ಬಾಬಾಸಾಹೇಬರ ಕನಸು ನನಸು ಮಾಡಲು ಅವರೇ ಹಾಕಿಕೊಟ್ಟ ಮಾರ್ಗದಲ್ಲಿ ಅವರ ಅನುಯಾಯಿಗಳಾದ ನಾವು ನಮ್ಮ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಲು ಪಣ ತೊಡಬೇಕು. ಈ ನಿಟ್ಟಿನಲ್ಲಿ ನಮ್ಮ DSS ದಲಿತ ಸಂಘಟನೆಗಳು ತಮ್ಮ ಗುರುತನ್ನು DSS ಎಂದು ಹಾಗೆ ಉಳಿಸಿಕೊಂಡು “ಧಮ್ಮ ಸೇವಕ ಸಂಘ”ಗಳಾಗಿ ಬದಲಾಗಿ ಹೊಸ ಹುರುಪಿನೊಂದಿಗೆ ಕಾರ್ಯ ನಿರ್ವಹಿಸಿದ್ದೇ ಆದರೆ ಖಂಡಿತ ಕೆಲವೇ ವರ್ಷಗಳಲ್ಲಿ ಬಾಬಾಸಾಹೇಬರ ಅಸೆ ಈಡೇರುತ್ತದೆ- ಡಾ ನಾಗೇಶ್ ಮೌರ್ಯ, ಬೌದ್ಧ ಚಿಂತಕರು.
ಬಡವರಿಗೆ ಧರ್ಮವು ಒಂದು ಅವಶ್ಯಕತೆಯಾಗಿದೆ. ಸಂಕಷ್ಟದಲ್ಲಿರುವ ಜನರಿಗೆ ಧರ್ಮವು ಅನಿವಾರ್ಯವಾಗಿರುತ್ತದೆ. ಬಡವನು ಭರವಸೆಯ ಮೇಲೆ ಬದುಕುತ್ತಾನೆ. ಭರವಸೆ ಜೀವನದ ಮೂಲ ಆಶಯವಾಗಿದೆ. ಈ ಭರವಸೆ ನಾಶವಾದರೆ ಜೀವನ ಹೇಗೆ ಮುಂದುವರೆಯುತ್ತದೆ? ಧರ್ಮವು ಒಬ್ಬನನ್ನು/ ಒಬ್ಬಳನ್ನು ಆಶಾದಾಯಕವಾಗಿಸುತ್ತದೆ. ಆದ್ದರಿಂದ ಬಡವ ಮತ್ತು ದುಃಖಿತ ಮಾನವ ಕುಲವು ಧರ್ಮಕ್ಕೆ ಅಂಟಿಕೊಳ್ಳುತ್ತದೆ. ಹೀಗೆ ಧರ್ಮದ ಮಹತ್ವವನ್ನು ಬಾಬಾಸಾಹೇಬರು ಸಾಮಾನ್ಯ ಜನರನ್ನು ಉದ್ದೇಶಿಸಿ ಹೇಳಿದ್ದಾರೆ.
ಕಾರ್ಲ್ ಮಾರ್ಕ್ಸ್ ಅವರ ಬರಹಗಳಿಂದಾಗಿ ಒಂದು ದೊಡ್ಡ ವರ್ಗ ಸೃಷ್ಟಿಯಾಗಿದೆ ಎಂದು ನನಗೆ ತಿಳಿದಿದೆ. ಅವರ ನಂಬಿಕೆಯ ಪ್ರಕಾರ ಧರ್ಮಕ್ಕೆ ಏನೂ ಅರ್ಥವಿಲ್ಲ, ಅದೊಂದು ಅಫೀಮು ಇದ್ದಂತೆ, ಅವರಿಗೆ ಧರ್ಮ ಮುಖ್ಯವಲ್ಲ. ಈ ಮಾತುಗಳನ್ನು ಬಾಬಾಸಾಹೇಬರು ಒಪ್ಪುವುದಿಲ್ಲವೆಂದು ತಿರಸ್ಕಾರ ಮಾಡುತ್ತ ಹೀಗೆ ಹೇಳಿದ್ದಾರೆ “ಮಾನವಕುಲದ ಪ್ರಗತಿಗೆ ಧರ್ಮ ಬಹಳ ಅವಶ್ಯಕವಾದ ವಿಷಯ”.
