ರೇಣುಕಾಸ್ವಾಮಿ ಕೊಲೆ ಪ್ರಕರಣ: ಜೈಲಿನಿಂದ ದರ್ಶನ್ ಇಂದೇ ಹೊರಬರಲಿದ್ದಾರೆಯೇ ? ಬಳ್ಳಾರಿಯಿಂದ ಅವರು ಎಲ್ಲಿಗೆ ಹೋಗಲಿದ್ದಾರೆ? ಇಲ್ಲಿದೆ ಎಕ್ಸ್ ಕ್ಲ್ಯೂಸೀವ್ ಮಾಹಿತಿ

Most read

ಬೆಂಗಳೂರು:
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A -2 ಆಗಿರುವ ಖ್ಯಾತ ಚಿತ್ರ ನಟ ದರ್ಶನ್ ಅವರಿಗೆ ಕೊನೆಗೂ ಹೈ ಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಚಿಕಿತ್ಸೆಗಾಗಿ ಮಾತ್ರ 6 ವಾರಗಳ ಮಧ್ಯಂತರ ಜಾಮೀನು ನೀಡಲಾಗಿದೆ. ಹಾಗೆಯೇ ಕೆಲವು ಷರತ್ತುಗಳನ್ನೂ ವಿಧಿಸಲಾಗಿದೆ.
ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ಪೀಠ ಮಧ್ಯಂತರ ಜಾಮೀನು ನೀಡಿ ಆದೇಶ ಹೊರಡಿಸಿದೆ. ಮಂಗಳವಾರ ವಾದ ಪ್ರತಿವಾದ ಆಲಿಸಿದ ಹೈಕೋರ್ಟ್ ಅದೇಶವನ್ನು ಇಂದಿಗೆ ಕಾಯ್ದಿರಿಸಿತ್ತು. ಪಾಸ್ ಪೋರ್ಟ್ ಅನ್ನು ನ್ಯಾಯಾಲಯದ ವಶಕ್ಕೆ ಸಲ್ಲಿಸಬೇಕು ಮತ್ತು ವಿದೇಶ ಪ್ರವಾಸ ಮಾಡುವಂತಿಲ್ಲ ಎಂಬ ಷರತ್ತುಗಳನ್ನು ವಿಧಿಸಿದೆ.
ಸತತ 131 ದಿನಗಳ ಸೆರೆವಾಸದ ನಂತರ ದರ್ಶನ್ ಬಳ್ಳಾರಿ ಜೈಲಿನಿಂದ ಹೊರಗೆ ಬರಲಿದ್ದಾರೆ. ಬಳ್ಳಾರಿ ಜೈಲಿನಲ್ಲಿರುವ ದರ್ಶನ್ ಸಂತಸ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಜೈಲಿನಿಂದ ಹೊರಬಂದು ದರ್ಶನ್ ಆರಾಮವಾಗಿ ಇರುವಂತಿಲ್ಲ. ಚಿಕಿತ್ಸೆ ಪಡೆಯಬೇಕಾಗಿರುತ್ತದೆ. ಒಂದು ವಾರದ ಬಳಿಕ ಚಿಕಿತ್ಸೆಯ ವಿವರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಾಗಿರುತ್ತದೆ.

ಇನ್ನು ಸಂಜೆಯೊಳಗೆ ದರ್ಶನ್ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ಇಂದೇ ಅವರನ್ನು ಜೈಲಿನಿಂದ ಹೊರಗೆ ಕರೆ ತರಲು ಅವರ ಪತ್ನಿ ವಿಜಯಲಕ್ಷ್ಮೀ ಮತ್ತು ವಕೀಲರು ಷರತ್ತುಗಳನ್ನು ಪೂರೈಸಲು ದಾಖಲೆಗಳನ್ನು ಸಿದ್ದಪಡಿಸಿಕೊಳ್ಳುತ್ತಿದ್ದಾರೆ. ಒಂದು ವೇಳೆ ಅಗತ್ಯ ಪ್ರಕ್ರಿಯೆಗಳನ್ನು ಇಂದೇ ಪೂರೈಸಿದರೆ ಹೆಲಿಕಾಫ್ಟರ್ ಮೂಲಕ ಅವರನ್ನು ಬೆಂಗಳೂರು ಇಲ್ಲವೇ ಮೈಸೂರಿಗೆ ಕರೆ ತರಲಾಗುತ್ತದೆ. ಒಂದು ವೇಳೆ ಬೆನ್ನು ನೋವು ಉಲ್ಬಣಿಸಿದರೆ ಇಂದೇ ಮೈಸೂರಿನ ಅಪೊಲೊ ಆಸ್ಪತ್ರೆಗೆ ದಾಖಲಿಸಲಾಗುತ್ತದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
ಅತ್ತ ಬಳ್ಳಾರಿಯಲ್ಲಿ ಜೈಲಿನ ಮುಂದೆ ಸಾವಿರಾರು ಅಭಿಮಾನಿಗಳು ನೆರೆದಿದ್ದಾರೆ. ತಮ್ಮ ನೆಚ್ಚಿನ ನಟ ಆರಾಧ್ಯ ದೈವ ದರ್ಶನ್ ಅವರನ್ನು ನೋಡಲು ಅಭಿಮಾನಿಗಳು ನೆರೆದಿದ್ದಾರೆ.
ದರ್ಶನ್ ಗೆ ಜಾಮೀನು ಸಿಕ್ಕಿರುವುದು ಇತರ ಆರೋಪಿಗಳಿಗೂ ಕೊಂಚ ನೆಮ್ಮದಿ ನೀಡಿದೆ. ಆರೋಪಿ ನಂ- 2 ಆಗಿರುವ ದರ್ಶನ್ ಗೆ ಜಾಮೀನು ಸಿಕ್ಕಿರುವಾಗ ತಮಗೂ ಜಾಮೀನು ಸಿಗಲಿದೆ ಎಂಬ ಕೋಲ್ಮಿಂಚು ಅವರಲ್ಲಿ ಮೂಡಿದೆ. ಇನ್ನು ಈ ಪ್ರಕರಣದಲ್ಲಿ ಎ-1 ಆಗಿರುವ ದರ್ಶನ್ ಗೆಳತಿ ಪವಿತ್ರಾಗೌಡ ಅವರಿಗೆ ಜಾಮೀನು ಸಿಗಲಿದೆಯೇ ಎನ್ನುವುದು ಸ್ಪಷ್ಟವಾಗಿಲ್ಲ.
ಮಂಗಳವಾರ ವಾದ ಪ್ರತಿವಾದ ಆಲಿಸಿದ ಹೈಕೋರ್ಟ್ ಅದೇಶವನ್ನು ಇಂದಿಗೆ ಕಾಯ್ದಿರಿಸಿತ್ತು. ನಿನ್ನೆ ದರ್ಶನ್ ಪರ ವಕೀಲರು ಕನಿಷ್ಠ 3 ತಿಂಗಳ ಮಧ್ಯಂತರ ಜಾಮೀನು ನೀಡಿ ಎಂದು ಮನವಿ ಮಾಡಿಕೊಂಡಿದ್ದರು.

More articles

Latest article