ನವಂಬರ್ 1ರಂದು ರಾಜ್ಯೋತ್ಸವದ ಮೆರವಣಿಗೆಗಳಲ್ಲಿ ಭುವನೇಶ್ವರಿಗೆ ಜೈಕಾರ ಹಾಕುವ ಮನಸ್ಸುಗಳ ಸಣ್ಣ ಮೂಲೆಯಲ್ಲಾದರೂ, 9 ವರ್ಷದ ಬಲೂನು ಮಾರುವ ಹುಡುಗಿ ಸುಳಿದು ಹೋದರೆ ಸಾರ್ಥಕವಾದೀತು. ಕನ್ನಡಮ್ಮನ ಕೃಪಾಶೀರ್ವಾದಕ್ಕಾಗಿ ಅಡ್ಡಬೀಳುವ ಲಕ್ಷಾಂತರ ಜನರ ಮನಸ್ಸಿನಾಳದಲ್ಲಿ ಕನ್ನಡ ನಾಡಿನ ಹೆಣ್ಣು ಮಕ್ಕಳ ಬವಣೆ ಮಿಂಚಿನಂತೆ ಸುಳಿದರೂ ಸಾರ್ಥಕವಾದೀತು – ನಾ ದಿವಾಕರ, ಚಿಂತಕರು.
ನವಂಬರ್ 1ರಂದು ರಾಜ್ಯಾದ್ಯಂತ ಆಚರಿಸಲಾಗುವ ಕರ್ನಾಟಕ ರಾಜ್ಯೋತ್ಸವದ ಸಂದರ್ಭವನ್ನು ಆಡಂಬರ, ಉತ್ಸಾಹ ಮತ್ತು ಸಂಭ್ರಮಗಳನ್ನು ಹೊರತುಪಡಿಸಿದರೆ ಹೇಗೆ ನೋಡಬೇಕು ? ಏಕೀಕರಣದ 70ನೆ ವರ್ಷವನ್ನು ಪ್ರವೇಶಿಸುತ್ತಿರುವ ಕನ್ನಡ ನಾಡಿನ ಪ್ರಜ್ಞಾವಂತ ಸಮಾಜದಲ್ಲಿ ಈ ಪ್ರಶ್ನೆ ಈಗಲಾದರೂ ಉದ್ಭವಿಸಬೇಕಿದೆ. ಭಾಷಾ ಇತಿಹಾಸ, ಬೆಳವಣಿಗೆ, ವಿಶಾಲ ಭಾಷಿಕ ವ್ಯಾಪ್ತಿ ಮತ್ತು ಭಾಷಿಕರ ಉನ್ನತಿ ಹಾಗೂ ವರ್ತಮಾನದಲ್ಲಿ ಭಾಷೆಯ ಪ್ರಾಮುಖ್ಯತೆ ಅದನ್ನು ಬೆಳೆಸುತ್ತಿರುವ ವಿಧಾನ ಮತ್ತು ಕನ್ನಡ ಹಾಗೂ ಅನ್ಯ ಭಾಷಿಕರ ಜೀವನೋಪಾಯಗಳ ದೃಷ್ಟಿಯಿಂದ ರಾಜ್ಯೋತ್ಸವ ಒಂದು ಆತ್ಮವಿಮರ್ಶೆಯ ಸಂದರ್ಭವಾಗಬೇಕಿದೆ.