ನಮಗೆಲ್ಲ ತಿಳಿದಿರುವ ಹಾಗೆ ಬಾಬಾಸಾಹೇಬರು ಹಿಂದೂ ಧರ್ಮ ತೊರೆದು ಸಮಾನತೆಯ ಬೌದ್ಧ ಧರ್ಮವನ್ನು ಅಪ್ಪಿದರು. ಅವರು ಸುಖಾಸುಮ್ಮನೆ ಬೌದ್ಧ ಧರ್ಮ ಸ್ವೀಕರಿಸಲಿಲ್ಲ, ಪ್ರಪಂಚದ ಬಹುತೇಕ ಧರ್ಮಗಳನ್ನು ಅಧ್ಯಯನ ಮಾಡಿದರು. ಧರ್ಮ ಸ್ವೀಕಾರ ಯೋಗ್ಯ ಧರ್ಮ ಯಾವುದೆಂದು ತೀರ್ಮಾನಿಸಲು ಬಹುಶಃ ಇಷ್ಟು ಪೂರ್ವ ತಯಾರಿ ಮಾಡಿದ ಮತ್ತೊಬ್ಬ ಫಿಲಾಸಫರ್ ಇತಿಹಾಸದಲ್ಲಿ ದೊರೆಯುವುದಿಲ್ಲ. ಬೌದ್ಧ ಧರ್ಮ ಸ್ವೀಕರಿಸುವ ಸಮಯದಲ್ಲಿ ಭಾರತದಲ್ಲಿ ಬೌದ್ಧ ಧರ್ಮದ ಸ್ಥಿತಿ ಒಣಗಿದ ಮರದಂತೆ ಇತ್ತು. ಅ ಮರಕ್ಕೆ ತಗುಲಿದ ರೋಗವನ್ನು ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡಿ ಅದು ಮರಳಿ ಚಿಗುರುವಂತೆ ಮಾಡಿದ್ದು ಬೋಧಿಸತ್ವ ಬಾಬಾಸಾಹೇಬ್ ಅಂಬೇಡ್ಕರ್. ಬೌದ್ಧ ಧರ್ಮದ ಮೂಲ ಆಶಯಗಳಿಗೆ ಎಲ್ಲಿಯೂ ಧಕ್ಕೆ ಬರದಂತೆ ಅದನ್ನು ಶುದ್ಧಿಕರಿಸಿ ನಮ್ಮ ಮುಂದೆ ಮತ್ತೆ ತಂದು ನಿಲ್ಲಿಸಿದ್ದು ಅವರು ಬೌದ್ಧ ಧರ್ಮದಲ್ಲಿಟ್ಟಿದ್ದ ನಂಬಿಕೆಗೆ ಸಾಕ್ಷಿ. ಹಾಗಾದರೆ ಬಾಬಾಸಾಹೇಬರ ದೃಷ್ಟಿಯಲ್ಲಿ ಬೌದ್ಧ ಧರ್ಮದ ಪ್ರಚಾರ ಹೇಗಿರಬೇಕು ಎಂಬುದನ್ನು ಅವರ ಮಾತುಗಳಲ್ಲೇ ನೋಡೋಣ.

“ನನ್ನದು ದೊಡ್ಡ ಜವಾಬ್ದಾರಿ”. ಕೆಲವರು ಕೇಳುತ್ತಾರೆ ” ನೀವು ಮತಾಂತರವಾಗಲು ಇಷ್ಟು ಸಮಯ ಏಕೆ ತೆಗೆದುಕೊಂಡಿರಿ” ಎಂದು. ಈ ಪ್ರಶ್ನೆ ಮುಖ್ಯವಾಗಿದೆ. ಧಾರ್ಮಿಕ ತಿಳುವಳಿಕೆ ನೀಡುವ ಕೆಲಸ ಸುಲಭವಲ್ಲ. ಇದು ಒಬ್ಬ ವ್ಯಕ್ತಿಯ ಕೆಲಸವಲ್ಲ. ಧರ್ಮದ ಬಗ್ಗೆ ಯೋಚಿಸುವ ಯಾವುದೇ ಮನುಷ್ಯನಿಗೆ ಈ ಕಾರ್ಯದ ಮಹತ್ವ ಅರ್ಥವಾಗುತ್ತದೆ. ಜಗತ್ತಿನಲ್ಲಿ ಯಾವುದೇ ಮನುಷ್ಯನಿಗೆ ನನ್ನಷ್ಟು ಜವಾಬ್ದಾರಿ ಇಲ್ಲ. ನನಗೆ ಸಾಕಷ್ಟು ದೀರ್ಘ ಜೀವನ ಸಿಕ್ಕರೆ, ನಾನು ನನ್ನ ನಿಗದಿತ ಕೆಲಸವನ್ನು ಪೂರ್ಣಗೊಳಿಸುತ್ತೇನೆ” ಎಂದು ಪ್ರವಾದಿಯಂತೆ ಉತ್ತರಿಸಿದರು.
