ಸ್ವಾತಂತ್ರ್ಯೋತ್ಸವದ ಸಂಭ್ರಮಕ್ಕಿಂತ, ಹುಳುಕುಗಳ ಬಗ್ಗೆ ಚರ್ಚೆ ಮಾಡಬೇಕಿದೆ

Most read

ಭಾರತಕ್ಕೆ ಸ್ವಾತಂತ್ರ್ಯ ಬಂದು 78 ವರ್ಷಗಳಾಗಿವೆ. ಸ್ವಾತಂತ್ರ್ಯಪೂರ್ವ ಭಾರತಕ್ಕೆ ಹೋಲಿಸಿದರೆ ಈಗಿನ ಭಾರತ ಸ್ವಲ್ಪಮಟ್ಟಿಗೆ ಸುಧಾರಿಸಿದೆ. ಆದರೆ ಇಷ್ಟು ವರ್ಷಗಳಲ್ಲಿ ಇಷ್ಟೇ ಎನ್ನಿಸುವಂತಹ ಸುಧಾರಣೆಯಾಗಿದೆ. ಬಡತನ, ದಾರಿದ್ರ್ಯ, ಕೋಮು ವಿಪರೀತಗಳಿಗೆ ಕಡಿವಾಣ ಬಿದ್ದಿಲ್ಲ. ಅರಾಜಕತೆ, ಬ್ರಹ್ಮಾಂಡ ಭ್ರಷ್ಟಾಚಾರ ಮಿತಿಮೀರಿದೆ. ಸ್ವಾತಂತ್ರ್ಯೋತ್ಸವದ ಸಂಭ್ರಮಕ್ಕಿಂತ, ಹುಳುಕುಗಳ ಬಗ್ಗೆ ನಾವು ಹೆಚ್ಚು ಚರ್ಚೆ ಮಾಡಬೇಕಿದೆ – ರಾ. ಚಿಂತನ್‌, ಪತ್ರಕರ್ತರು.

ಕೋಮು ಸಂಘರ್ಷ

ಬ್ರಿಟಿಷರನ್ನು ಭಾರತದಿಂದ ಹೊರಗಟ್ಟಲು ಸುರಿಸದೆ ಇದ್ದ ರಕ್ತವನ್ನು ಭಾರತೀಯರು ಭಾರತದ ವಿಭಜನೆಗಾಗಿ ಸುರಿದರು. 1946ರ ಆಗಸ್ಟ್ ಹದಿನಾರರಂದು ಪಾಕಿಸ್ತಾನಕ್ಕಾಗಿ ನೇರ ಹೋರಾಟ ಆರಂಭವಾಯಿತು. ಕೋಲ್ಕತ್ತಾದಲ್ಲಿ ನಡೆದ ಆಕ್ರಮಣಗಳು ಹತೋಟಿಗೆ ಸಿಗದಂತಾಯಿತು. ಲೀಗ್ ಪಾಕಿಸ್ತಾನದ ಘೋಷಣೆಯನ್ನು ಮಾಡಿದರೆ, ಹಿಂದೂ ಮಹಾಸಭಾ ಹಿಂದೂರಾಷ್ಟ್ರದ ಘೋಷಣೆಗಳನ್ನು ಕೂಗಿತು. ಈ ಕ್ರೌರ್ಯ ದೇಶದಾದ್ಯಂತ ಹರಡಿತು. ಇದು ಉತ್ತರ ಭಾರತದಲ್ಲಿ ತೀವ್ರವಾಗಿತ್ತು. ನೆಹರೂ ನೇತೃತ್ವದಲ್ಲಿ ಸೆಪ್ಟೆಂಬರ್ 1946ರಲ್ಲಿ ಹಂಗಾಮಿ ಸರ್ಕಾರವನ್ನು ರಚಿಸಲಾಗಿತ್ತು. ಈ ಎಲ್ಲದರ ನಡುವೆ ಏಕಾಂಗಿಯಾಗಿ ಚರಿತ್ರೆಯನ್ನು ಬದಲಾಯಿಸಲು ಪ್ರಯತ್ನಿಸಿದ ವ್ಯಕ್ತಿ ಗಾಂಧೀಜಿಯಾಗಿದ್ದರು.

