ಮರೆಯಾದ ಪ್ರಖರ ವೈಚಾರಿಕ ಧ್ವನಿ: ಮಹೇಶ್ ಚಂದ್ರ ಗುರು

Most read

ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ನಿವೃತ್ತ ಪ್ರಾಧ್ಯಪಕ ಪ್ರಗತಿಪರ ಚಿಂತಕ ಪ್ರೊ.ಮಹೇಶ್ ಚಂದ್ರಗುರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರೊಂದಿಗೆ ಒಡನಾಟ ಹೊಂದಿದ್ದ ಚಿತ್ರ ನಿರ್ದೇಶಕ ಹಾಗೂ ಚಿಂತಕರಾದ ಡಾ. ಚಮರಂ ನುಡಿನಮನ ಸಲ್ಲಿಸಿದ್ದಾರೆ

ಮೈಸೂರು ಪ್ರಾಂತ್ಯದಲ್ಲಿ ಪ್ರೊ. ಮಹೇಶ್ ಚಂದ್ರ ಗುರು ಹೆಸರು ವೈಚಾರಿಕ ವಲಯದಲ್ಲಿ ಬಹಳ ಮುಂಚೂಣಿಯಲ್ಲಿತ್ತು ಎಂಬುದನ್ನು ಇಡೀ ನಾಡು ಕಂಡಿದೆ. ಸರಿಸುಮಾರು ಮೂರು ದಶಕಗಳ ಕಾಲ ಮನುವಾದಿಗಳ ವಿರುದ್ದ ಗುಡುಗಿ ಅವರ ಸದ್ದಡಗಿಸಿದ್ದ ಪ್ರೊ.ಮಹೇಶ್ ಚಂದ್ರ ಗುರು ನೆನ್ನೆ ನಮ್ಮನ್ನಗಲಿದ್ದಾರೆ. ನಮ್ಮನ್ನಗಲಿದ್ದಾರೆ ಎಂದರೆ ಪ್ರಖರ ವೈಚಾರಿಕ ಧ್ವನಿಯೊಂದು ಮೌನವಾಗಿದೆ.

ಶನಿವಾರಸಂಜೆ 8 ಗಂಟೆಯಲ್ಲಿ ಪ್ರೊ.ಗುರು ಹೃದಯಾಘಾತದಿಂದ ಮರಣಿಸಿದ ಸುದ್ದಿ ನಾಡಿನ ವೈಚಾರಿಕ ವಲಯವನ್ನು ದಿಗ್ಬ್ರಾಂತಗೊಳಿಸಿದೆ.

ಕಳೆದೆರಡು ತಿಂಗಳಿಂದ ಪ್ರೊ.ಗುರು ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು. ಅನಾರೋಗ್ಯಕ್ಕೀಡಾಗಿದ್ದಾಗಲೂ ಹಲವು ವಿಚಾರಗಳ ಕುರಿತು ಆನ್ ಲೈನ್ ಸಂವಾದ ನಡೆಸಿದ್ದರು.

ವಿಚಾರವಾದದಲ್ಲಿ ಎಂದೂ ರಾಜಿಯಾಗದ ಬದ್ದತೆ ಅವರಲ್ಲಿತ್ತು. ಅದಕ್ಕಾಗಿ ಅವರು ಜೈಲಿಗೂ ಹೋಗಿಬಂದಿದ್ದರು!

ಯಾರದೇ ಮುಲಾಜಿಗೂ ಒಳಗಾಗದೆ ಸೈದ್ದಾಂತಿಕ ವಿಚಾರಧಾರೆಯನ್ನು ಪ್ರತಿಪಾದಿಸುತ್ತಿದ್ದ ಪ್ರೊ.ಗುರು ಹಲವು ಪ್ರಗತಿಪರ ಸಂಘಟನೆಗಳ ವೈಚಾರಿಕ ಶಕ್ತಿಯಾಗಿದ್ದರು.

ನಾನು ಅವರು ಇಬ್ಬರೂ ಗುಂಡ್ಲುಪೇಟೆ ಯವರು. ಅವರು ಗುಂಡ್ಲುಪೇಟೆ ಪಟ್ಟಣದಲ್ಲಿಯೇ ಹುಟ್ಟಿ ಬೆಳೆದವರು. ನಾನು ತಾಲೂಕಿನ ಒಂದು ಕುಗ್ರಾಮದವನು. ನಮ್ಮಂತಹ ಯುವ ಮನಸುಗಳಲ್ಲಿ ವೈಚಾರಿಕ ಚಿಂತನೆಗೆ ಪ್ರೇರಣೆಯಾಗಿದ್ದವರು ಮಹೇಶ್ ಚಂದ್ರ ಗುರುಗಳು.

