ದೈವವೆಂದರೆ ಹಾಗೆಯೇ ! ಎಲ್ಲರನ್ನೂ ಪ್ರೀತಿಸುವ, ಪೊರೆಯುವ ಶಕ್ತಿಗಳು. ಹಿಂದೂ, ಮುಸ್ಲಿಂ, ಗಂಡು, ಹೆಣ್ಣು, ಆಜಾನ್, ಗಂಟೆನಾದ ಇವುಗಳ ಮಧ್ಯೆ ದೈವಗಳಿಗೆ ವ್ಯತ್ಯಾಸವೇ ಇರುವುದಿಲ್ಲ. ಹಾಗಾಗಿಯೇ ಕರಾವಳಿಯ ಹಿಂದೂಗಳ ದೈವಾರಾಧನೆಯ ಜೊತೆಗೆ ಬ್ಯಾರಿ ಮುಸ್ಲೀಮರ ಕತೆಗಳು ಇರಲೇಬೇಕು – ನವೀನ್ ಸೂರಿಂಜೆ, ಪತ್ರಕರ್ತರು.
ಕರ್ನಾಟಕದ ಕರಾವಳಿಯ ದೈವರಾಧನೆಗೂ ಬ್ಯಾರಿ ಮುಸ್ಲೀಮರಿಗೂ ಅವಿನಾನುಭವ ಸಂಬಂಧವಿದೆ. ಅನೇಕ ಕ್ರಾಂತಿಕಾರಿ ಮುಸ್ಲೀಮರು ತುಳುನಾಡಿನಲ್ಲಿ ಹಿಂದೂಗಳ ದೈವಗಳಾಗಿ ಆರಾಧನೆಗೊಳ್ಳುತ್ತಿದ್ದಾರೆ. ಇಷ್ಟು ಮಾತ್ರವಲ್ಲದೇ ಕರಾವಳಿಯ ದೈವಾರಾಧನೆಗೂ ರಂಜಾನ್ ಉಪವಾಸಕ್ಕೂ ಸೌಹಾರ್ದ, ಮಾನವೀಯ ಸಂಬಂಧವಿದೆ.
ಜುಮಾದಿ ಕರಾವಳಿಯ ಪ್ರಮುಖ ದೈವ. ಗುತ್ತು ಬರ್ಕೆ, ಅರಸು ಮನೆತನಗಳಲ್ಲಿ, ಊರ ಪ್ರಧಾನ ದೈವವಾಗಿ ಜುಮಾದಿಯನ್ನು ಆರಾಧನೆ ಮಾಡಲಾಗುತ್ತದೆ. ಜುಮಾದಿಯ ವಿಶೇಷವೆಂದರೆ ಹೆಣ್ಣು ಮತ್ತು ಗಂಡಿನ ಸಮ್ಮಿಶ್ರ ರೂಪದ ದೈವವಿದು. ತುಳುನಾಡಿನ ನೆಲದಲ್ಲಿ ಸಮಾನತೆಯನ್ನು ಉಳಿಸಿ ಬೆಳೆಸುತ್ತಿರುವ ದೈವಗಳಲ್ಲಿ ಜುಮಾದಿಯು ಪ್ರಮುಖವಾಗಿದೆ.
ಜುಮಾದಿ ಮತ್ತು ಮುಸ್ಲೀಮರ ನಡುವಿನ ಸಂಬಂಧಕ್ಕೆ ಕರಾವಳಿಯಲ್ಲಿ ಹಲವು ಉದಾಹರಣೆ ಸಿಗುತ್ತದೆ. ಮಂಗಳೂರಿನ ಬೈಲುಪೇಟೆಯ ಜುಮ್ಮಾ ಮಸೀದಿ/ದರ್ಗಾ ಹಾಗೂ ಜುಮಾದಿ ದೈವದ ನಡುವಿನ ಭಾವನಾತ್ಮಕ ಸಂಬಂಧದ ಬಗೆಗೆ ಜನಪದ ಕತೆಯೊಂದು ಚಾಲ್ತಿಯಲ್ಲಿದೆ. ಈ ಕತೆ ಅತಿಮಾನುಷ ಕತೆಯಂತಿದ್ದರೂ ಜುಮ್ಮಾ ಮಸೀದಿಯ ಧರ್ಮಗುರು ಮತ್ತು ಜುಮಾದಿಯ ಪೂಜಾರಿಯ ನಡುವಿನ ಮಾನವೀಯ ಸಂಬಂಧದ ನೆಲೆಯಲ್ಲಿ ಈ ಕತೆಯನ್ನು ನೋಡಬೇಕು.
ಬೈಲು ಪೇಟೆಯಲ್ಲಿ ಜುಮಾದಿ ದೈವದ ದೈವಸ್ಥಾನವಿದೆ. ಜುಮಾದಿ ದೈವದ ದೈವಸ್ಥಾನದ ಚಾಕರಿ ಮಾಡಲು ಪೂಜಾರಿ ಇದ್ದರು. ಅದೇ ಬೈಲುಪೇಟೆಯ ಜುಮ್ಮಾ ಮಸೀದಿಯಲ್ಲಿ ಧರ್ಮ ಗುರುವೊಬ್ಬರಿದ್ದರು. ಜುಮಾ ಮಸೀದಿಯಲ್ಲಿ ಧರ್ಮಗುರು ದಿನಕ್ಕೆ ಐದು ಬಾರಿ ಅಜಾನ್ ಕೂಗಿದರೆ, ಜಮಾದಿಯ ಪೂಜಾರಿ ದಿನಾ ದೈವಕ್ಕೆ ಹೂ ನೀರು ಇಡುತ್ತಿದ್ದರು. ಜುಮಾದಿಯ ಗಂಟೆ ಸದ್ದು ಜುಮ್ಮಾ ಮಸೀದಿಗೂ, ಜುಮ್ಮಾ ಮಸೀದಿಯ ಅಜಾನ್ ಧ್ವನಿ ಜುಮಾದಿ ಗುಡಿಗೂ ನಿತ್ಯ ಕೇಳುತ್ತಿತ್ತು.
ಅದೊಂದು ರಂಜಾನ್ ತಿಂಗಳ ದಿನ. ಜುಮ್ಮಾ ಮಸೀದಿಯ ಧರ್ಮಗುರುಗಳು ಉಪವಾಸದಲ್ಲಿ ಇದ್ದಾರೆ ಎಂಬುದು ಜುಮಾದಿಯ ಪೂಜಾರಿಗೆ ಗೊತ್ತಿತ್ತು. ಉಪವಾಸದ ದಿನ ಅಜಾನ್ ಧ್ವನಿ ಕ್ಷೀಣವಾಗಿರುತ್ತದೆ. ಆದರೆ ಆ ದಿನ ಅಜಾನ್ ಧ್ವನಿ ಇನ್ನಷ್ಟೂ ಕ್ಷೀಣವಾಗಿತ್ತು. ನಿತ್ಯ ಜುಮ್ಮಾ ಮಸೀದಿಯ ಧರ್ಮಗುರುವಿನ ಧ್ವನಿ ಕೇಳುತ್ತಿದ್ದ ಜುಮಾದಿಯ ಪೂಜಾರಿಗೆ ‘ಏನೋ ಯಡವಟ್ಟಾಗಿದೆ. ಜುಮ್ಮಾ ಮಸೀದಿ ಧರ್ಮಗುರುಗಳು ಅನಾರೋಗ್ಯದಲ್ಲಿದ್ದಾರೆಯೇ ?’ ಎಂಬ ಅನುಮಾನ ಮೂಡಿತ್ತು. ಜುಮಾದಿಗೆ ಹೂ ನೀರು ಇಟ್ಟ ಪೂಜಾರಿ ನೇರ ಜುಮ್ಮಾ ಮಸೀದಿಗೆ ತೆರಳಿ ಧರ್ಮಗುರುಗಳ ಆರೋಗ್ಯ ವಿಚಾರಿಸಿದರು. ಜುಮ್ಮಾ ಮಸೀದಿಯ ಧರ್ಮಗುರುಗಳಿಗೆ ಉಪವಾಸ ತೊರೆಯಲು ಆಹಾರವಿಲ್ಲದೇ ನಿತ್ರಾಣ ಆಗಿದ್ದರು ಎಂಬುದು ಜುಮಾದಿಯ ಪೂಜಾರಿಗೆ ತಿಳಿಯುತ್ತದೆ.
