ರೀಲ್ಸ್ ಮಾಡುತ್ತಿದ್ದ ಅಯ್ಯೋ ಶ್ರದ್ಧಾಗೆ ಅತ್ಯುತ್ತಮ ಸೃಜನಶೀಲ ಕ್ರಿಯೇಟರ್ ಪ್ರಶಸ್ತಿ ನೀಡಿದ ಪ್ರಧಾನಿ ಮೋದಿ

Most read

ಸಾಮಾಜಿಕ ತಾಣದಲ್ಲಿ ಕ್ರಿಯೇಟ್ ರೀಲ್ಸ್ ಮತ್ತು ವಿಡಿಯೋ ಮಾಡುವ ಮೂಲಕ ಜನಪ್ರಿಯವಾಗಿರುವ ಶ್ರದ್ಧಾ ಅವರಿಗೆ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅತ್ಯುತ್ತಮ ಸೃಜನಶೀಲ ಕ್ರಿಯೇಟರ್ ಪ್ರಶಸ್ತಿ ನೀಡಿದ್ದಾರೆ.

ಭಾರತ್ ಮಂಟಪ್ ನಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಮಂತ್ರಿಯವರು ವಿವಿಧ ಕ್ಷೇತ್ರದಲ್ಲಿ ಹೆಸರು ಮಾಡಿರುವ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ಮಹಿಳಾ ವಿಭಾಗದಲ್ಲಿ ‘ಅತ್ಯುತ್ತಮ ಸೃಜನಶೀಲ ಕ್ರಿಯೇಟರ್’ ಪ್ರಶಸ್ತಿ ಶ್ರದ್ಧಾ ಸ್ವೀಕರಿಸಿದರು. ಉಡುಪಿ ಜಿಲ್ಲೆಯ ಕಾರ್ಕಳ ಮೂಲದ ಶ್ರದ್ಧಾ ಅವರು ಜೈನ್ ಸಮುದಾಯಕ್ಕೆ ಸೇರಿದವರು. ಸಾಮಾಜಿಕ ಜಾಲತಾಣದಲ್ಲಿ ( Instagram, Facebook, YouTube) ಅವರು ‘ಅಯ್ಯೋ ಶ್ರದ್ಧಾ’ ಎಂದು ಜನಪ್ರಿಯರಾಗಿದ್ದಾರೆ. ಕನ್ನಡ, ತುಳು, ಹಿಂದಿ ಸೇರಿ ಹಲವು ಭಾಷೆಗಳಲ್ಲಿ ನೂರಾರು ರೀಲ್ಸ್ ಮತ್ತು ವಿಡಿಯೋ ಮೂಲಕ ಅಪಾರ ಜನಮನ್ನಣೆ ಗಳಿಸಿದ್ದಾರೆ.

ಪ್ರಶಸ್ತಿ ಸ್ವೀಕರಿಸಿದ ಬಳಿಕ ಪ್ರಧಾನಿ ಮೋದಿ ಅವರ ಸಮ್ಮುಖದಲ್ಲಿ ಅರಳು ಹುರಿದಂತೆ ಮಾತನಾಡಿದ ಶ್ರದ್ದಾ ‘ಎಷ್ಟೇ ಒತ್ತಡವಿದ್ದರೂ ನಾವು ಭಾರತೀಯರು ನಗುವ ಮಾರ್ಗ ಕಂಡುಕೊಳ್ಳುತ್ತಲೇ ಇದ್ದೇವೆ’ ಎಂದು ಹೇಳಿದ್ದಾರೆ.

ಶ್ರದ್ಧಾಗೆ ಪ್ರಶಸ್ತಿ ನೀಡಿ ಮಾತನಾಡಿದ ನರೇಂದ್ರ ಮೋದಿ, ‘ಮಾರುಕಟ್ಟೆಯಿಂದ ಎಷ್ಟೇ ಒಳ್ಳೆಯ ತರಕಾರಿ ತಂದು ಅಡುಗೆ ಮಾಡಿದರೂ ಸಹ ಅದಕ್ಕೆ ಒಗ್ಗರಣೆ ಬಿದ್ದರಷ್ಟೆ ರುಚಿ. ಹಾಸ್ಯ ಸಹ ಒಗ್ಗರಣೆಯ ಕಾರ್ಯವನ್ನು ಮಾಡುತ್ತದೆ’ ಎಂದು ಶ್ರದ್ಧಾರ ಕಂಟೆಂಟ್ ಅನ್ನು ಕೊಂಡಾಡಿದರು.

ಅತ್ಯುತ್ತಮ ಕಥೆಗಾರ, ಅತ್ಯಂತ ಪ್ರಭಾವಶಾಲಿ ಕೃಷಿ ಸೃಷ್ಟಿಕರ್ತ, ಸಾಂಸ್ಕೃತಿಕ ರಾಯಭಾರಿ, ಅತ್ಯುತ್ತಮ ಪ್ರಯಾಣ ಸೃಷ್ಟಿಕರ್ತ, ಸ್ವಚ್ಛತಾ ರಾಯಭಾರಿ, ನವ ಭಾರತ ಚಾಂಪಿಯನ್, ಟೆಕ್ ಸೃಷ್ಟಿಕರ್ತ, ಹೆರಿಟೇಜ್ ಫ್ಯಾಶನ್, ಆಹಾರ ವಿಭಾಗ, ಶಿಕ್ಷಣದಲ್ಲಿ ಮತ್ತು ಅಂತಾರಾಷ್ಟ್ರೀಯ ರಚನೆಕಾರ ಪ್ರಶಸ್ತಿಗಳನ್ನೂ ನೀಡಲಾಯಿತು.

More articles

Latest article