Monday, December 9, 2024

ಸಂಪಾದಕೀಯ |ಇದು ಸಿದ್ಧರಾಮಯ್ಯ ಮೇಲಿನ ದಾಳಿಯಲ್ಲ, ಕರ್ನಾಟಕದ ಮೇಲಿನ ದಾಳಿ!‌

Most read

ರಾಜಭವನವನ್ನು ತನ್ನ ಮೂಗಿನ ನೇರಕ್ಕೆ ಬಳಸಿಕೊಳ್ಳುವ ಬಿಜೆಪಿ ನಡೆ ಕೇವಲ ಸಿದ್ಧರಾಮಯ್ಯ ಮೇಲಿನ ದಾಳಿಯಲ್ಲ, ಅದು ಕರ್ನಾಟಕದ ಜನತೆಯ ಮೇಲೆ ನಡೆದಿರುವ ದಾಳಿ. ಭಾರತ ಸಂವಿಧಾನದ ಮೇಲೆ, ಒಕ್ಕೂಟ ವ್ಯವಸ್ಥೆಯ ಮೇಲೆ, ಪ್ರಜಾಪ್ರಭುತ್ವದ ಮೇಲೆ ನಡೆದಿರುವ ದಾಳಿ.

ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ವಿರುದ್ಧ ಪ್ರಕರಣ ದಾಖಲಿಸಲು ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಸೆಕ್ಷನ್ 17 (A) ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಸೆಕ್ಷನ್ 218ರ ಅನ್ವಯ ಅನುಮತಿ ನೀಡಿದ್ದಾರೆ. ಇದು ನಿರೀಕ್ಷಿತವೇ ಆಗಿತ್ತು. ರಾಜ್ಯಪಾಲರು ಹೀಗೇ ಮಾಡುತ್ತಾರೆ ಎಂಬುದನ್ನು ಸಣ್ಣ ಮಕ್ಕಳೂ ಊಹಿಸಬಹುದಾಗಿತ್ತು. ಒಕ್ಕೂಟ ಸರ್ಕಾರ ರಾಜ್ಯಗಳಲ್ಲಿ ತನ್ನದಲ್ಲದ ರಾಜಕೀಯ ಪಕ್ಷಗಳ ಸರ್ಕಾರ ಆಡಳಿತ ನಡೆಸುವುದನ್ನು ಸಹಿಸಿಕೊಳ್ಳುವುದಿಲ್ಲ. ಅಂಥ ಸರ್ಕಾರ ಅಭದ್ರಗೊಳಿಸಲು, ಕಿರಿಕಿರಿ ಹುಟ್ಟಿಸಲು ರಾಜ್ಯಪಾಲರುಗಳನ್ನು ಬಳಸಿಕೊಳ್ಳುತ್ತದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹೇಗಾದರೂ ಮಾಡಿ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಕೆಡವಲೆಂದೇ ರಾಜಭವನವನ್ನು ಬಳಸಿಕೊಳ್ಳುತ್ತಿದೆ‌.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ  136 ಸ್ಥಾನಗಳನ್ನು ಗಳಿಸುವ ಮೂಲಕ ಅಧಿಕಾರಕ್ಕೆ ಏರಿತ್ತು. ಸರಳ ಬಹುಮತವನ್ನಷ್ಟೇ ಪಡೆದು ಅಧಿಕಾರಕ್ಕೆ ಬಂದಿದ್ದರೆ ಇಷ್ಟು ಹೊತ್ತಿಗೆ ಭಾರತೀಯ ಜನತಾ ಪಕ್ಷ ಆಪರೇಷನ್ ಕಮಲಕ್ಕೆ ಮುಂದಾಗುತ್ತಿತ್ತು. ಬಹುಶಃ ಇಷ್ಟು ಹೊತ್ತಿಗಾಗಲೇ ಸಾವಿರಾರು ಕೋಟಿ ರುಪಾಯಿ ಖರ್ಚು ಮಾಡಿ, ಶಾಸಕರನ್ನು ಖರೀದಿಸಿ ಸರ್ಕಾರವನ್ನೂ ಉರುಳಿಸಿ  ಬಿಡುತ್ತಿತ್ತು. ಆದರೆ ಕಾಂಗ್ರೆಸ್ ಪಕ್ಷ ಕಣ್ಣುಕುಕ್ಕುವಂಥ ಜನಾದೇಶವನ್ನು ಪಡೆದಿತ್ತು. ಹೀಗಾಗಿ ಆಪರೇಷನ್ ಕಮಲಕ್ಕೆ ಹೊರತಾದ ಕುತಂತ್ರಗಳನ್ನೇ ಅನುಸರಿಸಿ ಸರ್ಕಾರ ಬೀಳಿಸುವ ಯೋಜನೆಯ ಫಲವೇ ಈಗಿನ ಬೆಳವಣಿಗೆಗಳು ಎಂಬುದನ್ನು ಸುಲಭವಾಗಿ ಊಹಿಸ ಬಹುದಾಗಿದೆ.