ಗಾಂಧೀಜಿ  ತಮ್ಮ ಎಪ್ಪತ್ತೇಳನೇ ವಯಸ್ಸಿನಲ್ಲಿ ಶಾಂತಿಗಾಗಿ ಉಪವಾಸ ಆರಂಭಿಸಿದ್ದರು. ಭಾರತದ ವಿಭಜನೆ ಆಗುವುದಾದರೆ ಅದು ತನ್ನ ಹೆಣದ ಮೇಲೆಯೇ ಎಂದು ಘೋಷಿಸಿದರು. ಭಾರತಕ್ಕೆ ಸ್ವಾತಂತ್ರ್ಯ ಕೊಡುವುದು ನಿರ್ಧಾರವಾಗಿದ್ದು ಆ ದಿಕ್ಕಿನ ಕಾರ್ಯಾಚರಣೆಗಾಗಿ ಲಾರ್ಡ್ ಮೌಂಟ್ ಬ್ಯಾಟನ್ನನ್ನು ಭಾರತಕ್ಕೆ ಕಳುಹಿಸಲಾಯಿತು. 1947, ಜೂನ್ ಮೂರನೇ ತಾರೀಕು ಲಾರ್ಡ್ ಮೌಂಟ್ ಬ್ಯಾಟನ್ ಸ್ವಾತಂತ್ರ್ಯವನ್ನು ಆಗಸ್ಟ್ 15, 1947ರಂದು ಬಿಟ್ಟುಕೊಡುವುದಾಗಿ ಘೋಷಿಸಿದ್ದ. ಆದರೂ ವಿಭಜನೆಯ ಸಮಸ್ಯೆ ಮಾತ್ರ ಪೂರ್ಣ ಬಗೆಹರಿದಿರಲಿಲ್ಲ. ಪಾಕಿಸ್ತಾನಕ್ಕೆ ಅಲ್ಲಿನ ಧಾರ್ಮಿಕ ಅಲ್ಪಸಂಖ್ಯಾತರನ್ನು ಹೇಗೆ ನಡೆಸಿಕೊಳ್ಳುವುದೆಂದು ತಿಳಿಸಿರಲಿಲ್ಲ.

ದಿನದಿನವೂ ಪಂಜಾಬಿನಲ್ಲಿ ಸಾವು ನೋವಿನ ಸಂಖ್ಯೆ ಹೆಚ್ಚಾಗತೊಡಗಿತು. ಭವಿಷ್ಯದ ಭಯದಿಂದ ಹಿಂದೂಗಳು ಭಾರತದ ಕಡೆಗೂ ಮುಸಲ್ಮಾನರು ಪಾಕಿಸ್ತಾನದ ಕಡೆಗೂ ಹೋಗತೊಡಗಿದರು. ಇದರಲ್ಲಾಗುತ್ತಿದ್ದ ಸಾವು ನಿರಂತರವಾಗತೊಡಗಿತ್ತು. ಪಾಕಿಸ್ತಾನ ಮತ್ತು ಭಾರತ ಎಂಬುದಾಗಿ ದೇಶವನ್ನು ವಿಭಜಿಸಲು ನಿರ್ಧರಿಸಿದ ನಂತರ ಮೌಂಟ್ ಬ್ಯಾಟನ್ ಬಂಗಾಳ ಮತ್ತು ಪಂಜಾಬ್‌ ನಲ್ಲಿ ಗಡಿರೇಖೆಯನ್ನು ನಿರ್ಧರಿಸಲು ಎರಡು ಆಯೋಗಗಳನ್ನು ನೇಮಿಸಿದ್ದ. ಹೈದರಾಬಾದ್, ಪಶ್ಚಿಮ ಪಂಜಾಬ್ ವಾಯುವ್ಯ ಸರಹದ್ದಿನ ಪ್ರಾಂತ್ಯ, ಬಲೂಚಿಸ್ತಾನ ಹಾಗೂ ಪೂರ್ವ ಬಂಗಾಳವನ್ನೊಳಗೊಂಡ ಪಾಕಿಸ್ತಾನವನ್ನು ರಚಿಸಿ ಮೊದಲು ಪಾಕಿಸ್ತಾನಕ್ಕೆ ಸ್ವಾತಂತ್ರ್ಯವನ್ನು ನೀಡಿದಾಗ ಇದು ವಿಧಿಯೊಡನೆ ಮಾಡಿಕೊಂಡ ಅನುಸಂಧಾನ’ ಎಂದಿದ್ದರು. ಅವತ್ತಿಂದ ಶುರುವಾದ ಕೋಮು ವೈಪರೀತ್ಯ ಎಪ್ಪತ್ತೆಂಟು ವರ್ಷ ನಂತರವೂ ಮುಂದುವರಿದಿದೆ.

