ಮೇಲ್ಮನೆ ಸದಸ್ಯ ರಾಜೇಂದ್ರ ಕೊಲೆಗೆ ಸಂಚು: ಮುಖ್ಯ ಆರೋಪಿ ಸೋಮ, ಅಮಿತ್‌ ಪೊಲೀಸರಿಗೆ ಶರಣು

Most read

ತುಮಕೂರು: ಸಹಕಾರ ಸಚಿವ ಕೆ.ಎನ್.ರಾಜಣ್ಣ ಪುತ್ರ ಹಾಗೂ ವಿಧಾನ ಪರಿಷತ್‌ ಸದಸ್ಯ ಆರ್‌.ರಾಜೇಂದ್ರ ಕೊಲೆಗೆ ಸಂಚು ರೂಪಿಸಿದ ಪ್ರಕರಣದ ಪ್ರಮುಖ ಆರೋಪಿ, ರೌಡಿಶೀಟರ್‌ ಸೋಮ, ಎ–3 ಅಮಿತ್ ಕ್ಯಾತ್ಸಂದ್ರ ಠಾಣೆ ಪೊಲೀಸರಿಗೆ ಶರಣಾಗಿದ್ದಾರೆ.

ಕೊಲೆ ಸಂಚಿನ ವಿಷಯ ಹೊರ ಬಂದ ನಂತರ ಈತ ತಲೆ ಮರೆಸಿಕೊಂಡಿದ್ದ. ಪ್ರಕರಣದ ತನಿಖೆಗೆ ರಚಿಸಿದ ವಿಶೇಷ ತಂಡ ಆರೋಪಿಗಳಾದ ಭರತ್‌, ಯತೀಶ್‌, ಪುಷ್ಪಾ ಮತ್ತು ಯಶೋದ ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿತ್ತು. ಇದೀಗ ಸೋಮ, ಅಮಿತ್ ಕ್ಯಾತ್ಸಂದ್ರ ಠಾಣೆ ಪೊಲೀಸರ ಮುಂದೆ ಶರಣಾಗಿದ್ದಾರೆ.

ಪ್ರಮುಖ ಆರೋಪಿ ಸೋಮನಿಗೆ ರೂ. 5 ಲಕ್ಷ ಹಣ ವರ್ಗಾವಣೆ ಮಾಡಿದ ಆರೋಪದ ಮೇಲೆ ಮನು ಎಂಬಾತನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ಆರ್.ರಾಜೇಂದ್ರ ಅವರು, ನನ್ನನ್ನು ಕೊಲೆ ಮಾಡಲು ರೂ. 70 ಲಕ್ಷಕ್ಕೆ ಸುಪಾರಿ ನೀಡಲಾಗಿದೆ. ಮುಂಗಡವಾಗಿ ರೂ. 5 ಲಕ್ಷ ಕೊಡಲಾಗಿದೆ. ಈ ಬಗ್ಗೆ ಆಡಿಯೊ ಲಭ್ಯವಾಗಿದ್ದು, ಪರಿಶೀಲಿಸಿ ತನಿಖೆ ನಡೆಸಬೇಕು ಎಂದು ಕೋರಿ ಮಾರ್ಚ್‌ 29ರಂದು ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಸೋಮ, ಭರತ್, ಅಮಿತ್, ಗುಂಡಾ, ಯತೀಶ್ ಮತ್ತಿತರರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

More articles

Latest article