ವಾಸ್ತವವಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿರುವುದು ಟಿ.ಜೆ.ಅಬ್ರಹಾಂ, ಪ್ರದೀಪ್ ಕುಮಾರ್ ಮತ್ತು ಸ್ನೇಹಮಯಿ ಕೃಷ್ಣ ಎಂಬ ಖಾಸಗಿ ವ್ಯಕ್ತಿಗಳು. ಯಾವುದೇ ತನಿಖಾ ಸಂಸ್ಥೆ ಸಿದ್ಧರಾಮಯ್ಯ ವಿರುದ್ಧ ತನಿಖೆ ನಡೆಸಿ ಅವರು ಮೇಲ್ನೋಟಕ್ಕೆ ತಪ್ಪಿತಸ್ಥರು ಎಂಬ ತನಿಖಾ ವರದಿಯನ್ನೇನು ನೀಡಿಲ್ಲ. ಪೊಲೀಸರಾಗಲಿ, ಲೋಕಾಯುಕ್ತರಾಗಲೀ ಅಥವಾ ಇನ್ಯಾವ ತನಿಖಾ ಏಜೆನ್ಸಿಯಾಗಲೀ ಪ್ರಾಥಮಿಕ ತನಿಖೆ ನಡೆಸಿ ಪ್ರಕರಣ ದಾಖಲಿಸಲು ಅನುಮತಿ ಕೋರಿಲ್ಲ. ಹೀಗಿರುವಾಗ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 17 (A) ಅಡಿಯಲ್ಲಿ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. 2018ರಲ್ಲಿ ಕೇಂದ್ರ ಸರ್ಕಾರ ಕಾಯ್ದೆಗೆ ತಂದ ತಿದ್ದುಪಡಿ ಇದನ್ನು ಸ್ಪಷ್ಟವಾಗಿ ಹೇಳುತ್ತದೆ. ಆದರೂ ಕಾನೂನು ಗಾಳಿಗೆ ತೂರಿ ರಾಜ್ಯಪಾಲರು ಯಾಕೆ ಅನುಮತಿ ನೀಡಿದರೆಂಬುದು ಬಹಳ ಸುಲಭವಾಗಿ ಊಹಿಸಬಹುದಾಗಿದೆ.

