ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮತ್ತೆ ಮುಂಗಾರು ಮಳೆಯ ಆರ್ಭಟ ಮುಂದುವರಿದಿದ್ದು, ಹಾರಂಗಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. 3 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರು ಹರಿದುಬರುತ್ತಿದೆ.
ಪ್ರಸ್ತುತ ಹಾರಂಗಿ ಜಲಾಶಯದಲ್ಲಿ 5.8 ಟಿಎಂಸಿ ನೀರು ಸಂಗ್ರಹವಾಗಿದೆ. ಇನ್ನೂ ಸುಮಾರು 8 ಅಡಿ ನೀರು ಸಂಗ್ರಹವಾದರೆ ಜಲಾಶಯ ಸಂಪೂರ್ಣ ಭರ್ತಿಯಾಗಲಿದೆ.
ಕಳೆದ ಮೂರು ದಿನಗಳಿಂದ ಜಿಲ್ಲೆಯಾದ್ಯಂತ ಎಡೆಬಿಡದೆ ಧಾರಾಕಾರ ಮಳೆ ಸುರಿಯುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಭಾಗಮಂಡಲ ಹಾಗೂ ಬ್ರಹ್ಮಗಿರಿ ತಪ್ಪಲಿನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಕಾವೇರಿ ನದಿಯಲ್ಲಿ ನೀರಿನ ಮಟ್ಟ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಪರಿಣಾಮವಾಗಿ ಪವಿತ್ರ ತ್ರಿವೇಣಿ ಸಂಗಮ ಹಾಗೂ ಸಮೀಪದ ಉದ್ಯಾನವನ ಈ ಋತುವಿನಲ್ಲಿ ಮೂರನೇ ಬಾರಿಗೆ ಸಂಪೂರ್ಣ ಮುಳುಗಡೆಯಾಗಿದೆ.
ಜಿಲ್ಲೆಯ ವಿವಿಧೆಡೆ ಸುರಿಯುತ್ತಿರುವ ಮಳೆಯಿಂದ ಕಾಫಿ, ಮೆಣಸು ಸೇರಿದಂತೆ ಹಲವು ಬೆಳೆಗಳ ಮೇಲೆ ಪರಿಣಾಮ ಬೀರುವ ಆತಂಕ ರೈತರಲ್ಲಿ ಮೂಡಿದೆ. ಕಾಫಿ ತೋಟಗಳಲ್ಲಿ ಹೂವು ಹಾಗೂ ಕಾಯಿಗಳು ಉದುರುವ ಸಾಧ್ಯತೆ ಇದ್ದು, ನಿರಂತರ ಮಳೆಯಿಂದ ಬೆಳೆಗಾರರು ಚಿಂತೆಗೆ ಒಳಗಾಗಿದ್ದಾರೆ.
ಮಳೆಯ ಆರ್ಭಟ ಮುಂದುವರಿದಿರುವುದರಿಂದ ನದಿ ಪಾತ್ರದ ಜನರು ಹಾಗೂ ಪ್ರವಾಸಿಗರು ಮುನ್ನೆಚ್ಚರಿಕೆ ವಹಿಸುವಂತೆ ಸ್ಥಳೀಯ ಆಡಳಿತ ಸೂಚಿಸಿದೆ.

