ರಾಜ್ಯದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಬೆನ್ನಲ್ಲೇ ಈಗ ನಂದಿನಿ ಹಾಲಿನ ದರವನ್ನು ಹೆಚ್ಚಿಸದೆ. ಕರ್ನಾಟಕ ಹಾಲು ಮಂಡಳಿ ಲೀಟರ್ ಹಾಲಿಗೆ 2.10 ರೂ ಬೆಲೆ ಹೆಚ್ಚಳ ಮಾಡಿ ಆದೇಶಿಸಿರುವುದು ಈಗ ವಿರೋಧ ಪಕ್ಷದ ಟೀಕೆಗೆ ರಾಜ್ಯ ಸರ್ಕಾರ ಗುರಿಯಾಗಿದೆ.
ಈ ಕುರಿತು ಬೆಳಗಾವಿಯಲ್ಲಿ ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿದ್ದು, ಸಿದ್ದರಾಮಯ್ಯ, ಡಿಕೆಶಿ, ಬಡವರ ರಕ್ತ ಹೀರುತ್ತಿದ್ದಾರೆ. ತಿಗಣೆ ರೀತಿಯಲ್ಲಿ ಜನರ ರಕ್ತ ಹೀರುತ್ತಿದ್ದಾರೆ. ಲೋಕ ಚುನಾವಣೆ ಸೋಲಿನ ಕೋಪಕ್ಕೆ ಬೆಲೆ ಏರಿಕೆ ಮಾಡಿ ಜನರಿಗೆ ತೊಂದರೆ ಕೊಡುತ್ತಿದ್ದಾರೆ. ಕಬ್ಬಿಣ ಸೇರಿ ಎಲ್ಲದರ ಬೆಲೆ ಏರಿಕೆ ಆಗ್ತಿದೆ ಎಂದು ವಾಗ್ದಾಳಿ ಮಾಡಿದ್ದಾರೆ.
ಕಳೆದ ವರ್ಷ ಲೀಟರ್ ಗೆ 3 ರೂ. ಜಾಸ್ತಿ ಮಾಡಿದ್ರು. ಮುಂದೆ ಬೆಲೆ ಕಡಿಮೆ ಮಾಡೋ ಭರವಸೆ ನೀಡಿದ್ದರು. ಆಧರೆ ಈಗ ಮಾಡಿದ್ದೇನು? ಸಿಎಂ ಸಿದ್ದರಾಮಯ್ಯಗೆ ಎಷ್ಟು ನಾಲಿಗೆ ಇದೆ. ಕಾಫಿ, ಟೀ ಕುಡಿಯಲು ಕಲ್ಲು ಹಾಕಿದ ಸರ್ಕಾರ ಬಹಳ ದಿನ ಉಳಿಯಲ್ಲ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ಕರ್ನಾಟಕ ಹಾಲು ಮಂಡಳಿ ಲೀಟರ್ ಹಾಲಿಗೆ 2.10 ರೂ ಬೆಲೆ ಹೆಚ್ಚಳ ಮಾಡಿ ಆದೇಶಿಸಿದೆ. ಹಾಲಿನ ದರದ ಜೊತೆ ಪ್ರತೀ ಪ್ಯಾಕೆಟ್‌ನಲ್ಲಿ 50ml ಹಾಲು ಕೂಡ ಹೆಚ್ಚಳ ಮಾಡಲಿದೆ. ಹೀಗಾಗಿ ಇನ್ನು ಮುಂದೆ ಅರ್ಧ ಲೀಟರ್ ಹಾಲಿನ ಪ್ಯಾಕೆಟ್ ನಲ್ಲಿ 50ml ಹೆಚ್ಚು ಇರಲಿದ್ದು, ಒಟ್ಟು 550 ml ಹಾಲು ಸಿಗಲಿದೆ. ನಾಳೆಯಿಂದಲೇ ಪರಿಷ್ಕೃತ ದರ ಜಾರಿಯಾಗಲಿದೆ ಎಂದು ಕೆಎಂಎಫ್ ತಿಳಿಸಿದೆ.
ಈ ಬಗ್ಗೆ ಕೆಎಂಎಫ್ ಅಧ್ಯಕ್ಷ ಭೀಮನಾಯ್ಕ್ ಸುದ್ದಿಗೋಷ್ಠಿ ನಡೆಸಿ, ರಾಜ್ಯದಲ್ಲಿ ಸದ್ಯ 98 ಲಕ್ಷ 17ಸಾವಿರ ಲೀ ಹಾಲು ಸಂಗ್ರಹ ಆಗುತ್ತಿದೆ. ಸದ್ಯದಲ್ಲೇ ಒಂದು ಕೋಟಿ ಲೀಟರ್ ಸಂಗ್ರಹ ಗುರಿ ಮುಟ್ಟಲಿದೆ. ರಾಜ್ಯದ 27 ಲಕ್ಷ ಹಾಲು ಉತ್ಪಾದಕರು ಇದಕ್ಕೆ ಕಾರಣ. ಸದ್ಯದ ಶೇಖರಣೆಯಲ್ಲಿ 30 ಲಕ್ಷ ಲೀಟರ್ ಅನ್ನು ಹಾಲಿನ ಪೌಡರ್ ಗೆ ಕಳುಹಿಸುತ್ತಿದ್ದೇವೆ. ಇದರಲ್ಲಿ ನಮ್ಮ ಬಂಡವಾಳ ಸ್ವಲ್ಪ ಡೆಡ್ ಆಗ್ತಿದೆ. 27 ಲಕ್ಷ ಹಾಲು ಉತ್ಪಾದಕರು ಮತ್ತು ಗ್ರಾಹಕರು ಇಬ್ಬರಿಗೂ ತೊಂದರೆಯಾಗಬಾರದು. ಇಬ್ಬರು ಕೂಡ ನಮಗೆ ಎರಡು ಕಣ್ಣಿದ್ದ ಹಾಗೆ. ಲೀ ಗೆ ಸದ್ಯ ಗ್ರಾಹಕರಿಗೆ 42 ರೂ ಇದೆ ಎಂದಿದ್ದಾರೆ.