ಸಾಂದರ್ಭಿಕ ಚಿತ್ರ ( ಗೂಗಲ್)

1964ರಲ್ಲಿ ಉದ್ಭವವಾದ ಕೋಮು ದ್ವೇಷದ ಅಲೆಯಿಂದಾಗಿ ಕೋಲ್ಕತಾ, ಜೆಮ್ಶೆಡ್ ಪುರ್ ಮತ್ತು ರೂರ್ಕೆಲಾದಲ್ಲಿ ಸತ್ತವರ ಸಂಖ್ಯೆ ಎರಡು ಸಾವಿರದ ಐದುನೂರು. ಒಟ್ಟು ಹದಿನೇಳು ಕೋಮುಗಲಭೆಗಳ ಪಟ್ಟಿಯಲ್ಲಿ, ಒಂಬತ್ತು ಘಟನೆಗಳು ಕಾಂಗ್ರೆಸ್/ಮಿತ್ರಪಕ್ಷಗಳ ಆಡಳಿತದಲ್ಲಿ ನಡೆದರೆ, ಮೂರು ಗಲಭೆಗಳು ರಾಷ್ಟ್ರಪತಿ ಆಳ್ವಿಕೆಯಲ್ಲಿ ನಡೆದಿವೆ. ಇನ್ನುಳಿದಂತೆ ತಲಾ ಒಂದು ಗಲಭೆ ಬಿಜೆಪಿ ಮತ್ತು ಇನ್ನಿತರ ಪಕ್ಷಗಳು ಅಧಿಕಾರದಲ್ಲಿದ್ದಾಗ ನಡೆದಿವೆ. 2002ಕ್ಕೂ ಮುನ್ನ ಅಹಮದಾಬಾದ್‌ ನಲ್ಲಿ ನಾಲ್ಕು ಕೋಮುಗಲಭೆಗಳು ನಡೆದಿದ್ದು ಅದರಲ್ಲಿ ಒಟ್ಟು ಒಂಬೈನೂರ ಹನ್ನೆರಡು ಮಂದಿ ಮೃತಪಟ್ಟರೆ, ಸೂರತ್ ಮತ್ತು ಬರೋಡಾದಲ್ಲಾದ ಮೂರು ಹಿಂಸಾಚಾರಗಳಲ್ಲಿ ಸತ್ತವರ ಸಂಖ್ಯೆ ನೂರ ತೊಂಭತ್ತೇಳು. ಇದು ಕೂಡ ಸರ್ಕಾರಗಳ ಲೆಕ್ಕ.

1967ರ ನಂತರ ಭಾರತದ ಸುಮಾರು ನಲವತ್ತೇಳಕ್ಕೂ ಹೆಚ್ಚು ಪ್ರದೇಶಗಳಲ್ಲಿ ಅರವತ್ತಕ್ಕೂ ಹೆಚ್ಚು ದೊಡ್ಡ ಪ್ರಮಾಣದ ಕೋಮು ಗಲಭೆಗಳು ನಡೆದಿವೆ. ದಕ್ಷಿಣ ಭಾರತದಲ್ಲಿ ಹತ್ತು, ಪೂರ್ವದಲ್ಲಿ ಹನ್ನೆರಡು, ಪಶ್ಚಿಮದಲ್ಲಿ ಹದಿನಾರು ಮತ್ತು ಉತ್ತರ ಭಾರತದಲ್ಲಿ ಇಪ್ಪತ್ತು. 1964ರ ನಂತರ ಅಹಮದಾಬಾದ್ ಐದಕ್ಕೂ ಹೆಚ್ಚು ಹಿಂಸಾಚಾರಗಳಿಗೆ ಸಾಕ್ಷಿಯಾದರೆ, ಹೈದ್ರಾಬಾದ್‌ನಲ್ಲಿ ನಾಲ್ಕು ಕೋಮು ಪ್ರಕರಣಗಳು ದಾಖಲಾಗಿವೆ. 1990ರ ನಂತರ ಭಾರತದಲ್ಲಿ ನಡೆದ ಕೋಮುಗಲಭೆಗಳ ಸಂಖ್ಯೆ ಇಪ್ಪತ್ತೈದಕ್ಕೂ ಹೆಚ್ಚು. ಕಳೆದ 13 ವರ್ಷಗಳಲ್ಲಿ ನಡೆದ ಕೋಮು ವೈಷಮ್ಯಕ್ಕೆ ಸತ್ತವರ ಸಂಖ್ಯೆ 12,828. ಇದು ಸರ್ಕಾರದ ಲೆಕ್ಕ.

