ಬುದ್ಧರ ಪ್ರಕಾರ ಮಾರ ಅಂದರೆ ಮನೋಕ್ಲೇಷಗಳು, ಭ್ರಮೆಗಳು, ನಮ್ಮೊಳಗಿನ ಅಲೋಚನೆಗಳು. ಅದು ಕುಶಲ ಅಲೋಚನೆಗಳಾದರೆ ಸಕಾರಾತ್ಮಕ ಫಲಗಳು, ಅಕುಶಲ ಅಲೋಚನೆಗಳಾದಾರೆ ನಕಾರಾತ್ಮಕ ಫಲಗಳು ಸಿಗುತ್ತವೆ - ಡಾ. ನಾಗೇಶ್ ಮೌರ್ಯ, ಬೌದ್ಧ ಚಿಂತಕರು.
ಪ್ರಪಂಚದಲ್ಲಿ ಮನುಷ್ಯರು, ಹುಟ್ಟು-ಸಾವು, ಸುಖ-ದುಃಖ, ಕರುಣೆ- ಮೈತ್ರಿ, ಪ್ರೀತಿ- ಪ್ರೇಮಗಳನ್ನು ತಮ್ಮ ತಮ್ಮ ಅನುಭವಗಳಿಂದ ಪಡೆದುಕೊಂಡಿದ್ದಾರೆ. ಧರ್ಮಗಳ ಉದಯಕ್ಕೂ ಮುಂದೆ ಹುಟ್ಟು ಸಾವು, ಪಾಪ ಪುಣ್ಯ, ದೇವರು ದೆವ್ವ, ಭೂತ, ಸ್ವರ್ಗ ನರಕ ಇವೇ ಸಂಗತಿಗಳ ಬಗ್ಗೆ ತಮ್ಮದೇ ಆದ ನಂಬಿಕೆಗಳನ್ನು ಹೊಂದಿದ್ದರು. ಹಾಗೆಯೆ ಪುನರ್ಜನ್ಮದ ಬಗೆಗೆ ಹಿಂದೂ ಧರ್ಮವನ್ನು ಒಳಗೊಂಡು ಎಲ್ಲಾ ಪ್ರಮುಖ ಧರ್ಮಗಳು ಒಂದೇ ರೀತಿಯ ಅಭಿಪ್ರಾಯಗಳನ್ನು ಹೊಂದಿವೆ. ಆದರೆ ಬುದ್ಧರು ತಮ್ಮದೇ ರೀತಿಯಲ್ಲಿ ಬಹಳ ವೈಜ್ಞಾನಿಕವಾಗಿ, ಪ್ರಾಕೃತಿಕವಾಗಿ ಪುನರ್ಜನ್ಮವನ್ನು ವಿವರಿಸಿದ್ದಾರೆ. ಬುದ್ಧರು ಪುನರ್ಜನ್ಮವನ್ನು ಪುನರ್ಭವ ಎಂದು ಕರೆದಿದ್ದಾರೆ.
ಪುನರ್ಭವ ಸಿದ್ಧಾಂತವನ್ನು ವಿವರಿಸುವ ಮುನ್ನ ಕೆಲವು ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಂಡು ಮುಂದುವರೆಯಬೇಕಾಗುತ್ತದೆ.
ಹುಟ್ಟು ಅಥವಾ ಜನ್ಮ ಎಂದರೇನು?
ಸಾವು ಎಂದರೇನು?
ಯಾವುದರ ಪುನರ್ಭವ ಅಥವಾ ಪುನರ್ಜನ್ಮ?
ಯಾರ ಪುನರ್ಭವ ಅಥವಾ ಪುನರ್ಜನ್ಮ?
ಜನ್ಮ ಎಂದರೇನು?
