ರಂಗಾಯಣಗಳ ಕಾಸು; ರಾಜಧಾನಿಯಲ್ಲಿ ರಂಗಪರಿಷೆಯ ಸೊಗಸು

Most read

ವರ್ಷವಿಡೀ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುವ ಸಂಘ ಸಂಸ್ಥೆಗಳಿಗೆ ಅನುದಾನ ಕೊಡುವುದನ್ನು ಸಂಸ್ಕೃತಿ ಇಲಾಖೆ ವಿಳಂಬ ಮಾಡುತ್ತಲೇ ಬಂದಿದೆ. ಕಲಾವಿದರಿಗೆ ಮಾಸಾಶನ ಕೊಡಲು ಸಾಧ್ಯವಾಗುತ್ತಿಲ್ಲ. ಪ್ರಾಯೋಜಿತ ಕಾರ್ಯಕ್ರಮಗಳಿಗೆ ಅನುದಾನ ಕೊಡಮಾಡುತ್ತಿಲ್ಲ. ಸಂಸ್ಕೃತಿ ಇಲಾಖೆಯ ಅಧೀನದಲ್ಲಿರುವ ರಂಗಮಂದಿರಗಳಲ್ಲಿ ಅಗತ್ಯ ಪರಿಕರಗಳಿಲ್ಲ, ಕನಿಷ್ಠ ಸಿಬ್ಬಂದಿಗಳಿಲ್ಲ. ಹೀಗಿರುವಾಗ ಈ ಅದ್ದೂರಿ ರಂಗಜಾತ್ರೆಗಳು, ಅಮೋಘ ಜಯಂತಿಗಳು ಬೇಕಾ? ಶಶಿಕಾಂತ ಯಡಹಳ್ಳಿ, ರಂಗಕರ್ಮಿ.

ಫೆಬ್ರವರಿ 1 ರಿಂದ ಎಂಟು ದಿನಗಳ ಕಾಲ ಬೆಂಗಳೂರಿನ ಕಲಾಗ್ರಾಮದಲ್ಲಿ ಭಾರತ ರಂಗಮಹೋತ್ಸವದ ನೆಪದಲ್ಲಿ ರಂಗಪರಿಷೆ ಎನ್ನುವ ಸಾಂಸ್ಕೃತಿಕ ಜಾತ್ರೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿತ್ತು.