ರಾಜ್ಯಪಾಲರ ನಡೆಗಳು ಈ ವಿಷಯದಲ್ಲಿ ಮೊದಲಿನಿಂದಲೂ ಸಂದೇಹಾರ್ಹವಾಗಿಯೇ ಇದೆ. ಪ್ರಾಸಿಕ್ಯೂಷನ್ ಗೆ ಅನುಮತಿ ಕೋರಿ ಖಾಸಗಿ ವ್ಯಕ್ತಿಯೊಬ್ಬರು ದೂರು ನೀಡಿದ ದಿನವೇ ರಾಜ್ಯಪಾಲರು ಮುಖ್ಯಮಂತ್ರಿಗಳಿಗೆ ಶೋಕಾಸ್ ನೋಟೀಸ್ ನೀಡಿದ್ದರು. ಇದು ಹೇಗೆ ಸಾಧ್ಯ? ರಾಜ್ಯಪಾಲರ ಕಚೇರಿ ಅಷ್ಟು ಮಿಂಚಿನ ವೇಗದಲ್ಲಿ ಕಾರ್ಯ ನಿರ್ವಹಿಸಿದ್ದು ಯಾಕೆ? ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯ ವಿರುದ್ಧ ದೂರು ಬಂದಾಗ ಕಾನೂನು ಪರಾಮರ್ಶೆಗಳು ಆಗಬಾರದೇ? ದೂರಿನ ಹಿಂದಿನ ಉದ್ದೇಶ, ದುರುದ್ದೇಶಗಳ ಬಗ್ಗೆ ಅವರಿಗೆ ಎಲ್ಲ ರೀತಿಯಲ್ಲೂ ಮನವರಿಕೆ ಆಗಬೇಕಲ್ಲವೇ? ಇಷ್ಟು ಗಂಭೀರವಾದ ವಿಷಯವನ್ನು ಕೆಲವು ಗಂಟೆಗಳಲ್ಲಿ ಇತ್ಯರ್ಥ ಮಾಡಲು ಸಾಧ್ಯವೇ?

ಇನ್ನು ರಾಜ್ಯಪಾಲರ ನೋಟೀಸ್ ಗೆ ಮುಖ್ಯಮಂತ್ರಿಗಳು ಸುದೀರ್ಘ ಉತ್ತರವನ್ನೂ ನೀಡಿದ್ದರು. ನೋಟಿಸ್ ನೀಡಿರುವುದನ್ನು‌ ವಿರೋಧಿಸಿ, ನೋಟಿಸ್ ನಲ್ಲಿ ಬಳಸಲಾದ ಭಾಷೆಯನ್ನು ವಿರೋಧಿಸಿ ಸಚಿವ ಸಂಪುಟ ಸಭೆ ಸೇರಿ ತನ್ನ ಪ್ರತಿರೋಧವನ್ನೂ ದಾಖಲಿಸಿತ್ತು. ಸಂಪುಟದ ತೀರ್ಮಾನವನ್ನು ರಾಜ್ಯಪಾಲರಿಗೂ ಕಳುಹಿಸಿ ಕೊಡಲಾಗಿತ್ತು. ಇಷ್ಟೆಲ್ಲ ಆದ ಮೇಲೂ ರಾಜ್ಯಪಾಲರು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್ 17( A) ಗಾಳಿಗೆ ತೂರಿ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದೇಕೆ ಎಂಬ ಪ್ರಶ್ನೆ ಉದ್ಭವವಾಗುತ್ತದೆ.