ಮುಂದುವರೆದು ಮಾತನಾಡುತ್ತ ಹೇಳುತ್ತಾರೆ ” ಬೌದ್ಧ ಧರ್ಮವನ್ನು ಉತ್ತಮ ರೀತಿಯಲ್ಲಿ ಆಚರಿಸಲು ನಾವು ದೃಢ ನಿಶ್ಚಯ ಮಾಡಬೇಕು. ನನ್ನ ಜನರು ಬೌದ್ಧ ಧರ್ಮಕ್ಕೆ ಅಪಚಾರ ತರುವ, ಬೌದ್ಧ ಧರ್ಮವನ್ನು ಕೆಳಮಟ್ಟಕ್ಕೆ ತರುವ ಘಟನೆಗಳು ಸಂಭವಿಸಲು ಬಿಡಬಾರದು. ನಾವು ದೃಢ ನಿರ್ಧಾರ ತೆಗೆದುಕೊಳ್ಳಬೇಕು. ನಾವು ಇದನ್ನು ಸಾಧಿಸಿದರೆ, ನಾವು ನಮ್ಮನ್ನು ಉಳಿಸಿಕೊಳ್ಳುತ್ತೇವೆ ಮತ್ತು ನಮ್ಮ ದೇಶವನ್ನು ಸಹ ಉಳಿಸುತ್ತೇವೆ. ಅದು ಮಾತ್ರವಲ್ಲ ಜಗತ್ತನ್ನು ಸಹ ಉಳಿಸುತ್ತೇವೆ. ಏಕೆಂದರೆ ಬೌದ್ಧ ಧರ್ಮವು ಪ್ರಪಂಚದ ರಕ್ಷಕನಾಗುತ್ತದೆ. ಜಗತ್ತು ನ್ಯಾಯವನ್ನು ಸಾಧಿಸುವವರೆಗೆ ಶಾಂತಿ ನೆಲೆಗೊಳ್ಳುವುದಿಲ್ಲ ಎಂದು ಎಚ್ಚರಿಸಿದರು.
ಈ ಹೊಸ ಮಾರ್ಗವು ಜವಾಬ್ದಾರಿಯದ್ದಾಗಿದೆ. ನಾವು ಕೆಲವು ನಿರ್ಣಾಯಗಳನ್ನು ಮಾಡಿದ್ದೇವೆ. ಕೆಲವು ಆಸೆಗಳನ್ನು ವ್ಯಕ್ತಪಡಿಸಿದ್ದೇವೆ. ಯುವಕರು ಇದನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು. ಅವರು ತಮ್ಮ ಹೊಟ್ಟೆಪಾಡಿಗಾಗಿ ಕೇವಲ ಸಣ್ಣ ಪುಟ್ಟ ಅಧಿಕಾರಿಗಳಾಗ ಬಾರದು. ಜೊತೆಗೆ ” ನಾನು ನನ್ನ ಗಳಿಕೆಯ ಇಪ್ಪತ್ತನೇ ಒಂದು ಭಾಗವನ್ನು ಈ ಕೆಲಸಕ್ಕೆ ನೀಡುತ್ತೇನೆ ” ಎಂಬ ನಿರ್ಧಾರವನ್ನು ನಾವು ತೆಗೆದುಕೊಳ್ಳಬೇಕು ಎಂದು ಬಾಬಾಸಾಹೇಬರು ಯುವಕರಿಗೆ, ನೌಕರರಿಗೆ ಕರೆ ನೀಡಿದರು.
