ಬೆಂಗಳೂರು: ಕರ್ನಾಟಕ ರಕ್ಷಣಾ ವೇದಿಕೆಯ ಆಗ್ರಹಕ್ಕೆ ಮಣಿದು, ಪದೋನ್ನತಿ ಸೇರಿದಂತೆ ಎಲ್ಲ ರೈಲ್ವೇ ಪರೀಕ್ಷೆಗಳನ್ನು ಕನ್ನಡ ಭಾಷೆಯಲ್ಲಿ ಬರೆಯಲು ನೈಋತ್ಯ ರೈಲ್ವೆ ವಲಯ ಅವಕಾಶ ನೀಡಿದೆ.
ಇಂದು ಬೆಳಗ್ಗೆ ಕರವೇ ಅಧ್ಯಕ್ಷ ಟಿ.ಎ.ನಾರಾಯಣ ಗೌಡ ಅವರ ನೇತೃತ್ವದ ನಿಯೋಗ ನೈಋತ್ಯ ರೈಲ್ವೆ ವಲಯದ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡದಿದ್ದರೆ ಹೋರಾಟ ಮಾಡುವ ಎಚ್ಚರಿಕೆ ನೀಡಿತ್ತು. ಈ ಆಗ್ರಹಕ್ಕೆ ಮಣಿದ ಅಧಿಕಾರಿಗಳು ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಿದ್ದಾರೆ ಎಂದು ಕರವೇ ಅಧ್ಯಕ್ಷ ಟಿ.ಎ.ನಾರಾಯಣ ಗೌಡ ತಿಳಿಸಿದ್ದಾರೆ. ಈ ಆದೇಶ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದೂ ಹೇಳಿದ್ದಾರೆ.
ಬೆಂಗಳೂರಿನ ನೈಋತ್ಯ ರೈಲ್ವೆ ವಿಭಾಗದ (South Western Railway – Bengaluru Division) ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ರೈಲ್ವೆ ಪದೋನ್ನತಿ ಪರೀಕ್ಷೆಗಳಲ್ಲಿ (ಗೂಡ್ಸ್ ಟ್ರೈನ್ ಮ್ಯಾನೇಜರ್ – Goods Train Manager – GTEM ನೋಟಿಫಿಕೇಶನ್ ಸೇರಿದಂತೆ) ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆಯುವ ಅವಕಾಶ ನೀಡುವಂತೆ ಆಗ್ರಹಪತ್ರ ಸಲ್ಲಿಸಲಾಗಿತ್ತು.
ನೈಋತ್ಯ ರೈಲ್ವೆಯ ಬೆಂಗಳೂರು, ಹುಬ್ಬಳ್ಳಿ, ಮೈಸೂರು ವಿಭಾಗಗಳಲ್ಲಿ ಹೊರಡಿಸಲಾದ ಅಧಿಸೂಚನೆಗಳಲ್ಲಿ ಬೆಂಗಳೂರು ವಿಭಾಗದಲ್ಲಿ ಮಾತ್ರ ಕನ್ನಡವನ್ನು ಕಡೆಗಣಿಸಿ ಹಿಂದಿ-ಇಂಗ್ಲಿಷ್ ಮಾಧ್ಯಮಗಳಲ್ಲಿ ಮಾತ್ರ ಪರೀಕ್ಷೆ ನಡೆಸುವ ಉದ್ದೇಶ ಕರ್ನಾಟಕದ ರಾಜಧಾನಿಯಾದ ಬೆಂಗಳೂರನ್ನು ಕರ್ನಾಟಕಕ್ಕೆ ಸೇರದಂತೆ ಮಾಡುವ, ಕನ್ನಡಿಗರ ಹಕ್ಕುಗಳನ್ನು ದಮನ ಮಾಡುವ ದೊಡ್ಡ ಅನ್ಯಾಯವಾಗಿತ್ತು. ಇದು ರೈಲ್ವೆ ಇಲಾಖೆಯ ಮಾಸ್ಟರ್ ಸರ್ಕ್ಯುಲರ್ (MC) ೩೧ (೧೯-೧೨-೨೦೧೯) ಆದೇಶವನ್ನು ಉಲ್ಲಂಘಿಸುತ್ತದೆ. ಈ ಮಾಸ್ಟರ್ ಸರ್ಕ್ಯುಲರ್ ಹೊರಬರಲು ಪ್ರಮುಖ ಕಾರಣವೇ ಕರ್ನಾಟಕ ರಕ್ಷಣಾ ವೇದಿಕೆಯ ದಶಕಗಳ ಕಾಲದ ಹೋರಾಟ. ಆದರೂ ಇದನ್ನು ಉಲ್ಲಂಘಿಸಿ ಕನ್ನಡಿಗರ ಹಕ್ಕುಗಳನ್ನು ದಮನಿಸುವ ಕಾರ್ಯ ಮಾಡಲಾಗಿತ್ತು.
ನಮ್ಮ ಆಗ್ರಹಕ್ಕೆ ಸ್ಪಂದಿಸಿ, ರೈಲ್ವೆ ಇಲಾಖೆಯ ಅಧಿಕಾರಿಗಳು (ನೈಋತ್ಯ ರೈಲ್ವೆಯ DRM, PCPO ಮತ್ತು ಇತರ ಹಿರಿಯ ಅಧಿಕಾರಿಗಳು) ತಕ್ಷಣ ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆಯುವ ಅವಕಾಶ ನೀಡಿದ್ದಾರೆ. ಬೆಂಗಳೂರು ವಿಭಾಗದ ಕನ್ನಡಿಗ ರೈಲ್ವೆಯ ಉದ್ಯೋಗಿಗಳಿಗೆ ಇದು ದೊಡ್ಡ ಗೆಲುವಾಗಿದೆ. ಮನವಿಗೆ ಸ್ಪಂದಿಸಿದ ಇಲಾಖೆಯ ಅಧಿಕಾರಿಗಳಿಗೆ ಧನ್ಯವಾದಗಳನ್ನೂ ಅವರು ತಿಳಿಸಿದ್ದಾರೆ.
ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಸಂಸದರಾದ ಪಿ.ಸಿ.ಮೋಹನ್ ಮತ್ತು ತೇಜಸ್ವಿ ಸೂರ್ಯ ಅವರೊಂದಿಗೆ ಈ ವಿಷಯ ಕುರಿತು ಚರ್ಚಿಸಲಾಗಿತ್ತು. ಸಮಸ್ಯೆ ಬಗೆಹರಿಸಲು ಅವರೂ ಸಹಕಾರ ನೀಡಿದ್ದಾರೆ ಎಂದು ನಾರಾಯಣಗೌಡ ಅವರು ಹೇಳಿದ್ದಾರೆ.

