕ್ಕೆ ಮೌನವಾಗಿರುವವರು, ತಮ್ಮ ಸೌಕರ್ಯಕ್ಕೆ ಮಾತ್ರ ಗಟ್ಟಿಯಾಗಿ ಮಾತನಾಡುವವರು ನಾಯಕರು ಅಲ್ಲ… ಅವರು ಸವಲತ್ತುಗಳ ಹುಡುಕಾಟಗಾರರು.
ಸಭೆಯ ಗೌರವವನ್ನು ಕಾಪಾಡಬೇಕಾದವರೇ ಈ ಸ್ವಾರ್ಥದ ಧ್ವನಿಗೆ ತಲೆಬಾಗಿದರೆ ಅದು ಕೇವಲ ಒಂದು ನಿರ್ಧಾರವಲ್ಲ, ಅದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಬಿದ್ದ ಹೊಡೆತ.
ಜನರ ಮಧ್ಯೆ ಕುಳಿತುಕೊಳ್ಳುವುದನ್ನು ಅವಮಾನವೆಂದು ಭಾವಿಸುವ ನಾಯಕರು, ಜನರ ನೋವನ್ನು ಹೇಗೆ ಅರ್ಥಮಾಡಿಕೊಳ್ಳುತ್ತಾರೆ?
ಪ್ರಜಾಪ್ರಭುತ್ವದ ಸತ್ಯ ಒಂದೇ ಜನರಿಗಾಗಿ ನಿಲ್ಲದ ನಾಯಕರು, ಜನರ ನಾಯಕರು ಆಗಲು ಅರ್ಹರಲ್ಲ.
ಟಿಕೆಟ್ಗಾಗಿ ಒಗ್ಗಟ್ಟಾಗುವ ನಾಯಕರು, ಜನರ ಕಣ್ಣೀರಿಗೆ ಯಾವಾಗ ಒಗ್ಗಟ್ಟಾಗುತ್ತಾರೆ?
ಆ ದಿನ ಬರದಿದ್ದರೆ…ಜನರ ತೀರ್ಪು ಕಠಿಣವಾಗುತ್ತದೆ…ಇತಿಹಾಸ ಮೌನವಾಗುವುದಿಲ್ಲ…ಪ್ರಜಾಪ್ರಭುತ್ವವೇ ಉತ್ತರ ಕೇಳುತ್ತದೆ.
ಪ್ರಜಾಪ್ರಭುತ್ವದ ನಿಜವಾದ ಸೌಂದರ್ಯ ಸಮಾನತೆಯಲ್ಲಿ ಇದೆ. ನಾಯಕರು ಅದನ್ನು ಮರೆಯುವಾಗ, ಜನರು ನೆನಪಿಸಬೇಕಾದ ಸಮಯ ಬರುತ್ತದೆ…
ಅಷ್ಪಾಕ್. ಎಂ. ಜಿ
ಬಿ. ಎ ಪದವಿ ವಿದ್ಯಾರ್ಥಿ
ಕರ್ನಾಟಕ ಕಲಾ ಮಹಾವಿದ್ಯಾಲಯ ಧಾರವಾಡ.
ಇದನ್ನೂ ಓದಿ- ಎಚ್ಚೆಮ್ ಪೆರ್ನಾಲ್ ರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ- ಕೊಂಕಣಿಯ ಜಾಗೃತ ಪ್ರಜ್ಞೆಗೆ ಸಿಕ್ಕ ಗೌರವ


