ಹೈದರಾಬಾದ್: ಭಾರತದಲ್ಲಿ ಕೆಲವು ಪ್ರಕರಣಗಳು ದಶಕಗಳಿಗೂ ಹೆಚ್ಚು ಕಾಲದಿಂದ ವಿಚಾರಣೆ ನಡೆಯುತ್ತಿವೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಹೇಳಿದ್ದಾರೆ. ನಿಜಕ್ಕೂ ಇದೊಂದು ಕಾನೂನು ವ್ಯವಸ್ಥೆಯು ವಿಶಿಷ್ಟವಾದ ಸವಾಲು ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.
ಅವರು ಹೈದರಾಬಾದ್‌ನ ನಲ್ಸಾರ್ ಕಾನೂನು ವಿಶ್ವವಿದ್ಯಾಲಯದಲ್ಲಿ ಘಟಿಕೋತ್ಸವ ಭಾಷಣ ಮಾಡುತ್ತಾ ಈ ಅಭಿಪ್ರಾಯನ್ನು ಹಂಚಿಕೊಂಡರು.
ಕೆಲವು ಪ್ರಕರಣಗಳಲ್ಲಿ ವಿಚಾರಣಾಧೀನ ಕೈದಿ ಹಲವು ವರ್ಷಗಳ ಸೆರೆವಾಸಗಳ ನಂತರ ನಿರಪರಾಧಿ ಎಂದು ಸಾಬೀತಾಗುತ್ತದೆ. ಇದರಿಂದ ನಿರಪರಾಧಿ ತಪ್ಪಿತಸ್ಥನಾಗುತ್ತಾನೆ ಹಾಗೂ ತಪ್ಪಿತಸ್ಥ ಸಮಾಜದಲ್ಲಿ ಮುಕ್ತವಾಗಿ ಓಡಾಡಿಕೊಂಡಿರುತ್ತಾನೆ. ನಮ್ಮ ಅವ್ಯವಸ್ಥಿತ ಕಾನೂನಿನ ವಿರೋಧಾಭಾಸಗಳಿವು. ನಮ್ಮ ಕಾನೂನು ವ್ಯವಸ್ಥೆಯನ್ನು ಸರಿಪಡಿಸಬೇಕಾದ ಜರೂರು ಈಗ ಎದುರಾಗಿದೆ. ಈ ಸವಾಲಿನ ಕುರಿತು ನಮ್ಮ ನಾಗರಿಕರು ಧ್ವನಿ ಎತ್ತಲಿದ್ದಾರೆ ಎಂಬ ಆಶಾಭಾವ ನನ್ನದು ಎಂದರು.
ವಿದ್ಯಾರ್ಥಿಗಳು ಕಾನೂನು ಪದವಿ ಪಡೆದ ನಂತರ ಸಮಗ್ರತೆಗಾಗಿ ಒಬ್ಬ ಉತ್ತಮ ಮಾರ್ಗದರ್ಶಕನನ್ನು ಹುಡುಕಿಕೊಳ್ಳಬೇಕೇ ಹೊರತು ತಮ್ಮ ಶಕ್ತಿ ಪ್ರದರ್ಶನಕ್ಕಲ್ಲ. ಹಾಗೆಯೇ ಕುಟುಂಬದವರ ಮೇಲೆ ಆರ್ಥಿಕ ಹೊರೆಯನ್ನು ಹೇರುವ ಬದಲಾಗಿ ಶಿಷ್ಯವೇತನ ಬಳಸಿಕೊಂಡು ವಿದೇಶಗಳಿಗೆ ಹೋಗಿ ಶಿಕ್ಷಣ ಮುಂದುವರೆಸಬಹದು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಸಮಾರಂಭದಲ್ಲಿ ಮುಖ್ಯಮಂತ್ರಿ ಎ. ರೇವಂತ ರೆಡ್ಡಿ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಪಿ.ಎಸ್. ನರಸಿಂಹ ರಾವ್, ತೆಲಂಗಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸುಜೊಯ್ ಪೌಲ್ ಉಪಸ್ಥಿತರಿದ್ದರು.