ಬೌದ್ಧ ಧರ್ಮ ಹೇಗಿದೆ ಅಂದರೆ ಇದು ಬಹುಜನರ ಕಲ್ಯಾಣಕ್ಕಾಗಿ, ಬಹುಜನರ ಸ್ನೇಹಕ್ಕಾಗಿ, ಪ್ರಪಂಚದ ಬಗ್ಗೆ ಕರುಣೆಯಿಂದ ನೋಡುವುದಕ್ಕಾಗಿ ಈ ಧರ್ಮವು ಆರಂಭದಲ್ಲಿ ಕಲ್ಯಾಣ, ಮಧ್ಯದಲ್ಲಿ ಕಲ್ಯಾಣ ಮತ್ತು ಅಂತ್ಯದಲ್ಲಿ ಕಲ್ಯಾಣಕ್ಕೆ ಅನುಕೂಲಕರವಾಗಿದೆ. ಬುದ್ಧರ ಯುಗದ ಪರಿಸ್ಥಿತಿಗಳಲ್ಲಿ, ಆ ರೀತಿಯಲ್ಲಿ ತಥಾಗತರು ತಮ್ಮ ಧಮ್ಮವನ್ನು ಹರಡಲು ದಾರಿಯನ್ನು ಸಿದ್ಧಪಡಿಸಿದರು. ಈಗ ನಾವು ಸಹ ಒಂದು ಮಾರ್ಗವನ್ನು ಸಿದ್ಧ ಪಡಿಸಬೇಕು. ಪ್ರತಿಯೊಬ್ಬರೂ, ಪ್ರತಿಯೊಬ್ಬರಿಗೂ ದೀಕ್ಷೆ ನೀಡುವಂತೆ ತಯಾರಾಗಬೇಕು. ಇದನ್ನು ನಾನು ಘೋಷಿಸುತ್ತೇನೆ ಎಂದು ಬಾಬಾಸಾಹೇಬರು ಸ್ಪಷ್ಟವಾಗಿ ಬೌದ್ಧ ಧರ್ಮದ ಪ್ರಚಾರಕ್ಕೆ ಬುನಾದಿ ಹಾಕಿದರು. ಅವರು ಅದಕ್ಕಾಗಿ BSI ನ್ನು ಸ್ಥಾಪಿಸಿದರು, ಬುದ್ಧ ಮತ್ತು ಅವರ ಧಮ್ಮ ಕೃತಿ ಬರೆದರು.
ಇನ್ನೊಂದು ಮಹತ್ವ ಪೂರ್ಣ ಜ್ಞಾಪಕ ಪತ್ರದಲ್ಲಿ ಬರ್ಮ ದೇಶಕ್ಕೆ ಮನವಿ ಮಾಡುತ್ತ ಬೌದ್ಧ ಧರ್ಮದ ಪ್ರಚಾರಕ್ಕೆ ಬೌದ್ಧ ದೇಶಗಳು ಹೇಗೆ ಮತ್ತು ಏಕೆ ನೆರವು ನೀಡಬೇಕು ಎಂಬುದರ ಬಗ್ಗೆ ಸುದೀರ್ಘವಾಗಿ ಚರ್ಚಿಸಿದ್ದಾರೆ. ಅದು ಹೀಗಿದೆ “ಬರ್ಮಾದ ಹೊರಗೆ ಬೌದ್ಧ ಧರ್ಮವನ್ನು ಹರಡುವುದು ಶಾಸನ ಮಂಡಳಿಯ ಉದ್ದೇಶಗಳಲ್ಲಿ ಒಂದಾಗಿರಲಿ. ಆಗ ಅವರು ತಮ್ಮ ಪ್ರಯತ್ನದ ಕೇಂದ್ರವನ್ನಾಗಿ ಆಯ್ಕೆ ಮಾಡಿಕೊಳ್ಳಬೇಕಾದ ಮೊದಲ ದೇಶ ಭಾರತವಾಗಿರಬೇಕು, ಬೇರೆ ಯಾವುದೇ ದೇಶವು ಭಾರತ ನೀಡುವಷ್ಟು ಮಹತ್ವ ನೀಡುವುದಿಲ್ಲ. ಕಾರಣ ಸ್ಪಷ್ಟ ಭಾರತ ಬೌದ್ಧ ಧರ್ಮದ ಜನ್ಮ ಸ್ಥಳ. ಬೌದ್ಧ ಧರ್ಮವು ಕಣ್ಮರೆಯಾದರೂ ಬುದ್ಧರ ಹೆಸರು ಇನ್ನೂ ಜನಮಾನಸದಲ್ಲಿದೆ. ಬೌದ್ಧ ಧರ್ಮದ ನೆನೆಪು ಇನ್ನೂ ಹಸಿರಾಗಿದೆ. ಭಾರತಕ್ಕೆ ಸಂಬಂಧಿಸಿದಂತೆ ಬುದ್ಧನಿಗೆ ಪಾಸ್ ಪೋರ್ಟ್, ವೀಸಾ ಅಗತ್ಯವಿಲ್ಲ. ಹಿಂದೂ ಧರ್ಮವನ್ನು ತೊರೆದು ಬೌದ್ಧ ಧರ್ಮ ಸೇರಲು ಉತ್ಸುಕರಾಗಿರುವ ಕೆಲವು ಜನಾಂಗಗಳು ಭಾರತದಲ್ಲಿವೆ. ಭಾರತದಲ್ಲಿರುವ ಅಸ್ಪೃಶ್ಯರು ಮತ್ತು ಹಿಂದುಳಿದ ವರ್ಗಗಳು ಅವರುಗಳಲ್ಲಿ ಮುಖ್ಯವಾಗಿದ್ದಾರೆ. ಈ ವರ್ಗಗಳು ಹಿಂದೂ ಧರ್ಮದ ವಿರುದ್ಧ ಹೋರಾಡುತ್ತಿವೆ. ಭಾರತೀಯರು ಹೊರದೇಶದಿಂದ ಬಂದ ಕ್ರಿಶ್ಚಿಯನ್ ಅಥವಾ ಇಸ್ಲಾಂ ಧರ್ಮಗಳಿಗಿಂತ ಈ ದೇಶದ ಮೂಲ ಸಂಸ್ಕೃತಿಯ ಸೆಲೆಯಾಗಿರುವ ಬೌದ್ಧ ಧರ್ಮಕ್ಕೆ ಬರಲು ಬಯಸುತ್ತಾರೆ ಎಂದು ಹೇಳಿದರು.
ಹೌದು. ಹೀಗೆ ಹೊಸದಾಗಿ ಧರ್ಮ ಸೇರಿದವರಿಗೆ ನಿರಂತರ ಸಂಗಾತಿ ಆಗಬಹುದಾದ ಬೌದ್ಧ ಧರ್ಮದ ಪ್ರವಚನಗಳ ಸಂಗ್ರಹದ ಪುಸ್ತಕಗಳ ಅತ್ಯವಶ್ಯಕವಿದೆ. ಬುದ್ಧನ ಬೋಧನೆಗಳನ್ನು ಒಳಗೊಂಡಿರುವ ಸರಳವಾದ ಸಣ್ಣ ಸಣ್ಣ ಪ್ರವಚನ ಮಾಲಿಕೆಗಳ ಪುಸ್ತಕಗಳು ಲಭ್ಯವಿಲ್ಲದಿರುವುದು ಬೌದ್ಧ ಧರ್ಮದ ಪ್ರಚಾರಕ್ಕಿರುವ ಒಂದು ದೊಡ್ಡ ನ್ಯೂನತೆಯಾಗಿದೆ. ಸಾಮಾನ್ಯ ಜನರು ಎಲ್ಲಾ ಪಾಲಿ ಸಾಹಿತ್ಯವನ್ನು ಓದುತ್ತಾರೆಂದು ನಿರೀಕ್ಷಿಸಲಾಗುವುದಿಲ್ಲ, ಕ್ರಿಸ್ತನ ಸಂದೇಶವನ್ನು ‘ದಿ ಬೈಬಲ್’ ಎಂಬ ಸಣ್ಣ ಕಿರು ಪುಸ್ತಕದಲ್ಲಿ ಪ್ರಕಟಿಸಿದ್ದರಿಂದ ಕ್ರಿಶ್ಚಿಯನ್ ಧರ್ಮವು ಬೇರೆಲ್ಲ ಧರ್ಮಗಳಿಗಿಂತ ಹೆಚ್ಚಿನ ಪ್ರಯೋಜನ ಪಡೆಯಿತು.