ಬಡತನ!

ಜಗತ್ತಿನಲ್ಲಿಯೇ ಗರಿಷ್ಠ ಸಂಖ್ಯೆಯ ಬಡವರು ಭಾರತದಲ್ಲಿ ವಾಸಿಸುತ್ತಿದ್ದಾರೆಂಬ ಆಘಾತಕಾರಿ ಸತ್ಯವನ್ನು ವಿಶ್ವಸಂಸ್ಥೆಯ ಇತ್ತೀಚಿನ ವರದಿಯೊಂದು ಬಹಿರಂಗಪಡಿಸಿತ್ತು. ಭಾರತದ ಕಳೆದ ಎಪ್ಪತ್ತೆಂಟು ವರ್ಷಗಳ ಇತಿಹಾಸದಲ್ಲಿ, ಎಲ್ಲಾ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಡತನವನ್ನು ನಿಯಂತ್ರಿಸುವಲ್ಲಿ ವಿಫಲವಾಗಿವೆ. ಬಡತನ ನಿವಾರಣೆಯಲ್ಲಿ ಭಾರತದ ಸಾಧನೆ ಹೆಮ್ಮೆಪಡುವಂತಹದ್ದಲ್ಲ.

ಭಾರತದಲ್ಲಿ ಬಡತನ ವ್ಯಾಪಕವಾಗಿದ್ದು, ವಿಶ್ವದ ಒಟ್ಟು ಬಡವರ ಸಂಖ್ಯೆಯಲ್ಲಿ ಮೂರನೇ ಒಂದು ಭಾಗ ನಮ್ಮ ರಾಷ್ಟ್ರದಲ್ಲಿದ್ದಾರೆಂದು ಅಂದಾಜು ಮಾಡಲಾಗಿದೆ.  1981ರಲ್ಲಿ ಶೇಕಡ ಅರವತ್ತರಿಂದ 2005ರಲ್ಲಿ ಶೇಕಡಾ ನಲವತ್ತೆರಡಕ್ಕೆ ಬಡತನದ ಗಮನಾರ್ಹ ಕುಸಿತವನ್ನು ಕೂಡ ಇದು ಬಿಂಬಿಸುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಶೇಕಡಾ ಎಪ್ಪತ್ತೈದರಷ್ಟು ಬಡವರು ವಾಸವಿದ್ದಾರೆ. ಅವರಲ್ಲಿ ಬಹುತೇಕ ಮಂದಿ ದಿನಗೂಲಿ ನೌಕರರು, ಸ್ವಯಂ ಉದ್ಯೋಗಿಗಳು. ಗೃಹವಾಸಿಗಳು ಮತ್ತು ಭೂರಹಿತ ಕಾರ್ಮಿಕರು. ಕಳೆದ ಎರಡು ದಶಕಗಳಲ್ಲಿ ಭಾರತದ ಅರ್ಥವ್ಯವಸ್ಥೆ ಸ್ಥಿರವಾಗಿ ಬೆಳವಣಿಗೆ ಸಾಧಿಸಿದ್ದರೂ, ವಿವಿಧ ಸಾಮಾಜಿಕ ಸಮೂಹಗಳು, ಆರ್ಥಿಕ ಸಮೂಹಗಳು, ಭೌಗೋಳಿಕ ಪ್ರದೇಶಗಳು ಮತ್ತು ಗ್ರಾಮೀಣ ಮತ್ತು ನಗರ ಪ್ರದೇಶಗಳಿಗೆ ಹೋಲಿಸಿದರೆ ಅದರ ಬೆಳವಣಿಗೆ ಒಂದೇ ಮಟ್ಟದಲ್ಲಿಲ್ಲ. ಬಡವರು ಮತ್ತು ನಿರುದ್ಯೋಗಿಗಳಲ್ಲಿ ದಲಿತರು ಬೃಹತ್ ಪ್ರಮಾಣದಲ್ಲಿದ್ದಾರೆ. 

ಮೊಘಲರ ಇಸ್ಲಾಮಿಕ್ ರಾಜವಂಶದ ಆಳ್ವಿಕೆಯಲ್ಲಿ ಭಾರತ ಅತ್ಯಂತ ಸಂಪದ್ಭರಿತವಾಗಿತ್ತು. 1800ರಲ್ಲಿ ಮೊಘಲ್ ಸಾಮ್ರಾಜ್ಯದ ಅಂತ್ಯದ ನಂತರ ಭಾರತದ ಬಹುಭಾಗವನ್ನು ಬ್ರಿಟೀಷರು ಆಕ್ರಮಿಸಿಕೊಂಡರು. ಆ ಭಾಗಗಳೇ ಇವತ್ತಿಗೆ ಅತ್ಯಂತ ಬಡತನದಿಂದ ಕೂಡಿವೆ ಎಂದಿದ್ದು ಮಾಜಿ ಪ್ರಧಾನಿ ಜವಾಹರಲಾಲ್ ನೆಹರು. ಭಾರತದಲ್ಲಿ ಬ್ರಿಟನ್ ನೀತಿಗಳ ಕಾರಣದಿಂದ ಹವಾಮಾನ ಪರಿಸ್ಥಿತಿಗಳು ಉಲ್ಬಣಗೊಂಡು ಸಾಮೂಹಿಕ ಬರಗಾಲಗಳಿಗೆ ಆಸ್ಪದ ಕಲ್ಪಿಸಿತೆಂಬ ಅಭಿಪ್ರಾಯವೂ ಇದೆ. ಇವತ್ತು ದೇಶದ ಜನಸಂಖ್ಯೆಯ ಶೇಕಡಾ ಅರವತ್ತರಷ್ಟು ಕೃಷಿ ಮೇಲೆ ಅವಲಂಬಿತವಾಗಿದೆ. ಆದರೆ ಕೃಷಿಯಿಂದ ಶೇಕಡಾ ಹದಿನೆಂಟರಷ್ಟು ಜನರು ಮಾತ್ರ ಸುರಕ್ಷರಾಗಿದ್ದಾರೆ. ಅಧಿಕ ಜನಸಂಖ್ಯೆ ಭಾರತದ ಬಡತನಕ್ಕೆ ಕಾರಣವಲ್ಲ, ಆದರೆ ಬಡತನದ ಲಕ್ಷಣ ಅಂತ ಜನಸಂಖ್ಯಾಶಾಸ್ತ್ರಜ್ಞರು ಸಾಮಾನ್ಯವಾಗಿ ಒಪ್ಪಿಕೊಳ್ಳುತ್ತಾರೆ.

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ಅವಿರತ ಹೋರಾಟದಿಂದ. ತ್ಯಾಗ, ಬಲಿದಾನ, ಉಪವಾಸದ ಪರಿಣಾಮದಿಂದ! ಲಕ್ಷಾಂತರ ಜನರು ದೇಶಕ್ಕಾಗಿ ಪ್ರಾಣ ತೆತ್ತಿದ್ದಾರೆ. ಬೀದಿಪಾಲಾಗಿದ್ದಾರೆ. ವಿಭಜನೆಯ ಕಾವನ್ನೂ ತಡೆದುಕೊಂಡಿದ್ದಾರೆ. ಆದರೆ ಇವತ್ತಿನ ರಾಜಕೀಯ  ವಿಪರೀತವನ್ನು ಸಹಿಸಲಾಗುತ್ತಿಲ್ಲ. ವ್ಯಾಪಕ ಭ್ರಷ್ಟಾಚಾರ, ಸ್ವಾರ್ಥ, ಹಗೆ, ಜನಾಂಗೀಯ ದ್ವೇಷ, ಕೋಮುಸಂಘರ್ಷಗಳು ದೇಶವನ್ನು ಜಾಗತಿಕವಾಗಿ ಬಲಿಷ್ಠವಾಗಿ ಕಟ್ಟಲು ಸಾಧ್ಯವಾಗಿಲ್ಲ.

ದೇಶದಲ್ಲಿ ಆಂತರೀಕ ಸಂಘರ್ಷಗಳು ಕಡಿಮೆಯಾಗಿಲ್ಲ. ಅಲ್ಪಸಂಖ್ಯಾತರ ದಮನ, ದಲಿತರ ಮೇಲಿನ ದೌರ್ಜನ್ಯದಂತಹ ಪ್ರಕರಣಗಳು ವ್ಯಾಪಕವಾಗಿದೆ. ಮಹಿಳೆಯರು, ಮಕ್ಕಳು ಸುರಕ್ಷಿತವಾಗಿಲ್ಲ.

