ನವದೆಹಲಿ: ರಾಜ್ಯಸಭೆಯಲ್ಲಿ ವಕ್ಫ್ ಮಸೂದೆ ಕುರಿತು ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಯ್ಯದ್ ನಾಸಿರ್ ಹುಸೇನ್ ಹಾಗೂ ಬಿಜೆಪಿ ರಾಜ್ಯ ಉಸ್ತುವಾರಿ ರಾಧಾಮೋಹನ್‌ದಾಸ್ ಅಗರವಾಲ್ ನಡುವೆ ಜಟಾಪಟಿ ನಡೆಯಿತು.
ಮಸೂದೆಯ ಚರ್ಚೆಯಲ್ಲಿ ಪಾಲ್ಗೊಂಡ ಅಗರವಾಲ್, ನಾಸಿರ್ ಅವರು ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ಸಂದರ್ಭದಲ್ಲಿ ಕರ್ನಾಟಕದ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆಗಳನ್ನು ಕೂಗಲಾಗಿತ್ತು. ಆದರೆ, ಆರೋಪಿಗಳನ್ನು ಇದುವರೆಗೂ ಬಂಧಿಸಿಲ್ಲ. ಈ ಘೋಷಣೆಗಳನ್ನು ವಿರೋಧಿಸಿದ ಬಿಜೆಪಿ ಕಾರ್ಯಕರ್ತರನ್ನು ಜೈಲಿಗೆ ಕಳುಹಿಸಲಾಗಿತ್ತು ಎಂದು ಆರೋಪಿಸಿದರು. ಈ ಹೇಳಿಕೆಗೆ ನಾಸಿರ್ ಹುಸೇನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಕಾಂಗ್ರೆಸ್‌ನ ಪ್ರಮೋದ್ ತಿವಾರಿ ಅವರು ರಾಜ್ಯಸಭಾ ನಿಯಮಗಳನ್ನು ಉಲ್ಲೇಖಿಸಿ ಸದನದ ಘನತೆ ಕುಗ್ಗಿಸುವ ಇಂತಹ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಪಡಿಸಿದರು.
ಅಗರವಾಲ್ ಬೆಂಬಲಕ್ಕೆ ನಿಂತ ಗೃಹ ಸಚಿವ ಅಮಿತ್ ಶಾ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಹುಸೇನ್ ವಿರುದ್ಧ ಅಗರವಾಲ್ ಆರೋಪ ಮಾಡಿಲ್ಲ. ಬೇರೆ ಯಾರೋ ಘೋಷಣೆ ಕೂಗಿದ್ದಾರೆ ಎಂದರು.
ನಾಸಿರ್ ಅವರು ಪ್ರತಿಕ್ರಿಯೆ ನೀಡಲು ಮುಂದಾದಾಗ ಸಭಾಪತಿಗಳು ವಕ್ಫ್ ಮಸೂದೆ ಬಗ್ಗೆ ನೀವು ಈಗಾಗಲೇ ಸಾಕಷ್ಟು ಮಾತನಾಡಿದ್ದೀರಿ. ಮತ್ತೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದರು.
ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮಧ್ಯಪ್ರವೇಶಿಸಿ, ಅಗರವಾಲ್ ಮಾಡಿರುವ ಆರೋಪಗಳಿಗೆ ವಿವರಣೆ ನೀಡಲು ಹುಸೇನ್ ಅವರಿಗೆ 30 ಸೆಕೆಂಡುಗಳ ಕಾಲಾವಕಾಶ ನೀಡಬೇಕು ಎಂದು ಒತ್ತಾಯಿಸಿದರು. ಹುಸೇನ್ ಅವರಿಗೆ ಈ ಹಿಂದೆಯೇ ಅವಕಾಶ ನೀಡಲಾಗಿತ್ತು. ಅವರ ಮಾತುಗಳನ್ನು ಎಲ್ಲರೂ ಕೇಳಿದ್ದೇವೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು. ಈ ಹೇಳಿಕೆಗೆ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.