Thursday, December 12, 2024

ಸ್ತನ ಕ್ಯಾನ್ಸರ್‌ ಜಾಗೃತಿ ಮಾಸ; ಸ್ತನಗಳನ್ನು ಕಿತ್ತಲೆ ಹಣ್ಣುಗಳಿಗೆ ಹೋಲಿಸಿದ ಜಾಹೀರಾತಿಗೆ ವ್ಯಾಪಕ ಟೀಕೆ

Most read

ಇತ್ತೀಚಿನ ವರ್ಷಗಳಲ್ಲಿ ಸ್ತನ ಕ್ಯಾನ್ಸರ್‌ ಹೆಚ್ಚುತ್ತಿದ್ದು ಮಹಿಳೆಯರಲ್ಲಿ ಆತಂಕವನ್ನುಂಟು ಮಾಡುತ್ತಿದೆ. ಈ ಭಯಾನಕ ಕ್ಯಾನ್ಸರ್ ವಿರುದ್ಧ ಜಾಗೃತಿ ಮೂಡಿಸಲು ವೈದ್ಯರು ಮತ್ತು ಸ್ವಯಂ ಸೇವಾಸಂಸ್ಥೆಗಳು ಪ್ರಯತ್ನ ಪಡುತ್ತಲೇ ಇವೆ. ದೆಹಲಿ ಮೆಟ್ರೋ ರೈಲುಗಳಲ್ಲಿ ಪ್ರದರ್ಶಿಸಿರುವ ಸ್ತನ ಕ್ಯಾನ್ಸರ್‌ ಜಾಹೀರಾತೊಂದು ವ್ಯಾಪಕ ಚರ್ಚೆಗೆ ಗ್ರಾಸವೊದಗಿಸಿದೆ. ಇಷ್ಟಕ್ಕೂ ಈ ಜಾಹೀರಾತಿನ ಪ್ರಾಯೋಜಕರು ಖ್ಯಾತ ಕ್ರಿಕೆಟ್‌ ಆಟಗಾರ ಯುವರಾಜ್‌ ಸಿಂಗ್‌ ಎನ್ನುವುದು ಮತ್ತೊಂದು ವಿಶೇಷ.

ಈ ಜಾಹೀರಾತು ಹೇಗಿದೆ ಎಂದರೆ; ಹಿರಿಯ ಮಹಿಳಾ ವ್ಯಾಪಾರಿಯೊಬ್ಬರು ಬಸ್‌ ನಲ್ಲಿ ಕಿತ್ತಲೆ ಹಣ್ಣುಗಳ ಬುಟ್ಟಿಯನ್ನು ಹಿಡಿದುಕೊಂಡು ಕುಳಿತಿರುತ್ತಾರೆ. ಪಕ್ಕದಲ್ಲಿ ನಿಂತಿದ್ದ ಮತ್ತೊಬ್ಬ ಮಹಿಳಾ ಪ್ರಯಾಣಿಕರು ಕೈನಲ್ಲಿ ಎರಡು ಕಿತ್ತಲೆ ಹಣ್ಣುಗಳನ್ನು ಹಿಡಿದು ಕೊಂಡಿರುತ್ತಾರೆ. ಈ ಚಿತ್ರಕ್ಕೆ, ನಿಮ್ಮ ಕಿತ್ತಲೆ ಹಣ್ಣುಗಳನ್ನು ಪ್ರತಿ ತಿಂಗಳು ಪರೀಕ್ಷಿಸಿಕೊಳ್ಳಿ. ಸ್ತನ ಕ್ಯಾನ್ಸರ್‌ ಅನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿದ್ದರೆ ವ್ಯಕ್ತಿಯ ಜೀವ ಉಳಿಯುತ್ತದೆ. ಸ್ತನ ಕ್ಯಾನ್ಸರ್‌ ಅರಿವಿನ ಮಾಸ ಎಂದು ಶೀರ್ಷಿಕೆ ನೀಡಲಾಗಿದೆ. ಈ ಜಾಹೀರಾತು ಇದೀಗ ವ್ಯಾಪಕ ಟೀಕೆಗೆ ಗುರಿಯಾಗಿದೆ.

ಈ ಜಾಹೀರಾತನ್ನು ಯುವರಾಜ್‌ ಸಿಂಗ್‌ ಅವರು YOUWE CAN ಹೆಸರಿನಲ್ಲಿ ನೀಡಿದ್ದಾರೆ. ದೆಹಲಿ ಮೆಟ್ರೊ ರೈಲುಗಳಲ್ಲಿ ಈ ಜಾಹೀರಾತನ್ನು ಪ್ರದರ್ಶಿಸಲಾಗಿದೆ.

ಈ ಜಾಹೀರಾತು ಸಾಕಷ್ಟು ಟ್ರೋಲ್‌ ಗೆ ಒಳಗಾಗಿದ್ದು, ಚರ್ಚೆಗೂ ಕಾರಣವಾಗಿದೆ. ಸ್ತನಗಳನ್ನು ಸ್ತನಗಳು ಎಂದು ಕರೆಯಲಾಗದಿದ್ದರೆ ಸ್ತನ ಕ್ಯಾನ್ಸರ್‌ ವಿರುದ್ಧ ಹೋರಾಟ ನಡೆಸಲು ಸಾಧ್ಯವೇ ಎಂದು ಅನೇಕ ನೆಟ್ಟಿಗರು ಪ್ರಶ್ನಿಸಿದ್ದಾರೆ. ನಿಮ್ಮ ಕಿತ್ತಲೆ ಹಣ್ಣುಗಳನ್ನು ಪರೀಕ್ಷಿಸಿಕೊಳ್ಳಿ ಎಂದರೆ ಏನರ್ಥ? ಈ ಜಾಹೀರಾತಿಗೆ ಅನುಮತಿ ನೀಡಿದವರು ಯಾರು? ಇದೊಂದು ನಾಚಿಕೆಗೇಡಿನ ಸಂಗತಿ ಎಂದು ತರಾಟೆಗೆ ತೆಗೆದು ಕೊಂಡಿದ್ದಾರೆ. ಈ ಜಾಹೀರಾತನ್ನು ಹಿಂಪಡೆಯಬೇಕೆಂದು ದೆಹಲಿ ಮೆಟ್ರೋಗೆ ಟ್ಯಾಗ್‌ ಮಾಡಿದ್ದಾರೆ.

