ಕಳೆಗುಂದಿದ ರಂಗಾಯಣಕ್ಕೆ ಮತ್ತೆ ಹೊಳಪು ತರಲು ಮೊದಲು ಎಲ್ಲಾ ರಂಗಾಯಣಗಳಿಗೂ ಅನುಭವೀ ರಂಗಕರ್ಮಿಗಳನ್ನು ನಿರ್ದೇಶಕರನ್ನಾಗಿ ಸರಕಾರ ಕೂಡಲೇ ಆಯ್ಕೆ ಮಾಡಬೇಕಾಗಿದೆ. ಈ ಹಿಂದಿನ ಬಿಜೆಪಿ ಸರಕಾರವು ಕೇಶವಕೃಪಾ ಕಟಾಕ್ಷದವರನ್ನು ನೇರವಾಗಿ ನೇಮಕ ಮಾಡಿ ರಂಗಾಯಣವನ್ನು ಸಂಘದ ಕಾರ್ಯಾಲಯ ಮಾಡಿದಂತೆ ಮಾಡದೇ ರಂಗಸಮಾಜದ ಸಲಹೆ ಸೂಚನೆಯ ಮೇರೆಗೆ ನಿರ್ದೇಶಕರ ಆಯ್ಕೆ ನಡೆಯಬೇಕಿದೆ- ಶಶಿಕಾಂತ ಯಡಹಳ್ಳಿ, ರಂಗಕರ್ಮಿ
ಕನ್ನಡ ನಾಡಿನ ಹೆಮ್ಮೆಯ ಸರಕಾರಿ ಸಾಂಸ್ಕೃತಿಕ ಸಂಸ್ಥೆ ರಂಗಾಯಣ ಎಂದು ಹೆಮ್ಮೆಯಿಂದ ಹೇಳುವ ಕಾಲವೊಂದಿತ್ತು. ಬಿ.ವಿ.ಕಾರಂತರ ದೂರದೃಷ್ಟಿಯ ಫಲವಾಗಿ ಅಸ್ತಿತ್ವಕ್ಕೆ ಬಂದ ಮೈಸೂರು ರಂಗಾಯಣ ಈಗ ಕರ್ನಾಟಕದಾದ್ಯಂತ ಮೈಸೂರು ಸೇರಿದಂತೆ ಧಾರವಾಡ, ಕಲಬುರಗಿ, ಶಿವಮೊಗ್ಗ, ಕಾರ್ಕಳ ಹಾಗೂ ದಾವಣಗೆರೆ ಹೀಗೆ ಆರು ಪ್ರದೇಶಗಳಲ್ಲಿ ಸ್ಥಾಪನೆಗೊಂಡಿದೆ. ಆಧುನಿಕ ರಂಗಭೂಮಿ, ವೃತ್ತಿರಂಗಭೂಮಿ, ಜಾನಪದ ರಂಗಭೂಮಿಯನ್ನು ಉಳಿಸಿ ಬೆಳೆಸುವ ಕಾಯಕ ಈ ಎಲ್ಲಾ ರಂಗಾಯಣಗಳ ಹೊಣೆಗಾರಿಕೆಯಾಗಿದೆ.
ಆದರೆ ಈಗ ಆಗುತ್ತಿರುವುದೇನು.? ಎಲ್ಲಾ ರಂಗಾಯಣಗಳೂ ನಿರ್ದೇಶಕರಿಲ್ಲದೇ ಏದುಸಿರು ಬಿಡುತ್ತಿವೆ. ಒಂದೆರಡು ಮಲಗಿವೆ, ಇನ್ನೆರಡು ಹೇಗೋ ಉಸಿರಾಡುತ್ತಿವೆ, ಇರುವುದರಲ್ಲೇ ಮೈಸೂರಿನ ರಂಗಾಯಣ ಒಂದಿಷ್ಟು ಅಸ್ತಿತ್ವ ಉಳಿಸಿಕೊಂಡಿದೆ. ಯಾಕೆ ಹೀಗೆ?