ಜನ್ಮ ಎಂದರೆ ಗಂಡಸಿನ ಒಂದು ವೀರ್ಯಾಣು ಹೆಣ್ಣಿನ ಅಂಡಾಣುವಿನ ಜೊತೆಗೆ ಸೇರಿದಾಗ ಗರ್ಭಧಾರಣೆಯಾಗುತ್ತದೆ. ಒಂಬತ್ತು ತಿಂಗಳು ತಾಯಿಯ ಗರ್ಭದಲ್ಲಿದ್ದು ನಂತರ ಜನ್ಮ ಪಡೆಯುತ್ತದೆ. ಇದಕ್ಕೆ ನಾಲ್ಕು ದ್ರವ್ಯರಾಶಿಗಳು ಬೇಕು. “ಬೆಂಕಿ ದೇಹದಲ್ಲಿರುವ ಶಾಖ, ನೀರು ದೇಹದಲ್ಲಿರುವ ದ್ರವರೂಪದ ರಕ್ತ, ಲೋಳೆ, ಗಾಳಿ ನಾವು ಉಸಿರಾಡುವ ಉಸಿರು, ಭೂಮಿ ದೇಹದಲ್ಲಿರುವ ಗಟ್ಟಿಯಾದ ಪದಾರ್ಥಗಳು ಮಾಂಸ, ಮೂಳೆ. ಇವುಗಳ ಸಂರಚನೆಯೇ ಒಂದು ಜೀವವಾಗುತ್ತದೆ. ಇವು ಒಂದಕ್ಕೊಂದು ಸಂಬಂಧವನ್ನು ಹೊಂದಿರುತ್ತವೆ. ಇವುಗಳ ಕೆಲಸವೇನೆಂದರೆ ದೇಹಕ್ಕೆ ಬೇಕಾಗುವ ಶಕ್ತಿಯನ್ನು ಉತ್ಪಾದನೆ ಮಾಡುವುದು. ಇವುಗಳನ್ನು ಅನುಭವಿಸುವುದು ನಮ್ಮೊಳಗಿನ ಮನಸ್ಸು, ಸುಖ-ದುಃಖ, ಒಳ್ಳೆಯದು ಕೆಟ್ಟದು, ಪ್ರೀತಿ ಪ್ರೇಮ.
ಸಾವು ಎಂದರೇನು?
ಸಾವು ಎಂದರೆ ದೇಹದಲ್ಲಿ ಶಕ್ತಿ ಉತ್ಪಾದನೆ ನಿಂತು ಹೋದರೆ, ದೇಹದಲ್ಲಿ ಉಷ್ಣತೆಯು ನಶಿಸಿಹೋದರೆ, ದೇಹದಿಂದ ಉಸಿರಾಟದ ಕ್ರಿಯೆ ನಿಂತುಹೋದರೆ ಅಂತಹ ದೇಹದಲ್ಲಿ ಜೀವ ಇರುವುದಿಲ್ಲ, ಈ ಸ್ಥಿತಿಯನ್ನು ಸಾವು ಎನ್ನಬಹುದು. ಬುದ್ಧರ ಪ್ರಕಾರ, ದೇಹವನ್ನು ರೂಪಿಸುವ ಸೃಷ್ಟಿಯ ನಾಲ್ಕು ಮೂಲದ್ರವ್ಯಗಳಿವೆಯಲ್ಲ ಅವು ದೇಹದಿಂದ ಹೊರಕ್ಕೆ ವಿಸರ್ಜನೆಯಾದ ಮೇಲೆ ದೇಹವು ತನ್ನಷ್ಟಕ್ಕೇ ತಾನೇ ಶಕ್ತಿ ಉತ್ಪಾದನೆಯನ್ನು, ಉಸಿರಾಟದ ಕ್ರಿಯೆಯನ್ನು, ದೇಹದ ಉಷ್ಣತೆಯನ್ನು ಕಳೆದುಕೊಳ್ಳುತ್ತದೆ. ಸಾವು ಅಂದರೆ ಇದೇ ಎನ್ನುತ್ತಾರೆ.
ಈಗ ಪುನರ್ಭವ ಎಂದರೇನು? ಪುನರ್ಭವಕ್ಕೂ ಪುನರ್ಜನ್ಮಕ್ಕೂ ಇರುವ ವ್ಯತ್ಯಾಸವೇನು? ಎಂಬುದನ್ನು ನೋಡೋಣ; ಬುದ್ಧರು ಪುನರ್ಜನ್ಮದಲ್ಲಿ ನಂಬಿಕೆಯಿಟ್ಟಿದ್ದರೆ? ಹೌದೆಂಬುದೇ ಅದಕ್ಕೆ ಉತ್ತರ. ಈ ಪ್ರಶ್ನೆಯನ್ನು ಮತ್ತೆ ಎರಡು ಭಾಗವಾಗಿ ಮಾಡುವುದು ಉತ್ತಮ.