ಇನ್ನು ಇದೇ ರಾಜ್ಯಪಾಲರ ಬಳಿ ಜನಪ್ರತಿನಿಧಿಗಳಾಗಿರುವ ಎಚ್.ಡಿ.ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ, ಜನಾರ್ದನ ರೆಡ್ಡಿಯವರಿಗೆ ಸಂಬಂಧಿಸಿದ ಪ್ರಕರಣಗಳನ್ನು ದಾಖಲಿಸಲು ಅನುಮತಿ ಕೋರಿದ ಅರ್ಜಿಗಳು ಹಾಗೇ ಉಳಿದಿವೆ. ಈ ಅರ್ಜಿಗಳನ್ನು ಸಲ್ಲಿಸಿರುವುದು ಖಾಸಗಿ ವ್ಯಕ್ತಿಗಳಲ್ಲ. ಇದೆಲ್ಲವನ್ನು ಸಲ್ಲಿಸಿರುವುದು ಲೋಕಾಯುಕ್ತ ಪೊಲೀಸರು. ಈ ನಾಯಕರ ವಿರುದ್ಧದ ಪ್ರಕರಣಗಳಲ್ಲಿ ಅವರು ತಪ್ಪಿತಸ್ಥರೆಂದು ಕಂಡುಬಂದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲು ಅನುಮತಿ ಕೊಡಿ ಎಂದು ಲೋಕಾಯುಕ್ತ ಪೊಲೀಸರು ಇದೇ ರಾಜ್ಯಪಾಲರಿಗೆ ಅರ್ಜಿ ಸಲ್ಲಿಸಿದ್ದಾರೆ‌. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 17 (A) ಅಡಿಯಲ್ಲಿ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಬಹುದಾದ ಪ್ರಕರಣಗಳು ಇವು. ಯಾಕೆಂದರೆ ಲೋಕಾಯುಕ್ತ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿ ಇವರ ಮೇಲಿನ ಭ್ರಷ್ಟಾಚಾರದ ಆರೋಪಗಳು ಸತ್ಯ ಎಂದು ಕಂಡುಬಂದಿದ್ದರಿಂದಲೇ ಪ್ರಾಸಿಕ್ಯೂಷನ್ ಗೆ ಮನವಿ ಸಲ್ಲಿಸಿದ್ದರು. ಆದರೆ ರಾಜ್ಯಪಾಲರು ಈ ಎಲ್ಲ ಅರ್ಜಿಗಳನ್ನು ತಿಂಗಳುಗಳಾದರೂ ಹಾಗೇ ಇಟ್ಟುಕೊಂಡಿದ್ದಾರೆ. ಅನುಮತಿ ನೀಡುವ ಗೋಜಿಗೇ ಹೋಗಿಲ್ಲ. ಇವರಲ್ಲಿ ಮೂವರು ಬಿಜೆಪಿ ನಾಯಕರು, ಒಬ್ಬರು NDA ಭಾಗವಾಗಿರುವ, ಕೇಂದ್ರ ಸಚಿವರೂ ಆಗಿರುವ ಜೆಡಿಎಸ್ ನಾಯಕರು. ಇವರ ಮೇಲೆ ಯಾಕೆ ತನಿಖೆಗೆ ಒಪ್ಪಿಗೆ ನೀಡಿಲ್ಲ ಎಂಬ ಪ್ರಶ್ನೆಗೂ ಉತ್ತರ ಬಹಳ ಸುಲಭ. ರಾಜಭವನ ಬಿಜೆಪಿ ಭವನವಾಗಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪಗಳು ಸುಳ್ಳಲ್ಲ ಎಂಬುದಕ್ಕೆ ಇದೇ ಉದಾಹರಣೆ.

ರಾಜಭವನವನ್ನು ತನ್ನ ಮೂಗಿನ ನೇರಕ್ಕೆ ಬಳಸಿಕೊಳ್ಳುವ ಬಿಜೆಪಿ ನಡೆ ಕೇವಲ ಸಿದ್ಧರಾಮಯ್ಯ ಮೇಲಿನ ದಾಳಿಯಲ್ಲ, ಅದು ಕರ್ನಾಟಕದ ಜನತೆಯ ಮೇಲೆ ನಡೆದಿರುವ ದಾಳಿ. ಭಾರತ ಸಂವಿಧಾನದ ಮೇಲೆ, ಒಕ್ಕೂಟ ವ್ಯವಸ್ಥೆಯ ಮೇಲೆ, ಪ್ರಜಾಪ್ರಭುತ್ವದ ಮೇಲೆ ನಡೆದಿರುವ ದಾಳಿ. ಕರ್ನಾಟಕದ ಜನತೆ 136 ಸ್ಥಾನಗಳನ್ನು ನೀಡುವ ಮೂಲಕ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ರಚನೆಗೆ ಅವಕಾಶ ನೀಡಿದ್ದಾರೆ. ಈ ಜನಾದೇಶವನ್ನೇ ಬುಡಮೇಲು ಮಾಡಲು ಬಿಜೆಪಿ ಹವಣಿಸುತ್ತಿದೆ. ಇದು ಹೇಸಿಗೆ ರಾಜಕಾರಣದ ಪರಮಾವಧಿ.  ಕನ್ನಡದ ಜನತೆ ಈ ನೀಚ ರಾಜಕಾರಣವನ್ನು ಎಂದಿಗೂ ಸಹಿಸುವುದಿಲ್ಲ.