ನನ್ನ ಬರಹ ಭಾಷಣಗಳನ್ನು ಬಹಳ ಕೊಂಡಾಡಿ ಮೆಚ್ಚುತ್ತಿದ್ದ ಗುರುಗಳು ನಮ್ಮೂರ್ ಹುಡ್ಗ ಎಂದೆ ಎಲ್ಲರೆದುರು ಹೆಮ್ಮೆಯಿಂದ ಪರಿಚಯಿಸುತ್ತಿದ್ದರು. ʼಪತ್ರಿಕೋದ್ಯಮದ ಪ್ರೊಫೆಸರ್ ಆಗಿ ನಾನೇ ಒಂದು ಪತ್ರಿಕೆ ನಡೆಸಲು ಸಾಧ್ಯವಾಗಲಿಲ್ಲ. ಆದರೆ ನಮ್ಮೂರ್ ಹುಡ್ಗ ಓದಿದ್ದು ಬಯೋಟೆಕ್ನಾಲಜಿಯಲ್ಲಿ ಆದರೆ ಬಹಳ ಅದ್ಬುತವಾಗಿ “ಸಮಾಜ ಪರಿವರ್ತನ” ಪತ್ರಿಕೆಯ ಸಂಪಾದಕನಾಗಿ ನಾಡಿನಾದ್ಯಂತ ಅಂಬೇಡ್ಕರ್ ಫುಲೆ ವಿಚಾರಧಾರೆಗಳನ್ನು ಬಹಳ ಪ್ರಬಲವಾಗಿ ಹರಡುತ್ತಿದ್ದಾನೆ ನಮ್ ಚಮರಂ ಅವನನ್ನು ನಾವು ಬೆಳೆಸಬೇಕುʼ ಎಂದು ಹುರಿದುಂಬಿಸುತ್ತಿದ್ದರು.  ಮೈಸೂರು ವಿವಿ ಅಥವಾ ಮೈಸೂರು ಸುತ್ತಮುತ್ತಲ ಯಾವುದೇ ವೈಚಾರಿಕ ಸೆಮಿನಾರ್ ಗಳು ಮಹೇಶ್ ಚಂದ್ರಗುರು ಇಲ್ಲದೆ ನಡೆದಿರುವ ನಿದರ್ಶನಗಳೇ ವಿರಳ.

ವಿಶೇಷವೆಂದರೆ ಅವರು ಇರುತ್ತಿದ್ದ ಬಹುತೇಕ ಕಾರ್ಯಕ್ರಮ ಗಳಲ್ಲಿ ನಾನೂ ಇರುತ್ತಿದ್ದೆ ಎಂಬುದು ನನಗೆ ಹೆಮ್ಮೆ.

ವಿಚಾರ ಕ್ರಾಂತಿಯಲ್ಲಿ ಅವರ ಧ್ವನಿ ಬಹಳವೇ ಶಾರ್ಪ್ ಆಗಿತ್ತು. ಮಾತುಗಳಲ್ಲಿ ಕೊಂಚ ಉದ್ರೇಕವಿರುತ್ತಿತ್ತು ಎಂಬುದನ್ನು ಹೊರತುಪಡಿಸಿದರೆ ಅವರ ವೈಚಾರಿಕ ಚಿಂತನೆ ಬಹಳ ತೀಕ್ಷ್ಣವಾಗಿತ್ತು. ಯಾರನ್ನೋ ಮೆಚ್ಚಿಸಲು ಅಥವಾ ಅಲ್ಲೊಂದು ರೀತಿ ಇಲ್ಲೊಂದು ರೀತಿ ಎಂಬ ಇಬ್ಬಗೆಯ ನೀತಿ ಅವರಲ್ಲಿರಲಿಲ್ಲ. ವಿಚಾರವಾದದಲ್ಲಿ ಅವರು ಬಹಳ ಸ್ಪಷ್ಟವಾಗಿದ್ದರು. ನೇರ ಮತ್ತು ನಿಷ್ಟುರವಾದ ಮಾತುಗಳಲ್ಲಿ ಅವರು ಪ್ರಸಿದ್ದರಾಗಿದ್ದರು. ಯಾರನ್ನೂ ಓಲೈಸುವ ಉಮೇದು ಅವರಲ್ಲಿರಲಿಲ್ಲ. ಅವರ ಮಾತುಗಳು ನೇರಾನೇರ ಮತ್ತು ಖಡಕ್ ಆಗಿದ್ದವು.

ಇಂತಹ ಪ್ರಖರವಾದ ವೈಚಾರಿಕ ಧ್ವನಿಯೊಂದು ನಮ್ಮ ನಡುವಿನಿಂದ ಇಂದು ಮರೆಯಾಗಿದೆ. ಅವರ ಬಗ್ಗೆ ಬರೆಯುವುದು ಬಹಳ ಇದೆ. ಸದ್ಯಕ್ಕೆ ಇಷ್ಟು ನುಡಿನಮನದ ಅಶ್ರುತರ್ಪಣಗಳು.

-ಡಾ.ಚಮರಂ

More articles

Latest article