ಕಾರಣ ಎರಡು. ಒಂದು ಕಾಂಗ್ರೆಸ್ ಸರಕಾರ ಬಂದು ಎಂಟು ತಿಂಗಳಾಗಿದ್ದರೂ ಇನ್ನೂ ಯಾವುದೇ ರಂಗಾಯಣಕ್ಕೆ ನಿರ್ದೇಶಕರ ನೇಮಕಾತಿ ಆಗದೇ ಇರುವುದು. ಎರಡನೆಯದಾಗಿ ರಂಗಚಟುವಟಿಕೆಗಳಿಗೆ ಬೇಕಾದಷ್ಟು ಅನುದಾನ ಬಿಡುಗಡೆಯಾಗದೇ ಇರುವುದು. ಒಂದು ಇನ್ನೊಂದರ ಮೇಲೆ ಅವಲಂಬಿತವಾಗಿದೆ. ಸರಕಾರಕ್ಕೆ ಇವು ಎರಡೂ ಮುಖ್ಯವೆಂದು ಅನ್ನಿಸುತ್ತಿಲ್ಲ. ಹಿರಿಯ ರಂಗಕರ್ಮಿಗಳೂ ಇದಕ್ಕಾಗಿ ತೀವ್ರ ಒತ್ತಡ ಹೇರುತ್ತಿಲ್ಲ. ಅವರಿಗೂ ಅವರದೇ ಆದ ಕಾರಣಗಳಿವೆ. ಎಲ್ಲಿ ಸರಕಾರದ ವಿಳಂಬ ಧೋರಣೆಯನ್ನು ಪ್ರಶ್ನಿಸಿದರೆ ತಮಗೆ ಸಿಗಬಹುದಾದ ಅಕಾಡೆಮಿ, ಪ್ರಾಧಿಕಾರ, ರಂಗಾಯಣಗಳ ಹುದ್ದೆಗಳು ಸಿಕ್ಕದೆ ಹೋಗಬಹುದು ಎಂಬುದು ಹಿರಿಯ ಸಾಹಿತಿ ಕಲಾವಿದ ರಂಗಕರ್ಮಿಗಳ ಆತಂಕ ಇರಬಹುದು. ಒತ್ತಡ ಬರದೇ, ಯಾವುದೇ ಲಾಭವಿಲ್ಲದೇ ಯಾವುದನ್ನೂ ಮಾಡಲು ಸರಕಾರಗಳು ಸಿದ್ಧವಿರುವುದಿಲ್ಲ.
ಸಾಂಸ್ಕೃತಿಕ ಸಂಸ್ಥೆಗಳಿಗೆ ಆಯ್ಕೆ ಮಾಡುವುದು ರಾಜಕೀಯದವರಿಗೆ ಓಟಿನ ದಾರಿಯೂ ಅಲ್ಲ, ಅನುದಾನ ಕೊಡುವುದರಿಂದ ಲಾಭವೂ ಇಲ್ಲ. ಹೀಗಾಗಿ ಸರಕಾರಿ ಸಾಂಸ್ಕೃತಿಕ ಸಂಸ್ಥೆಗಳ ಬಗ್ಗೆ ಈ ಸರಕಾರಗಳಿಗೆ ಹಾಗೂ ಸಚಿವರುಗಳಿಗೆ ದಿವ್ಯ ನಿರ್ಲಕ್ಷ್ಯ. ಇದಕ್ಕೆ ವ್ಯತಿರಿಕ್ತವಾಗಿ ಜಾತಿ ಆಧಾರಿತ ಜಯಂತಿಗಳನ್ನು ಆಯೋಜಿಸಲು ಅಧಿಕಾರಿಗಳು, ಸರಕಾರಗಳು ಹಾಗೂ ಸಚಿವರುಗಳು ಅತೀ ಆಸಕ್ತಿ ವಹಿಸುತ್ತವೆ. ಯಾಕೆಂದರೆ ಅಲ್ಲಿ ಓಟು ನೋಟು ಎರಡೂ ದೊರೆಯುತ್ತವೆ. ಅದೇ ಆಸಕ್ತಿ ಸರಕಾರಿ ಕೃಪಾಪೋಷಿತ ಸಾಂಸ್ಕೃತಿಕ ಸಂಸ್ಥೆಗಳಿಗೆ ನೇಮಕಾತಿ ಮಾಡಲು ಹಾಗೂ ಅನುದಾನ ಬಿಡುಗಡೆ ಮಾಡಲು ತೋರುವುದಿಲ್ಲ.