ರಾಜ್ಯಪಾಲರ ಹುದ್ದೆ ಎಂಬುದು ಬ್ರಿಟಿಷರ ಕಾಲದ ಪಳೆಯುಳಿಕೆ. ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಕಾರ್ಯವನ್ನು ರಾಜ್ಯಪಾಲರ ಮೂಲಕ ಮಾಡಲಾಗುತ್ತದೆ. ದೇಶದ ನಾನಾ ರಾಜ್ಯಗಳಲ್ಲಿ ತನ್ನ ವಿರೋಧಿ ಪಕ್ಷಗಳ ಸರ್ಕಾರ ಅಸ್ತಿತ್ವದಲ್ಲಿ ಇದ್ದಲ್ಲಿ, ಬಿಜೆಪಿ ರಾಜ್ಯಪಾಲರ ಮೂಲಕ ಕಿರುಕುಳ ನೀಡುತ್ತದೆ. ರಾಜ್ಯ ಸರ್ಕಾರಗಳು ರೂಪಿಸುವ ಕಾನೂನು, ವಿಧೇಯಕಗಳಿಗೆ ಸಹಿ ಮಾಡದೇ ಸತಾಯಿಸಲಾಗುತ್ತಿದೆ. ಈ ಕುರಿತು ಹಲವು ರಾಜ್ಯಗಳು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು, ಸುಪ್ರೀಂ ಕೋರ್ಟ್ ಕೂಡ ಗಂಭೀರವಾಗಿ ಪರಿಗಣಿಸಿ ವಿಚಾರಣೆ ನಡೆಸುತ್ತಿದೆ. ಇನ್ನು ಹಲವೆಡೆ ರಾಜ್ಯಪಾಲರು ಪ್ರಜಾಪ್ರಭುತ್ವದ ಲಕ್ಷ್ಮಣ ರೇಖೆ ದಾಟಿ ರಾಜ್ಯ ಸರ್ಕಾರಗಳು ಮಾಡಬೇಕಾದ ಕೆಲಸವನ್ನು ತಾವೇ ಮಾಡಲು ಹೊರಟಿದ್ದಾರೆ. ಈ ನಡುವೆ ಕರ್ನಾಟಕದ ರಾಜ್ಯಪಾಲರು ಕಾನೂನುಬಾಹಿರವಾಗಿ ಮುಖ್ಯಮಂತ್ರಿಯ ವಿರುದ್ಧವೇ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವ ಮೂಲಕ ಕೇಂದ್ರ ಸರ್ಕಾರದ ರಾಜಕೀಯ ಕಾಲಾಳುವಿನಂತೆ ವರ್ತಿಸುತ್ತಿದ್ದಾರೆ.

ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷ ಒಮ್ಮೆಯೂ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬಂದಿಲ್ಲ. ಅದು ಅಧಿಕಾರ ಪಡೆದಿರುವುದು ಅನೈತಿಕ ಕೂಡಾವಳಿಗಳು, ನೂರಾರು ಕೋಟಿ ರೂ ಖರ್ಚು‌ಮಾಡಿ ನಡೆಸಿದ ಆಪರೇಷನ್ ಕಮಲದಂಥ ಹೀನ ತಂತ್ರಗಳ ಮೂಲಕ. ಈಗ ಅದು ಚುನಾಯಿತ ಸರ್ಕಾರವನ್ನು ರಾಜ್ಯಪಾಲರ ಕಚೇರಿ ಬಳಸಿಕೊಂಡು ಬೀಳಿಸಲು ಹೊರಟಿದೆ.