ಹೆಚ್ಚಿನ ಬೌದ್ಧ ದೇಶಗಳಲ್ಲಿ ಧ್ಯಾನ, ಚಿಂತನೆ ಮತ್ತು ಅಭಿದಮ್ಮಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಎಂದು ನಾನು ಕಂಡುಕೊಂಡಿದ್ದೇನೆ. ಭಾರತೀಯರಿಗೆ ಬೌದ್ಧ ಧರ್ಮವನ್ನು ಪ್ರಸ್ತುತ ಪಡಿಸಲು ಈ ವಿಧಾನವು ಮಾರಕವಾಗಿದೆ. ಸಾಮಾನ್ಯ ಜನರಿಗೆ ಕ್ರಿಶ್ಚಿಯನ್ ಧರ್ಮದಲ್ಲಿ ಬ್ಯಾಪ್ಟಿಸಮ್ ನಂತಹ ಸಮಾರಂಭವಿದೆ. ಬುದ್ಧನ ಸಾಮಾನ್ಯ ಶಿಷ್ಯನಾಗಲು ಈ ರೀತಿಯ ಯಾವುದೇ ಸರಳ ಸಮಾರಂಭವಿಲ್ಲ. ಹೀಗಿರುವ ಸಮಾರಂಭಗಳು, ಬಿಕ್ಕು ಆಗುವುದಕ್ಕೆ ಮತ್ತು ಸಂಘ ಪ್ರವೇಶಿಸುವುದಕ್ಕಷ್ಟೇ ಸೀಮಿತವಾಗಿವೆ. ಬೌದ್ಧ ಧರ್ಮಕ್ಕೆ ಮತಾಂತರಗೊಂಡ ನಂತರ ಜನರು ಬೌದ್ಧ ಧರ್ಮದಿಂದ ಹೊರಗುಳಿಯಲು ಇದು ಒಂದು ಮುಖ್ಯ ಕಾರಣವಾಗಿದೆ ಎಂದು ಗುರ್ತಿಸುತ್ತಾರೆ.

ಸಾಮಾನ್ಯ ವ್ಯಕ್ತಿಯು ಬೌದ್ಧ ಎಂದು ಕರೆಯುವ ಮೊದಲು ಮಾಡಬೇಕಾದ ಕೆಲಸವೆಂದರೆ ಅದು ಬ್ಯಾಪ್ಟಿಸಂನಂತಹ ಸಮಾರಂಭವನ್ನು ಹಾದು ಬೌದ್ಧನಾಗಬೇಕಾಗಿದೆ. ಅದನ್ನು ಈಗ ನಾವು ಹೊಸದಾಗಿ ಪರಿಚಯಿಸಬೇಕಿದೆ. ಕೇವಲ ಪಂಚಶೀಲವನ್ನು ಉಚ್ಚರಿಸುವುದು ಸಾಕಾಗುವುದಿಲ್ಲ. ಒಬ್ಬ ವ್ಯಕ್ತಿಯು ತಾನು ಹಿಂದೂ ಧರ್ಮದಲ್ಲಿ ಮುಂದುವರಿಯದೆ, ಹೊಸ ಮನುಷ್ಯನಾಗುತ್ತಿದ್ದೇನೆ ಎಂದು ಭಾವಿಸಲು ಇನ್ನೂ ಅನೇಕ ನಿಯಮಗಳನ್ನ ಸೇರಿಸಬೇಕು. (ಅದಕ್ಕಾಗಿಯೇ 22 ಪ್ರತಿಜ್ಞಾವಿಧಿಗಳನ್ನು ಬಾಬಾ ಸಾಹೇಬರು ದೀಕ್ಷ ಭೂಮಿಯಲ್ಲಿ ಬೋಧಿಸಿದ್ದು).
