ಕರ್ನಾಟಕದ ರಾಜ್ಯಪಾಲರಾದ ಶ್ರೀ ತಾವರ್‌ಚಂದ್ ಗೆಹ್ಲೋಟ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಪ್ರಾಸಿಕ್ಯೂಷನ್ನಿಗೆ ಅನುಮತಿ ಕೊಡುವಾಗ ಸಂವಿಧಾನದ ಮೂಲ ತತ್ವಗಳನ್ನು ಹಾಗೂ ಪ್ರಜಾಪ್ರಭುತ್ವದ ಆಶಯಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿದ್ದಾರೆ ಎಂದು ಆರೋಪಿಸಿ ರಾಜ್ಯಪಾಲರ ವಿರುದ್ಧ ಕಪ್ಪು ಬಟ್ಟೆ ಪ್ರದರ್ಶನ, ಘೇರಾವ್ ಹಾಕಿ ರಾಜ್ಯವ್ಯಾಪಿ ಪ್ರತಿಭಟನೆಗೆ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಕರೆ ನೀಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕೋಮುವಾದಿ ರಾಜಕಾರಣ ಮಾಡುತ್ತಿರುವ ಬಿಜೆಪಿ ಮತ್ತು ಜಾತಿವಾದಿ ರಾಜಕಾರಣ ಮಾಡುತ್ತಿರುವ ಜೆಡಿಎಸ್ ಪಕ್ಷಗಳ ಕಛೇರಿಯನ್ನಾಗಿ ರಾಜಭವನವನ್ನು ಪರಿವರ್ತಿಸಿಕೊಂಡಿದ್ದಾರೆ ಎಂಬುದು ಇಡೀ ದೇಶಕ್ಕೆ ಗೊತ್ತಾಗಿದೆ. ಜನರಿಂದ ಆಯ್ಕೆಯಾದ ಸರ್ಕಾರದ ಮುಖ್ಯಸ್ಥರಾಗಿರುವ ಮುಖ್ಯಮಂತ್ರಿಗಳ ವಿರುದ್ಧ ನಡೆಯುತ್ತಿರುವ ಪಿತೂರಿ-ಷಡ್ಯಂತ್ರಗಳ ಭಾಗವಾಗಿ ರಾಜ್ಯಪಾಲರು ವರ್ತಿಸುತ್ತಿದ್ದಾರೆ. ಆ ಮೂಲಕ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನಕ್ಕೆ ಅಪಮಾನ ಮಾಡುತ್ತಿದ್ದಾರೆ ಎಂದು ಅರೋಪಿಸಿದೆ.
ಕರ್ನಾಟಕ ಲೋಕಾಯುಕ್ತ, ಎಸ್.ಐ.ಟಿ ಮುಂತಾದ ತನಿಖಾ ಸಂಸ್ಥೆಗಳು ಪ್ರಾಥಮಿಕ ತನಿಖೆ ಮಾಡಿ ಪ್ರಾಥಮಿಕ ತನಿಖೆಯಲ್ಲಿ ತಪ್ಪಿತಸ್ಥರು ಎಂದು ಮೇಲ್ನೋಟಕ್ಕೆ ಸಾಬೀತಾದ ಪ್ರಮುಖ ಪ್ರಕರಣಗಳಾದ ಕುಮಾರಸ್ವಾಮಿಯವರ ಗಣಿ ಹಗರಣ, ಶಶಿಕಲಾ ಜೊಲ್ಲೆಯವರ ಮೊಟ್ಟೆ ಹಗರಣ, ಜನಾರ್ಧನ ರೆಡ್ಡಿಯವರ ಭೀಕರ ಆಸ್ತಿ ಗಳಿಕೆ, ನಿರಾಣಿಯವರ ಭ್ರಷ್ಟಾಚಾರಗಳ ಕುರಿತು ಪ್ರಾಸಿಕ್ಯೂಷನ್ನಿಗೆ ಅನುಮತಿ ಕೊಡಿ ಎಂದು ರಾಜಭವನಕ್ಕೆ ಕೋರಿಕೆ ಸಲ್ಲಿಸಿ ವರ್ಷಗಳಾದರೂ ಈ ರಾಜ್ಯಪಾಲರು ಆ ಕೋರಿಕೆಗಳನ್ನು ಕಸದ ಬುಟ್ಟಿಗೆ ಎಸೆದು ಪಕ್ಷಪಾತ ಮಾಡಿದ್ದಾರೆ. ಇದುವರೆಗೆ ಒಬ್ಬರ ಮೇಲೂ ವಿಚಾರಣೆಗೆ ಅನುಮತಿ ನೀಡಿಲ್ಲ ಎಂದು ಹೇಳಿದೆ.
