ಬೆಂಗಳೂರು: ಅರ್ಹ ಬಿಪಿಎಲ್ ಕಾರ್ಡ್ ಗಳನ್ನು ರದ್ದುಪಡಿಸುವುದಿಲ್ಲ ಎಂದು ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಕೆ. ಹೆಚ್. ಮುನಿಯಪ್ಪ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಪಿಎಲ್ ಕಾರ್ಡ್ ಪರಿಷ್ಕರಣೆ ಗೊಂದಲದ ಬಗ್ಗೆ ಸ್ಪಷ್ಟನೆ ನೀಡಿದರು. ಯಾವುದೇ ಅರ್ಹ ಬಿಪಿಎಲ್ ಕಾರ್ಡ್ ಗಳ ರದ್ದು ಮಾಡುವುದಿಲ್ಲ. ಎಪಿಎಲ್ ಕಾರ್ಡ್ ಗಳನ್ನೂ ರದ್ದು ಮಾಡುವುದಿಲ್ಲ. ರಾಜ್ಯದ ಒಟ್ಟು ಬಿಪಿಎಲ್ ಕಾರ್ಡ್ ಗಳು ಶೇ. 66ರಷ್ಟಿವೆ. ಆದಾಯ ತೆರಿಗೆ ಪಾವತಿದಾರರು ಮತ್ತು ಸರ್ಕಾರಿ ನೌಕರರನ್ನು ಹೊರತುಪಡಿಸಿ ಬೇರೆ ಯಾರೊಬ್ಬರ ಯಾವುದೇ ಕಾರ್ಡ್ ರದ್ದು ಮಾಡುತ್ತಿಲ್ಲ ಎಂದರು. ಒಂದು ವೇಳೆ ಅನರ್ಹಗೊಂಡು ಬಿಪಿಎಲ್ ಕಾರ್ಡ್ ರದ್ದಾಗಿದ್ದರೆ ಅವರನ್ನು ಎಪಿಎಲ್ ಗೆ ಸೇರ್ಪಡೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ನಿಯಮಗಳ ಅನ್ವಯವೇ ಮಾನದಂಡಗಳ ಪ್ರಕಾರವೇ ಪರಿಷ್ಕರಣೆ ಮಾಡಲಾಗಿದೆ. ಬಿಪಿಎಲ್ ಗೆ ಅನರ್ಹರು ಎಂದು ಕಂಡು ಬಂದಿರುವ ಕಾರ್ಡ್ ಗಳನ್ನು ಎಪಿಎಲ್ ಗೆ ಬದಲಾವಣೆ ಮಾಡಿದ್ದೇವೆ. ಬಿಪಿಎಲ್ ಗೆ ಅರ್ಹರಿದ್ದೂ ಎಪಿಎಲ್ ಗೆ ಸೇರಿಸಿದ್ದರೆ ಅಂತಹವರಿಗೆ ಬಿಪಿಎಲ್ ಕಾರ್ಡ್ ಮರು ಹಂಚಿಕೆ ಮಾಡುತ್ತೇವೆ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಯಾವುದೇ ಅರ್ಹ ಬಿಪಿಎಲ್ ಕಾರ್ಡ್ ಗಳನ್ನು ರದ್ದುಪಡಿಸಿರುವುದಿಲ್ಲ. ಅನರ್ಹ ಇರಬಹುದು ಎಂಬ ಕಾರ್ಡ್ ಗಳನ್ನು ತಾತ್ಕಾಲಿಕವಾಗಿ ಅಮಾನತ್ತಿನಲ್ಲಿ ಇಡಲಾಗಿದೆ. ರಾಜ್ಯದಲ್ಲಿ 98,473 ಜನ ತೆರಿಗೆ ಕಟ್ಟುತ್ತಿದ್ದಾರೆ. 4036 ಸರ್ಕಾರಿ ನೌಕರರ ಬಿಪಿಎಲ್ ಕಾರ್ಡ್ ರದ್ದುಪಡಿಸಲಾಗಿದೆ. 59,000 ಬಿಪಿಎಲ್ ಕಾರ್ಡ್ ಗಳನ್ನು ಎಪಿಎಲ್ ಆಗಿ ಪರಿವರ್ತನೆ ಮಾಡಲಾಗಿದೆ. 1,02,509 ಕಾರ್ಡ್ ಗಳನ್ನು ಅನರ್ಹಗೊಳಿಸಲಾಗಿದೆ. ಎಂದು ಸಚಿವರು ಸ್ಪಷ್ಟನೆ ನೀಡಿದ್ದಾರೆ.
ರೇಷನ್ ಕಾರ್ಡ್ ಗಳ ಪರಿಷ್ಕರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಸದ್ಯಕ್ಕೆ ಪರಿಷ್ಕರಣೆ ಮಾಡದಿರಲು ಸರ್ಕಾರ ನಿರ್ಧಾರ ಮಾಡಿದೆ. ಹಿಂದಿದ್ದ ರೇಷನ್ ಕಾರ್ಡ್ ಗಳು ಯಥಾವತ್ ರೀತಿಯಲ್ಲಿ ಮುಂದುವರೆಯಲಿವೆ. ತೆರಿಗೆ ಪಾವತಿದಾರರು ಮತ್ತು ಸರ್ಕಾರಿ ನೌಕರರ ಕಾರ್ಡ್ ರದ್ದು ಹೊರತು ಪಡಿಸಿ ಉಳಿದ ಎಲ್ಲರ ಕಾರ್ಡ್ ಗಳು ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಸಚಿವ ಮುನಿಯಪ್ಪ ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ 1,50,59,431 ಬಿಪಿಎಲ್ ಕಾರ್ಡ್ ಗಳಿವೆ. ಒಟ್ಟು 1,02,509 ಅನರ್ಹ ಬಿಪಿಎಲ್ ಕಾರ್ಡ್ ಗಳು ಪತ್ತೆ ಮಾಡಲಾಗಿದೆ. ತೆರಿಗೆ ಪಾವತಿಸುವವರಲ್ಲಿ 98,473 ಬಿಪಿಎಲ್ ಕಾರ್ಡ್ ಮತ್ತು ಸರ್ಕಾರಿ ನೌಕರರ ಬಳಿ 4,036 ಬಿಪಿಎಲ್ ಕಾರ್ಡ್ ಗಳು ಕಂಡು ಬಂದಿವೆ. 1.2 ಲಕ್ಷ ಕಾರ್ಡ್ ಗಳಲ್ಲಿ 8,447 ಕಾರ್ಡ್ ರದ್ದುಗೊಳಿಸಲಾಗಿದೆ ಎಂದು ತಿಳಿಸಿದರು.
ಒಂದು ವಾರದಲ್ಲಿ ಅರ್ಹರ ಬಿಪಿಎಲ್ ಕಾರ್ಡ್ ವಾಪಸ್ ಮಾಡಲಾಗುತ್ತದೆ. ಅಧಿಕಾರಿಗಳ ತಪ್ಪಿಲ್ಲ ಎಲ್ಲಾ ಗೊಂದಲದ ಹೊಣೆಯನ್ನು ನಾನೇ ಹೊರುವೆ ಎಂದೂ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದ್ದಾರೆ.