ವಿದ್ವತ್ತು, ಸಜ್ಜನಿಕೆ ಅಧ್ಯಾಪನ ಸಂಶೋಧನೆ, ಸ್ತ್ರೀ ಸಂವೇದನೆ, ಜನಪರ ಕಾಳಜಿ ಎಲ್ಲವೂ ಮೇಳೈಸಿದ್ದ ಕಮಲಾ ಹಂಪನಾ ನಮ್ಮನ್ನು ಅಗಲಿದ್ದಾರೆ (ಜೂನ್ 22, 2024). ಅವರ ಬಗ್ಗೆ ಆಪ್ತವಾಗಿ ಬರೆದಿದ್ದಾರೆ ಕವಯಿತ್ರಿ ಮಮತಾ ಜಿ ಸಾಗರ
ನಗುವೇ ಅರಳಿದಂತೆ ಇದ್ದರು ಕಮಲಾ. ಡಾ. ಕಮಲಾ ಹಂಪನಾ ನನ್ನ ಗೆಳತಿ ಆರತಿಯ ತಾಯಿ. ನಿಕಟವಾಗಿದ್ದ ಗೆಳತಿಯರ ನಮ್ಮ ಗುಂಪಿಗೆ ಅವರು ‘ಆಂಟಿ’. ಸಾಗರದಿಂದ ಬೆಂಗಳೂರಿಗೆ ಬಂದು ಚಿ. ನಾ. ಮಂಗಳ ಅವರು ಪ್ರಿನ್ಸಿಪಾಲರಾಗಿದ್ದ ಎನ್ ಎಂ ಕೆ ಅರ್ ವಿ ಕಾಲೇಜಿನಲ್ಲಿ ದಾಖಲಾಗಿ ಬದುಕಿನ ಹೊಸ ತಿರುವಲ್ಲಿ ನಿಂತ ನನಗೆ ಗೆಳತಿಯಾಗಿ ಸಿಕ್ಕಿದ ಆರತಿ ತನ್ನ ಕುಟುಂಬವನ್ನೇ ಪರಿಚಯಿಸಿದ್ದಳು. ಹಾಗೇ ನಮ್ಮ ಕುಟುಂಬಕ್ಕೆ ಆರತಿಯ ಪರಿಚಯವಾಗಿತ್ತು. ನಮ್ಮಿಬ್ಬರ ಮನೆಯಲ್ಲಿ ನಾವುಗಳು ಸಲೀಸಾಗಿ ಹರಟಿ, ಉಂಡು, ಯಾವ ಹೊತ್ತಿಗಾದರೂ ಬಂದು ಹೋಗಿ ಮಾಡಿಕೊಂಡಿದ್ದೆವು. ನಾನವರ ಮನೆಗೆ ಹೋದಾಗಲೆಲ್ಲ ಆಂಟಿ ಕಮಲಾ ಹಾಗೂ ಅಂಕಲ್ ಹಂಪನಾ ಪ್ರೀತಿಯಿಂದ ಬರಮಾಡಿಕೊಂಡು ಉಭಯಕುಶಲೋಪರಿಯ ಕೇಳಿ ಲಘು ಹಾಸ್ಯದಲ್ಲಿ ತೊಡಗಿಸಿ ನಮ್ಮ ಪಾಡಿಗೆ ನಮ್ಮನ್ನು ಬಿಟ್ಟುಕೊಡುತ್ತಿದ್ದರು. ಅವರಿಬ್ಬರ ಸಂಗಾತ ಕನ್ನಡ ಜಗತ್ತಿಗೇ ಗೊತ್ತಿರುವಂತದು. ಹರ್ಷ, ರಾಜ್ಯಶ್ರೀ, ಆರತಿ ಯಾರಮೇಲೂ ಗದರಿ ಮಾತಾಡಿದ್ದು ನಾನೆಂದೂ ಕೇಳಿಲ್ಲ. ಅವರಿಬ್ಬರೂ ಮಕ್ಕಳನ್ನು ಅಕ್ಕರೆಯಿಂದ ಛೇಡಿಸಿಕೊಂಡು ತಿದ್ದುತ್ತಿದ್ದರು. ಆಂಟಿಯಂತೂ ಸದಾ ನಗುನಗುತ್ತಾ, ಮೃದುವಾಗಿ ಮಾತಾಡಿಕೊಂಡು ನಮ್ಮೆಲ್ಲರಿಗೂ ಒಂದು ಉತ್ತಮ ಉದಾಹರಣೆಯೇ ಆಗಿದ್ದರು. ಯಾವ ಹೊತ್ತಲ್ಲಾದರೂ ಸರಿ ನೀಟಾಗಿ ಸೀರೆಯುಟ್ಟು, ದೊಡ್ಡ ಕುಂಕುಮವಿಟ್ಟು, ಅರಸಿ ಬಂದ ವಿದ್ಯಾರ್ಥಿಗಳ ಜೊತೆಗೆ ಸಮಾಧಾನವಾಗಿ ಮಾತನಾಡುತ್ತಿದ್ದರು. ತಮ್ಮ ಕೊನೆಯಲ್ಲಿ ಪೆನ್ನು ಹಿಡಿದು ಬರೆಯಲು ಕುಳಿತ ಚಿತ್ರ ಇನ್ನೂ ಕಣ್ಣ ಮುಂದಿದೆ.