ಬೆಂಗಳೂರಲ್ಲಿ ಪರಂಪರಾಗತವಾಗಿ ನಡೆಯುತ್ತಾ ಬಂದ ಕಡಲೇಕಾಯಿ ಪರಿಷೆ, ಅವರೆಕಾಯಿ ಪರಿಷೆಗಳಂತೆ ರಂಗಪರಿಷೆಯನ್ನು ಈ ವರ್ಷದಿಂದ ಹಮ್ಮಿಕೊಳ್ಳಲಾಗುವುದು ಎಂದು ನಾಟಕ ಅಕಾಡೆಮಿಯ ಸರ್ವಾಧಿಕಾರಿ ಅಧ್ಯಕ್ಷ ಮಾನ್ಯ ಶ್ರೀ ನಾಗರಾಜಮೂರ್ತಿಗಳು ಹೆಮ್ಮೆಯಿಂದ ಹೇಳಿಕೊಂಡು ತಮ್ಮ ಬೆನ್ನನ್ನು ತಾವೇ ಬಡಿದುಕೊಂಡು ಓಡಾಡಿದ್ದರು. ಹಲವರಿಗಲ್ಲದಿದ್ದರೂ ಕೆಲವರಿಗಾದರೂ “ಈ ರಂಗಜಾತ್ರೆಗೆ ಹಣ ಎಲ್ಲಿಂದ ಬರುತ್ತದೆ” ಎನ್ನುವ ಪ್ರಶ್ನೆ ಕಾಡಿದ್ದಂತೂ ನಿಜ. ಆದರೆ ಯಾರ ಬಳಿಯೂ ಸಮರ್ಪಕ ಉತ್ತರಗಳಿರಲಿಲ್ಲ. ಸಕಲ ಅಕಾಡೆಮಿಗಳ ಅಧ್ಯಕ್ಷರುಗಳು ಸದಸ್ಯರುಗಳು ಹಾಗೂ ಸಿಬ್ಬಂದಿ ವರ್ಗದವರಿಂದ ಹಿಡಿದು ಸಂಬಂಧಿಸಿದ ಅಧಿಕಾರಿಗಳನ್ನು ಕೇಳಿದಾಗ ದೊರೆತ ಉತ್ತರ “ಗೊತ್ತಿಲ್ಲ” ಎನ್ನುವುದೊಂದೇ ಆಗಿತ್ತು. ಹೋಗಲಿ ಈ ರಂಗಪರಿಷೆಯ ಹೋಲ್ ಸೇಲ್ ಉಸ್ತುವಾರಿಯನ್ನು ವಹಿಸಿಕೊಂಡ ಏಕಮೇವ ಅದ್ವಿತೀಯ ನಾಯಕ ನಾಗರಾಜಮೂರ್ತಿಯವರಂತೂ ‘ಯಾವುದೇ ಹಣ ಬಂದಿಲ್ಲಾ, ನಾನೇ ಹೇಗೋ ರಂಗಪರಿಷೆ ಮಾಡಿಸುತ್ತಿದ್ದೇನೆ’ ಎಂದು ತಮ್ಮ ಹೆಚ್ಚುಗಾರಿಕೆಯನ್ನು ಎದುರಿರುವವರು ಮೆಚ್ಚಲಿ ಎಂದು ವಾದಿಸುತ್ತಲಿದ್ದರು. ಇನ್ನು ನಾಟಕ ಅಕಾಡೆಮಿಯ ಸದಸ್ಯರಿಗಾದರೂ ಹಣದ ಮೂಲದ ಬಗ್ಗೆ ಗೊತ್ತಿರಬಹುದೆಂದು ಪ್ರಶ್ನಿಸಿದರೆ ಮತ್ತದೇ ಸಿದ್ಧ ಉತ್ತರ ‘ಗೊತ್ತಿಲ್ಲ’. ಅಂತೂ ಇಂತೂ ಕೋಟಿಗಳ ಖರ್ಚಿನಲ್ಲಿ ರಂಗಜಾತ್ರೆಯನ್ನು ಯಶಸ್ವಿಯಾಗಿ ಮಾಡಿ ಮುಗಿಸಲಾಯ್ತು, ಆದರೂ ಎಷ್ಟು ಕೋಟಿ ಎಂದು ಸಂಬಂಧಿಸಿದ ಯಾರೂ ಬಾಯಿ ಬಿಟ್ಟಿರಲಿಲ್ಲ. ಬಾಯಿ ಬಿಡೋಕೆ ಬಹುತೇಕರಿಗೆ ಗೊತ್ತೂ ಇರಲಿಲ್ಲ.

ಆದರೆ ರಂಗಪರಿಷೆಯ ಮೂಲ ಪತ್ತೆ ಹಚ್ಚುವುದು ಬ್ರಹ್ಮವಿದ್ಯೆ ಏನಾಗಿರಲಿಲ್ಲ. ಸರಕಾರದ ಆದೇಶದ ಪ್ರತಿಯನ್ನು ಪಡೆಯುವುದೂ ಅಷ್ಟೊಂದು ಕಷ್ಟಸಾಧ್ಯದ ಕೆಲಸವೂ ಅಲ್ಲ. ಈ ಜಾತ್ರೆಗೆ ಸರಕಾರ ಅನುದಾನ ಕೊಟ್ಟಿದೆ ಎಂಬುದು ಗೊತ್ತಿತ್ತು. ಆದರೆ ಎಷ್ಟು ಹಣ, ಎಲ್ಲಿಂದ ಕೊಟ್ಟಿತು ಎನ್ನುವ ರಹಸ್ಯವನ್ನು ಸರಕಾರಿ ಆದೇಶಗಳೇ ಬಯಲು ಮಾಡಿದವು.