ಭುವನೇಶ್ವರಿಯ ವೈಭವೋಪೇತ ಮೆರವಣಿಗೆ ಅಥವಾ ರಾಜ್ಯೋತ್ಸವ ದಿನದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಗಣ್ಯ ವ್ಯಕ್ತಿಗಳ ಭಾಷಣಗಳು ಒಂದು ದಿನದ ಆಡುಂಬೊಲಗಳಾಗಿ ವಿಸ್ಮೃತಿಗೆ ಜಾರಿಬಿಡುತ್ತವೆ. ಸಭಾ ವೇದಿಕೆಗಳ ಸನ್ಮಾನ, ಪ್ರಶಸ್ತಿ ಮತ್ತು ಉಪನ್ಯಾಸಗಳು ಕ್ಷಣಿಕ ಸಂತೋಷ ನೀಡುವ ಚಟುವಟಿಕೆಗಳಾಗಿ ಬಿಡುತ್ತವೆ. ಈ ಮಧುರ ಕ್ಷಣಗಳನ್ನು ದಾಟಿ ನೋಡಿದಾಗ, ತನ್ನ 70ನೆ ವರ್ಷಕ್ಕೆ ಕಾಲಿಡುತ್ತಿರುವ ಕರ್ನಾಟಕ ಮತ್ತು ಶತಮಾನಗಳ ಪರಂಪರೆ ಇರುವ ಕನ್ನಡ ಭಾಷೆ ತನ್ನ ಮುಂಗಾಣ್ಕೆಯ ಅಂತಿಮ ದಡವನ್ನು (Goal Post) ಮತ್ತಷ್ಟು ತನ್ಮಯತೆಯಿಂದ, ಸೂಕ್ಷ್ಮತೆಯಿಂದ ಗಮನಿಸಬೇಕು ಎನಿಸುತ್ತದೆ.

2025ರ ಸಂದರ್ಭದಲ್ಲಿ ರಾಜ್ಯೋತ್ಸವವನ್ನು ನಾವು , ನಾಡಿಗೆ ಒದಗಿರುವ ಕೆಲವು ದುರ್ಗತಿಗಳ ನಡುವೆ ಇಟ್ಟು ಆಚರಿಸಬೇಕಿದೆ. ನಾಡು ಮತ್ತು ನುಡಿ ಎರಡೂ ಸಹ ಸಮಸ್ತ ಜನತೆಯ ಬದುಕು ಹಾಗೂ ಜೀವನೋದ್ದೇಶಗಳ ನೆಲೆಯಲ್ಲಿ ನಿರ್ವಚಿಸಲ್ಪಡುವುದರಿಂದ, ಈ ದುರ್ಗತಿಗಳನ್ನು, ದುರವಸ್ಥೆಯನ್ನು ಮನಗಾಣದೆ ಅಥವಾ ನಿರ್ಲಕ್ಷಿಸಿ ಮುಂದೆ ಸಾಗುವುದು ಆತ್ಮದ್ರೋಹವಾಗಿಬಿಡುತ್ತದೆ. ಇಲ್ಲಿ ಭುವನೇಶ್ವರಿ ಅಥವಾ ಕನ್ನಡ ಬಾವುಟ ಎರಡೂ ಸಹ ಸಾಂಕೇತಿಕವಾಗಿ, ಸೀಮಿತ ದೃಷ್ಟಿಯಲ್ಲಿ ಮಾತ್ರ ಕಾಣಲು ಸಾಧ್ಯ.
ಕನ್ನಡಿಗರು ಎದುರಿಸುತ್ತಿರುವ ದುರ್ಗತಿಗಳೇನು ?