ಭಾರತೀಯ ಜನತಾ ಪಕ್ಷವನ್ನು ರಾಜ್ಯದ ಜನತೆ ವಿರೋಧ ಪಕ್ಷದ ಸ್ಥಾನದಲ್ಲಿ ಕೂರಿಸಿದ್ದಾರೆ. ಆ ಪಕ್ಷ ಐದು ವರ್ಷಗಳ ಕಾಲ ಸಮರ್ಥ ವಿರೋಧ ಪಕ್ಷವಾಗಿ ಕಾರ್ಯ ನಿರ್ವಹಿಸಿ, ಸರ್ಕಾರದ ತಪ್ಪುಗಳನ್ನು ಜನತೆಯ ಮುಂದೆ ಎತ್ತಿ ತೋರಿಸಿ ನಂತರ ಚುನಾವಣೆಗಳನ್ನು ಎದುರಿಸಿ ಗೆಲ್ಲುವ ಅವಕಾಶ ಇದ್ದೇ ಇರುತ್ತದೆ. ಇದು ರಾಜಮಾರ್ಗ. ಈ ರಾಜಮಾರ್ಗವನ್ನು ಬಿಟ್ಟು ಬಿಜೆಪಿ ವಾಮಮಾರ್ಗಕ್ಕೆ ಇಳಿದು ಸರ್ಕಾರ ಅಸ್ಥಿರಗೊಳಿಸುವ ಕಾರ್ಯ ಮಾಡುತ್ತಿದೆ. ಇದು ರಾಜ್ಯದ ಜನತೆಗೆ ಮಾಡುವ ಅವಮಾನ ಮತ್ತು ಅನ್ಯಾಯ.

ಮುಖ್ಯಮಂತ್ರಿ‌ ಸಿದ್ಧರಾಮಯ್ಯ ಕರ್ನಾಟಕದ ಅತ್ಯಂತ ಜನಪ್ರಿಯ ಮುಖ್ಯಮಂತ್ರಿಗಳಲ್ಲಿ ಒಬ್ಬರು. ಅವರು ತಪ್ಪೇ ಮಾಡಿರದ ರಾಜಕಾರಣಿ ಎಂದು ಯಾರೂ ಭಾವಿಸಬೇಕಾಗಿಲ್ಲ. ಆದರೆ ತಮ್ಮ ರಾಜಕೀಯ ಜೀವಿತದಲ್ಲಿ ಅವರು ಕಳಂಕಗಳನ್ನು ಹೊತ್ತುಕೊಂಡಿಲ್ಲ. ಭ್ರಷ್ಟ ರಾಜಕಾರಣಿ ಎಂಬ ಪಟ್ಟವನ್ನೇನು‌ ಹೊತ್ತುಕೊಂಡಿಲ್ಲ. ರಾಜಕೀಯ ಅಧಿಕಾರ ದೊರೆತಾಗಲೆಲ್ಲ ಅವರು ಜನಕಲ್ಯಾಣ ಯೋಜನೆಗಳ ಮೂಲಕವೇ ಜನರ ನೆರವಿಗೆ ನಿಂತಿದ್ದಾರೆ. ಇಂಥ ಜನಪ್ರಿಯ ನಾಯಕನ ಹೆಸರಿಗೆ ಕೆಸರು ಮೆತ್ತಲು ಯತ್ನಿಸಲಾಗುತ್ತಿದೆ.

ಸಿದ್ಧರಾಮಯ್ಯ ಅವರು ತಾವು ಹೇಳಿದಂತೆಯೇ ಈ ಕುತಂತ್ರಗಳಿಗೆ, ಷಡ್ಯಂತ್ರಗಳಿಗೆ ಅಧೀರರಾಗಬಾರದು. ಈ ಎಲ್ಲ ಕುತಂತ್ರಗಳನ್ನು ಕಾನೂನಾತ್ಮಕವಾಗಿ, ರಾಜಕೀಯವಾಗಿ ಎದುರಿಸಬೇಕು. ಕರ್ನಾಟಕದ ಜನತೆಯ ಪ್ರೀತಿ ಅವರಿಗಿದೆ. ಆ ಪ್ರೀತಿಯ ಎದುರಲ್ಲಿ ಯಾವ ಷಡ್ಯಂತ್ರಗಳೂ ನಡೆಯುವುದಿಲ್ಲ.

ದಿನೇಶ್ ಕುಮಾರ್ ಎಸ್‌.ಸಿ.

ಇದನ್ನೂ ಓದಿ- ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಟಾಯಿತು, ಮುಖ್ಯಮಂತ್ರಿ ರಾಜೀನಾಮೆ ಕೊಡುತ್ತಾರೆಯೇ?: ಮುಂದೇನಾಗಲಿದೆ ?

More articles

Latest article