ಮೊದಲೇ ಸರಕಾರದಲ್ಲಿ ಹಣದ ಕೊರತೆ ಇದೆ. ಅನುದಾನಕ್ಕಾಗಿ ಶಾಸಕರು, ಸಚಿವರು ಕಾಯುತ್ತಿದ್ದಾರೆ. ಇಂತಹ ಆರ್ಥಿಕ ತುರ್ತು ಪರಿಸ್ಥಿತಿಯಲ್ಲಿ ಸಿಎಂ ಸಿದ್ದರಾಮಯ್ಯನವರು ರಂಗಪರಿಷೆಗೆ ಗೆಜೆಟ್ ಅಲೊಕೇಶನ್ ಇಲ್ಲದೆ ಎಲ್ಲಿಂದ ಹೆಚ್ಚುವರಿ ಅನುದಾನ ಹೊಂದಿಸಿಕೊಡಲು ಸಾಧ್ಯ?. ಆದರೆ ಸಿದ್ದರಾಮಯ್ಯನವರ ಬಂಟನಂತಿರುವ ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ತಂಗಡಗಿ ಸಾಹೇಬರು ಬಿಡಬೇಕಲ್ಲ. ಕೊನೆಗೆ ತಂಗಡಗಿಯವರ ಒತ್ತಾಯಕ್ಕೆ ಕಟ್ಟು ಬಿದ್ದ ಸಿಎಂ ಸಾಹೇಬರು ” ನಿಮ್ಮದೇ ಇಲಾಖೆಯಲ್ಲಿ ಎಲ್ಲಿಯಾದರೂ ಹಣ ಇದ್ದರೆ ಅದನ್ನೇ ಅಲ್ಲಿಂದ ಎತ್ತಿಕೊಂಡು ರಂಗಜಾತ್ರೆನಾದ್ರೂ ಮಾಡಿ, ರಂಗಯಾತ್ರೆನಾದ್ರೂ ಮಾಡಿಕೊಳ್ಳಿ” ಎಂದರು.

ಇಡೀ ರಂಗ ಪರಿಷೆಗೆ ಬೇಕಾಗಿದ್ದ ಅಂದಾಜು ವೆಚ್ಚ ಎರಡು ಕೋಟಿಯಾಗಿತ್ತು. ಸಚಿವರ ಸೂಚನೆಯಂತೆ ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಹಗಲು ರಾತ್ರಿ ತಲೆಕೆಡಿಸಿಕೊಂಡು ಇಲಾಖೆಯಲ್ಲಿ ಎಲ್ಲೆಲ್ಲಿ ಹಣ ಉಳಿದಿದೆ ಎಂದು ಕಂಡು ಹಿಡಿದರು. ಆ ಅಧಿಕಾರಿಗಳ ಕಣ್ಣಿಗೆ ಮೊದಲು ಬಿದ್ದಿದ್ದು  ಕಲಬುರಗಿ ರಂಗಾಯಣದಲ್ಲಿದ್ದ 41 ಲಕ್ಷ ಹಣ ಮತ್ತು ಧಾರವಾಡ ರಂಗಾಯಣದಲ್ಲಿದ್ದ 31 ಲಕ್ಷ, ಹಾಗೂ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಲ್ಲಿದ್ದ 50 ಲಕ್ಷದಷ್ಟು ಹಣ. ಇಷ್ಟೆಲ್ಲಾ ಸೇರಿಸಿ ಒಟ್ಟು ಮಾಡಿದಾಗ ಒಂದು ಕೋಟಿ 22 ಲಕ್ಷದಷ್ಟು ಹಣ ದೊರಕಿದಂತಾಯ್ತು. ಆದರೂ ಬೇಡಿಕೆ ಇದ್ದಷ್ಟು ಹಣ ಸಿಗಲಿಲ್ಲವಾದ್ದರಿಂದ 24-25 ನೇ ಸಾಲಿನ ಮಹನೀಯರ ಜಯಂತಿಯ ಬಾಬತ್ತಿನಲ್ಲಿ ಉಳಿಕೆಯಾಗಬಹುದಾದ ಬಾಬತ್ತಿನಲ್ಲಿ 10 ಲಕ್ಷ ರೂಪಾಯಿಗಳನ್ನು ಬಳಸಿಕೊಳ್ಳಬಹುದೆಂದು ಅಧಿಕಾರಿಗಳು ಸೂಚಿಸಿದರು. ಒಟ್ಟು 1 ಕೋಟಿ ಮೂವತ್ತೆರಡು ಲಕ್ಷ ರೂಪಾಯಿಗಳನ್ನು ರಂಗ ಪರಿಷೆಯ ಖರ್ಚಿಗಾಗಿ ಇಲಾಖೆ ಅನುಮೋದನೆ ಕೊಟ್ಟಿತು. ಅದೇನು ಕಿಕ್ ಬ್ಯಾಕ್ ಮಹಿಮೆಯೋ ಇಲ್ಲಾ ಪ್ರಚಾರಪ್ರಿಯತೆಯೋ ಗೊತ್ತಿಲ್ಲಾ, ಆದರೆ ನಮ್ಮ ಸಂಸ್ಕೃತಿ ಸಚಿವರಾದ ತಂಗಡಗಿಯವರಿಗೆ ದೊಡ್ಡ ದೊಡ್ಡ ಸಾಂಸ್ಕೃತಿಕ ಜಾತ್ರೆಗಳು, ಪ್ರಶಸ್ತಿ ಸಮಾರಂಭಗಳು ಹಾಗೂ ಜಯಂತಿಗಳನ್ನು ಅದ್ದೂರಿಯಾಗಿ ಮಾಡುವ ಖಯಾಲಿ. ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಮಾಡಿ ಉಧೋ ಉಧೋ ಎನ್ನುತ್ತಾ ಹೆಸರು ಗಳಿಸುವ ಹುಚ್ಚು ಈ ಸಚಿವರಿಗೆ ಸ್ವಲ್ಪ ಹೆಚ್ಚೇ ಇದೆ. ಇವರ ಈ ಹುಚ್ಚಿಗೆ ಬಲಿಪಶುವಾಗಿದ್ದು ರಂಗಾಯಣ ಹಾಗೂ ಪ್ರಾಧಿಕಾರದಂತಹ ಸರಕಾರಿ ಕೃಪಾಪೋಷಿತ ಸಾಂಸ್ಕೃತಿಕ ಸಂಘಟನೆಗಳು.