ಜುಮಾದಿಯ ಪೂಜಾರಿ ಮಸೀದಿಯಿಂದ ನೇರ ಮರಳಿ ಜುಮಾದಿಯ ಗುಡಿಗೆ ಬರುತ್ತಾರೆ. ಜುಮಾದಿಯ ಮೊಗ(ಮುಖವಾಡ)ಕ್ಕೆ ಚಿನ್ನದಿಂದ ನಾಲಗೆ ಮಾಡಲಾಗಿತ್ತು. ಜುಮಾದಿಯ ಪೂಜಾರಿ ದೈವದ ಮುಖವಾಡದ ಚಿನ್ನದ ನಾಲಗೆಯನ್ನು ಕೊಯ್ದು ಜುಮ್ಮಾ ಮಸೀದಿಯ ಧರ್ಮಗುರುವಿಗೆ ನೀಡುತ್ತಾರೆ. ಈ ಚಿನ್ನವನ್ನು ಮಾರಿ ಆಹಾರ ತಂದು ಉಪವಾಸ ತೊರೆಯಿರಿ ಎಂದು ಜುಮಾದಿಯ ಪೂಜಾರಿ ಹೇಳುತ್ತಾರೆ. ಊರವರು ಬಂದು ನೋಡಿದಾಗ ಜುಮಾದಿ ದೈವದ ಚಿನ್ನದ ನಾಲಗೆ ಕಾಣೆಯಾಗಿರುತ್ತದೆ. ಪೂಜಾರಿಯ ಬಳಿ ವಿಚಾರಿಸಿದರೆ ಪೂಜಾರಿಗೆ ಏನೂ ಗೊತ್ತಿರಲಿಲ್ಲ. ಅಷ್ಟರಲ್ಲಿ ಪೂಜಾರಿಯ ಮೈಮೇಲೆ ಜುಮಾದಿ ದೈವ ಆವಾಹನೆಯಾಗುತ್ತದೆ. ‘ನನ್ನ ಮುಖವಾಡದಲ್ಲಿದ್ದ ಚಿನ್ನದ ನಾಲಗೆಯನ್ನು ನಾನೇ ಕೊಯ್ದು ಜುಮ್ಮಾ ಮಸೀದಿಯ ಧರ್ಮಗುರುಗಳಿಗೆ ನೀಡಿದ್ದೇನೆ. ಅವರು ಉಪವಾಸ ತೊರೆಯಲು ನನ್ನ ಕೊಡುಗೆಯದು’ ಎಂದು ಜುಮಾದಿ ಹೇಳಿತಂತೆ. ಜುಮ್ಮಾ ಮಸೀದಿಯ ಧರ್ಮಗುರುಗಳ ಉಪವಾಸ ವೃತಕ್ಕಾಗಿ ಜುಮಾದಿಯೇ ಪೂಜಾರಿಯ ರೂಪದಲ್ಲಿ ಬಂದಿತ್ತು ಎಂಬುದು ಬೈಲುಪೇಟೆ ಹಿಂದೂ- ಮುಸ್ಲೀಮರು ಈಗಲೂ ನಂಬುತ್ತಾರೆ. ಈಗಲೂ ಮಂಗಳೂರಿನ ಬೈಲು ಪೇಟೆ ಎಂಬಲ್ಲಿ ಜಲಾಲುದ್ದೀನ್ ದರ್ಗಾ/ಜುಮ್ಮಾ ಮಸೀದಿಗೆ ಹಿಂದೂಗಳು ಭೇಟಿ ನೀಡಿ ಹರಕೆ ಹೊತ್ತುಕೊಳ್ಳುತ್ತಾರೆ.
