ಬಿಜೆಪಿ ವಿರುದ್ಧ ಸಿಡಿದೆದ್ದ ರಘುಪತಿ ಭಟ್ : ಪರಿಷತ್‌ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಲು ನಿರ್ಧಾರ

Most read

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್​ ವಂಚಿತರಾಗಿದ್ದ ಮಾಜಿ ಶಾಸಕ ಕೆ.ರಘುಪತಿ ಭಟ್ ಅವರಿಗೆ​​​ ಈ ಬಾರಿಯ ವಿಧಾನ ಪರಿಷತ್​​​ ಚುನಾವಣೆಯಲ್ಲೂ ಸ್ಪರ್ಧಿಸಲು ಟಿಕೆಟ್​​ ಸಿಗದ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ಧ ಸಿಡಿಮಿಡಿಯಾಗಿ ಪಕ್ಷೇತರರಾಗಿ ಸ್ಪರ್ಧಿಸಲು ತೀರ್ಮಾನಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದ ಅವರು, . “ನೈಋತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಮೇ 16ರಂದು ನಾಮಪತ್ರ ಸಲ್ಲಿಸಲಿದ್ದೇನೆ” ಎಂದು ಹೇಳುವ ಮೂಲಕ ಬಿಜೆಪಿ ನಿಲುವಿನ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಬಿಜೆಪಿ ನಿಷ್ಠಾವಂತ ಕಾರ್ಯಕರ್ತರ ಪ್ರತಿನಿಧಿಯಾಗಿ ಸ್ಪರ್ಧೆ ಮಾಡುತ್ತೇನೆ. ಪರಿಷತ್ ಚುನಾವಣೆ ದೇಶ ಅಥವಾ ರಾಜ್ಯ ಸರಕಾರ ರಚನೆಯ ನಿರ್ಣಾಯಕ ಚುನಾವಣೆಯಲ್ಲ. ನಾನು ಬಿಜೆಪಿ ಕಾರ್ಯಕರ್ತ. ಚುನಾವಣೆಯಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿದರೆ ಯಾವುದೇ ನಷ್ಟವಿಲ್ಲ. ನಾನು ಸೋತರೂ ಬಿಜೆಪಿಯಲ್ಲಿ, ಗೆದ್ದರೂ ಬಿಜೆಪಿಯಲ್ಲೇ ಇರುತ್ತೇನೆ. ಇದು ಯಾವುದೇ ಬಂಡಾಯವಲ್ಲ. ಯಾವುದೇ ಪಕ್ಷ, ನಾಯಕರ ವಿರುದ್ಧವೂ ಅಲ್ಲ. ನನಗಾಗಿ, ಜನರ ಸೇವೆಗಾಗಿ ಈ ನಿರ್ಧಾರಕ್ಕೆ ಬಂದಿದ್ದೇನೆ” ಎಂದು ಹೇಳಿದ್ದಾರೆ.

“ಕರಾವಳಿ ಭಾಗದ ಧ್ವನಿಯಾಗಿ, ಮತದಾರರ ಒತ್ತಡಕ್ಕೆ ಮಣಿದು ಸ್ಪರ್ಧೆ ಮಾಡುತ್ತೇನೆ. ಪಕ್ಷದ ನಿಲುವಿನಿಂದ ಕರಾವಳಿಗೆ ಅನ್ಯಾಯವಾಗಿದೆ. ಭೌಗೋಳಿಕ ನ್ಯಾಯಕ್ಕಾಗಿ ಪಕ್ಷೇತರ ಸ್ಪರ್ಧೆ ಅನಿವಾರ್ಯ. ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಆರ್.ಅಶೋಕ್, ಸಂಸದ ನಳಿನ್ ಕುಮಾರ್ ಕಟೀಲ್ ಸಹಿತ ಪಕ್ಷದ ವರಿಷ್ಠರು ಟಿಕೆಟ್‌ ಭರವಸೆ ಕೊಟ್ಟಿದ್ದರು. ಆದರೆ ಈಗ ನಿರ್ಧಾರ ಬದಲಾಗಿದೆ. ಪಕ್ಷಕ್ಕಾಗಿ ದುಡಿದ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ನೀಡಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುತ್ತಿರಲಿಲ್ಲ. ಆದರೆ ಹಣ ಬಲ, ಜಾತಿ ಬಲಕ್ಕೆ ಇತ್ತೀಚೆಗೆ ಪಕ್ಷಕ್ಕೆ ಬಂದವರಿಗೆ ಟಿಕೆಟ್ ಸಿಕ್ಕಿದೆ. ಜನರ ನಡುವೆ ನಿಂತು ಕೆಲಸ ಮಾಡಲು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಗೆ ನಿರ್ಧಾರ ಮಾಡಿದ್ದೇನೆ. ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ” ಎಂದು ಹೇಳಿದ್ದಾರೆ.

ರಘುಪತಿ ಭಟ್ ಮನೆಗೆ ಭೇಟಿ ನೀಡಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ.ಸುನಿಲ್ ಕುಮಾರ್ ಸಂಧಾನ ಮಾತುಕತೆ ನಡೆಸಿದ್ದಾರೆ. ಆದರೆ ರಘುಪತಿ ಭಟ್ ಅವರು ತಮ್ಮ  ನಿರ್ಧಾರ ತಿಳಿಸಿದ್ದು, ಸಂಧಾನ ವಿಫಲವಾಗಿದೆ ಎಂದು ತಿಳಿದುಬಂದಿದೆ.

More articles

Latest article