೧) ಯಾವುದರ ಪುನರ್ಜನ್ಮ ?
೨) ಯಾರ ಪುನರ್ಜನ್ಮ?.
ಮೊದಲ ಪ್ರಶ್ನೆಯನ್ನು ಎಲ್ಲಾ ಕಾಲದಲ್ಲೂ ಕಡೆಗಣಿಸಲಾಗಿದೆ ಏಕೆಂದರೆ ಈ ಎರಡು ಪ್ರಶ್ನೆಗಳ ಮಿಶ್ರಣದಿಂದ ಅಷ್ಟೊಂದು ಗೊಂದಲವುಂಟಾಗಿದೆ. ಬುದ್ಧರ ಪ್ರಕಾರ ದೇಹವನ್ನು ರೂಪಿಸುವ ನಾಲ್ಕು ದ್ರವ್ಯರಾಶಿಗಳಿಗೆ ಸತ್ತ ಮೇಲೆ ಏನಾಗುತ್ತದೆ? ಎಂಬುದೇ ಇಲ್ಲಿನ ಪ್ರಶ್ನೆ. ಸತ್ತ ಶರೀರದೊಂದಿಗೆ ಅವುಗಳು ಕೂಡ ಸಾಯುತ್ತವೆ ಎಂದು ಕೆಲವರು ಹೇಳುತ್ತಾರೆ. ಬುದ್ಧರು ಹಾಗಾಗದು ಎನ್ನುತ್ತಾರೆ, ಆ ದ್ರವ್ಯರಾಶಿಗಳು ಆಕಾಶದಲ್ಲಿ ತೇಲುತ್ತಿರುವ ತಮ್ಮಂತಹ ದ್ರವ್ಯರಾಶಿ ಸಮೂಹವನ್ನು ಅವು ಸೇರುತ್ತವೆ. ನಂತರದಲ್ಲಿ ಈ ದ್ರವ್ಯರಾಶಿಗಳು ಹೊಸದಾಗಿ ರೂಪುಗೊಂಡು ಜನ್ಮ ಪಡೆಯುತ್ತವೆ. ಬುದ್ಧನ ಪ್ರಕಾರ ಪುನರ್ಭವವೆಂದರೆ ಇದೇ ಆಗಿದೆ. ಆ ದ್ರವ್ಯರಾಶಿಗಳು ಸತ್ತಿರುವ ಅದೇ ದೇಹದಿಂದ ಬಂದಿರಬೇಕಾಗಿರುವುದಿಲ್ಲ. ಅವು ಬೇರೆ ಬೇರೆ ಸತ್ತ ದೇಹಗಳಿಂದ ಬಂದಿರಲೂಬಹುದು. ಇಲ್ಲಿ ದೇಹವು ಸಾಯುತ್ತದೆ, ಆದರೆ ದ್ರವ್ಯಗಳು ಯಾವಾಗಲೂ ಜೀವಿಸಿರುತ್ತವೆ. ಈ ರೀತಿಯ ಪುನರ್ಭವವನ್ನು (ಪುನರ್ಜನ್ಮ) ಬುದ್ಧರು ನಂಬಿದ್ದರು.
