ಬೆಂಗಳೂರಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಎಂದಿನಂತೆ ರಸ್ತೆಗಳು ಜಲಾವೃತವಾಗಿದ್ದು ವಾಹನ ಸವಾರರು ಪರದಾಡುತ್ತಿದ್ದಾರೆ. ಬೆಂಗಳೂರು ಸೇರಿದಂತೆ 12 ಜಿಲ್ಲೆಗಳಲ್ಲಿ ಇಂದು ಮತ್ತೆ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದಕ್ಷಿಣ ಕನ್ನಡ, ವಿಜಯಪುರ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ. ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು,ಕೋಲಾರ, ಕೊಡಗು. ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ. ಮುಂದಿನ 3 ಗಂಟೆಗಳಲ್ಲಿ ಬೆಂಗಳೂರು ಸೇರಿ 12 ಜಿಲ್ಲೆಗಳಲ್ಲಿ ಭಾರಿ ಮ
ಇಂದು ಮಧ್ಯಾಹ್ನ ಆರಂಭವಾದ ಮಳೆಗೆ ವಿವಿಧ ಪ್ರದೇಶಗಳಲ್ಲಿ ಬೃಹತ್ ಮರಗಳು ಧರೆಗುರುಳಿವೆ. ಇದರಿಂದಲೂ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ವರುಣನ ಆರ್ಭಟಕ್ಕೆ ಬೆಂಗಳೂರು ನಲುಗಿ ಹೋಗಿದೆ.
ಬನ್ನೇರುಘಟ್ಟ, ಬಿಟಿಎಂ ಲೇಔಟ್, ಎಚ್ ಎಸ್ ಆರ್ ಲೇಔಟ್, ಬೊಮ್ಮನಹಳ್ಳಿ, ಸಿಲ್ಕ್ ಬೋರ್ಡ್, ಎಲೆಕ್ಟ್ರಾನಿಕ್ಸ್ ಸಿಟಿ, ಜೆಪಿ ನಗರ ಸೇರಿದಂತೆ ನಗರದಾದ್ಯಂತ ಭಾರೀ ಮಳೆಯಾಗುತ್ತಿದೆ. ರಸ್ತೆ, ಫೂಟ್ ಪಾತ್, ಚರಂಡಿ ಮೋರಿ ಯಾವುದೂ ಸ್ಪಷ್ಟವಾಗಿ ಕಾಣಿಸದೆ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ನೀರು ಮುಂದಕ್ಕೆ ಹರಿಯಲಾಗದೇ ಅಲ್ಲಲ್ಲಿ ನಿಂತಿದೆ. ಯಲಚೇನಹಳ್ಳಿ, ಎಂ ಜಿ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಸದಾಶಿವ ನಗರ, ಹೆಬ್ಬಾಳದಲ್ಲಿ ಭಾರೀ ಮಳೆಯೂ ಸುರಿಯುತ್ತಿದೆ ಮತ್ತು ಟ್ರಾಫಿಕ್ ಜಾಮ್ ಆಗಿದ್ದು, ವಾಹನ ಸವಾರರು ಮಳೆಯಲ್ಲೇ ನಿಲ್ಲುವಂತಾಗಿದೆ.
ಕೇಂದ್ರೀಯ ಅಪಾರ್ಟ್ ಮೆಂಟ್ ಗೆ ಡಿಕೆಶಿ ಭೇಟಿ: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಂದು ಜಲಾವೃತವಾಗಿದ್ದ ಯಲಹಂಕದ ಕೇಂದ್ರೀಯ ಅಪಾರ್ಟ್ ಮೆಂಟ್ ಗೆ ಭೇಟಿ ನೀಡಿ ಮಳೆಯಿಂದ ಆಗಿರುವ ಅನಾಹುತವನ್ನು ಪರಿಶೀಲಿಸಿದರು.
ಯಲಹಂಕ ಭಾಗದಲ್ಲಿ ಅಪಾರ ಮಳೆಯಾಗಿದೆ. 120 ವರ್ಷಗಳಲ್ಲಿ ಇಂತಹ ಮಳೆಯೇ ಆಗಿರಲಿಲ್ಲ. ಕೇಂದ್ರೀಯ ಅಪಾರ್ಟ್ ಮೆಂಟ್ ನಲ್ಲಿ 603 ಪ್ಲ್ಯಾಟ್ ಗಳಿವೆ. ವಿದ್ಯುತ್ ಸಂಪರ್ಕ ಇಲ್ಲದಿದದ್ದರೂ ಕೆಲವರು ಪ್ಲ್ಯಾಟ್ ನಲ್ಲೇ ಉಳಿದಿದ್ದಾರೆ. ಎಲ್ಲರೂ ಪ್ಲ್ಯಾಟ್ ನಿಂದ ಹೊರಗೆ ಬರುವಂತೆ ಹೇಳಲಾಗಿದೆ. ಒತ್ತಾಯಪೂರ್ವಕವಾಗಿ ಪ್ಲ್ಯಾಟ್ ಖಾಲಿ ಮಾಡಿಸಬೇಕು ಎಂದು ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಈ ಅಪಾರ್ಟ್ ಮೆಂಟ್ ಗೆ ನೀರು ಮತ್ತು ವಿದ್ಯುತ್ ಸಂಪರ್ಕ ಇಲ್ಲ. ಇಲ್ಲಿನ ನಿವಾಸಿಗಳ ಪ್ರಾಣ ರಕ್ಷಣೆ ಮಾಡಬೇಕಿದೆ. ಕೆಲವರು ಪ್ಲ್ಯಾಟ್ ನಿಂದ ಹೊರಗಡೆ ಬರುತ್ತಿಲ್ಲ. ಬಲವಂತವಾಗಿಯಾದ್ರೂ ಹೊರಗೆ ಕರೆತರಲು ಸೂಚನೆ ನೀಡಲಾಗಿದೆ ಎಂದರು.
ಯಾವುದೇ ರೀತಿಯ ಸೆಂಟಿಮೆಂಟ್ ಗೆ ಅವಕಾಶ ಇಲ್ಲ. ಜೀವ ಹೋದರೆ ಯಾರು ಹೊಣೆ ಎಂದು ಪ್ರಶ್ನಿಸಿದ ಶಿವಕುಮಾರ್ ಉಳಿದುಕೊಳ್ಳಲು ಒಂದು ವಾರ ಬೇರೆ ವ್ಯವಸ್ಥೆ ಮಾಡಲು ಸೂಚನೆ ನೀಡಿದ್ದೇನೆ ಎಂದರು.