ಕರಾವಳಿಯ ಪ್ರಧಾನ ದೈವವಾಗಿರುವ ಜುಮಾದಿಯ ಮೊದಲು ಆರಾಧನೆಯನ್ನು ಪ್ರಾರಂಭಿಸಿದ್ದೇ ಹಸಲರು, ಪಾಲೆ, ತೋಟಿ, ಆದಿ ಕರ್ನಾಟಕ, ಮನ್ಸರು ಎಂಬ ಹಲವು ಹೆಸರುಗಳಿಂದ ಕರೆಯಲ್ಪಡುವ ‘ಆದಿ ದ್ರಾವಿಡ’ರು!. ಆದಿದ್ರಾವಿಡ ದಲಿತ ಸಮುದಾಯದ ವೀರಪುರುಷರಾದ ಕಾನದ ಕಟದರು ಜುಮಾದಿಯ ಆರಾಧನೆಯನ್ನು ಪ್ರಾರಂಭಿಸಿದರು.
ದಲಿತ ಭೂ ಹೋರಾಟಗಾರರಾಗಿ ದೈವಗಳಾಗಿರುವ ಕಾನದ ಕಟದರ ಪ್ರಕಾರ ಜುಮಾದಿ ಎಂದರೆ ‘ದೊಡ್ಡ ಭೂಮಿ’ ಎಂದರ್ಥ. ಜುಮಾಯಿ ಎಂದರೆ ಭೂಮಿ ರೂಪದ ದೈವ ಎಂದರ್ಥ. ಭೂಮಿ ಹೆಣ್ಣೋ, ಗಂಡೋ, ಪ್ರಾಣಿಯೋ ಎಂದು ಕೇಳಿದರೆ ಹೆಣ್ಣೂ ಅಲ್ಲ, ಗಂಡೂ ಅಲ್ಲ, ಪ್ರಾಣಿಯೂ ಅಲ್ಲ. ಭೂಮಿ ದೈವ ಜುಮಾದಿಯೂ ಹಾಗೆಯೇ. ಹೆಣ್ಣೂ ಅಲ್ಲದ, ಗಂಡೂ ಅಲ್ಲದ, ಪ್ರಾಣಿಯೂ ಅಲ್ಲದ ಆರಾಧಿಸಿದರೆ ತಾಯಿಯಾಗಿಯೂ, ಮಾವನಾಗಿಯೂ, ಪ್ರಾಣಿಯಾಗಿಯೂ ಏಕಕಾಲದಲ್ಲಿ ಪೊರೆವ ‘ಭೂಮಿ’ ಎಂಬ ಪ್ರಕೃತಿ ದೈವವಿದು.