ಮಹಾಕೊತ್ತಿತ ಮತ್ತು ಸಾರಿಪುತ್ತರ ನಡುವೆ ನಡೆದ ಸಂವಾದದಲ್ಲಿ, ಸಾರಿಪುತ್ತನು ಸತ್ತ ದೇಹ ಮತ್ತು ಜೀವವಿರುವ ಅರಹಂತ ಭಿಕ್ಷು ಇವರಿಬ್ಬರಲ್ಲಿನ ವ್ಯತ್ಯಾಸವನ್ನು ಕುರಿತು ಹೆಚ್ಚು ಬೆಳಕು ಚೆಲ್ಲಿದ್ದಾನೆ. ಅವನ ಪ್ರಕಾರ ಪಂಚೇಂದ್ರಿಯಗಳು ಮತ್ತು ದೇಹದ ಪ್ರತಿಯೊಂದೂ ಅಂಗಗಳು ತನ್ನದೇ ಆದ ನಿರ್ದಿಷ್ಟ ಕ್ಷೇತ್ರ ಮತ್ತು ಕ್ರಿಯಾ ವಲಯಗಳನ್ನು ಹೊಂದಿದ್ದು ಅವು ಪ್ರತ್ಯೇಕ ಹಾಗೂ ಪರಸ್ಪರ ಭಿನ್ನವಾಗಿವೆ. ಈ ಪಂಚೇಂದ್ರಿಯಗಳನ್ನು ಯಾರು ಅನುಭವಿಸುತ್ತಾರೆ? ಎಂಬ ಮಹಾಕೊತ್ತಿತನ ಪ್ರಶ್ನೆಗೆ “ಮನಸ್ಸು” ಎಂದು ಉತ್ತರಿಸಿದ ಸಾರಿಪುತ್ತ. “ಇಂದ್ರಿಯಗಳ ಈ ಐದು ಶಕ್ತಿ ಸಾಮರ್ಥ್ಯಗಳು ಯಾವುದನ್ನು ಅವಲಂಬಿಸಿವೆ?” ಮಹಾಕೊತ್ತಿತನ ಪ್ರಶ್ನೆ. ಅವು “ಚೈತನ್ಯವನ್ನು ಅವಲಂಬಿಸಿವೆ” ಸಾರಿಪುತ್ತನ ಉತ್ತರ. “ಚೈತನ್ಯ ಯಾವುದನ್ನು ಅವಲಂಬಿಸಿದೆ”? ಮಹಾಕೊತ್ತಿತನ ಪ್ರಶ್ನೆ. “ಉಷ್ಣತೆಯನ್ನು ಅವಲಂಬಿಸಿದೆ” ಸಾರಿಪುತ್ತನ ಉತ್ತರ. ಉಷ್ಣತೆಯು ಯಾವುದನ್ನು ಅವಲಂಬಿಸಿದೆ? ಮಹಾಕೊತ್ತಿತನ ಪ್ರಶ್ನೆ. “ಚೈತನ್ಯವನ್ನು ಅವಲಂಬಿಸಿದೆ” ಸಾರಿಪುತ್ತನ ಉತ್ತರ.
ಚೈತನ್ಯವು ಉಷ್ಣತೆಯನ್ನು ಅವಲಂಬಿಸಿದೆ ಎಂದು ನೀನು ಹೇಳುತ್ತಿಯೆ, ಹಾಗೆಯೇ ಉಷ್ಣತೆಯು ಚೈತನ್ಯವನ್ನು ಅವಲಂಬಿಸಿದೆ ಎಂದೂ ಹೇಳುತ್ತಿಯೆ. ಇದಕ್ಕೆ ಯಾವ ನಿರ್ದಿಷ್ಟ ಅರ್ಥವನ್ನು ಕೊಡಬೇಕಾಗುತ್ತದೆ? ಎಂದು ಮಹಾಕೊತ್ತಿತನು ಪುನಃ ಪ್ರಶ್ನೆ ಕೇಳುತ್ತಾನೆ.
ಇದಕ್ಕೆ ಸಾರಿಪುತ್ತನು ʼನಾನು ನಿನಗೆ ಒಂದು ದೃಷ್ಟಾಂತವನ್ನು ಕೊಡುತ್ತೇನೆ ಕೇಳು ಎನ್ನುತ; “ಒಂದು ದೀಪದಲ್ಲಿ ಬೆಳಕು ಜ್ವಾಲೆಯನ್ನು ತೋರಿಸುತ್ತದೆ ಮತ್ತು ಅದೇ ಜ್ವಾಲೆಯು ಬೆಳಕನ್ನು ತೋರಿಸುತ್ತದೆ. ಅದರಂತೆಯೆ ಚೈತನ್ಯವು ಉಷ್ಣತೆಯನ್ನು ಅವಲಂಬಿಸಿದೆ ಮತ್ತು ಉಷ್ಣತೆಯು ಚೈತನ್ಯವನ್ನು ಅವಲಂಬಿಸಿದೆ” ಎನ್ನುತ್ತಾನೆ.