ಮೊದಲನೆಯದಾಗಿ, ಈ ನಾಡಿನ ಮಣ್ಣಿನಲ್ಲೇ ಕಳೆದ ನಾಲ್ಕು ದಶಕಗಳಲ್ಲಿ ನೂರಾರು ಹೆಣ್ಣು ಜೀವಗಳು ಅಸಹಜವಾಗಿ ಕೊನೆಯಾಗಿವೆ, ಅತ್ಯಾಚಾರ-ದೌರ್ಜನ್ಯಕ್ಕೊಳಗಾಗಿವೆ, ಅನಾಥ ಶವಗಳಾಗಿ ಇಳೆಯ ಗರ್ಭ ಸೇರಿವೆ, ಅಕಾಲಿಕ ಮರಣಕ್ಕೆ ತುತ್ತಾಗಿವೆ, ಹಂತಕರ ಪಾಪಕೃತ್ಯಗಳಿಗೆ ಬಲಿಯಾಗಿವೆ. ಇದಕ್ಕೆ ಕಾರಣ ಯಾರು ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು, ರಾಜ್ಯದ ಮಹಿಳೆಯರು, ಲಿಂಗ ಸೂಕ್ಷ್ಮತೆ ಇರುವ ಒಂದು ಸಮಾಜ “ ಕೊಂದವರು ಯಾರು ??? ” ಎಂದು ಕೂಗುತ್ತಲೇ ಇದೆ. ಆದರೆ ಇದಕ್ಕೆ ಕೇಳಿಬರುತ್ತಿರುವ ಉತ್ತರ ಏನು ? ಮೂಲತಃ ಈ ಪ್ರಶ್ನೆ ಕೇಳಿದವರನ್ನೇ ದೋಷಿಗಳನ್ನಾಗಿ ಮಾಡುವುದೇ ಅಲ್ಲದೆ, ಕನ್ನಡ ಅಸ್ಮಿತೆಯ ಬಗ್ಗೆ ಹೆಮ್ಮೆಯಿಂದ ಬೆನ್ನುತಟ್ಟಿಕೊಳ್ಳುವ ವಿಶಾಲ ಸಮಾಜ ಮತ್ತು ನಾಗರಿಕ ವರ್ಗ ಈ ಪ್ರಶ್ನೆಗೆ ಕಿವುಡಾಗಿದೆ. ಇಲ್ಲಿ ಅಪರಾಧಿಗಳತ್ತ ಬೆಟ್ಟು ಮಾಡಿ ತೋರಿಸುತ್ತಿಲ್ಲ. ಆದರೆ ಈ ಹೆಣ್ಣು ಮಕ್ಕಳ ಅಂತ್ಯಕ್ಕೆ ಯಾರು ಕಾರಣ ಎಂದು ಕೇಳಲಾಗುತ್ತಿದೆ. ರಾಜ್ಯದ ಆಡಳಿತ ವ್ಯವಸ್ಥೆಗೆ, ಕಾನೂನು ಪಾಲಕರಿಗೆ, ಚುನಾಯಿತ ಸರ್ಕಾರ/ಪರಾಜಿತ ವಿರೋಧ ಪಕ್ಷಗಳಿಗೆ ಈ ಪ್ರಶ್ನೆಗಳನ್ನು ಉತ್ತರಿಸುವ ನೈತಿಕ ಉತ್ತರದಾಯಿತ್ವ ಇರಬೇಕಲ್ಲವೇ ? ಹಾಗೆಯೇ ಕನಕ-ಪುರಂದರ-ಬಸವ-ಶಿಶುನಾಳರ ಪರಂಪರೆಯನ್ನು ಬಿಗಿದಪ್ಪಿಕೊಂಡಿರುವ ಅಧ್ಯಾತ್ಮಿಕ ಜಗತ್ತಿಗೆ ಈ ಜವಾಬ್ದಾರಿ ಇರಬೇಕಲ್ಲವೇ? ಹಿಂದೂ, ಕ್ರೈಸ್ತ ಹಾಗೂ ಇಸ್ಲಾಂ ಧರ್ಮಗಳ ಪರಿಚಾರಕರಿಗೆ ಈ ಪ್ರಶ್ನೆಗೆ ದನಿಗೂಡಿಸುವ ನೈತಿಕ ಜವಾಬ್ದಾರಿ ಇರುವಷ್ಟೇ, ಉತ್ತರ ಶೋಧಿಸುವ ಹೊಣೆಗಾರಿಕೆಯೂ ಇರಬೇಕಲ್ಲವೇ ?. ಕನ್ನಡ ಪರ ದನಿಗಳು ಈ ನೊಗವನ್ನು ಮುಂಚೂಣಿಯಲ್ಲಿ ನಿಂತು ಹೊರಬೇಕಿದೆ. ಆದರೆ ಈ ಸ್ಪಂದನೆಯನ್ನು ನಿರೀಕ್ಷಿಸಬಹುದಾದ ಮಟ್ಟದಲ್ಲಿ ಕಾಣಲಾಗುತ್ತಿಲ್ಲ.
