ವಯನಾಡ್ ನಲ್ಲಿ ರಾಹುಲ್‌, ಪ್ರಿಯಾಂಕಾ: ʻತಂದೆ ಸತ್ತಾಗ ಆದ ನೋವೇ ಈಗಲೂ ಆಗುತ್ತಿದೆ’

Most read

ವಯನಾಡ್ (ಕೇರಳ): ಭೀಕರ ಭೂಕುಸಿತದಿಂದಾಗಿ ವಯನಾಡ್‌ ನಲ್ಲಿ ಸತ್ತವರ ಸಂಖ್ಯೆ 277ಕ್ಕೆ ಏರಿದ್ದು, ಲೋಕಸಭೆ ವಿರೋಧಪಕ್ಷದ ನಾಯಕ ರಾಹುಲ್‌ ಗಾಂಧಿ ಮತ್ತು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ದುರ್ಘಟನೆ ಸಂಭವಿಸಿದ್ದ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ವಯನಾಡ್‌ ನ ಸೇಂಟ್‌ ಜೋಸೆಫ್‌ ಶಾಲೆಯ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿದ ಉಭಯ ನಾಯಕರು ದುರ್ಘಟನೆಯಲ್ಲಿ ಬದುಕುಳಿದವರನ್ನು ಭೇಟಿಯಾಗಿ ಸಾಂತ್ವನ ಹೇಳಿದರು.

ಸಂತ್ರಸ್ಥರನ್ನು ಭೇಟಿಯಾದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪ್ರಿಯಾಂಕ ಗಾಂಧಿ ವಾದ್ರಾ, ನಾವು ಇಡೀ ದಿನ ದುರಂತದಿಂದ ಕಂಗೆಟ್ಟಿರುವ ಜನರೊಂದಿಗೆ ಮಾತುಕತೆ ನಡೆಸಿದ್ದೇವೆ. ಇದೊಂದು ಭಯಾನಕ ದುರಂತ. ಈ ಜನರ ನೋವನ್ನು ನಾವು ಕಲ್ಪನೆ ಮಾಡಿಕೊಳ್ಳಬಹುದಷ್ಟೆ. ನಾವು ಇವರಿಗೆ ಸಹಾಯ ನೀಡಲು ಬಂದಿದ್ದೇವೆ. ವಿಶೇಷವಾಗಿ ದುರಂತದಲ್ಲಿ ಅಪ್ಪ, ಅಮ್ಮಂದಿರನ್ನು ಕಳೆದುಕೊಂಡಿರುವ ಮಕ್ಕಳ ಭವಿಷ್ಯಕ್ಕೆ ಏನು ಮಾಡಬಹುದು ಎಂಬುದರ ಕುರಿತು ನಾಳೆ ನಾವೆಲ್ಲ ಕುಳಿತು ಚರ್ಚಿಸಿ ಒಂದು ತೀರ್ಮಾನಕ್ಕೆ ಬರಲಿದ್ದೇವೆ ಎಂದರು.

ವಯನಾಡ ಭೂಕುಸಿತದ ಕುರಿತು ಪ್ರತಿಕ್ರಿಯಿಸಿದ ರಾಹುಲ್‌ ಗಾಂಧಿ, ನನ್ನ ತಂದೆ ತೀರಿಕೊಂಡಾಗ ಆದ ನೋವೇ ಈಗಲೂ ಆಗುತ್ತಿದೆ. ಈ ಜನರು ಕೇವಲ ತಮ್ಮ ಅಪ್ಪಂದಿರನ್ನು ಕಳೆದುಕೊಂಡಿಲ್ಲ, ಇಡೀ ಕುಟುಂಬಗಳನ್ನೇ ಕಳೆದುಕೊಂಡಿದ್ದಾರೆ. ಇವರನ್ನು ನಾವು ಪ್ರೀತಿ ಮತ್ತು ಗೌರವದಿಂದ ನಡೆಸಿಕೊಳ್ಳಬೇಕಾಗಿದೆ. ಇಡೀ ದೇಶದ ಗಮನ ಈಗ ವಯನಾಡ್‌ ಮೇಲಿದೆ ಎಂದು ಹೇಳಿದರು.

ಈ ನಡುವೆ ವಯನಾಡ್ ನ ಮೆಪ್ಪಡಿ ಬಳಿ ನಡೆದ ಸರಣಿ ಭೂಕುಸಿತ ದುರಂತದಲ್ಲಿ ಗಾಯಗೊಂಡವರ ಸಂಖ್ಯೆ 200ಕ್ಕೆ ಏರಿದ್ದು, ಮಣ್ಣಿನಲ್ಲಿ ಹೂತು ಹೋಗಿರಬಹುದಾದ ಮೃತದೇಹಗಳನ್ನು ಹುಡುಕು ಕಾರ್ಯಾಚರಣೆ ಮುಂದುವರೆದಿದೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್‌, ಕನಿಷ್ಠ 240 ಮಂದಿ ಕಣ್ಮರೆಯಾಗಿದ್ದಾರೆ, 1500 ಮಂದಿಯನ್ನು ರಕ್ಷಿಸಲಾಗಿದೆ ಎಂದು ಹೇಳಿದ್ದಾರೆ. ವಯನಾಡ್‌ ನ ಎಪಿಜೆ ಅಬ್ದುಲ್‌ ಕಲಾಮ್‌ ಸ್ಮಾರಕ ಆಸ್ಪತ್ರೆಯಲ್ಲಿ ಸರ್ವ ಪಕ್ಷ ಸಭೆ ನಡೆಸಿದ ಅವರು, ಪರಿಹಾರ ಕಾರ್ಯಾಚರಣೆ ಸಂದರ್ಭದ ಸವಾಲುಗಳ ಕುರಿತು ವಿವರಿಸಿದರು.

More articles

Latest article