ಕನ್ನಡದಲ್ಲಿ ರೈಲ್ವೇ ಇಲಾಖೆ ಪರೀಕ್ಷೆ: ಕರವೇ ಅಧ್ಯಕ್ಷ ನಾರಾಯಣಗೌಡರ ಪರಿಶ್ರಮವೂ ಕಾರಣ ಎಂದ ಸಚಿವ ವಿ.ಸೋಮಣ್ಣ

Most read

ಬೆಂಗಳೂರು: ರೈಲ್ವೇ ಇಲಾಖೆಯ ಪರೀಕ್ಷೆಗಳನ್ನು ಕನ್ನಡ ಭಾಷೆಯಲ್ಲಿ ಬರೆಯಲು ಅವಕಾಶ ಕಲ್ಪಿಸುವಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಅವರ ಪಾತ್ರವೂ ಇದೆ ಎಂದು ಕೇಂದ್ರ ರೈಲ್ವೇ ಇಲಾಖೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.

ಬೆಂಗಳೂರಿನ ಅರರಮನೆ ಮೈದಾನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದ್ಲಲಿ ಇಂದು ನಡೆದ “ಹೆಸರಾಯಿತು ಕರ್ನಾಟಕ 50 ರ ಸಂಭ್ರಮ” ಮತ್ತು ಪ್ರತಿಜ್ಞಾ ಸ್ವೀಕಾರ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ರೈಲ್ವೇ ಇಲಾಖೆಯ ನೇಮಕಾತಿಗಳಿಗೆ ಕೇವಲ ಹಿಂದಿ ಭಾಷೆಯಲ್ಲಿ ಮಾತ್ರ ಪರೀಕ್ಷೆಗಳು ನಡೆಯುತ್ತಿದ್ದವು. ಇದರಿಂದ ಕನ್ನಡ ಮಕ್ಕಳಿಗೆ ಅನಾನುಕೂಲ ಆಗುತ್ತಿತ್ತು. ನಾನು ಅಧಿಕಾರ ಸ್ವೀಕರಿಸಿದ ಮೇಲೆ ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲೂ ಪರೀಕ್ಷೆ ಬರೆಯಲು ಆದೇಶ ಮಾಡಲಾಗಿದೆ. ಈ ಅವಕಾಶಕ್ಕೆ ಭಾರತ ಸರಕಾರದಷ್ಟೇ ಪ್ರಯತ್ನ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಅವರೂ ಶ್ರಮವೂ ಇದೆ ಎನ್ನುವುದನ್ನು ಮರೆಯಬಾರದು. ಗೌಡರ ಸತತ ಹೋರಾಟ ನಿರಂತರ ಶ್ರಮದ ಫಲವಾಗಿ ಕನ್ನಡಿಗರಿಗೆ ಈ ಅವಕಾಶ ಸಿಕ್ಕಿದೆ ಎಂದರು. ನಾಲ್ಕು ತಿಂಗಳಲ್ಲಿ ರೈಲ್ವೇ ಇಲಾಖೆಯ 60 ಸಾವಿರ ಹುದ್ದೆಗಳ ಭರ್ತಿ ಮಾಡಲಾಗುವುದು. ಈ ಪರೀಕ್ಷೆಗಳಲ್ಲಿ ಶೇ. 20-25 ರಷ್ಟು ಕನ್ನಡಿಗರು ಆಯ್ಕೆಯಾದರೆ ನನ್ನ ಮತ್ತು ನಾರಾಯಣ ಗೌಡರ ಶ್ರಮ ಸಾರ್ಥಕವಾಗುತ್ತದೆ ಎಂದು ಸಚಿವರು ಹೇಳಿದರು.

