ನೀಟ್-ಯುಜಿ ವೈದ್ಯಕೀಯ ಪ್ರವೇಶದ ವಿಚಾರವಾಗಿ ಭಾನುವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘ನೀಟ್ ಪರೀಕ್ಷಾ ಅಕ್ರಮಗಳು ಮೋದಿ ಮತ್ತೆ ಪ್ರಧಾನಿ ಆಗುವ ಮೊದಲೇ 24 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಆಶಯಗಳನ್ನು ಧ್ವಂಸಗೊಳಿಸಿವೆ’ ಎಂದು ಆರೋಪಿಸಿದ್ದಾರೆ.
ಅಲ್ಲದೆ, ‘ನಾನು ಸಂಸತ್ತಿನಲ್ಲಿ ನಿಮ್ಮ ಧ್ವನಿಯಾಗುತ್ತೇನೆ ಮತ್ತು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಬಲವಾಗಿ ಪ್ರಸ್ತಾಪಿಸುತ್ತೇನೆ’ ಎಂದು ವಿದ್ಯಾರ್ಥಿಗಳಿಗೆ ಭರವಸೆ ನೀಡಿದ್ದಾರೆ.
ನೀಟ್ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ತಮಗೆ ಬೇಕಾದ 1,500ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಸುಖಾಸುಮ್ಮನೇ ಗ್ರೇಸ್ ಅಂಕ ನೀಡಿ ಕೇಂದ್ರ ಸರ್ಕಾರವು ಉಳಿದ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ ಎಂದು ಕಾಂಗ್ರೆಸ್ ಇತ್ತೀಚೆಗೆ ಆಪಾದಿಸಿತ್ತು. ಆದರೆ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ ನಿರಾಕರಿಸಿರುವ ಕೇಂದ್ರ ಶಿಕ್ಷಣ ಸಚಿವಾಲಯವು, ಗ್ರೇಸ್ ಅಂಕಗಳ ವಿವಾದದ ಬಗ್ಗೆ ಮಾತ್ರ ತನಿಖೆಗೆ ನಾಲ್ಕು ಸದಸ್ಯರ ಸಮಿತಿಯನ್ನು ರಚಿಸಿದೆ.
ಇದರ ಬೆನ್ನಲ್ಲೇ ಟ್ವೀಟ್ ಮಾಡಿದ ರಾಹುಲ್, ‘ಶಿಕ್ಷಣ ಮಾಫಿಯಾ ಮತ್ತು ಸರ್ಕಾರಿ ಯಂತ್ರಗಳ ಒಳ ಒಪ್ಪಂದದಿಂದ ನಡೆಯುತ್ತಿರುವ ಈ ‘ಪೇಪರ್ ಸೋರಿಕೆ ಉದ್ಯಮ’ವನ್ನು ಎದುರಿಸಲು ಕಾಂಗ್ರೆಸ್ ದೃಢವಾದ ಯೋಜನೆ ಮಾಡಿದೆ. ನಾನು ಸಂಸತ್ತಿನಲ್ಲಿ ನಿಮ್ಮ ಧ್ವನಿಯಾಗುತ್ತೇನೆ ಮತ್ತು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಬಲವಾಗಿ ಪ್ರಸ್ತಾಪಿಸುತ್ತುತ್ತೇನೆ’ ಎಂದಿದ್ದಾರೆ.