ವಿಶ್ವಗುರುವಿನ ನವರಂಗನ್ನು ಲೇಪಿಸಿಕೊಂಡು ದಾರಿದ್ರ್ಯದ ಕುಲುಮೆಯಲ್ಲಿ ನಿರಂತರವಾಗಿ ಬೇಯುತ್ತಿದೆ ಭಾರತ.

ಭಾರತದ ಮೂಲಭೂತ ಸಮಸ್ಯೆಗಳಲ್ಲಿ ಅತೀದೊಡ್ಡ ಸಮಸ್ಯೆ ಬಡತನ, ಕೋಮುವೈಷಮ್ಯ. ಇವೆರಡನ್ನು ನಿಭಾಯಿಸುವ ತಾಕತ್ತು, ಅವಕಾಶ ಇಲ್ಲಿನ ರಾಜಕಾರಣಕ್ಕಿದೆ. ದುರಂತವೆಂದರೆ ಇವುಗಳ ಸೂತ್ರಧಾರರೇ ಇವರು!  ಜನರ ಮುಗ್ಧತೆಯನ್ನು ಸೆಳೆದು ತಾವು ಸಂತೃಪ್ತರಾದರೇ ವಿನಃ,  ದೇಶವನ್ನು ಕಟ್ಟುವ ಕೆಲಸ ಮಾಡಲಿಲ್ಲ.  ಒಬ್ಬೊಬ್ಬರ ಮೇಲೂ ಅಖಂಡ ಭ್ರಷ್ಟಾಚಾರದ ಆರೋಪಗಳು. ಬೆರಳೆಣಿಕೆಯ ನಾಯಕರನ್ನು ಹೊರತುಪಡಿಸಿ ಯಾವ ಪಕ್ಷ, ಯಾವ ನಾಯಕನೂ ಈ ದೇಶಕ್ಕೆ ಸಂಪೂರ್ಣವಾಗಿ ಸಲ್ಲಲಿಲ್ಲ. ನಿಸ್ವಾರ್ಥದಿಂದ ದಹಿಸಲಿಲ್ಲ. ಆ ಕಾರಣಕ್ಕೆ ನಮ್ಮ ದೇಶ ಅಭಿವೃದ್ಧಿಯ ಕಡೆಗೆ ಇವತ್ತಿಗೂ ಅಂಬೆಗಾಲಿಡುತ್ತಿದೆ. ಕೆಳಗಡೆ ಬೆಂಕಿ, ಮಧ್ಯೆ ಕುದಿ, ಮೇಲೆ ಸೀಟಿ ಹೊಡೆಯುವ ಅಕ್ಷರಶಃ ಕುಕ್ಕರ್ ಸ್ಥಿತಿ.

ಸ್ವಾತಂತ್ರ್ಯ ವರ್ಷ ವರ್ಷ ಬರುತ್ತದೆ. ಪ್ರತಿವರ್ಷ ದೇಶಭಕ್ತಿ ಪ್ರದರ್ಶಿಸಿ ಸಂಭ್ರಮ ಪಡುತ್ತೇವೆ. ಬಾವುಟ ಹಾರಿಸಿ, ಜನಗಣಮನ ಹಾಡಿ, ವಂದೇ ಮಾತರಂ ಹೇಳಿ ಅವತ್ತಿನ ಸ್ವಾತಂತ್ರ್ಯ ಮುಗಿಸುತ್ತೇವೆ. ಇದು ಅವಿರತ!

ಇಷ್ಟು ಹೇಳಿದ ಮೇಲೆ ಒಂದು ಪ್ರಮುಖ ವಿಚಾರವನ್ನು NOTE ಮಾಡಬೇಕಿದೆ.

“ಅವರಿವರನ್ನೂ ದೂರಿ ಪ್ರಯೋಜನವಿಲ್ಲ, ಜಾತಿ, ಧರ್ಮ, ನೋಟಿಗೆ ದೇಶವನ್ನು ಅಡ ಇಟ್ಟಿರುವ ಪ್ರಜಾಪ್ರಭು ಬದಲಾಗದ ಹೊರತು, ದೇಶ ಬೆಳೆಯಲು‘ ಉಳಿಯಲು ಸಾಧ್ಯವೇ ಇಲ್ಲ.

ರಾ ಚಿಂತನ್

ಪತ್ರಕರ್ತರು

ಇದನ್ನೂ ಓದಿ- ಹಿಂಡನ್ ಬರ್ಗ್ ವರದಿಯ ಹಿಂದೇನಿದೆ?

More articles

Latest article