ನವದೆಹಲಿ: ಕಾಂಗ್ರೆಸ್ ವರಿಷ್ಠೆ ವಯನಾಡ್ ಲೋಕಸಭಾ ಸದಸ್ಯೆ ಪ್ರಿಯಾಂಕಾ ಗಾಂಧಿ ಅವರನ್ನು ಬುದ್ಧಿವಂತೆ ಎಂದು ಹಿರಿಯ ರಾಜಕಾರಣಿ ಮತ್ತು ಮಾಜಿ ಕೇಂದ್ರ ಸಚಿವ ಕರಣ್ ಸಿಂಗ್ ಪ್ರಶಂಸಿಸಿದ್ದಾರೆ. ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಸುಧಾರಿಸುತ್ತಿದ್ದಾರೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು, ಸ್ವಾತಂತ್ರ್ಯಾ ನಂತರ ನೆಹರೂ ಮತ್ತು ಗಾಂಧಿ ಕುಟುಂಬದ ನಾಲ್ಕು ತಲೆಮಾರುಗಳೊಂದಿಗಿನ ತಮ್ಮ ಒಡನಾಟ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ಹರಿಯಾಣ ಮತ್ತು ಮಹಾರಾಷ್ಟ್ರ ಚುನಾವಣೆಯ ಪರಾಭವದ ನಂತರ ರಾಹುಲ್ ಗಾಂಧಿ ಕಠಿಣ ಸವಾಲುಗಳನ್ನು ಎದುರಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಹುಲ್ ಒಬ್ಬ ಒಳ್ಳೆಯ ಹುಡುಗ, ಅವರೆಂದರೆ ನನಗೆ ಬಹಳ ಇಷ್ಟ. ಹಿಂದೆ ಅವರೊಂದಿಗೆ ನಿಕಟ ಸಂಪರ್ಕದಲ್ಲಿದ್ದೆ ಎಂದು ಉತ್ತರಿಸಿದ್ದಾರೆ. ವರ್ಷದಿಂದ ವರ್ಷಕ್ಕೆ ರಾಹುಲ್ ಸುಧಾರಿಸುತ್ತಾ ಬರುತ್ತಿದ್ದಾರೆ. ಹೊಸ ಹೊಸ ಕೌಶಲಗಳನ್ನು ಕಲಿಯುತ್ತಿದ್ದಾರೆ. ಪ್ರಧಾನಿಯಾಗುತ್ತಾರೋ ಇಲ್ಲವೋ ಎನ್ನುವುದು ಕೇವಲ ಊಹಾಪೋಹ ಅಷ್ಟೇ. ಹಾಗೆಯೇ ಅವಳು(ಪ್ರಿಯಾಂಕಾ) ತುಂಬಾ ಬುದ್ದಿವಂತೆ ಎಂದೂ ಹೊಗಳಿದ್ದಾರೆ.
ಇದೇ ಸಂದರ್ಭದಲ್ಲಿ ತಮ್ಮ ರಾಜಕೀಯ ಜೀವನ ಕುರಿತು ಮೆಲುಕು ಹಾಕಿರುವ ಅವರು, ನಾನು ಇಂದಿರಾ ಗಾಂಧಿ ಅವರ ಸಂಪುಟದಲ್ಲಿ10 ವರ್ಷಗಳ ಕಾಲ ಕೆಲಸ ಮಾಡಿದ್ಧೇನೆ. ಅವರ ರಾಜಕೀಯ ಜೀವನದ ಉತ್ತಮ ಕ್ಷಣ ವಾದ ಬಾಂಗ್ಲಾದೇಶ ವಿಮೋಚನೆ ಮತ್ತು ಕರಾಳ ಕ್ಷಣವಾದ ತುರ್ತು ಪರಿಸ್ಥಿತಿಯನ್ನೂ ನೋಡಿದ್ದೇನೆ. ‘ಸಬ್ ದೇಖಾ ಹೈ’ ಎಂದು ಅವರು ಹೇಳಿದ್ದಾರೆ. 2006ರಲ್ಲಿ ರಾಷ್ಟ್ರಪತಿ ಸ್ಥಾನಕ್ಕೆ ನನ್ನ ಹೆಸರನ್ನು ಸೋನಿಯಾ ಗಾಂಧಿ ಅವರು ಸಭೆಯೊಂದರಲ್ಲಿ ಪ್ರಸ್ತಾಪಿಸಿದ್ದರು. ಆದರೆ ಎಡಪಕ್ಷಗಳು ಇದಕ್ಕೆ ಒಪ್ಪಿಗೆ ನೀಡಿರಲಿಲ್ಲ ಎಂಬ ವಿಷಯವನ್ನು ಹೊರಗೆಡವಿದ್ದಾರೆ. ಆಗ ʼಮಹಾರಾಜ‘ ರಾಷ್ಟ್ರಪತಿಯಾಗುವುದು ಹೇಗೆ ಎಂದು ಎಡಪಕ್ಷಗಳು ಪ್ರಶ್ನಿಸಿದ್ದವು. ರಾಷ್ಟ್ರಪತಿಯಾಗಿ ಆಯ್ಕೆಯಾಗದೇ ಇರುವುದಕ್ಕೆ ಯಾವುದೇ ವಿಷಾದವಿಲ್ಲ ಎಂದು ತಿಳಿಸಿದ್ದಾರೆ.