ಇಷ್ಟೇ ಅಲ್ಲಾ, ಈ 1.32 ಕೋಟಿಯ ಜೊತೆಗೆ ನಾಟಕ ಅಕಾಡೆಮಿಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಉಳಿದ 20 ಲಕ್ಷ ಹಣವನ್ನೂ ಬಳಸಲಾಗಿದ್ದು ಅಲ್ಲಿಗೆ ಅಕಾಡೆಮಿ ಪ್ರಾಧಿಕಾರ ಹಾಗೂ ರಂಗಾಯಣಗಳ ಅನುದಾನ ವಾಪಸಿಯಿಂದಾ ಒಂದೂವರೆ ಕೋಟಿಯಷ್ಟು ಹಣ ರಂಗಪರಿಷೆಗೆ ದಕ್ಕಿದಂತಾಯ್ತು. ಇದರ ಜೊತೆಗೆ ಬಾಕಿ ಇರುವ ಅಕಾಡೆಮಿಗಳೂ ಸಹ ಈ ಪರಿಷೆಗಾಗಿ ತಮ್ಮ ಸೀಮಿತ ಅನುದಾನದಲ್ಲಿ ರಂಗಪರಿಷೆಯಲ್ಲಿ ಕೆಲವಾರು ಕಾರ್ಯಕ್ರಮಗಳನ್ನೂ ಆಯೋಜಿಸಿದ್ದು ಆ ಖರ್ಚು ಸಹ ಹೆಚ್ಚುವರಿಯಾಗಿದ್ದು ಪರಿಷೆಯ ಲೆಕ್ಕ  ಪರಿಧಿಯ ಹೊರಗಿನ ವೆಚ್ಚವಾಗಿದೆ.