ಕಮಲಾ ಆಂಟಿ ಮಹಾರಾಣಿ ಕಾಲೇಜಿನಲ್ಲಿ ಬಹುಕಾಲ ಪಾಠ ಹೇಳಿದ್ದಾರೆ. ನೆಚ್ಚಿನ ಅಧ್ಯಾಪಕಿಯಾಗಿ ಎಷ್ಟೋ ವಿದ್ಯಾರ್ಥಿಗಳನ್ನು ಬೆಳೆಸಿದ್ದಾರೆ. ಯಾವಾಗಲಾದರೂ ನಾವು ಅವರ ಕಾಲೇಜಿನತ್ತ ಸುಳಿದಾಗ ಅವರನ್ನು ಭೇಟಿಯಾಗಲು ಹೋಗುತ್ತಿದ್ದೆವು. ‘ಇವಳು ನನ್ನ ಮಗಳು ಆರತಿ. ಇವಳು ಅವಳ ಗೆಳತಿ ಮಮತಾ. ಇಬ್ಬರೂ ಚೆನ್ನಾಗಿ ಕವಿತೆ ಬರೆಯುತ್ತಾರೆ’ ಎಂದು ಹೆಮ್ಮೆಯಿಂದ ನಮ್ಮನ್ನು ಪರಿಚಯಿಸುತ್ತಿದ್ದರು. ಆಂಟಿ ಒಳ್ಳೆಯ ಅಧ್ಯಾಪಕರಷ್ಟೇ ಅಲ್ಲ ಒಳ್ಳೆಯ ವಿದ್ವಾಂಸರೂ ಕೂಡ. ಲೇಖಕರು, ಕವಿ ಮತ್ತು ಸ್ತ್ರೀವಾದಿ ಕೂಡ. ನವೋದಯದ ಹೊತ್ತಿಗೆ ಮಹಿಳಾ ಕೇಂದ್ರಿತ ಪ್ರಶ್ನೆಗಳನ್ನು ಎತ್ತಿದವರು.
ಅವರು ರುಚಿಯಾಗಿ ಅಡಿಗೆ ಮಾಡುತ್ತಿದ್ದರು. ಮಾಡಿದ ಅಡುಗೆಯನ್ನು ಉಪಚಾರ ಮಾಡಿ ಉಣಬಡಿಸುತ್ತಿದ್ದರು. ಅವರ ಕೈ ರುಚಿ ಹೇಗೆ ತಾನೇ ಮರೆತೀತು? ‘ಕಮಲಾಪ್ರಿಯ’ ಎಂಬ ಅಂಕಿತ ನಾಮವನ್ನು ಬಳಸಿ ಸಮಕಾಲೀನ ಮಹಿಳಾ ಚಿಂತನೆಗಳನ್ನೊಳಗೊಂಡ ಅವರ ವಚನಗಳು ನನಗೆ ಇಷ್ಟ. ನವೋದಯ ಕಾಲದ ಗಂಡು ಲೇಖಕರ ಮಡದಿಯರನ್ನು ಸಂದರ್ಶನ ಮಾಡಿ ತಂದ ಸಂಕಲನ ಕನ್ನಡದ ವಿಶೇಷ ಪುಸ್ತಕ. ಕಮಲಾ ಅರಳಿ ವಿದ್ಯಾರ್ಥಿಗಳಿಗೆ, ತಮ್ಮ ಸಂಗತಿ ಯಾಗಿದ್ದ ಹಂಪನಾ ಅವರಿಗೆ, ಮಕ್ಕಳಿಗೆ, ತಮ್ಮ ವಿಸ್ತೃತ ಕುಟುಂಬಕ್ಕೆ, ಮಹಿಳಾ ಜಗತ್ತಿಗೆ ಸದಾ ನಗುಮೊಗದಿಂದ ನೀಡುತ್ತಲೇ ಬಂದಿದ್ದಾರೆ. ಕಡೆಗೆ ತಮ್ಮ ದೇಹವನ್ನೂ ರಾಮಯ್ಯ ಆಸ್ಪತ್ರೆಗೆ ನೀಡಿದ್ದಾರೆ.
ಅಂದು ಜೂನ್ ೨೨ರ ಶನಿವಾರ ಬೆಳಿಗ್ಗೆ ಕಮಲಾ ಹಂಪನಾ ಇನ್ನಿಲ್ಲ ಎಂದು ಕೇಳಿದ ಕ್ಷಣದಿಂದ ನಾನು ನನ್ನಮ್ಮನನ್ನ ಕಳೆದುಕೊಂಡದ್ದರ ಬಗ್ಗೆ ಯೋಚಿಸಲಾರಂಭಿಸಿದೆ. ಗೆಳತೀ ಆರತಿ ಅನುಭವಿಸುತ್ತಿರುವ ವಿಷಾದ, ನೋವು, ಖಾಲೀತನ ಏನೆಂಬುದು ಅರ್ಥವಾಗುತ್ತಿತ್ತು. ಹೋಗಿ ನೋಡಿದರೆ ನಿದ್ರೆಯಲ್ಲಿದ್ದ ಹಾಗೆ ಮಲಗಿದ್ದರು. ಅವರ ನಗು, ಅದಕ್ಕಂಟಿದ ನೆಚ್ಚಿನ ನೆನಪುಗಳು ಸದಾ ನಮ್ಮೊಂದಿಗಿರಲಿ ಎಂದು ಆಶಿಸುತ್ತೇನೆ.
ಮಮತಾ ಜಿ ಸಾಗರ
ಕವಿ, ಭಾಷಾಂತರಕಾರರು, ನಾಟಕಕಾರರಾಗಿದ್ದು ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ತರವಾದ ಕೊಡುಗೆಯನ್ನು ನೀಡಿದ್ದಾರೆ.