ಬುದ್ಧನ ಪ್ರವಚನಗಳನ್ನು ಸಾಮಾನ್ಯ ಜನರಿಗೆ ಬೋಧಿಸಲು ಮತ್ತು ಹೊಸದಾಗಿ ದೀಕ್ಷೆ ಪಡೆದವರು ಬುದ್ಧ ಧರ್ಮವನ್ನು ಎಷ್ಟರಮಟ್ಟಿಗೆ ಅನುಸರಿಸುತ್ತಿದ್ದಾರೆ ಎಂದು ನೋಡಲು, ವಿಶ್ಲೇಷಿಸಲು ಹಲವಾರು ಧಮ್ಮಚಾರಿಗಳನ್ನು, ಬುದ್ಧಿವಂತ ಬೋಧಕರನ್ನು ನೇಮಿಸುವುದರ ಅವಶ್ಯಕತೆ ಇದೆ, ಈ ಬೋಧಕರಿಗೆ ಸಂಬಳ ಸಹ ನೀಡಬೇಕು ಅವರು ವಿವಾಹಿತರಾಗಿರಬಹುದೆಂಬ ನಿಯಮವಿರಬೇಕು. ಧರ್ಮ ಪ್ರಚಾರಕರಾಗಲು ಬಯಸುವ ವ್ಯಕ್ತಿಗಳಿಗೆ ಬೌದ್ಧ ಧರ್ಮವನ್ನು ಕಲಿಸಲು ಮತ್ತು ಇತರ ಧರ್ಮಗಳ ಬಗ್ಗೆ ತುಲನಾತ್ಮಕ ಅಧ್ಯಯನ ಮಾಡಲು ಬೌದ್ಧ ಧರ್ಮ ಅಧ್ಯಯನ ಕೇಂದ್ರಗಳ ಸ್ಥಾಪನೆಯ ಅಗತ್ಯವಿದೆ. ಪ್ರತಿ ಭಾನುವಾರ ವಿಹಾರಗಳಲ್ಲಿ ಸಾಮೂಹಿಕ ಪ್ರಾರ್ಥನೆ, ಪಠಣಗಳ ನಂತರ ಧರ್ಮೋಪದೇಶವಿರಬೇಕು. ಈ ರೀತಿಯಲ್ಲಿ ಪ್ರಾಥಮಿಕ ಹಂತಗಳಲ್ಲಿ ಕೈಗೊಳ್ಳಬೇಕಾದ ಕೆಲಸಗಳ ಜೊತೆಗೆ ನಮ್ಮ ಪ್ರಚಾರ ಅಭಿಯಾನಕ್ಕೆ ಸಹಾಯಕವಾಗಿ, ನಾವು ಇನ್ನೂ ಕೆಲವು ದೊಡ್ಡ ಪ್ರಮಾಣದಲ್ಲಿ ಮಾಡಬೇಕಾದ ಜವಾಬ್ದಾರಿಗಳಿವೆ. ಅವುಗಳೆಂದರೆ ದೇಶದ ನಾಲ್ಕು ಪ್ರಮುಖ ಪಟ್ಟಣಗಳಲ್ಲಿ ದೊಡ್ಡ ಅಧ್ಯಯನ ಕೇಂದ್ರಗಳು ಮತ್ತು ವಿಹಾರಗಳ ನಿರ್ಮಾಣ 1. ಮದ್ರಾಸ್ 2. ಬಾಂಬೆ 3. ಕಲ್ಕತ್ತಾ ಮತ್ತು 4. ದೆಹಲಿ (ಮುಂದೆ ಬೆಂಗಳೂರು ಕೂಡ ಬಾಬಾ ಸಾಹೇಬರ ಮನಸಿಗೆ ಬಂದಿತ್ತು . ಅದರ ಭಾಗವಾಗಿ ಮೈಸೂರು ಮಹಾರಾಜರಿಂದ ಐದು ಎಕರೆ ಜಮೀನು ಪಡೆದಿದ್ದರು ಈಗ ಅಲ್ಲಿ ನಾಗಸೇನ ಬುದ್ಧ ವಿಹಾರ ನಿರ್ಮಿಸಲಾಗಿದೆ. ಒಂದು ಶಾಲೆಯು ನಡೆಯುತ್ತಿದೆ).