ಹೆಣ್ಣು ಕುಲದ ಸಂಕಟಗಳ ನಡುವೆ

ಮತ್ತೊಂದು ದುರ್ಗತಿಯನ್ನು ರಾಜ್ಯದಲ್ಲಿ ವ್ಯಾಪಿಸುತ್ತಿರುವ, ಆಳಕ್ಕೆ ತಲುಪಿರುವ ಹೆಣ್ಣು ಕುಲದ ಮೇಲಿನ ದೌರ್ಜನ್ಯಗಳ ನೆಲೆಯಲ್ಲಿ ನೋಡಬಹುದು. ಮಕ್ಕಳು ನಾಪತ್ತೆಯಾಗುತ್ತಿರುವ ಘಟನೆಗಳು ನಿರಂತರವಾಗಿ ನಡೆಯುತ್ತಿದ್ದು 2020-25ರ ಅವಧಿಯಲ್ಲಿ 4,086 ಬಾಲಕರು, 10,792 ಬಾಲಕಿಯರು ನಾಪತ್ತೆಯಾಗಿದ್ದಾರೆ. ಇವರ ಪೈಕಿ ಕ್ರಮವಾಗಿ 3,753 ಬಾಲಕರು, 9,789 ಬಾಲಕಿಯರನ್ನು ಪತ್ತೆ ಹಚ್ಚಲಾಗಿದೆ. ಸ್ವಚ್ಛ ನಗರಿಯ ಐಹಿಕ ಹಿತವಲಯದಲ್ಲಿರುವ ರಾಜ್ಯದ 74 ಸಾವಿರ ಶಾಲೆಗಳ ಪೈಕಿ 800ಕ್ಕೂ ಹೆಚ್ಚು ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಶೌಚಾಲಯಗಳ ಸೌಲಭ್ಯ ಇಲ್ಲ..
ರಾಜ್ಯದಲ್ಲಿ ಬಾಲ ಗರ್ಭಿಣಿಯರ ಸಂಖ್ಯೆ 2025ರ ಜುಲೈ ವೇಳೆಗೆ 80,813ರಷ್ಟು ದಾಖಲಾಗಿದೆ. ಈ ಪ್ರಕರಣಗಳು ಕೇವಲ ವ್ಯಕ್ತಿ ಸಂಬಂಧಗಳನ್ನಷ್ಟೇ ಸೂಚಿಸುವುದಿಲ್ಲ, ಕಾನೂನು ಬಾಹಿರವಾಗಿ, ನೈಸರ್ಗಿಕ ನಿಯಮಗಳನ್ನೂ ದಾಟಿ, ಹೆಣ್ಣು ಮಕ್ಕಳು ನಿರಂತರ ಶೋಷಣೆ ಮತ್ತು ದಬ್ಬಾಳಿಕೆಗೆ ಒಳಗಾಗುತ್ತಿರುವ ಒಂದು ಸಮಾಜವನ್ನು ಪ್ರತಿಬಿಂಬಿಸುತ್ತದೆ. ಇದನ್ನೂ ಮೀರಿದ ಕರಾಳ ಚಿತ್ರಣ ಮಹಿಳಾ ದೌರ್ಜನ್ಯಗಳಲ್ಲಿ, ಅಪ್ರಾಪ್ತ ಹೆಣ್ಣುಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳಲ್ಲಿ (ಪೋಕ್ಸೋ ಕಾಯ್ದೆ) ಕಾಣುತ್ತದೆ. 2025ರ ಮೊದಲ ಏಳು ತಿಂಗಳಲ್ಲಿ ರಾಜ್ಯದಲ್ಲಿ 2,147 ಪೋಕ್ಸೋ ಪ್ರಕರಣಗಳು ದಾಖಲಾಗಿವೆ. ರಾಜಧಾನಿ ಅಗ್ರಸ್ಥಾನದಲ್ಲಿ, 144 ಮೊಕದ್ದಮೆಗಳನ್ನು ದಾಖಲಿಸಿದೆ.