ಇದರ ಹೊರತಾಗಿ ರಂಗಪರಿಷೆಯ ಜೊತೆಗೆ ಮಿಳಿತವಾಗಿದ್ದ ಭಾರತ ರಂಗಮಹೋತ್ಸವಕ್ಕೆ ದೆಹಲಿಯ ಎನ್‌ ಎಸ್‌ ಡಿ ಹಾಗೂ ಕೇಂದ್ರದ ಸಂಸ್ಕೃತಿ ಸಚಿವಾಲಯವು ಎರಡು ಕೋಟಿಯಷ್ಟು ಹಣ ಮೀಸಲಿಟ್ಟಿವೆ. ಕೇಂದ್ರ ಸರಕಾರದಲ್ಲಿ ಬೇಕಾದಷ್ಟು ಹಣ ಇದೆ ಖರ್ಚು ಮಾಡಲಾಗುತ್ತದೆ, ಎನ್ನೆಸ್ಡಿಗಂತೂ ಅನುದಾನದ ಕೊರತೆ ಇಲ್ಲ. ಆದರೆ ರಾಜ್ಯ ಸರಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಕೊಡಮಾಡುವ ವಾರ್ಷಿಕ ಅನುದಾನದಲ್ಲಿ ಗಣನೀಯವಾಗಿ ಕಡಿತಗೊಳಿಸಿದೆ. ಈ ಪರಿಷೆ ಜಾತ್ರೆಗಳಿಗೆಲ್ಲಾ ಹೆಚ್ಚುವರಿ ಅನುದಾನ ಕೊಡುವ ಪರಿಸ್ಥಿತಿಯಲ್ಲಿ ರಾಜ್ಯ ಸರಕಾರ ಇಲ್ಲ. ಇಂತಹ ಆರ್ಥಿಕ ದುಸ್ಥಿತಿಯಲ್ಲಿ ಈ ಅದ್ದೂರಿ ರಂಗಪರಿಷೆ ಬೇಕಾಗಿತ್ತಾ? ಸಂಸ್ಕೃತಿ ಇಲಾಖೆಯು ಅಕಾಡೆಮಿ ಪ್ರಾಧಿಕಾರ ಹಾಗೂ ರಂಗಾಯಣಗಳಿಗೆ ಹಂಚಿಕೆ ಮಾಡಲಾಗಿದ್ದ ಅನುದಾನವನ್ನು ಮರಳಿ ಪಡೆದು ಜಾತ್ರೆ ಮಾಡುವ ಅಗತ್ಯ ಇತ್ತಾ? ಸಂಸ್ಕೃತಿ ಇಲಾಖೆಯಲ್ಲಿ ಹೊಟ್ಟೆಗೆ ಹಿಟ್ಟಿಲ್ಲದಿರುವಾಗ ಜುಟ್ಟಿಗೆ ಜಾತ್ರೆ ಮಲ್ಲಿಗೆ ಮುಡಿಸಿ ಮೆರೆಯಬೇಕಿತ್ತಾ? ಪ್ರಶ್ನೆಗಳು ಹಲವಾರಿವೆ. ಉತ್ತರಿಸ ಬೇಕಾದವರು ರಂಗಪರಿಷೆಯ ಯಶಸ್ಸಿನ ಮತ್ತಿನಲ್ಲಿ ಮೈಮರೆತಿದ್ದಾರೆ.