“ಒಂದು ನಿರ್ಜೀವ ದೇಹ ಮರದ ದಿಮ್ಮಿಯಂತೆ, ಆ ಸತ್ತದೇಹದಿಂದ ಎಷ್ಟು ವಸ್ತುಗಳು ತೊರೆಯಬೇಕು? ಎಂದು ಮಹಾಕೊತ್ತಿತನು ಕೇಳಿದ. “ಚೈತನ್ಯ, ಉಷ್ಣತೆ ಮತ್ತು ಪ್ರಜ್ಞೆ” ಎಂದನು ಸಾರಿಪುತ್ತ. “ಒಂದು ನಿರ್ಜೀವಿ ಹೆಣಕ್ಕೂ, ಗ್ರಹಣ ಶಕ್ತಿ ಮತ್ತು ಭಾವನೆಗಳು ಸ್ಥಗಿತಗೊಂಡ ಅರಹಂತನಾದ ಒಬ್ಬ ಭಿಕ್ಷುವಿಗೂ ಇರುವ ವ್ಯತ್ಯಾಸವೇನು?” ಮಹಾಕೊತ್ತಿತನ ಪ್ರಶ್ನೆ, ” ಸತ್ತ ಹೆಣದ ದೇಹದಲ್ಲಿ ಶಕ್ತಿಗಳಷ್ಟೇ ಅಲ್ಲದೇ ಮಾತು, ಮನಸ್ಸು ನಿಷ್ಕ್ರಿಯವಾಗಿರುತ್ತದೆ ಮತ್ತು ದೇಹ ಜಡವಾಗುತ್ತದೆ. ಮಾತ್ರವಲ್ಲ, ಚೈತನ್ಯವೂ ಉಡುಗಿಹೋಗುತ್ತದೆ. ಉಷ್ಣತೆಯು ತಣ್ಣಗಾಗುತ್ತದೆ ಮತ್ತು ಇಂದ್ರಿಯಗಳ ಶಕ್ತಿ ಸಾಮರ್ಥ್ಯಗಳು ಛಿದ್ರವಾಗುತ್ತವೆ. ಆದರೆ ಅರಹಂತ ಸ್ಥಿತಿಯಲ್ಲಿರುವ ಭಿಕ್ಷುವಿನಲ್ಲಿ, ಉಸಿರಾಟ, ಅವಲೋಕನ ಮತ್ತು ಗ್ರಹಣಶಕ್ತಿಗಳು ತಟಸ್ಥವಾಗುತ್ತವೆ ಮತ್ತು ಇವುಗಳು ಜಡವಾಗಿದ್ದರೂ, ದೇಹದೊಳಗೆ ಚೈತನ್ಯವು ಉಳಿದಿರುತ್ತದೆ, ಉಷ್ಣತೆಯು ತುಂಬಿರುತ್ತದೆ ಮತ್ತು ಶಕ್ತಿ ಸಾಮರ್ಥ್ಯಗಳು ಸ್ಪಷ್ಟವಾಗಿರುತ್ತವೆ”. ಎಂದು ಸಾರಿಪುತ್ತನು ಉತ್ತರಿಸಿದ.
ವ್ಯಕ್ತಿಯ ಸಾವು ಅಥವಾ ವಿನಾಶ ಮತ್ತು ಜೀವಂತವಿರುವ ಅರಹಂತರ ಬಗ್ಗೆ ಅತ್ಯಂತ ಉತ್ತಮವಾದ ಮತ್ತು ಪರಿಪೂರ್ಣ ರೂಪದ ಪ್ರತಿಪಾದನೆ ಬಹುಶಃ ಇದೇ. ಈ ರೀತಿ ಅರ್ಥೈಸಿದರೆ, ಬುದ್ಧರ ಅಭಿಪ್ರಾಯವು ವೈಜ್ಞಾನಿಕ, ವೈಚಾರಿಕ, ಪ್ರಾಕೃತಿಕ ದೃಷ್ಟಿಯೊಂದಿಗೆ ಸರಿಹೊಂದುತ್ತದೆ. ಈ ಅರ್ಥದಲ್ಲಿ ಮಾತ್ರ ಬುದ್ಧರು ಪುನರ್ಭವದಲ್ಲಿ ನಂಬಿಕೆಯನ್ನು ಇಟ್ಟಿದ್ದರು ಎಂದು ಹೇಳಬಹುದು. ಶಕ್ತಿಯು ಎಂದೂ ನಾಶವಾಗುವುದಿಲ್ಲ. ವಿಜ್ಞಾನವು ಪ್ರತಿಪಾದಿಸುವುದೂ ಇದನ್ನೇ. ಸತ್ತ ಮೇಲೆ ಏನೂ ಉಳಿಯುವುದಿಲ್ಲ ಎಂಬ ಅರ್ಥದಲ್ಲಿ, ವಿನಾಶವು ವಿಜ್ಞಾನಕ್ಕೆ ತದ್ವಿರುದ್ಧವಾಗಿರುತ್ತದೆ. ಏಕೆಂದರೆ ಅದು ಶಕ್ತಿಯು ತನ್ನ ಪರಿಮಾಣದಲ್ಲಿ ಸ್ಥಿರವಾಗಿಲ್ಲ ಎಂಬ ಅರ್ಥ ಕೊಡುತ್ತದೆ.
ಯಾರ ಪುನರ್ಜನ್ಮ?
ಸತ್ತುಹೋದ ಅದೇ ಮನುಷ್ಯನು ಮರುಹುಟ್ಟು ಪಡೆಯುತ್ತಾನೆಯೆ? ಈ ಪ್ರಮೇಯದಲ್ಲಿ ಬುದ್ಧರು ನಂಬಿಕೆಯಿಟ್ಟಿರಲಿಲ್ಲ, ಇದೂ ಅತ್ಯಂತ ಅಸಂಭವವಾದುದು. ಒಂದು ವೇಳೆ ಸತ್ತುಹೋದ ಮನುಷ್ಯನ ಮೂಲದ್ರವ್ಯಗಳೆ ಒಂದಾಗಿ ಸೇರಿ ಹೊಸ ದೇಹವೊಂದನ್ನು ರೂಪಿಸುವುದರ ಮೇಲೆ ಅದು ಅವಲಂಬಿಸಿದೆ. ಹಾಗಾದಾಗ, ಅದೇ ಇಂದ್ರಿಯದ ಜೀವಿಯ ಪುನರ್ಜನ್ಮದ ಸಾಧ್ಯತೆ ಉಂಟು. ಅದಕ್ಕೆ ಬದಲಾಗಿ ಒಂದು ಸಂಮ್ಮಿಶ್ರಣದಿಂದ ಅಥವಾ ಸತ್ತು ಹೋಗಿರುವ ವಿವಿಧ ಮನುಷ್ಯರ ವಿವಿಧ ಮೂಲದ್ರವ್ಯಗಳಿಂದ ಹೊಸ ದೇಹವು ರೂಪುಗೊಂಡಾಗ ಆಗಲೂ ಪುನರ್ಜನ್ಮವುಂಟು. ಆದರೆ ಅದು ಅದೇ ಇಂದ್ರಿಯಗಳಿಂದ ಬಂದ ಜೀವಿಯ ಪುನರ್ಜನ್ಮವಲ್ಲ.