2023-2025ರ ಅವಧಿಯಲ್ಲಿ ರಾಜ್ಯಾದ್ಯಂತ 43,052 ಮಹಿಳಾ ದೌರ್ಜನ್ಯಗಳ ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ ಪ್ರಧಾನವಾಗಿ ಕಾಣುವುದು ಪೋಕ್ಸೋ ಪ್ರಕರಣಗಳು, ಲೈಂಗಿಕ ಕಿರುಕುಳ/ದೌರ್ಜನ್ಯ ಮತ್ತು ವರದಕ್ಷಿಣೆಯ ಕಿರುಕುಳಗಳು. ಅತ್ಯಾಚಾರ ಪ್ರಕರಣಗಳೇ ಈ ಅವಧಿಯಲ್ಲಿ 1,888 ದಾಖಲಾಗಿವೆ. ಪೋಕ್ಸೋ ಪ್ರಕರಣಗಳ ಸಂಖ್ಯೆ 10,510. ರಾಜ್ಯದ ಹೆಣ್ಣು ಮಕ್ಕಳು ಈ ಪರಿಸ್ಥಿತಿಯನ್ನು ಎದುರಿಸುತ್ತಿರುವುದು, ಏನನ್ನು ಸೂಚಿಸುತ್ತದೆ ? ಇಷ್ಟಕ್ಕೂ ನಾವು ನಾಡದೇವಿಯಾಗಿ ಭುವನೇಶ್ವರಿಯನ್ನು ಪಲ್ಲಕ್ಕಿಯಲ್ಲಿ ಹೊತ್ತು ಮೆರವಣಿಗೆ ಮಾಡುತ್ತೇವೆ. ಧಾರ್ಮಿಕವಾಗಿ ಚಾಮುಂಡೇಶ್ವರಿಯನ್ನು ಆರಾಧಿಸುತ್ತೇವೆ. ಆಧ್ಯಾತ್ಮಿಕವಾಗಿ ಅಕ್ಕನ ಪರಂಪರೆಯನ್ನು ಕೊಂಡಾಡುತ್ತೇವೆ !!!
ಶೈಕ್ಷಣಿಕ ದುರವಸ್ಥೆಯ ನಡುವೆ
ಇನ್ನು ಶೈಕ್ಷಣಿಕ ವಲಯದತ್ತ ಕಣ್ಣು ಹಾಯಿಸಿದಾಗ, ಸಚಿವರ ಘೋಷಣೆಗಳ ಹೊರತಾಗಿ ಮತ್ತಿನ್ನೇನೂ ಆಶಾದಾಯಕವಾಗಿ ಕಾಣುತ್ತಿಲ್ಲ. 2024-25ರ ಶೈಕ್ಷಣಿಕ ವರ್ಷದಲ್ಲಿ ದಾಖಲಾತಿಯೇ ಆಗದ ಶಾಲೆಗಳ ಸಂಖ್ಯೆ 7,993 ರಷ್ಟಿವೆ. ಇಲ್ಲಿ ನೇಮಕವಾಗಿರುವ ಶಿಕ್ಷಕರ ಸಂಖ್ಯೆ 20,817. ಒಬ್ಬರೇ ಶಿಕ್ಷಕರು ಇರುವ ಶಾಲೆಗಳ ಸಂಖ್ಯೆ 1 ಲಕ್ಷ ಇದ್ದರೆ, ಈ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಸಂಖ್ಯೆ 33.76 ಲಕ್ಷದಷ್ಟಿದೆ. ಇದು ಏನನ್ನು ಸೂಚಿಸುತ್ತದೆ ? ಸರ್ಕಾರಗಳಿಗೆ ಶಾಲಾ ಶಿಕ್ಷಣದ ಬಗ್ಗೆ ಕಾಳಜಿಯೇ ಇಲ್ಲದಿರುವುದನ್ನೋ ? ಭಾಷೆ ಮತ್ತು ಭಾಷಿಕರ ಬೌದ್ಧಿಕ-ಭೌತಿಕ ಬೆಳವಣಿಗೆಗೆ ಶಾಲಾ ಶಿಕ್ಷಣವೇ ಅಡಿಪಾಯ ಎಂಬ ಕನಿಷ್ಠ ಪ್ರಜ್ಞೆಯೂ ಸರ್ಕಾರಗಳಿಗೆ ಇಲ್ಲ ಎನ್ನುವುದನ್ನೋ ?

