ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದಲ್ಲಿ ದರ್ಶನ್ (Darshan Thoogudeepa) ಬಂಧನವಾಗಿ ವಾರಕ್ಕೂ ಹೆಚ್ಚು ಸಮಯವಾಗಿದೆ. ಕಳೆದ ಎಂಟು ದಿನದಿಂದಲೂ ದರ್ಶನ್ ಕಾಮಾಕ್ಷಿಪಾಳ್ಯ ಪೊಲೀಸರ ವಶದಲ್ಲಿದ್ದಾರೆ. ಸತತ ವಿಚಾರಣೆ, ತನಿಖೆಗಳು ನಡೆಯುತ್ತಲೇ ಇವೆ. ಇದರ ನಡುವೆ ರೇಣುಕಾಸ್ವಾಮಿ ಸಾವು: ಮರಣೋತ್ತರ ಪರೀಕ್ಷಾ ವರದಿ ಬಹಿರಂಗಗೊಂಡಿದೆ.
ಭೀಕರ ಹಲ್ಲೆಯ ಪರಿಣಾಮ, ರೇಣುಕಾಸ್ವಾಮಿಯ ಸಾವು ಸಂಭವಿಸಿದೆ ಎಂಬ ಅಂಶ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಬಯಲಾಗಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ಆರೋಪಿಗಳನ್ನ ಹಾಜರುಪಡಿಸುವಾಗ ನ್ಯಾಯಾಲಯಕ್ಕೆ ಸಲ್ಲಿಸಲು ಸಿದ್ಧಪಡಿಸಿರುವ ರಿಮ್ಯಾಂಡ್ ಅರ್ಜಿಯ ಪ್ರತಿ ಈಟಿವಿ ಭಾರತಕ್ಕೆ ಲಭ್ಯವಾಗಿದ್ದು, ಅದರಲ್ಲಿ ರೇಣುಕಾಸ್ವಾಮಿಯ ಸಾವಿಗೆ ವೈದ್ಯರು ನೀಡಿರುವ ಕಾರಣದ ಕುರಿತು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ರೇಣುಕಾಸ್ವಾಮಿಯ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ್ದ ವೈದ್ಯರು ಸಲ್ಲಿಸಿರುವ ವರದಿಯಲ್ಲಿ ”Death is due to shock and Hemorrhage as a result to multiple blunt injuries sustained” ಅಂದರೆ ಶಾಕ್ ಹಾಗೂ ಬಲವಾದ ಹೊಡೆತಗಳ ಕಾರಣದಿಂದ ರಕ್ತಸ್ರಾವವಾಗಿ ಸಾವು ಸಂಭವಿಸಿದೆ ಎಂಬ ವಿಚಾರವನ್ನು ವರದಿಯನ್ನ ವೈದ್ಯರು ನೀಡಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆಯ ವರದಿಯನ್ನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೂ ಕಳುಹಿಸಿರುವ ಪೊಲೀಸರು ವರದಿಗಾಗಿ ಕಾಯುತ್ತಿದ್ದಾರೆ.
ಚಿತ್ರದುರ್ಗದ ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ಕಳೆದ ಮಂಗಳವಾರ ಕಾಮಾಕ್ಷಿಪಾಳ್ಯ ಪೊಲೀಸರು ದರ್ಶನ್ ತೂಗುದೀಪ ಅವರನ್ನು ಬಂಧಿಸಿದ್ದರು. ಅದೇ ದಿನ ಪವಿತ್ರಾ ಗೌಡ ಸೇರಿದಂತೆ 11 ಆರೋಪಿಗಳ ಬಂಧನವಾಗಿತ್ತು. ಈಗ ಬಂಧಿತರ ಸಂಖ್ಯೆ 20 ದಾಟಿದೆ. ರೇಣುಕಾ ಸ್ವಾಮಿಗೆ ದರ್ಶನ್ ಮತ್ತು ಗ್ಯಾಂಗ್ ತೀವ್ರ ಚಿತ್ರಹಿಂಸೆ ನೀಡಿತ್ತು ಎಂಬುದು ಸಹ ತನಿಖೆಯಿಂದ ಹೊರಬಂದಿದೆ. ನಾಳೆ ಅಂದರೆ ಜೂನ್ 20 ಕ್ಕೆ ದರ್ಶನ್ ಹಾಗೂ ಇತರೆ ಆರೋಪಿಗಳ ಪೊಲೀಸ್ ಕಸ್ಟಡಿ ಅಂತ್ಯವಾಗಲಿದ್ದು, ನಾಳೆ ನ್ಯಾಯಾಲಯದ ಆದೇಶದಂತೆ ದರ್ಶನ್ ಹಾಗೂ ಇತರ ಆರೋಪಿಗಳು ನ್ಯಾಯಾಂಗ ಬಂಧನಕ್ಕೆ ಒಳಪಡಬೇಕಾಗಬಹುದು.