ಈಗ ರಂಗಾಯಣಗಳು ಸರಕಾರಿ ಆಡಳಿತಾಧಿಕಾರಿಗಳ ಸುಪರ್ದಿಯಲ್ಲಿವೆ. ರಂಗಭೂಮಿಯ ಆಳ ಅಗಲ ಎತ್ತರ ಗೊತ್ತಿಲ್ಲದ, ಕ್ರಿಯಾಶೀಲತೆ ಇಲ್ಲದ ಅಧಿಕಾರಿಗಳು ಸಾಂಸ್ಕೃತಿಕ ಸಂಸ್ಥೆಯನ್ನು ಮುನ್ನಡೆಸಲು ಹೇಗೆ ಸಾಧ್ಯ? ಆಡಳಿತಕ್ಕೂ ಕ್ರಿಯಾಶೀಲತೆಗೂ ಸಾಮ್ಯತೆ ಅತೀ ಕಡಿಮೆ. ಇಂತಹ ಸಂದರ್ಭದಲ್ಲಿ ಆಡಳಿತಾಧಿಕಾರಿಗಳ ಮೇಲೆಯೇ ರಂಗಾಯಣಗಳ ಪಯಣ ಮುಂದುವರಿಯಲಿ ಎನ್ನುವ ಸರಕಾರದ ಧೋರಣೆ ರಂಗಕ್ರಿಯೆಗೆ ಮಾರಕ.
ಈಗ ಮೈಸೂರು ರಂಗಾಯಣ ಪ್ರತಿ ವರ್ಷ ಆಚರಿಸುವ “ಬಹುರೂಪಿ ರಾಷ್ಟ್ರೀಯ ರಂಗೋತ್ಸವ- 2024” ಆಯೋಜಿಸಬೇಕಿದೆ. ಮಾರ್ಚ್ 7 ರಿಂದ 11ರವರೆಗೆ ಬಹುರೂಪಿ ನಾಟಕೋತ್ಸವಕ್ಕೆ ದಿನಾಂಕವೂ ನಿಗದಿಯಾಗಿದೆ. ಆದರೆ ರಂಗಾಯಣ ಯಜಮಾನರಿಲ್ಲದ ಮನೆಯಾಗಿದೆ. ರಂಗಾಯಣದ ಬಹುತೇಕ ಅನುಭವಿ ಹಿರಿಯ ಕಲಾವಿದರು ನಿವೃತ್ತರಾಗಿದ್ದಾರೆ. ಮೊದಲು ನಿರ್ದೇಶಕರನ್ನು ಆಯ್ಕೆ ಮಾಡಿ ನಂತರ ರಂಗೋತ್ಸವ ಮಾಡುವುದು ಅಪೇಕ್ಷಣೀಯ. ಈ ಕುರಿತು ಮೈಸೂರು ರಂಗಾಯಣದ ಆಡಳಿತಾಧಿಕಾರಿ ನಿರ್ಮಲಾ ಮಠಪತಿಯವರನ್ನು ಕೇಳಿದರೆ “ನಿರ್ದೇಶಕರಿಲ್ಲದ ಕೊರತೆ ಏನೂ ಕಾಣುತ್ತಿಲ್ಲ. ಎಂದಿನಂತೆ ಚಟುವಟಿಕೆಗಳು ನಡೆಯುತ್ತಿದ್ದು ರಂಗೋತ್ಸವದ ತಯಾರಿ ನಡೆದಿದೆ” ಎಂದು ಉತ್ತರಿಸುತ್ತಾರೆ. ಹಾಗಾದರೆ ನಿರ್ದೇಶಕರ ಅಗತ್ಯವೇ ಇಲ್ಲವೆಂದಮೇಲೆ ಎಲ್ಲಾ ರಂಗಾಯಣಗಳನ್ನು ಖಾಯಂ ಆಗಿ ಅಧಿಕಾರಿಗಳೇ ನೋಡಿಕೊಳ್ಳಬಹುದಾಗಿದೆ ಅಲ್ಲವೇ? ‘ನಿರ್ದೇಶಕರಿಗಾಗಿ ಕಾಯದೇ ರಂಗಾಯಣದ ಚಟುವಟಿಕೆಗಳನ್ನು ನೋಡಿಕೊಳ್ಳಿ’ ಎಂದು ಸಂಸ್ಕೃತಿ ಇಲಾಖೆಯ ಸಚಿವರು ಎಲ್ಲಾ ಆಡಳಿತಾಧಿಕಾರಿಗಳಿಗೆ ಸೂಚಿಸಿದ್ದಾರಂತೆ!
ಅಲ್ಲಿಗೆ ಗೊತ್ತಾಯಿತಲ್ಲ ರಂಗಾಯಣ ಅಧಿಕಾರಿಗಳ ಪಾಲು ಎಂದು. ರಂಗಾಯಣ ಎಂದರೆ ಈವೆಂಟ್ ಮ್ಯಾನೇಜ್ಮೆಂಟ್ ಎಂದು ಸಂಸ್ಕೃತಿ ಸಚಿವರು ಭಾವಿಸಿದಂತಿದೆ. ಜಯಂತಿಗಳ ಮಾದರಿಯಲ್ಲಿ ಅಧಿಕಾರಿಗಳ ಮೂಲಕ ನಿಭಾಯಿಸಬಹುದು ಎಂದು ನಿರ್ಧರಿಸಿದಂತಿದೆ. ಆದರೆ ರಂಗ ಸಂಸ್ಥೆ ಮುನ್ನಡೆಸುವುದು, ನಾಟಕಗಳನ್ನು ಕಟ್ಟುವುದು ಎಂದರೆ ಆಡಳಿತ ನಡೆಸಿದಂತಲ್ಲಾ, ಈವೆಂಟ್ ಮ್ಯಾನೇಜ್ಮೆಂಟ್ ಅಂತೂ ಮೊದಲೇ ಅಲ್ಲ. ನಾಟಕದ ಆಯ್ಕೆಯಿಂದ ತೊಡಗಿ ಸೂಕ್ತ ಕಲಾವಿದರು ನಿರ್ದೇಶಕರು ತಂತ್ರಜ್ಞರ ಆಯ್ಕೆಯವರೆಗೂ, ತಾಲಿಂನಿಂದ ಪ್ರದರ್ಶನದವರೆಗೂ ಕ್ರಿಯಾಶೀಲವಾಗಿ ಯೋಚಿಸುವವರು ಬೇಕಾಗುತ್ತದೆ. ಹಾಗೆ ಕಟ್ಟಿದ ನಾಟಕವನ್ನು ರಂಗಾಸಕ್ತರಿಗೆ ಪರಿಣಾಮಕಾರಿಯಾಗಿ ತಲುಪಿಸಬೇಕಾಗುತ್ತದೆ. ಅದನ್ನು ರಂಗಭೂಮಿಯಲ್ಲಿ ಅಪಾರವಾದ ಅನುಭವ ಇರುವವರು ಮಾತ್ರ ಮಾಡಲು ಸಾಧ್ಯ. ಅಂತಹ ಕ್ರಿಯಾಶೀಲ ನಿರ್ದೇಶಕರಿಗಾಗಿ ರಂಗಾಯಣಗಳು ಕಾಯುತ್ತಿವೆ. ಆದರೆ ಸರಕಾರ ಮನಸ್ಸು ಮಾಡುತ್ತಿಲ್ಲ.