ಮೊದಲೇ ರಂಗಾಯಣಗಳು ಅನುದಾನದ ಕೊರತೆಯಿಂದ ಅಗತ್ಯ ಯೋಜನೆಗಳನ್ನು ಹಮ್ಮಿಕೊಳ್ಳಲು ಏದುಸಿರು ಬಿಡುತ್ತಿವೆ. ಅದರಲ್ಲೂ ಧಾರವಾಡ ಹಾಗೂ ಕಲಬುರ್ಗಿ ಯ ರಂಗಾಯಣಗಳು ಬೇರೆಲ್ಲಾ ರಂಗಾಯಣಗಳಿಗಿಂತಾ ಹಿಂದುಳಿದಿವೆ. ಹೀಗಿರುವಾಗ ಈ ರಂಗಾಯಣಕ್ಕಾಗಿ ಸರಕಾರ ಕೊಟ್ಟ ಅನುದಾನವನ್ನು ವಾಪಸ್ ಪಡೆದು ರಂಗಪರಿಷೆ ಮಾಡಲು ಅನುಮತಿ ಇತ್ತ ಸಂಸ್ಕೃತಿ ಸಚಿವರಿಗೆ ರಾಜ್ಯದ ಸಮಗ್ರ ಸಾಂಸ್ಕೃತಿಕ ಅಭಿವೃದ್ದಿಯ ಬಗ್ಗೆ ಅರಿವೇ ಇದ್ದಂತಿಲ್ಲ. ಇವರ ಹೆಸರಿನ ಹಪಾಹಪಿಗೆ ಸಾಂಸ್ಕೃತಿಕ ಕ್ಷೇತ್ರ ಹೇಗೆ ಬಡವಾಗುತ್ತದೆ ಎನ್ನುವುದೂ ಗೊತ್ತಿಲ್ಲ. ಎಂಟು ದಿನಗಳ ಕಾಲ ರಾಜಧಾನಿಯಲ್ಲಿ ಮಾಡಿದ ರಂಗಜಾತ್ರೆಗೆ ಈ ರಂಗಾಯಣಗಳು ತಮ್ಮ ಒಂದು ವರ್ಷದ ಅನುದಾನವನ್ನು ಕೊಡಬೇಕು ಎನ್ನುವುದು ಯಾವ ನ್ಯಾಯ? ಹೋಗಲಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಲ್ಲಿ ಅಧ್ಯಯನ ಹಾಗೂ ಪ್ರಕಟನೆಗಳಗಾಗಿ ಮೀಸಲಿಟ್ಟ ಅರ್ಧ ಕೋಟಿ ಹಣವನ್ನೂ ಸಹ ಎಂಟು ದಿನದ ಪರಿಷೆಗೆ ಬಳಸಿಕೊಂಡಿರುವುದು ಎಷ್ಟೊಂದು ಅನ್ಯಾಯ?

‘ಇಡೀ ರಾಜ್ಯ ಸಾಂಸ್ಕೃತಿಕವಾಗಿ ಸೊರಗಿದರೂ ಸರಿ, ಬೆಂಗಳೂರಿನಲ್ಲಿ ಮಾತ್ರ ಹಬ್ಬ ಮಾಡಿದರಾಯ್ತು’ ಎನ್ನುವ ಸಂಸ್ಕೃತಿ ಇಲಾಖೆಯ ಮನಸ್ಥಿತಿಯೇ ಬೆಂಗಳೂರು ಕೇಂದ್ರಿತವಾಗಿದೆ. ಸರಕಾರದ ಈ ಅನುದಾನ ವಾಪಸಿ ಆದೇಶವನ್ನು ಎಲ್ಲಾ ಆರೂ ರಂಗಾಯಣಗಳ ನಿರ್ದೇಶಕರು ಪ್ರಶ್ನಿಸಬೇಕಾಗಿತ್ತು. ಹೋಗಲಿ ಬಂದ ಅನುದಾನ ಕಳೆದುಕೊಳ್ಳುತ್ತಿರುವ ಧಾರವಾಡ ಹಾಗೂ ಕಲಬುರ್ಗಿ ರಂಗಾಯಣದ ನಿರ್ದೇಶಕರುಗಳು ಸರಕಾರದ ಈ ಹುಚ್ಚು ನಿರ್ಧಾರವನ್ನು ವಿರೋಧಿಸಿ ರಾಜೀನಾಮೆ ಕೊಟ್ಟು ತಮ್ಮ ಪ್ರತಿಭಟನೆ ತೋರಬೇಕಾಗಿತ್ತು. ಆಯ್ತು ಈ ನಿರ್ದೇಶಕರಿಗೆ ತಮ್ಮ ಹುದ್ದೆಯ ಮೇಲೆ ಮೋಹ ಇದೆ ಎಂದುಕೊಳ್ಳೋಣ. ಆದರೆ ಧಾರವಾಡ ಹಾಗೂ ಕಲಬುರ್ಗಿಯ ರಂಗಕರ್ಮಿಗಳು, ಕಲಾವಿದರು, ಸಾಹಿತಿಗಳು ಯಾಕೆ ಸುಮ್ಮನಿದ್ದಾರೆ? ಯಾವುದೋ ಒಂದು ರಂಗಪರಿಷೆಗಾಗಿ ಕೊಟ್ಟ ಅನುದಾನವನ್ನು ವಾಪಸ್ ಪಡೆದ  ಸಂಸ್ಕೃತಿ ಇಲಾಖೆಯ ಆದೇಶದ ವಿರುದ್ಧ ಯಾಕೆ ಪ್ರತಿಭಟಿಸುತ್ತಿಲ್ಲ. ರಾಜ್ಯಾದ್ಯಂತ ಇರುವ ಸಾಹಿತಿ ಕಲಾವಿದರಾದರೂ ಈ ಸರಕಾರಿ ಅನ್ಯಾಯದ ವಿರುದ್ದ ದ್ವನಿ ಎತ್ತಬೇಕಿದೆ. ಬೇಕಾದರೆ “ರಂಗಪರಿಷೆಗೋ ಇಲ್ಲಾ ರಂಗಜಾತ್ರೆಗೋ ಸಪರೇಟಾಗಿ ಸರಕಾರದಿಂದ ಅನುದಾನ ಪಡೆದುಕೊಳ್ಳಲಿ. ರಂಗಾಯಣಗಳು ಹಾಗೂ ಪ್ರಾಧಿಕಾರದ ಹಣ ಬಳಸದೇ ಇರಲಿ” ಎಂದು ಸರಕಾರಕ್ಕೆ ಎಚ್ಚರಿಕೆ ಕೊಡಬೇಕಾಗಿದೆ.