ಕನ್ನಡ, ಕರ್ನಾಟಕಕ್ಕಾಗಿ ಗೌಡರು ಮೂರು ದಶಕಗಳ ಕಾಲ ಹೋರಾಟ ಮಾಡುತ್ತಲೇ ಬಂದಿದ್ದಾರೆ. ಅವರ ಹೋರಾಟದ ಫಲವಾಗಿ ಅನೇಕ ಸವಲತ್ತುಗಳು ಕನ್ನಡಿಗರಿಗೆ ದಕ್ಕಿವೆ. ಅವರ ಅನೇಕ ಯೋಜನೆಗಳು ಮತ್ತು ಕನಸುಗಳು ಯಶಸ್ಸು ಕಂಡಿವೆ. ಗೌಡರು ಕನ್ನಡ ಚಳವಳಿ ನಾಯಕರಾಗಿ ಕನ್ನಡ ಕನ್ನಡಿಗರಿಗಾಗಿ ಸ್ಪಂದಿಸುತ್ತಲೇ ಬಂದಿದ್ದಾರೆ. ನಿಜಕ್ಕೂ ನಾರಾಯಣಗೌಡ ಅವರು ಕನ್ನಡಿಗರ ಆಸ್ತಿ ಎಂದರೆ ತಪ್ಪಾಗಲಾರದು ಎಂದು ಹೃದಯ ತುಂಬಿ ಹೇಳಿದರು.

ಪ್ರಧಾನಿ ಮೋದಿ ಅವರ ಸರ್ಕಾರ ಸದಾ ರಕ್ಷಣಾ ವೇದಿಕೆ ಮತ್ತು ಗೌಡರ ಜತೆ ಇರುತ್ತದೆ. ಅವರ ದೂರದೃಷ್ಟಿ ಮತ್ತು ಚಿಂತನೆಗಳ ಸಾಕಾರಕ್ಕೆ ನಮ್ಮ ಸರ್ಕಾರ ಯಾವತ್ತೂ ಸ್ಪಂದಿಸುತ್ತದೆ ಎಂದು ಸಚಿವ ಸೋಮಣ್ಣ ಫೋಷಿಸಿದರು.
ಗೌಡರ ಪರಿಶ್ರಮದ ಹಿಂದೆ ಅವರ ಶ್ರೀಮತಿಯವರ ಕೊಡುಗೆ ಇದೆ ಎನ್ನುವುದನ್ನು ಮರೆಯುವಂತಿಲ್ಲ. ತಾಯಿ ಭುನೇಶ್ವರಿ ಆಶೀರ್ವಾದ ಅವರ ಮೇಲಿರುತ್ತದೆ. ನನ್ನ ಮತ್ತು ಗೌಡರ ಸಂಬಂಧ ಸೋದರ ಸಂಬಂಧವಾಗಿದೆ. ಭೈರವೈಕ್ಯ ಬಾಲಗಂಗಾಧರನಾಥ ಸ್ವಾಮೀಜಿ ಅವರು ನಮ್ಮಿಬ್ಬರನ್ನು ಬೆಸೆದಿದ್ದರು. ಅಂದಿನಿಂದ ಇಂದಿನವರೆಗೂ ಅದೇ ಬಾಂಧವ್ಯವನ್ನು ಉಳಿಸಿಕೊಂಡು ಬಂದಿದ್ದೇವೆ. ನಾನು ಇಲ್ಲಿಗೆ ಸಚಿವನಾಗಿ ಬಂದಿಲ್ಲ, ಗೌಡರ ಸೋದರನಾಗಿ ಬಂದಿದ್ದೇನೆ ಎಂದರು.

ಇದೇ ಸಂದರ್ಭದಲ್ಲಿ ರೈಲ್ವೆ ಇಲಾಖೆಯ ವಿವಿಧ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ಕಲ್ಪಿಸಿರುವ ರೈಲ್ವೆ ಸಚಿವ ವಿ.ಸೋಮಣ್ಣ ಅವರಿಗೆ ವಿಶೇಷ ಅಭಿನಂದನೆಯನ್ನು ಸಲ್ಲಿಸಲಾಯಿತು.

ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಡಂಬಳ-ಗದಗದ ಜಗದ್ಗುರು ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಚಿತ್ರದುರ್ಗ ಬೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹಾಗು ಗೌರಿಗದ್ದೆಯ ಸ್ವರ್ಣ ಪೀಠಿಕಾಪುರದ ಶ್ರೀ ವಿನಯ್ ಗುರೂಜಿಯವರು ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ. ಆರ್.ಕೆ.ನಲ್ಲೂರು ಪ್ರಸಾದ್ ಮುಖ್ಯ ಭಾಷಣ ಮಾಡಿದರು. ಸಮಾರಂಬದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

More articles

Latest article