ಹೌದು ನಾನು ಕಳೆದ ವಾರ ಕಿತ್ತಲೆ ಹಣ್ಣುಗಳನ್ನು ಕೊಂಡುಕೊಳ್ಳುವಾಗ ಪರೀಕ್ಷಿಸಿಯೇ ಕೊಂಡು ಕೊಂಡಿದ್ದೇನೆ. ನೇರವಾಗಿ ಹೇಳಲು ತೊಂದರೆ ಏನು? ನಿಮ್ಮ ಸ್ತನಗಳನ್ನು ಪರೀಕ್ಷಿಸಿಕೊಳ್ಳಿ ಎಂದು ನೇರವಾಗಿ ಹೇಳಿದರೆ ಆಗುವ ತಪ್ಪಾದರೂ ಏನು ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. ಸ್ತನವನ್ನು ಸ್ತನ ಎಂದು ಬರೆಯಲು ಹಿಂಜರಿದರೆ ಭಾರತವು ಹೇಗೆ ಸ್ತನ ಕ್ಯಾನ್ಸರ್‌ ಕುರಿತು ಜನರಲ್ಲಿ ಜಾಗೃತಿ ಮೂಡಿಸಬಲ್ಲದು ಎಂದು ಮತ್ತೊಬ್ಬರು ಕೇಳಿದ್ದಾರೆ.

ಖ್ಯಾತ ಮೂತ್ರರೋಗ ತಜ್ಞ ಡಾ, ಜೈಶನ್‌ ಫಿಲಿಪ್‌ ಅವರೂ ಜಾಹೀರಾತು ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನನ್ನ ತಾಯಿ ಸ್ತನ ಕ್ಯಾನ್ಸರ್‌ ನಿಂದ ಮೃತಪಟ್ಟರು. ಅವರ ಪ್ರೀತಿಯ ಮಗನಾದ ನನ್ನ ಬಳಿಯೂ ಅವರು ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳಲಿಲ್ಲ. ಆದ್ದರಿಂದ ಸ್ತನಗಳನ್ನು ಲೈಂಗಿಕತೆಯ ಭಾಗವಾಗಿ ನೋಡಬೇಡಿ. ಇಡೀ ಜಗತ್ತಿನಲ್ಲಿ ಇದೊಂದು ಸಾಮಾನ್ಯವಾದ ಕ್ಯಾನ್ಸರ್.‌ ಈ ತಿಂಗಳನ್ನು ನಾವು ಸ್ತನ ಅರಿವಿನ ಮಾಸ ಎಂದು ಆಚರಿಸುತ್ತಿದ್ದೇವೆ. ಸ್ತನಗಳು ಎಂದು ಕರೆಯುವುದು ತಪ್ಪೂ ಅಲ್ಲ, ಅಪರಾಧವೂ ಅಲ್ಲ ಎಂದು ಅವರು ಎಕ್ಸ್‌ ನಲ್ಲಿ ಬರೆದುಕೊಂಡಿದ್ದಾರೆ.

ಸಂಪ್ರದಾಯಗಳನ್ನು ವಿಪರೀತವಾಗಿ ಆಚರಿಸುವ ಭಾರತದಂತಹ ದೇಶದಲ್ಲಿ ಸಾಂಸ್ಕೃತಿಕ ಮತ್ತು ಸಾಮಾಜಿಕವಾಗಿ ಕೆಲವು ಕಟ್ಟುಪಾಡುಗಳನ್ನು ಆಚರಿಸಲಾಗುತ್ತಿದೆ. ಸ್ತನ ಕ್ಯಾನ್ಸರ್‌ ಕುರಿತು ಪೋಷಕರು ಅಥವಾ ಮಕ್ಕಳ ಬಳಿ ಚರ್ಚೆ ಮಾಡುವಂತಹ ವಾತಾವರಣ ಇನ್ನೂ ಮೂಡಿಲ್ಲ.ವೈದ್ಯರ ಬಳಿಯೂ ಹೇಳಿಕೊಳ್ಳಲು ಮುಜುಗರ ಪಡುವಂತಹ ಸನ್ನಿವೇಶವಿದೆ. ಆರಂಭಿಕ ಹಂತದಲ್ಲಿಯೇ ಪರೀಕ್ಷೆ ಮಾಡಿಸಿಕೊಂಡರೆ ಸ್ತನ ಕ್ಯಾನ್ಸರ್‌ ನಿಂದ ಮುಕ್ತರಾಗುವ ಅವಕಾಶಗಳಿವೆ. ಎಲ್ಲ ರೋಗಗಳಂತೆ ಸ್ತನ ಕ್ಯಾನ್ಸರ್‌ ಕೂಡಾ ಗುಣವಾಗಬಲ್ಲದು ಎಂದು ವೈದ್ಯರು ಸಲಹೆ ನೀಡುತ್ತಾರೆ.

More articles

Latest article