ಸೆಲಿಬ್ರಿಟಿಯ ಮದುವೆ ಇಲ್ಲಾ ನಾಯಕ ನಟ ಮಾಡಿದ ಕೊಲೆಯ ಸುತ್ತ ಸುದ್ದಿಗಳ ಹುತ್ತ ಕಟ್ಟುವ ಸುದ್ದಿ ಮಾಧ್ಯಮಗಳಿಗಂತೂ ಸಾಂಸ್ಕೃತಿಕ ಕ್ಷೇತ್ರದಲ್ಲಾಗುವ ಇಂತಹ ಅವಘಡಗಳ ಕುರಿತು ಸುದ್ದಿ ಮಾಡಿ ಸರಕಾರವನ್ನು ಎಚ್ಚರಿಸಬೇಕು ಎನ್ನುವ ಕನಿಷ್ಟ ಅರಿವೂ ಇಲ್ಲವಾಗಿದೆ. ಯಾವ ಕಡೆಯಿಂದಲೂ ಪ್ರತಿಭಟನೆ ಬಾರದೇ ಇರುವುದರಿಂದ ಈ ಸರಕಾರಿ ಇಲಾಖೆಗಳು, ಸಚಿವರು ಹಾಗೂ ಅಧಿಕಾರಿಗಳು ಇಂತಹ ಅಪಸವ್ಯವನ್ನೇ ಮುಂದುವರೆಸುತ್ತಾರೆ. ಬರೀ ಜಾತ್ರೆ ಯಾತ್ರೆಗಳ ಮೋಹದ ಮತ್ತಿನಲ್ಲಿ ಪ್ರಾದೇಶಿಕ ಸಾಂಸ್ಕೃತಿಕ ಸಂಸ್ಥೆಗಳನ್ನು ನಾಶಮಾಡುತ್ತಾರೆ.

ವರ್ಷವಿಡೀ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುವ ಸಂಘ ಸಂಸ್ಥೆಗಳಿಗೆ ಅನುದಾನ ಕೊಡುವುದನ್ನು ಸಂಸ್ಕೃತಿ ಇಲಾಖೆ ವಿಳಂಬ ಮಾಡುತ್ತಲೇ ಬಂದಿದೆ. ಕಲಾವಿದರಿಗೆ ಮಾಸಾಶನ ಕೊಡಲು ಸಾಧ್ಯವಾಗುತ್ತಿಲ್ಲ. ಪ್ರಾಯೋಜಿತ ಕಾರ್ಯಕ್ರಮಗಳಿಗೆ ಅನುದಾನ ಕೊಡಮಾಡುತ್ತಿಲ್ಲ. ಸಂಸ್ಕೃತಿ ಇಲಾಖೆಯ ಅಧೀನದಲ್ಲಿರುವ ರಂಗಮಂದಿರಗಳಲ್ಲಿ ಅಗತ್ಯ ಪರಿಕರಗಳಿಲ್ಲ, ಕನಿಷ್ಟ ಸಿಬ್ಬಂದಿಗಳಿಲ್ಲ. ಹೀಗಿರುವಾಗ ಈ ಅದ್ದೂರಿ ರಂಗಜಾತ್ರೆಗಳು, ಅಮೋಘ ಜಯಂತಿಗಳು ಬೇಕಾ? ಕಲೆಯನ್ನು ನಿರ್ಲಕ್ಷಿಸಿ ಕಲಾವಿದರನ್ನು ಅಲಕ್ಷಿಸುವ ಸಂಸ್ಕೃತಿ ಇಲಾಖೆ ಆಡಂಬರದ ಕಾರ್ಯಕ್ರಮಗಳಿಗೆ ಯಥೇಚ್ಚವಾಗಿ ಹಣ ಖರ್ಚು ಮಾಡುವುದಾದರೂ ಯಾಕೆ?