ವಾರ್ಷಿಕ ಮುವತ್ತು ಲಕ್ಷ ಅನುದಾನ ಕೊಟ್ಟು ರಂಗಾಯಣ ಎನ್ನುವ ಬಿಳಿಯಾನೆಯನ್ನು ಚೆನ್ನಾಗಿ ಸಾಕಿ ಎಂದು ಹೇಳಿದರೆ ಅಧಿಕಾರಿಗಳಾಗಾದರೂ ಏನು ಮಾಡಲು ಸಾಧ್ಯ? ಈ ಹಣ ಕಲಾವಿದರು ಹಾಗೂ ಸಿಬ್ಬಂದಿಯ ಸಂಬಳಕ್ಕೆ ಹಾಗೂ ಕಚೇರಿ ನಿರ್ವಹಣೆಗೇ ಸಾಲದು. ಇನ್ನು ನಾಟಕಗಳನ್ನು ನಿರ್ಮಿಸುವುದು ಹೇಗೆ? ರಂಗ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸುವುದು ಹೇಗೆ? ರಂಗೋತ್ಸವಗಳನ್ನು ನಡೆಸುವುದು ಹೇಗೆ? ಅಧಿಕಾರಿಗಳಿಗೆ ರಂಗಭೂಮಿ ಕುರಿತ ಆಳವಾದ ಅನುಭವವೂ ಇಲ್ಲ, ಮಹತ್ವಾಂಕಾಕ್ಷೆಗಳಂತೂ ಮೊದಲೇ ಇರುವುದಿಲ್ಲ. ಬೇಕಾದಷ್ಟು ಆರ್ಥಿಕ ನೆರವೂ ಸಿಕ್ಕುವುದಿಲ್ಲ. ಇದ್ದದ್ದರಲ್ಲಿ ಹೇಗೋ ಸಾವರಿಸಿಕೊಂಡು ಸಂತೆ ಹೊತ್ತಿಗೆ ಮೂರು ಮೊಳ ನೇಯ್ದು ಮಾರುವ ಕೆಲಸ ಮಾಡಬಹುದಷ್ಟೇ.
ಕಳೆಗುಂದಿದ ರಂಗಾಯಣಕ್ಕೆ ಮತ್ತೆ ಹೊಳಪು ತರಲು ಮೊದಲು ಎಲ್ಲಾ ರಂಗಾಯಣಗಳಿಗೂ ಅನುಭವೀ ರಂಗಕರ್ಮಿಗಳನ್ನು ನಿರ್ದೇಶಕರನ್ನಾಗಿ ಸರಕಾರ ಕೂಡಲೇ ಆಯ್ಕೆ ಮಾಡಬೇಕಾಗಿದೆ. ಈ ಹಿಂದಿನ ಬಿಜೆಪಿ ಸರಕಾರವು ಕೇಶವಕೃಪಾ ಕಟಾಕ್ಷದವರನ್ನು ನೇರವಾಗಿ ನೇಮಕ ಮಾಡಿ ರಂಗಾಯಣವನ್ನು ಸಂಘದ ಕಾರ್ಯಾಲಯ ಮಾಡಿದಂತೆ ಮಾಡದೇ ರಂಗಸಮಾಜದ ಸಲಹೆ ಸೂಚನೆಯ ಮೇರೆಗೆ ನಿರ್ದೇಶಕರ ಆಯ್ಕೆ ನಡೆಯಬೇಕಿದೆ. ನಿರ್ದೇಶಕರುಗಳ ಆಯ್ಕೆಗೆ ಪೂರ್ವಭಾವಿಯಾಗಿ ರಂಗಸಮಾಜಕ್ಕೆ ರಂಗಾನುಭವಿ ಸದಸ್ಯರುಗಳನ್ನು ಸಂಸ್ಕೃತಿ ಇಲಾಖೆ ಆಯ್ಕೆ ಮಾಡಬೇಕಿದೆ. ರಂಗಸಮಾಜದ ಸದಸ್ಯರುಗಳು ಸಭೆ ಸೇರಿ ಸೂಚಿಸುವ ಅರ್ಹ ಕ್ರಿಯಾಶೀಲ ರಂಗಕರ್ಮಿಗಳ ಪಟ್ಟಿಯಲ್ಲಿ ಅತ್ಯಂತ ಸೂಕ್ತವಾದವರನ್ನು ರಂಗಾಯಣಗಳಿಗೆ ನಿರ್ದೇಶಕರನ್ನಾಗಿ ಸಚಿವಾಲಯವು ನೇಮಕಾತಿ ಮಾಡಬೇಕಿದೆ. ನಾಳೆಯಿಂದಲೇ ಈ ಪ್ರಕ್ರಿಯೆ ಶುರುಮಾಡಿದರೂ ನಿರ್ದೇಶಕರುಗಳ ಅಯ್ಕೆಗೆ ಕನಿಷ್ಟ ಎರಡು ಮೂರು ತಿಂಗಳುಗಳೇ ಬೇಕಾಗಬಹುದು. ಈ ನಿಟ್ಟಿನಲ್ಲಿ ಸಂಸ್ಕೃತಿ ಇಲಾಖೆಯ ಸಚಿವರು ಕಾರ್ಯಪ್ರವೃತ್ತರಾಗಬೇಕಾಗಿದೆ.
ಆದರೆ ಅಧಿಕಾರಿಗಳ ಮೂಲಕ ಸಾಂಸ್ಕೃತಿಕ ಸಂಸ್ಥೆಗಳ ಮೇಲೆ ಹಿಡಿತ ಹೊಂದಲು ಸಂಸ್ಕೃತಿ ಸಚಿವಾಲಯ ನಿರ್ಧರಿಸಿದಂತಿದೆ. ಸುವರ್ಣ ಕರ್ನಾಟಕದ ವಿಶೇಷ ಪ್ರಶಸ್ತಿಗಳಿಗೆ ಸಲಹಾ ಸಮಿತಿಯನ್ನು ನೇಮಿಸುವ ಬದಲಾಗಿ ನೇರವಾಗಿ ಅಧಿಕಾರಿಗಳೇ ಸಾಧಕರ ಹೆಸರನ್ನು ಸೂಚಿಸುವಂತೆ ಇಲಾಖೆಯ ಸಚಿವರು ಪರಮಾನು ಹೊರಡಿಸಿದ್ದಾರೆ. ಯಾವುದೇ ಅಡೆತಡೆ ಇಲ್ಲದೇ ತಮಗೆ ಬೇಕಾದವರಿಗೆ ಪ್ರಶಸ್ತಿ ಕೊಡಲು ಆಯ್ಕೆ ಸಮಿತಿಯ ಬದಲಾಗಿ ಅಧಿಕಾರಿಗಳ ಆಯ್ಕೆಗೆ ಮನ್ನಣೆ ಕೊಡಲಾಗಿದೆ. ಇದೇ ರೀತಿ ರಂಗಾಯಣಗಳ ಪರಿಸ್ಥಿತಿ ಸಹ. ಅಧಿಕಾರಿಗಳ ಮೂಲಕ ರಂಗಾಯಣವನ್ನು ನೇರವಾಗಿ ಸಚಿವಾಲಯ ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದು. ಯಾವುದೇ ಅಧಿಕಾರಿ ಸಚಿವರನ್ನು ಪ್ರಶ್ನಿಸುವ ಮಾತೇ ಇಲ್ಲ. ಅದೇ ಅನುಭವಿ ಹಿರಿಯ ರಂಗಕರ್ಮಿಗಳನ್ನು ರಂಗಾಯಣಗಳಿಗೆ ನಿರ್ದೇಶಕರನ್ನಾಗಿ ನೇಮಿಸಿದ್ದೇ ಆದರೆ ಸಚಿವಾಲಯದ ರಂಗವಿರೋಧಿ ಆದೇಶಗಳನ್ನು