ಬೌದ್ಧ ಧರ್ಮದ ಸಾಹಿತ್ಯವನ್ನು ಅಧ್ಯಯನ ಮಾಡಲು, ಜನರನ್ನು ಆಕರ್ಷಿಸಲು ಬೌದ್ಧ ವಿಷಯಗಳ ಕುರಿತು ಪ್ರಬಂಧಗಳನ್ನು ಆಹ್ವಾನಿಸುವುದು ಮತ್ತು ಮೊದಲ ಮೂರು ಸ್ಥಾನಗಳನ್ನು ಪಡೆದವರಿಗೆ ಬಹುಮಾನಗಳನ್ನು ನೀಡುವುದು, ಪ್ರಬಂಧಗಳನ್ನು ಬರೆಯಲು ಅದರಲ್ಲಿ ಭಾಗವಹಿಸಲು ಎಲ್ಲಾ ಹಿಂದೂಗಳು ಮುಸ್ಲಿಮರು ಮತ್ತು ಕ್ರಿಶ್ಚಿಯನ್ ಪುರುಷರು ಮತ್ತು ಮಹಿಳೆಯರಿಗೆ ಮುಕ್ತ ಆಹ್ವಾನ ನೀಡಬೇಕು. ವಿಹಾರಗಳಲ್ಲಿ ನಿಜವಾಗಿಯೂ ಏನೋ ದೊಡ್ಡ ವಿಷಯ ಅಥವಾ ಸಮಾರಂಭ ನಡೆಯುತ್ತಿದೆ ಎಂಬ ಭಾವನೆ ಮೂಡಿಸುವಷ್ಟು ದೊಡ್ಡದಾಗಿರಬೇಕು. ಪ್ರೌಢಶಾಲೆಗಳು ಮತ್ತು ಕಾಲೇಜುಗಳು ಇಂತಹ ಅಗತ್ಯವಾದ ವಾತಾವರಣ ನಿರ್ಮಿಸಲು ಪೂರಕವಾಗಿವೆ. ಇವು ಯುವಕರಲ್ಲಿ ಬೌದ್ಧ ವಾತಾವರಣವನ್ನು ಸೃಷ್ಟಿಸಲು ಸಾಧ್ಯವಾಗುತ್ತದೆ. ಹೆಚ್ಚಿನ ಕೃಷಿಯನ್ನು ಮಿಷನರಿಗಳು ತಮ್ಮ ಚಟುವಟಿಕೆಗಳಿಗೆ ಹಣಕಾಸು ಒದಗಿಸಲು ಈ ಮಾರ್ಗವನ್ನು ಕಂಡುಕೊಳ್ಳುತ್ತವೆ ಎಂಬುದನ್ನು ನಾವು ನೆನಪಿನಲ್ಲಿಡಬೇಕು. ಅವರು ನಡೆಸುವ ಶಾಲೆಗಳು ಮತ್ತು ಕಾಲೇಜುಗಳಿಂದ ಬರುವ ಹೆಚ್ಚುವರಿ ಆದಾಯದಿಂದ ಅವರಿಗದು ಸಾಧ್ಯವಾಗುತ್ತದೆ.
ಹೀಗೆ ಬಾಬಾಸಾಹೇಬರ ಕನಸು ನನಸು ಮಾಡಲು ಅವರೇ ಹಾಕಿಕೊಟ್ಟ ಮಾರ್ಗದಲ್ಲಿ ಅವರ ಅನುಯಾಯಿಗಳಾದ ನಾವು ನಮ್ಮ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಲು ಪಣ ತೊಡಬೇಕು. ಈ ನಿಟ್ಟಿನಲ್ಲಿ ನಮ್ಮ DSS ದಲಿತ ಸಂಘಟನೆಗಳು ತಮ್ಮ ಗುರುತನ್ನು DSS ಎಂದು ಹಾಗೆ ಉಳಿಸಿಕೊಂಡು “ಧಮ್ಮ ಸೇವಕ ಸಂಘ”ಗಳಾಗಿ ಬದಲಾಗಿ ಹೊಸ ಹುರುಪಿನೊಂದಿಗೆ ಕಾರ್ಯ ನಿರ್ವಹಿಸಿದ್ದೇ ಆದರೆ ಖಂಡಿತ ಕೆಲವೇ ವರ್ಷಗಳಲ್ಲಿ ಬಾಬಾಸಾಹೇಬರ ಅಸೆ ಈಡೇರುತ್ತದೆ ಎಂಬ ಆಶಯವನ್ನು ಈ ಲೇಖನದ ಮೂಲಕ ವ್ಯಕ್ತಪಡಿಸುತಿದ್ದೇನೆ.
ಡಾ ನಾಗೇಶ್ ಮೌರ್ಯ
ಬೌದ್ಧ ಚಿಂತಕರು
ಇದನ್ನೂ ಓದಿ- ಕುವೆಂಪು: ವಿಚಾರ ಕ್ರಾಂತಿಯ ಬೆಳಕು