“ಇನ್ಮೇಲೆ ಪ್ರತಿ ವರ್ಷ ಹೀಗೆಯೇ ರಂಗಪರಿಷೆಯನ್ನು ಬೆಂಗಳೂರಲ್ಲಿ ಆಯೋಜಿಸಲಾಗುತ್ತದೆ” ಎಂದು ನಾಟಕ ಅಕಾಡೆಮಿಯ ಅಧ್ಯಕ್ಷರಾದ ನಾಗರಾಜಮೂರ್ತಿಯವರು ಹೇಳುತ್ತಲೇ ಇದ್ದಾರೆ. ಹಾಗಾದರೆ ಪ್ರತಿ ವರ್ಷ ಕೋಟಿಗಳ ಲೆಕ್ಕದಲ್ಲಿ ರಂಗಜಾತ್ರೆಗೆ ಬೇಕಾದ ಹಣವನ್ನು ಯಾವ ಅಕಾಡೆಮಿ, ಪ್ರಾಧಿಕಾರ, ರಂಗಾಯಣಗಳಿಂದ ಕಿತ್ತು ತರಲಾಗುತ್ತದೆ?. ಯಾವ ಸರಕಾರಿ ಸಾಂಸ್ಕೃತಿಕ ಸಂಸ್ಥೆಗಳಿಗೆ ಕೊಟ್ಟ ಅನುದಾನವನ್ನು ಕಬಳಿಸಲಾಗುತ್ತದೆ?. “ಹರುಷದ ಒಂದು ಕೂಳಿಗಾಗಿ ವರುಷದ ಕೂಳು ಕಳೆದುಕೊಂಡಂತೆ” ಎಂಬ ಗಾದೆ ಇದೆ. ಎಂಟು ದಿನಗಳ ರಂಗ ಜಾತ್ರೆಗಾಗಿ ಪ್ರಾಧಿಕಾರ ಹಾಗೂ ರಂಗಾಯಣಗಳು ತಮ್ಮ ಅನುದಾನವನ್ನು ಕಳೆದುಕೊಳ್ಳುವುದೇ ಆದರೆ ಅಂತಹ ಜಾತ್ರೆ ಪರಿಷೆಗಳೇ ಬೇಕಾಗಿಲ್ಲ. ಒಬ್ಬ ಸಚಿವ ತಂಗಡಗಿ ಇಲ್ಲವೇ ಒಬ್ಬ ಅಧ್ಯಕ್ಷ ನಾಗರಾಜಮೂರ್ತಿ ಮೆರೆದಾಡಲು ರಂಗಾಯಣಗಳು ಹಣ ಇಲ್ಲದೇ ಪರದಾಡಬೇಕಾ? ಎಲ್ಲಾ ಮುಗಿದ ಮೇಲೆ ಕೊನೆಗೂ ಉಳಿಯುವ ಪ್ರಶ್ನೆ ಕೊಬ್ಬಿದ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು? ಮತಿಗೆಟ್ಟ ಸರಕಾರಕ್ಕೆ ಬುದ್ಧಿ ಹೇಳುವವರು ಯಾರು?

ಶಶಿಕಾಂತ ಯಡಹಳ್ಳಿ

ರಂಗಕರ್ಮಿ

ಇದನ್ನೂ ಓದಿ- ರಂಗಪರಿಷೆ ಮತ್ತು ಭಾರತ ರಂಗ ಮಹೋತ್ಸವ; ಹೀಗೊಂದು ಅವಲೋಕನ

More articles

Latest article