ರಾಜ್ಯಪಾಲರ ನೋಟಿಸ್ ಕುರಿತು ಸಚಿವ ಸಂಪುಟ ಚರ್ಚೆ ಮಾಡಿ ನೋಟೀಸನ್ನು ಕೂಡಲೆ ವಿತ್ ಡ್ರಾ ಮಾಡುವಂತೆ ನಿರ್ಣಯ ಮಾಡಿ ರಾಜಭವನಕ್ಕೆ ಕಳುಹಿಸಿ ಕೊಟ್ಟಿದ್ದಾರೆ. ಮುಖ್ಯಮಂತ್ರಿಗಳು ಸಹ ದೀರ್ಘವಾದ ಪ್ರತಿಕ್ರಿಯೆಯನ್ನು ಕಳುಹಿಸಿ ಕೊಟ್ಟಿದ್ದಾರೆ. ಇದ್ಯಾವುದನ್ನೂ ಪರಿಗಣಿಸದ ಈ ರಾಜ್ಯಪಾಲರು ರಾಜ್ಯದ ಜನನಾಯಕರಾದ ಶ್ರೀಯುತ ಸಿದ್ದರಾಮಯ್ಯನವರಿಗೆ ಕಿರುಕುಳ ನೀಡಬೇಕು ಎಂದು ತೀರ್ಮಾನಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಇತ್ತೀಚೆಗೆ ಹೈ-ಕೋರ್ಟಿನ ನ್ಯಾಯಾಧೀಶರು ಮುಖ್ಯಮಂತ್ರಿಗಳು ತಪ್ಪು ಮಾಡಿದ್ದಾರಾ? ಯಾವುದಾದರೂ ದಾಖಲೆಗಳು ಇವೆಯಾ ಎಂದು ಕೇಳಿದರೆ ವಿರೋಧಿಗಳ ಬಳಿ ಉತ್ತರವೆ ಇರಲಿಲ್ಲ. ಪಿತೂರಿ ಮಾಡಿದ್ದಾರೆ ಎಂದರು. ಯಾವ ಪಿತೂರಿ ಎಂಬ ಕುರಿತು ಯಾವುದೇ ಮಾತಿಲ್ಲ. ಈ ಪ್ರಕರಣದಲ್ಲಿ ಮುಖ್ಯಮಂತ್ರಿಗಳ ಪಾತ್ರವಿದೆಯಾ? ಮುಡಾದ ಒಟ್ಟು 150 ನಿವೇಶನಗಳಲ್ಲಿ 14 ನಿವೇಶನಗಳು ಶ್ರೀ ಮತಿ ಪಾರ್ವತಿ ಸಿದ್ದರಾಮಯ್ಯ ಅವರಿಗೆ ಹಂಚಿಕೆ ಆಗಿವೆ. ಉಳಿಕೆ ನಿವೇಶನಗಳು ಯಾರಿಗೆ ಹಂಚಿಕೆ ಆಗಿವೆ? ಅವುಗಳ ಬಗ್ಗೆ ಮಾಹಿತಿ ಇದೆಯಾ? ಎಂದು ನ್ಯಾಯಾಲಯ ಕೇಳಿದ ಪ್ರಶ್ನೆಗೆ ಎದುರುದಾರರ ಬಳಿ ಉತ್ತರವಿಲ್ಲ. ಉಚ್ಚ ನ್ಯಾಯಾಲಯವು ನೀಡಿರುವ ಮಧ್ಯಂತರ ತೀರ್ಪಿನಲ್ಲಿ ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಷನ್‌ಗೆ ಅನುಮತಿಯು “Impugned sanction” ಎಂದು ನಮೂದಿಸಲಾಗಿದೆ. ಅಷ್ಟರ ಮಟ್ಟಿಗೆ ರಾಜ್ಯಪಾಲರಿಗೆ ಮುಖಭಂಗವಾಗಿದೆ. ರಾಜ್ಯಪಾಲರು ಮಾಡಿರುವ ಎಡವಟ್ಟಿನಿಂದಾಗಿ ನ್ಯಾಯಾಲಯದ ಸಮಯ, ಹಣ ಎಲ್ಲವೂ ವ್ಯಯವಾಗುತ್ತಿದೆ. ಸದರಿ ರಾಜ್ಯಪಾಲರ ನಿರಂತರವಾಗಿ ಕರ್ನಾಟಕದ ವಿರೋಧಿಯಾಗಿ ವರ್ತಿಸುತ್ತಾ ಬರುತ್ತಿದ್ದಾರೆ. ರಾಜ್ಯ ಸರ್ಕಾರದ 11 ಮಸೂದೆಗಳನ್ನು ಅನುಮೋದನೆ ನೀಡದೆ ಇತ್ತಿಚೆಗೆ ವಾಪಸು ಕಳಿಸಿದ್ದಾರೆ. ಜನತೆ ಆಯ್ಕೆ ಮಾಡಿರುವ ಸರ್ಕಾರವನ್ನು ಅಸ್ಥಿರಗೊಳಿಸಲು ಇವರು ಷಡ್ಯಂತರ ಮಾಡುತ್ತಿರುವಂತಿದೆ ಎಂದು ಕಿಡಿಕಾರಿದೆ.
ಸಂವಿಧಾನ ಮತ್ತು ಒಕ್ಕೂಟ ತತ್ವದ ವಿರೋಧಿಯಾದ ರಾಜ್ಯಪಾಲರನ್ನು ಮೋದಿ ಸರ್ಕಾರ ಕೂಡಲೆ ವಾಪಸ್ಸು ಕರೆಸಿಕೊಳ್ಳಬೇಕು. ಶ್ರೀ ಸಿದ್ದರಾಮಯ್ಯರವರ ಪ್ರಾಸಿಕ್ಯೂಷನ್ ಅನುಮತಿ ಹಿಂಪಡೆಯಬೇಕು. ಪ್ರಜಾಪ್ರಭುತ್ವ, ಒಕ್ಕೂಟದ ವ್ಯವಸ್ಥೆ ಮತ್ತು ರಾಜ್ಯ ಸರ್ಕಾರದ ಸಾರ್ವಭೌಮತೆಯನ್ನು ಸಂರಕ್ಷಿಸಬೇಕು. ಕನ್ನಡ ನಾಡಿನ ಘನತೆಯನ್ನು ಕಾಪಾಡಬೇಕೆಂದು ಆಗ್ರಹಿಸಿ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ನಡೆಯುತ್ತಿರುವ ಪಿತೂರಿಯ ಭಾಗವಾಗಿರುವ ರಾಜ್ಯಪಾಲರು ರಾಜ್ಯದ ಯಾವುದೇ ವಿಶ್ವವಿದ್ಯಾಲಯಗಳ ಘಟಿಕೋತ್ಸವ ಅಥವಾ ಇನ್ನಿತರ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ. ಹಾಗಾಗಿ ರಾಜ್ಯಪಾಲ ತೊಲಗಿಸಿ, ಕರ್ನಾಟಕ ಸಂರಕ್ಷಿಸಿ” ಆಂದೋಲನಕ್ಕೆ ಕರೆ ನೀಡುತ್ತಿದ್ದೇವೆ. ಕಪ್ಪುಬಟ್ಟೆ ಪ್ರದರ್ಶನ ಚಳುವಳಿ, ಘೇರಾವ್ ಆಂದೋಲನಕ್ಕೆ ಕರೆ ಕೊಡುತ್ತಿದ್ದೇವೆ. ಈ ಪ್ರತಿಭಟನಾ ಕಾರ್ಯಕ್ರಮದಲ್ಲಿ ನಾಡಿನ ಪ್ರಜ್ಞಾವಂತರು, ಪ್ರಗತಿಪರರು, ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯಗಳ ಬಂಧುಗಳು, ವಿದ್ಯಾರ್ಥಿ ಮಿತ್ರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದು ಕೋರಿದ್ದಾರೆ.