ಬೇರೆ ಧರ್ಮಗಳಲ್ಲಿ ಪುನರ್ಜನ್ಮವೆಂದರೆ ಸತ್ತ ವ್ಯಕ್ತಿಯ ದೇಹದಿಂದ ಆತ್ಮವು ಬಿಡುಗಡೆಗೊಂಡು, ಮತ್ತೊಂದು ದೇಹದ ಮೂಲಕ ಜನ್ಮ ಪಡೆಯುತ್ತದೆ. ಇಲ್ಲಿ ದೇಹಕ್ಕೆ ಸಾವಿದೆಯೇ ಹೊರತು, ಆತ್ಮಕ್ಕೆ ಸಾವಿಲ್ಲ, ಹಾಗಾಗಿ ಸತ್ತ ವ್ಯಕ್ತಿ ಮತ್ತೆ ಮತ್ತೆ ಜನ್ಮ ಪಡೆಯುತ್ತಾನೆ. ಆತ್ಮವು ಇಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ ಎಂದು ನಂಬುತ್ತಾರೆ. ಬುದ್ಧರು ಇದನ್ನು ಒಪ್ಪುವುದಿಲ್ಲ ಅದಕ್ಕೆ ಅವರನ್ನು ಅನಾತ್ಮವಾದಿಯೆಂದು ಕರೆಯುತ್ತಾರೆ. ಒಬ್ಬ ವ್ಯಕ್ತಿಯು ಒಳ್ಳೆಯ ಜೀವನ, ಶಿಕ್ಷಣ, ಹಣ ಅಂತಸ್ತು, ಅಧಿಕಾರವನ್ನು ಪಡೆಯಲು ಅವನ ಹಿಂದಿನ ಜನ್ಮದ ಪುಣ್ಯಫಲ ಎಂದು ಹಿಂದೂ ಶಾಸ್ತ್ರ ಬೋಧಿಸುತ್ತದೆ. ಬುದ್ಧರು ಇದನ್ನು ಸಹ ಒಪ್ಪುವುದಿಲ್ಲ. ಯಾಕೆಂದರೆ ಒಬ್ಬ ವ್ಯಕ್ತಿ ಹಿಂದಿನ ಜನ್ಮದಲ್ಲಿ ಯಾವ ಪಾಪ-ಪುಣ್ಯಗಳನ್ನು ಮಾಡಿದ್ದರು ಎಂಬುದಕ್ಕೆ ಈಗಿನ ಜನ್ಮದಲ್ಲಿ ಯಾವುದೇ ನೆನಪಾಗಲಿ, ಆಧಾರವಾಗಲಿ ಇಲ್ಲ. ಪ್ರಸ್ತುತ ಜೀವನದ ಮೇಲೆ ತನ್ನ ಹಿಂದಿನ ಜನ್ಮದ ಯಾವುದೇ ಪಾಪ ಪುಣ್ಯಗಳು ತಮ್ಮ ಪ್ರಭಾವವನ್ನು ಬೀರಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.
ಈ ಮೇಲಿನ ಎಲ್ಲ ಹಂತಗಳನ್ನು ಸರಿಯಾಗಿ ಯಾರು ಅರ್ಥಮಾಡಿಕೊಳ್ಳುತ್ತಾರೊ ಅವರು ದೆವ್ವಗಳಿಗೆ, ಭೂತಗಳಿಗೆ, ಪಿಶಾಚಿಗಳಿಗೆ ಹೆದರುವ ಅವಶ್ಯಕತೆ ಇರುವುದಿಲ್ಲ. ಯಾಕೆಂದರೆ ಆ ರೀತಿಯ ಅತಿಮಾನುಷ ಶಕ್ತಿಗಳು ಇರಲು ಸಾಧ್ಯವಿಲ್ಲ. ಇದು ಕೇವಲ ನಮ್ಮ ನಮ್ಮ ಮನೋಕ್ಲೇಷಗಳು, ಭ್ರಮೆಗಳು, ಅಲೋಚನೆಗಳಷ್ಟೆ. ಬುದ್ಧರ ಪ್ರಕಾರ ಮಾರ ಅಂದರೆ ಇವೇ ಮನೋಕ್ಲೇಷಗಳು, ಭ್ರಮೆಗಳು, ನಮ್ಮೊಳಗಿನ ಅಲೋಚನೆಗಳು. ಅದು ಕುಶಲ ಅಲೋಚನೆಗಳಾದರೆ ಸಕಾರಾತ್ಮಕ ಫಲಗಳು, ಅಕುಶಲ ಅಲೋಚನೆಗಳಾದಾರೆ ನಕಾರಾತ್ಮಕ ಫಲಗಳು ಸಿಗುತ್ತವೆ.
ಡಾ. ನಾಗೇಶ್ ಮೌರ್ಯ
ಬೌದ್ಧ ಚಿಂತಕರು, ಹಿರಿಯ ಪ್ರಬಂಧಕರು, ಕೆನರಾ ಬ್ಯಾಂಕ್ ಬೆಂಗಳೂರು
ಇದನ್ನೂ ಓದಿ- ಬುದ್ಧರ ಮೂರು ಮುಖ್ಯ ಬೋಧನೆಗಳು: ಅನಿಚ್ಚ, ಅನತ್ತ ಮತ್ತು ದುಃಖ