ಬೌದ್ಧಿಕ ನೆಲೆಯಲ್ಲೇ ಕನ್ನಡ ನಾಡು ಎದುರಿಸುತ್ತಿರುವ ದುರ್ಗತಿಯನ್ನು 110 ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಸಾಗುತ್ತಿರುವ ರೀತಿಯಲ್ಲಿ ಗುರುತಿಸಬಹುದು. ಚರಿತ್ರೆಯಲ್ಲೇ ಎರಡನೆ ಸಲ ಪರಿಷತ್ತಿಗೆ ಆಡಳಿತಾಧಿಕಾರಿಯನ್ನು ನೇಮಿಸಿರುವ ದಾಖಲೆಗೆ ಈ ರಾಜ್ಯೋತ್ಸವ ಸಾಕ್ಷಿಯಾಗಿದೆ. ಶತಮಾನಕ್ಕೂ ಮೀರಿದ ಒಂದು ಭಾಷಿಕ ಸಂಸ್ಕೃತಿಯ ಸಂಸ್ಥೆಗೆ ಈವರೆಗೂ ಒಬ್ಬ ಮಹಿಳೆಯನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಸಾಧ್ಯವಾಗದಿರುವುದೇ ಕಸಾಪದ ಕಳಂಕ ಮತ್ತು ದುರಂತ. ಈ ಪುರುಷಾಧಿಪತ್ಯದ ನಡುವೆಯೂ ಹಣಬಲ, ರಾಜಕೀಯ ಒಲವು, ಜಾತಿ ಸಮೀಕರಣಗಳಿಂದ ತನ್ನ ಮೂಲ ಸೆಲೆಯನ್ನೇ ಕಳೆಕೊಂಡಿರುವ ಕಸಾಪ ಈಗ ಅಧ್ಯಕ್ಷರ ಸರ್ವಾಧಿಕಾರದ ಒಂದು ಆಳ್ವಿಕೆಗೂ ಸಾಕ್ಷಿಯಾಗಿದೆ.
ಕಸಾಪ ಕೇವಲ ಅಧಿಕಾರಸ್ಥ ಪೀಠಗಳ ಆಡಳಿತ ಸಂಸ್ಥೆ ಅಲ್ಲ. ಅದು ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆ, ಸಾಹಿತ್ಯ ಹಾಗೂ ಕನ್ನಡಿಗರ ಚರಿತ್ರೆಯನ್ನು ತನ್ನೊಳಗೆ ಇಟ್ಟುಕೊಂಡು ರಾಜ್ಯದ ಭವಿಷ್ಯದ ಮಾರ್ಗವನ್ನು ಮತ್ತಷ್ಟು ಶ್ರೀಮಂತಗೊಳಿಸುವ ಜವಾಬ್ದಾರಿ ಇರುವ ಉನ್ನತ ಸಂಸ್ಥೆ. ಈ ಸಂಸ್ಥೆಯಲ್ಲೂ ಸಹ ರಾಜ್ಯ ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರಿಗೆ ಪ್ರಾತಿನಿಧ್ಯ ನೀಡಲು ಸಾಧ್ಯವಾಗದೆ ಇರುವುದು ದುರಂತ ಅಲ್ಲವೇ. ಒಂದೆಡೆ ಲಿಂಗಾನುಪಾತ ಕುಸಿಯುತ್ತಿರುವ ಆತಂಕದ ನಡುವೆ, ಕನ್ನಡ ಸಾಹಿತ್ಯ ಪರಂಪರೆಯ ಚೌಕಟ್ಟಿನಲ್ಲಿ ಈ ಸಾಮಾಜಿಕ ತರತಮಕ್ಕೆ ಸೂಕ್ತ ಪರಿಹಾರಗಳನ್ನು ಒದಗಿಸಬೇಕಾದ ಭಾಷಿಕ ಸಂಸ್ಥೆಯೊಂದು, ಉಳ್ಳವರ ಅಥವಾ ಬಲಾಢ್ಯ ವ್ಯಕ್ತಿ-ಸಮುದಾಯಗಳ ಆಡುಂಬೊಲವಾಗಿರುವುದು ರಾಜ್ಯಕ್ಕೆ ಒದಗಿರುವ ದುರ್ಗತಿ ಅಲ್ಲದೆ ಮತ್ತೇನು ? ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತ ಆಡಳಿತ ವ್ಯವಸ್ಥೆಗೆ ಅಂಟಿರುವ ಸಾಮಾಜಿಕ ವ್ಯಾಧಿ ಆದರೆ ಸಾಹಿತ್ಯ ಪರಿಷತ್ತಿನಂತಹ ಸಂಸ್ಥೆಗಳು ಇದನ್ನು ಮೀರಿ ನಿಂತು ರಾಜ್ಯಕ್ಕೆ ಮಾದರಿಯಾಗಬೇಕಲ್ಲವೇ ? ಇದೇ ಸಂಸ್ಥೆ ಸರ್ಕಾರಗಳ ಅನುದಾನದೊಂದಿಗೆ ಆಯೋಜಿಸುವ ಸಾಹಿತ್ಯ ಸಮ್ಮೇಳನಗಳಲ್ಲೂ ಇದೇ ಪುರುಷಾಧಿಪತ್ಯವನ್ನು ಕಾಣಬಹುದು.
