ಪಂಜಾಬ್: ಪಂಜಾಬ್ ನಲ್ಲಿ ಕಳೆದ ಆರು ತಿಂಗಳಲ್ಲಿ ನಡೆದ 14 ಸ್ಫೋಟಗಳ ಹಿಂದಿನ ಮಾಸ್ಟರ್ ಮೈಂಡ್ ಹರ್ ಪ್ರೀತ್ ಸಿಂಗ್ ಎಂಬಾತನನ್ನು ಅಮೆರಿಕದಲ್ಲಿ ಬಂಧಿಸಲಾಗಿದೆ. ಅಮೆರಿಕ ಮೂಲದ ಭಯೋತ್ಪಾದಕ ಹರ್ ಪ್ರೀತ್ ಸಿಂಗ್ ಅಲಿಯಾಸ್ ಹ್ಯಾಪಿ ಪಾಸಿಯಾನನ್ನು ಬಂಧಿಸಲಾಗಿದೆ. ಎಫ್ ಬಿ ಐ ಮತ್ತು ಅಮೆರಿಕ ವಲಸೆ ಇಲಾಖೆ ಆತನನ್ನು ತಮ್ಮ ವಶಕ್ಕೆ ಪಡೆದುಕೊಂಡಿವೆ.
ಹರ್ ಪ್ರೀತ್ ಸಿಂಗ್ ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬನಾಗಿದ್ದು ಆತನ ಸುಳಿವು ನೀಡಿದವರಿಗೆ 5 ಲಕ್ಷ ರೂ. ಬಹುಮಾನ ಪ್ರಕಟಿಸಲಾಗಿತ್ತು. ಆತ ಇದೀಗ ಪ್ರಸ್ತುತ ICE (ವಲಸೆ ಮತ್ತು ಕಸ್ಟಮ್ಸ್ ಜಾರಿ) ವಶದಲ್ಲಿದ್ದಾನೆ. ಪಾಕಿಸ್ತಾನಿ ಗುಪ್ತಚರ ಸಂಸ್ಥೆ ಐ ಎಸ್ ಐ ಮತ್ತು ಬಬ್ಬರ್ ಖಾಲ್ಸಾ ಇಂಟರ್ ನ್ಯಾಷನಲ್ ಜತೆ ಕೈಜೋಡಿಸಿ ಈತ ಸಹಯೋಗದೊಂದಿಗೆ ಭಯೋತ್ಪಾದಕ ಕೃತ್ಯಗಳನ್ನು ನಡೆಸಿದ್ದಾನೆ ಎಂದು ಹೇಳಲಾಗುತ್ತಿದೆ.
ಈತ ಪಂಜಾಬ್ ನಲ್ಲಿ ಪೊಲೀಸ್ ಠಾಣೆಗಳ ಮೇಲೆ ಹಲವಾರು ಭಯೋತ್ಪಾದಕ ದಾಳಿಗಳನ್ನು ನಡೆಸಿದ್ದಲ್ಲದೆ, ಸಾಮಾಜಿಕ ಮಾಧ್ಯಮಗಳಲ್ಲಿ ಅವುಗಳ ಹೊಣೆ ಹೊತ್ತಿದ್ದ. ಹರ್ ಪ್ರೀತ್ ಸಿಂಗ್ ಭಾರತದಲ್ಲಿ ದಾಳಿ ನಡೆಸಲು ಚಂಡೀಗಢದ ಉಗ್ರರಿಗೆ ಹಣ, ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಒದಗಿಸಿದ್ದ ಆರೋಪವೂ ಇದೆ.