ಬೆಂಗಳೂರು: ಸಿಟಿಇ ಪರೀಕ್ಷೆ ವೇಳೆ ಜನಿವಾರ ತೆಗೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಸ್ಯೆಗೆ ಒಳಗಾದ ಪರೀಕ್ಷಾರ್ಥಿಗಳಿಗೆ ಮರು ಪರೀಕ್ಷೆ ನಡೆಸುವುದಾಗಿ ಉನ್ನತ ಶಿಕ್ಷಣ ಸಚಿವ ಎಂ.ಸಿ ಸುಧಾಕರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾಲ್ವರು ಪರೀಕ್ಷಾರ್ಥಿಗಳಿಗೆ ಪರೀಕ್ಷಾ ಕೇಂದ್ರದಲ್ಲಿ ಸಮಸ್ಯೆ ಆಗಿದೆ. ಹಾಗಾಗಿ ಆ ವಿದ್ಯಾರ್ಥಿಗಳಿಗೆ ಮಾತ್ರ ಮರುಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಬೆಂಗಳೂರು ಮತ್ತು ಚಿಕ್ಕಬಳ್ಳಾಪುರ ಎರಡು ಪರೀಕ್ಷಾ ಕೇಂದ್ರದಲ್ಲಿ ಜನಿವಾರ ಹಾಗೂ ಹಿಜಬ್ಗೆ ಸಂಬಂಧಿಸಿದಂತೆ ಗೊಂದಲವಾಗಿತ್ತು. ಹೀಗಾಗಿ, ಪರೀಕ್ಷಾರ್ಥಿಗಳು ಮರು ಪರೀಕ್ಷೆಗೆ ಮನವಿ ಮಾಡಿದ್ದರು. ಹೀಗಾಗಿ ತೊಂದರೆಗೆ ಒಳಗಾದ ಪರೀಕ್ಷಾರ್ಥಿಗಳಿಗೆ ಮಾತ್ರ ಅನ್ವಯ ಆಗುವಂತೆ ಮರುಪರೀಕ್ಷೆ ನಡೆಸುತ್ತೇವೆ ಎಂದು ಸಚಿವರು ತಿಳಿಸಿದ್ದಾರೆ.