ಅಂತಿಮವಾಗಿ

ಈ ದುರ್ಗತಿ-ದುರವಸ್ಥೆಗಳ ನಡುವೆ ನಾವು ರಾಜ್ಯೋತ್ಸವ ಆಚರಿಸುತ್ತಿದ್ದೇವೆ. ನವಂಬರ್ 1ರಂದು ರಾಜ್ಯೋತ್ಸವದ ಮೆರವಣಿಗೆಗಳಲ್ಲಿ ಭುವನೇಶ್ವರಿಗೆ ಜೈಕಾರ ಹಾಕುವ ಮನಸ್ಸುಗಳ ಸಣ್ಣ ಮೂಲೆಯಲ್ಲಾದರೂ, 9 ವರ್ಷದ ಬಲೂನು ಮಾರುವ ಹುಡುಗಿ ಸುಳಿದು ಹೋದರೆ ಸಾರ್ಥಕವಾದೀತು. ಹಾಗೆಯೇ ಕನ್ನಡ ಸಾಹಿತ್ಯ ಪರಂಪರೆಯ ಬಗ್ಗೆ ವಿದ್ವತ್ಪೂರ್ಣ ಉಪನ್ಯಾಸ ನೀಡುವ ಪ್ರತಿ ವ್ಯಕ್ತಿಯಲ್ಲೂ ಕಸಾಪದ ದುರ್ಗತಿಯ ನೆನಪು ಮೂಡಿದರೆ ಸಾರ್ಥಕವಾದೀತು. ಕನ್ನಡಮ್ಮನ ಕೃಪಾಶೀರ್ವಾದಕ್ಕಾಗಿ ಅಡ್ಡಬೀಳುವ ಲಕ್ಷಾಂತರ ಜನರ ಮನಸ್ಸಿನಾಳದಲ್ಲಿ ಕನ್ನಡ ನಾಡಿನ ಹೆಣ್ಣು ಮಕ್ಕಳ ಬವಣೆ ಮಿಂಚಿನಂತೆ ಸುಳಿದರೂ ಸಾರ್ಥಕವಾದೀತು. ಕನ್ನಡ ಬೌದ್ಧಿಕ ಪರಂಪರೆ, ಶ್ರೀಮಂತ ಇತಿಹಾಸದ ಬಗ್ಗೆ ಶಾಲಾ ಕಾಲೇಜುಗಳಲ್ಲಿ ಹರಿಯುವ ಉಪನ್ಯಾಸಗಳ ನಡುವೆ, ಕನ್ನಡ ಭಾಷೆ ಮತ್ತು ಶಿಕ್ಷಣಕ್ಕೆ ಒದಗಿರುವ ದುರ್ಗತಿಯು ನೆನಪಾದರೂ ಸಾಕು ಸಾರ್ಥಕವಾದೀತು.
ಈ ಸಾರ್ಥಕತೆಯ ಶೋಧದ ನಡುವೆಯೇ ಆತ್ಮವಿಮರ್ಶೆಯ ನೆಲೆಯಲ್ಲಿ, ಆತ್ಮಾವಲೋಕನ ಮಾಡಿಕೊಳ್ಳುತ್ತಾ, ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸೋಣ.
ಸಮಸ್ತ ನಾಡಿನ ಜನತೆಗೆ ರಾಜ್ಯೋತ್ಸವದ ಶುಭಾಕಾಂಕ್ಷೆಗಳು.
ನಾ. ದಿವಾಕರ
ಚಿಂತಕರು.
ಇದನ್ನೂ ಓದಿ- ಕರ್ನಾಟಕ ರಾಜ್ಯೋತ್ಸವ ವಿಶೇಷ- ಕನ್ನಡ ಕಲಿಸುವ ಪೋಷಕತ್ವ