ಪಾಡ್ದನದಲ್ಲಿ ಜುಮಾದಿಯ ವರ್ಣನೆ ಹೀಗಿದೆ :
ಆಲುದ್ದ ತರೆ, ಗೇಣುದ್ದ ಮಿರೆ
ಭೂಮಿದ್ದ ನಾಲಾಯಿ ಬಾಚೊಂದು ಬತ್ತಿನ ಸತ್ಯ
ಬಾಯಿಡ್ ಮಾಸದ ಮುದ್ದೆ
ಸೊಂಟರ್ದ್ ಮಿತ್ತ್ ಪೊಣ್ಣ ರೂಪ
ಸೊಂಟರ್ದ್ ತಿರ್ತು ಆಣ ರೂಪ
ಆಣ್ ಪೊನ್ನ್ ಮೆಚ್ಚುನಾ ರೂಪ
ಜಾಗ ಜಾಗೆಡು ನಾನಾ ಪುದರ್ ಪುರಾಪು
(‘ಒಂದಾಳಿನಷ್ಟು ಉದ್ದ ತಲೆ, ಗೇಣಿನಷ್ಟು ಉದ್ದ ಮೊಲೆ
ಭೂಮಿಯಷ್ಟು ಉದ್ದದ ನಾಲಗೆ ಚಾಚಿಕೊಂಡು ಬಂದಂತಹ ಸತ್ಯ
ಬಾಯಿಯಲ್ಲಿ ಸದಾ ಮಾಂಸದ ಮುದ್ದೆ
ಸೊಂಟದಿಂದ ಮೇಲೆ ಹುಡುಗಿಯ ರೂಪ
ಸೊಂಟದಿಂದ ಕೆಳಗೆ ಗಂಡಿನ ರೂಪ
ಗಂಡು-ಹೆಣ್ಣುಗಳೆಲ್ಲರೂ ಮೆಚ್ಚುವಂತಹ ರೂಪ
ಒಂದೊಂದು ಪ್ರದೇಶದಲ್ಲಿ ಒಂದೊಂದು ಹೆಸರು ಮತ್ತು ಖ್ಯಾತಿ’)
ಕಾನದ ಕಟದರು ಎಂಬ ಆದಿದ್ರಾವಿಡ, ಮನ್ಸ ಸಮುದಾಯದಿಂದ ಆರಂಭವಾದ ಹೆಣ್ಣೂ ಅಲ್ಲದ ಗಂಡೂ ಅಲ್ಲದ, ಪ್ರಾಣಿಯೂ ಅಲ್ಲದ, ಮತ್ತು ಅದೆಲ್ಲವೂ ಹೌದಾದ ಪ್ರಕೃತಿ/ಭೂಮಿಯ ಆರಾಧನೆಯೇ ಜುಮಾದಿ ದೈವದ ಆರಾಧನೆ. ಹೆಣ್ಣೆಂದು ಪೂಜಿಸಿದರೆ ತಾಯಿಯಂತೆಯೂ, ಗಂಡು ದೈವ ಎಂದು ಪೂಜಿಸಿದರೆ ಮಾವನಂತೆಯೂ, ಪ್ರಾಣಿ ದೈವ ಎಂದು ಪೂಜಿಸಿದರೆ ಪ್ರಾಣಿಯಂತೆಯೂ ಜುಮಾದಿ ಪೊರೆಯುತ್ತಾಳೆ/ತ್ತಾನೆ/ತ್ತದೆ ಎಂಬ ನಂಬಿಕೆ ಇದೆ.
ದೈವವೆಂದರೆ ಹಾಗೆಯೇ ! ಎಲ್ಲರನ್ನೂ ಪ್ರೀತಿಸುವ, ಪೊರೆಯುವ ಶಕ್ತಿಗಳು. ಹಿಂದೂ, ಮುಸ್ಲಿಂ, ಗಂಡು, ಹೆಣ್ಣು, ಆಜಾನ್, ಗಂಟೆನಾದ ಇವುಗಳ ಮಧ್ಯೆ ದೈವಗಳಿಗೆ ವ್ಯತ್ಯಾಸವೇ ಇರುವುದಿಲ್ಲ. ಹಾಗಾಗಿಯೇ ಕರಾವಳಿಯ ಹಿಂದೂಗಳ ದೈವಾರಾಧನೆಯ ಜೊತೆಗೆ ಬ್ಯಾರಿ ಮುಸ್ಲೀಮರ ಕತೆಗಳು ಇರಲೇಬೇಕು.
ನವೀನ್ ಸೂರಿಂಜೆ, ಪತ್ರಕರ್ತರು.