ಪ್ರಶ್ನಿಸುತ್ತಾರೆ. ಹೆಚ್ಚುವರಿ ಅನುದಾನಗಳನ್ನು ಕೇಳುತ್ತಾರೆ. ಆಡಳಿತಾಧಿಕಾರಿ ಹಾಗೂ ನಿರ್ದೇಶಕರ ನಡುವೆ ಸಂಘರ್ಷ ನಿರಂತರವಾಗಿರುತ್ತದೆ. ಅದಕ್ಕೆ ನಿರ್ದೇಶಕರು ಯಾಕೆ ಬೇಕು? ಅಧಿಕಾರಿಗಳೇ ಸಾಕು! ಎನ್ನುವ ನಿರ್ಧಾರಕ್ಕೆ ಸಂಸ್ಕೃತಿ ಇಲಾಖೆ ಹಾಗೂ ಸರಕಾರ ಬಂದಂತಿದೆ. ಈ ನಿರ್ಣಯ ಖಂಡಿತವಾಗಿಯೂ ಖಂಡನೀಯ.
ಹೀಗೆ ಸರಕಾರಿ ಅನುದಾನಿತ ಸಾಂಸ್ಕೃತಿಕ ಸಂಸ್ಥೆಗಳನ್ನು ʼಅಧಿಕಾರೀಕರಣʼ ಮಾಡುವ ಹುನ್ನಾರವನ್ನು ಸಾಂಸ್ಕೃತಿಕ ಲೋಕದ ಸಾಹಿತಿ ಕಲಾವಿದರು, ರಂಗಕರ್ಮಿ ತಂತ್ರಜ್ಞರುಗಳು ವಿರೋಧಿಸಲೇಬೇಕಿದೆ. ಆದಷ್ಟು ಬೇಗ ಅಕಾಡೆಮಿ ಪ್ರಾಧಿಕಾರಗಳಿಗೆ ಅಧ್ಯಕ್ಷರನ್ನು ನೇಮಕಾತಿ ಮಾಡಲು ಸರಕಾರವನ್ನು ಒತ್ತಾಯಿಸಬೇಕಿದೆ. ರಂಗಸಮಾಜಕ್ಕೆ ಸದಸ್ಯರುಗಳನ್ನು ಆಯ್ಕೆ ಮಾಡಿ ಆ ಮೂಲಕ ರಂಗಾಯಣಗಳಿಗೆ ನಿರ್ದೇಶಕರನ್ನು ನೇಮಕಾತಿ ಮಾಡಲು ಕ್ರಮ ತೆಗೆದುಕೊಳ್ಳಬೇಕೆಂದು ನೇರವಾಗಿ ಮುಖ್ಯಮಂತ್ರಿಗಳಿಗೆ ಆಗ್ರಹಿಸಬೇಕಿದೆ. ರಂಗಾಯಣಗಳು ಮತ್ತೆ ಮೊದಲಿನಂತೆ ಕ್ರಿಯಾಶೀಲವಾಗಬೇಕಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ರಂಗಭೂಮಿಯ ಹೆಸರನ್ನು ಉಳಿಸಿ ಬೆಳೆಸಬೇಕಿದೆ.
ಶಶಿಕಾಂತ ಯಡಹಳ್ಳಿ
ರಂಗಕರ್ಮಿ
ಇದನ್ನೂ ಓದಿ- http://ರವೀಂದ್ರ ಕಲಾಕ್ಷೇತ್ರದ ಆಧುನೀಕರಣದ ಹಿಂದಿರುವ ಹಕೀಕತ್ತು…https://kannadaplanet.com/the-truth-behind-the-modernization-of-rabindra-kalakshetra/